ಕರ್ನಾಟಕಕ್ಕೆ ಯೋಗಿ ಆದಿತ್ಯನಾಥರಂತಹ ನಾಯಕರು ಬೇಕು
ಸುಳ್ಯ: ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಕರ್ನಾಟಕಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತಹ ನಾಯಕತ್ವ ಬೇಕಾಗಿದೆ. ಅಂತಹಾ ನಾಯಕತ್ವವನ್ನು ಹಿಂದೂ ಸಂಘಟನೆಗಳು ಸೃಷ್ಟಿಸಬೇಕು ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷದ್ ಮತ್ತು ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ ವಿಶ್ವ ಹಿಂದೂ ಪರಿಷದ್‌ನ ಸ್ಥಾಪನಾ ದಿನಾಚರಣೆಯ ಅಂಗವಾಗಿ 11ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾ ಯಾತ್ರೆಯ ಅಂಗವಾಗಿ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ವಿಚಾರಕ್ಕೆ, ಧರ್ಮಕ್ಕೆ ನಿಷ್ಠೆ ಇರುವ ಎದೆಗಾರಿಕೆ ಇರುವ ನಾಯಕತ್ವ ಬೇಕು ಎಂದ ಅವರು ಧರ್ಮದ ಬಗ್ಗೆ ಪ್ರೀತಿ, ಅಭಿಮಾನ ಇದೆಯೇ ಎಂಬುದನ್ನು ನಾವು ಆತ್ಮ ವಿಮರ್ಶೆ ಮಾಡಿ ಧರ್ಮದ ಬಗ್ಗೆ ಇರುವ ಆಭಿಮಾನ ಶೂನ್ಯತೆಯಿಂದ ಹೊರ ಬರಬೇಕು ಎಂದು ಕರೆ ನೀಡಿದರು. ವಸುದೈವ ಕುಟುಂಬಕಂ ಎಂದು ಹಿಂದೂ ಸಮಾಜ ಶಾಂತಿ ಮತ್ತು ಸದ್ಭಾವನೆಯನ್ನು ಸದಾ ಬೋಧಿಸಿದೆ. ಜಗತ್ತಿನಲ್ಲಿ ಶಾಂತಿ, ಸದ್ಭಾವನೆ ನೆಲೆಯಾಗಲು ಎಲ್ಲರೂ ಅದನ್ನು ಪಾಲಿಸಬೇಕು ಎಂದರು. ಖಗೋಳ ವಿಜ್ಞಾನದ ಬಗ್ಗೆ, ಗೃಹಗಳ ಬಗ್ಗೆ, ಸೂರ್ಯನ ಬಗ್ಗೆ ಸಹಸ್ರಾರು ವರ್ಷಗಳ ಹಿಂದೆ ಹಿಂದೂ ಧರ್ಮ ಬೋಧಿಸಿದೆ. ನಮ್ಮ ಧರ್ಮ, ಸಂಸ್ಕೃತಿಯ ಬಗ್ಗೆ ನಮ್ಮ ಮಕ್ಕಳಿಗೆ ತಿಳಿಸುವ ಮನಸ್ಸು, ನಮ್ಮ ಧರ್ಮದ ಬಗ್ಗೆ ಅಭಿಮಾನ ಇರಬೇಕು. ನಾವು ಒಟ್ಟಾಗಿದ್ದರೆ ಮಾತ್ರ ನಮ್ಮ ಧರ್ಮ, ಸಂಸ್ಕೃತಿ ಉಳಿಯಲು ಸಾಧ್ಯ. ವೈವಿಧ್ಯತೆಯಲ್ಲಿ ಏಕತೆ ಇರುವುದು ಹಿಂದೂ ಸಮಾಜದಲ್ಲಿ ಮಾತ್ರ ಎಂದು ಅವರು ಬಣ್ಣಿಸಿದರು.
ಶ್ರೀಕೃಷ್ಣನ ಪ್ರೇರಣೆಯಲ್ಲಿ ಹಿಂದೂ ಹೃದಯದಲ್ಲಿ ಜಾಗೃತಿಯನ್ನು ಮೂಡಿಸಿ, ಹಿಂದೂ ಸಮಾಜವನ್ನು ಒಟ್ಟಾಗಿಸುವ ಮತ್ತು ರಕ್ಷಣೆ ಮಾಡುವ ಕೆಲಸ ವಿಶ್ವ ಹಿಂದೂ ಪರಿಷತ್ ಮಾಡುತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಂಘಟನೆಯು ಮೈಸೂರಿನಲ್ಲಿಯೂ ಪಕ್ಷ ಸಂಘಟನೆ ಮಾಡಲು ಪ್ರೇರಣೆಯಾಗಿದೆ. ಹಿಂದೂಗಳ ಸಂರಕ್ಷಣೆಗೆ ಪಣ ತೊಟ್ಟಿರುವ ವಿಶ್ವ ಹಿಂದೂ ಪರಿಷತ್‌ಗೆ ಎಲ್ಲರೂ ಪ್ರೋತ್ಸಾಹ ನೀಡುವ ಮೂಲಕ ಶಕ್ತಿ ತುಂಬಬೇಕು ಎಂದರು. ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ಎ.ವಿ.ತೀರ್ಥರಾಮ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ದೈವ ನರ್ತಕರಾದ ಕೇಪು ಅಜಿಲ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬಜರಂಗದಳ ಮಂಗಳೂರು ವಿಭಾಗ ಸಂಯೋಜಕರಾದ ಪುನೀತ್ ಅತ್ತಾವರ, ವಿಹಿಂಪ ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಮುರಳೀಕೃಷ್ಣ ಹಸಂತಡ್ಕ, ವಿಶ್ವ ಹಿಂದೂ ಪರಿಷತ್‌ನ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ, ಮಾಜಿ ಅಧ್ಯಕ್ಷ ಡಾ.ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ ಅತಿಥಿಗಳಾಗಿ ಭಾಗವಹಿಸಿದ್ದರು.