ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕರ್ನಾಟಕ ರೈಲ್ವೆಗೆ ರವಿಯೇ ಭೂಷಣ

03:30 AM Nov 22, 2024 IST | Samyukta Karnataka

ಆಕಾಶಕ್ಕೆ ರವಿಯೇ ಭೂಷಣ ಎಂದು ಹಿಂದೆ ಹೇಳುತ್ತಿದ್ದೆವು. ಈಗ ಕರ್ನಾಟಕದಲ್ಲಿ ರೈಲ್ವೆ ಇಲಾಖೆ ಸೂರ್ಯನ ವಿದ್ಯುತ್ ಬಳಸುವುದರಲ್ಲಿ ಇಡುತ್ತಿರುವ ದಾಪುಗಾಲನ್ನು ನೋಡಿದರೆ ಮುಂದಿನ ದಿನಗಳಲ್ಲಿ ಸೂರ್ಯನ ವಿದ್ಯುತ್‌ನಲ್ಲೇ ಇಡೀ ರೈಲು ವ್ಯವಸ್ಥೆ ನಿರ್ವಹಣೆಗೊಳ್ಳುವ ಕಾಲ ದೂರವಿಲ್ಲ ಎಂದೆನಿಸುತ್ತಿದೆ. ಹುಬ್ಬಳ್ಳಿಯಲ್ಲಿ ರೈಲ್ವೆ ವಲಯ ಆರಂಭಗೊಂಡ ಮೇಲೆ ಸೋಲಾರ್ ವಿದ್ಯುತ್ ಬಳಸುವ ಪ್ರಮಾಣ ಪ್ರತಿವರ್ಷ ಅಧಿಕಗೊಳ್ಳುತ್ತಿದೆ. ಹಿಂದೆ ಇದ್ದ ಉಗಿಬಂಡಿಗಳು ಕಾಣೆಯಾಗಿವೆ. ಡೀಸೆಲ್ ಎಂಜಿನ್‌ಗೆ ಪರ್ಯಾಯವಾಗಿ ವಿದ್ಯುತ್ ಚಾಲಿತ ಎಂಜಿನ್ ಬಂದಿವೆ. ಮುಂಬರುವ ದಿನಗಳಲ್ಲಿ ಸೋಲಾರ್ ವಿದ್ಯುತ್ ಚಾಲಿತ ಎಂಜಿನ್‌ಗಳು ಬರಲಿವೆ.
ರೈಲ್ವೆ ಇಲಾಖೆಯಲ್ಲಿ ವಿದ್ಯುತ್ ಬಳಕೆ ಬಹಳ. ಮೊದಲನೆಯದು ರೈಲ್ವೆ ಎಂಜಿನ್‌ಗೆ ಬೇಕಾದ ವಿದ್ಯುತ್ ಒದಗಿಸಲು ರೈಲ್ವೆ ಮಾರ್ಗದಲ್ಲಿ ವಿದ್ಯುತ್ ಮಾರ್ಗ ಒದಗಿಸುವುದು. ಇದಕ್ಕೆ ಹೈವೋಲ್ಟೇಜ್ ಬೇಕು ವಿದ್ಯುತ್ ಮಾರ್ಗ ನಿರಂತರ ವಿದ್ಯುತ್ ಇರುವಂತೆ ನೋಡಿಕೊಳ್ಳಬೇಕು. ಇದಲ್ಲದೆ ರೈಲ್ವೆ ನಿಲ್ದಾಣಗಳಲ್ಲಿ ವಿದ್ಯುತ್ ದೀಪಗಳು. ನೀರಿನ ಪಂಪ್ ಸೇರಿದಂತೆ ಕೆಲಸಗಳಿಗೆ ಪ್ರತ್ಯೇಕ ವಿದ್ಯುತ್ ಒದಗಿಸಬೇಕು. ಇದಕ್ಕೂ ೨೪ ಗಂಟೆ ನಿರಂತರ ಒದಗಿಸಬೇಕು. ಎಲ್ಲೂ ವಿದ್ಯುತ್ ಸಂಪರ್ಕ ನಿಲ್ಲುವಂತಿಲ್ಲ. ಇತ್ತೀಚೆಗೆ ಸೋಲಾರ್ ವಿದ್ಯುತ್ ಬಳಸುವುದು ಅಧಿಕಗೊಂಡಿದೆ. ಹುಬ್ಬಳ್ಳಿ ವಲಯಕ್ಕೆ ಬೆಂಗಳೂರು, ಮೈಸೂರು ವಿಭಾಗಗಳು ಸೇರಿವೆ. ಒಟ್ಟಾರೆ ಈ ವಲಯದಲ್ಲಿ ೫.೬೯ ದಶಲಕ್ಷ ಯೂನಿಟ್ ಸೋಲಾರ್ ಬರುತ್ತಿದ್ದು ವಾರ್ಷಿಕ ೨.೮೧ ಕೋಟಿ ರೂ. ಉಳಿತಾಯವಾಗುತ್ತಿದೆ.
ಹುಬ್ಬಳ್ಳಿ ರೈಲ್ವೆ ವಲಯ ಶೇ. ೮೬ರಷ್ಟು ರೈಲು ಮಾರ್ಗವನ್ನು ಕರ್ನಾಟಕದಲ್ಲಿ ಹೊಂದಿದೆ. ಉಳಿದ ಶೇ. ೧೬ರಷ್ಟು ಮಾರ್ಗ ಆಂಧ್ರ, ಮಹಾರಾಷ್ಟ್ರ, ತಮಿಳುನಾಡು, ಗೋವಾ ರಾಜ್ಯಗಳಲ್ಲಿ ಹೊಂದಿದೆ. ಒಟ್ಟು ೩೩೫ ರೈಲಿನಲ್ಲಿ ೧೬೨ ದಶಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಕರ್ನಾಟಕದಲ್ಲಿ ೩೧೧೮.೫೨ ಕಿಮೀ ರೈಲು ಮಾರ್ಗವಿದೆ. ಒಟ್ಟು ೩೮೭ ರೈಲ್ವೆ ನಿಲ್ದಾಣಗಳು, ೧೦೫ ಗೂಡ್ಸ್ ಶೆಡ್ ಇವೆ. ಪ್ರಯಾಣಿಕರಿಂದ ೩೦೯೦ ಕೋಟಿ ರೂ. ಅದಾಯವಿದೆ. ಒಟ್ಟು ೩೯ ಸಾವಿರ ಕಾರ್ಮಿಕರಿದ್ದಾರೆ.
ಕರ್ನಾಟಕದಲ್ಲಿ ೨೭೫೩ ಕಿಮೀ ವಿದ್ಯುತ್ ಮಾರ್ಗವಿದೆ. ಒಟ್ಟು ವಿದ್ಯುತ್ ಬಳಕೆ ೫೨೫.೪೯ ದಶಲಕ್ಷ ಯೂನಿಟ್ ರೈಲು ಎಂಜಿನ್‌ಗೆ ಮೀಸಲು. ಉಳಿದ ಕೆಲಸಗಳಿಗೆ ೫೬.೭೩ ದಶಲಕ್ಷ ಯೂನಿಟ್‌ಗಳು ಬೇಕು. ಇದಕ್ಕಾಗಿ ಓಪನ್ ಅಕ್ಸೆಸ್‌ನಿಂದ ೩೯೧ ದಶಲಕ್ಷ ಯೂನಿಟ್ ಖರೀದಿ ಮಾಡಲಾಗುತ್ತಿದೆ. ಇದರಿಂದ ೧೧೯.೧೧ ಕೋಟಿ ರೂ. ಉಳಿತಾಯವಾಗುತ್ತಿದೆ. ಪಾವಗಡದಿಂದ ಸೋಲಾರ್ ವಿದ್ಯುತ್ ೫೦೦ ಮೆಗಾವ್ಯಾಟ್ ಲಭಿಸಲಿದ್ದು ಇದರ ದರ ಪ್ರತಿ ಯೂನಿಟ್‌ಗೆ ೨.೪೫ ರೂ. ಹೀಗಾಗಿ ವಿದ್ಯುತ್ ಖರೀದಿ ದರ ಇಳಿಮುಖಗೊಳ್ಳಲಿದೆ. ಭಿಲಾಯ್‌ನಿಂದ ೨೫ ಮೆಗಾವ್ಯಾಟ್ ಪಡೆಯಲಾಗುತ್ತಿದೆ.
ರೈಲ್ವೆ ಮಾರ್ಗಕ್ಕಲ್ಲದೆ ಬೇರೆ ಉದ್ದೇಶಗಳಿಗೂ ವಿದ್ಯುತ್ ಬೇಕು. ಇದಕ್ಕಾಗಿ ರೈಲ್ವೆ ಪ್ಲಾಟ್ ಫಾರಂ, ರೈಲ್ವೆ ಕಚೇರಿ, ರೈಲ್ವೆ ಷೆಡ್‌ಗಳ ಮೇಲೆ ಸೋಲಾರ್ ಫಲಕ ಅಳವಡಿಸುವ ಕೆಲಸ ಭರದಿಂದ ಸಾಗಿದೆ. ಒಟ್ಟು ೯೦.೦೪ ಮೆಗಾವ್ಯಾಟ್ ಲಭಿಸಲಿದೆ. ಇದರೊಂದಿಗೆ ಪ್ಲಾಟ್ ಫಾರಂಗಳಲ್ಲಿ ಎಲ್‌ಇಡಿ ಬಳಕೆ, ಹವಾನಿಯಂತ್ರಣಗಳ ಆಧುನೀಕರಣ, ನೀರಿನ ಪಂಪ್‌ಗಳ ಬದಲಾವಣೆ, ಒಟ್ಟು ೨೪೩ ಪಂಪ್‌ಗಳಿಗೆ ಹೊಸ ರೂಪ. ಆಧುನಿಕ ಹಾಗೂ ವಿದ್ಯುತ್ ಕಡಿಮೆ ಬಳಸುವ ಫ್ಯಾನ್‌ಗಳ ಬಳಕೆ, ಆಧುನಿಕ ಕ್ರೇನ್‌ಗಳ ಬಳಕೆ ಜಾರಿಗೆ ಬಂದಿರುವುದರಿಂದ ವಿದ್ಯುತ್ ಬಳಕೆ ಪ್ರಮಾಣ ಇಳಿಮುಖಗೊಳ್ಳುತ್ತಿದೆ. ಸಬ್‌ಸ್ಟೇಷನ್‌ಗಳ ಉನ್ನತೀಕರಣ, ೧೧೯ ಕಟ್ಟಡಗಳ ವಿದ್ಯುತ್ ಆಡಿಟ್ ನಡೆದಿದೆ. ವಿದ್ಯುತ್ ಬಳಕೆಯಲ್ಲಿ ಉಳಿತಾಯ ಸಾಧಿಸಬೇಕು ಎಂದರೆ ಅದಕ್ಕೆ ಮಾನದಂಡ ಇರಬೇಕು. ಪ್ರತಿ ೧೦೦೦ ಟನ್ ಗೂಡ್ಸ್ ಸಾಗಣೆ ಮತ್ತು ೧೦೦೦ ಕಿಮೀ ಪ್ರಯಾಣಿಕರಿಗೆ ಸಾರಿಗೆ ಸವಲತ್ತು ಕಲ್ಪಿಸಿಕೊಡಲು ಎಷ್ಟು ವಿದ್ಯುತ್ ಬಳಕೆಯಾಗುತ್ತದೆ ಎಂದು ಲೆಕ್ಕ ಹಾಕಲಾಗಿದೆ. ೩೭ ರೈಲುಗಳು ಈಗ ಸಂಪೂರ್ಣ ವಿದ್ಯುತ್ ಚಾಲಿತ. ಇದರಿಂದ ೧೧೬೧೯ ಕಿಲೋ ಲೀಟರ್ ಎಚ್‌ಎಸ್‌ಡಿ ತೈಲ ಉಳಿತಾಯ. ಹೀಗಾಗಿ ೮೬.೯೬ ಕೋಟಿ ರೂ. ಲಾಭ. ಈಗ ಒಟ್ಟು ೨೧೫೨೩೦ ಕಿಲೋ ಲೀಟರ್ ಬಳಕೆಯಾಗುತ್ತಿದೆ.
ಹುಬ್ಬಳ್ಳಿ ವಿಭಾಗದಲ್ಲಿ ೧೧ ರೈಲ್ವೆ ನಿಲ್ದಾಣಗಳ ಮೇಲೆ ಸೌರ ಫಲಕ ಅಳವಡಿಸಿದ್ದರಿಂದ ಒಟ್ಟು ಬಳಕೆಯಲ್ಲಿ ಶೇ. ೧೮ ರಷ್ಟು ವಿದ್ಯುತ್ ಸೋಲಾರ್‌ನಿಂದ ಬರುತ್ತಿದೆ. ಬೆಳಗಾವಿಯಲ್ಲಿ ೨೨೦, ಧಾರವಾಡದಲ್ಲಿ ೧೦೦ ಕಿ.ವ್ಯಾಟ್ ಸೋಲಾರ್ ವಿದ್ಯುತ್ ಬರುತ್ತಿದೆ. ಹುಬ್ಬಳ್ಳಿ ಶೆಡ್‌ನಿಂದ ಒಟ್ಟು ೮.೦೮ ಲಕ್ಷ ಯೂನಿಟ್ ಸೋಲಾರ್ ವಿದ್ಯುತ್ ಬರುತ್ತಿದೆ. ಬೆಂಗಳೂರು ವಿಭಾಗದಲ್ಲಿ ೧೧ ರೈಲ್ವೆ ನಿಲ್ದಾಣಗಳಲ್ಲಿ ೧೨೬೨ ಕಿ.ವ್ಯಾಟ್ ಸಾಮರ್ಥ್ಯದ ಸೋಲಾರ್ ಫಲಕ ಅಳವಡಿಸಲಾಗಿದೆ. ಮೈಸೂರು ವಿಭಾಗದಲ್ಲಿ ೧೪ ರೈಲ್ವೆ ನಿಲ್ದಾಣಗಳು ೭೩೦ ಕೆವಿ ಸಾಮರ್ಥ್ಯದ ಸೋಲಾರ್ ಫಲಕಗಳನ್ನು ಹೊಂದಿವೆ. ಶ್ರವಣಬೆಳಗೊಳ ರೈಲ್ವೆ ನಿಲ್ದಾಣ ಸಂಪೂರ್ಣವಾಗಿ ಸೋಲಾರ್ ವಿದ್ಯುತ್ ಬಳಕೆಯಲ್ಲೇ ನಡೆಯುತ್ತಿದೆ.
ಇದಲ್ಲದೆ ನೀರು, ಪರಿಸರ ರಕ್ಷಣೆಗೆ ರೈಲ್ವೆ ಇಲಾಖೆ ಮಹತ್ವ ನೀಡಿದೆ. ಸೋಲಾರ್ ವಿದ್ಯುತ್ ಬಳಕೆಯಿಂದ ಪರಿಸರಕ್ಕೆ ಇಂಗಾಲಾಮ್ಲ ಹೊರಸೂಸುವಿಕೆ ಕಡಿಮೆಯಾಗಿದೆ. ಅಲ್ಲದೆ ಡಾಲರ್ ಕೇಳುವ ಹೈಸ್ಪೀಡ್ ಆಯಿಲ್ ಬಳಕೆ ಕೂಡ ಇಳಿಮುಖಗೊಂಡಿದೆ. ರೈಲ್ವೆ ಇಲಾಖೆ ಹಾಕಿಕೊಟ್ಟಿರುವ ಮಾರ್ಗದಲ್ಲಿ ಕರ್ನಾಟಕದ ಇಂಧನ ಇಲಾಖೆ ಸಾಗಿದರೆ ಸರ್ಕಾರದ ಎಲ್ಲ ಇಲಾಖೆಗಳ ಮೇಲೆ ಸೋಲಾರ್ ಅಳವಡಿಸಿ ವಿದ್ಯುತ್ ದರ ಇಳಿಯುವಂತೆ ಮಾಡಬಹುದು. ನಮ್ಮಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ವಿಪುಲ ಅವಕಾಶಗಳಿವೆ. ನಮ್ಮ ಎಸ್ಕಾಂಗಳು ಸೋಲಾರ್ ವಿದ್ಯುತ್ ಬಳಕೆಗೆ ಆದ್ಯತೆ ನೀಡಿದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ಕಡಿಮೆ ದರದಲ್ಲಿ ವಿದ್ಯುತ್ ನೀಡಬಹುದು. ಓಪನ್ ಅಕ್ಸೆಸ್ ಬಳಕೆ ಅಧಿಕಗೊಂಡಲ್ಲಿ ಎಸ್ಕಾಂಗಳು ನಷ್ಟದಲ್ಲೇ ಇರುವುದು ಖಚಿತ. ಆಗ ಸರ್ಕಾರದ ಉಚಿತ ವಿದ್ಯುತ್ ನೀಡುವುದಕ್ಕೆ ಸೀಮಿತಗೊಳ್ಳಬೇಕು. ಸರ್ಕಾರ ನೀಡುವ ಸಬ್ಸಿಡಿಗೆ ಕಾಯುವುದು ಅನಿವಾರ್ಯವಾಗಲಿದೆ. ಈಗ ಹುಬ್ಬಳ್ಳಿ ವಿತರಣ ಕಂಪನಿಯ ಪರಿಸ್ಥಿತಿ ಇದೇ ಆಗಿದೆ. ಉತ್ತರ ಕರ್ನಾಟಕದಲ್ಲಿ ಸೋಲಾರ್ ಉತ್ಪಾದನೆಗೆ ಉತ್ತಮ ಅವಕಾಶವಿದೆ. ಓಪನ್ ಅಕ್ಸೆಸ್‌ನಲ್ಲಿ ಪ್ರತಿ ಯೂನಿಟ್ ೨.೪೫ ರೂ. ದರದಲ್ಲಿ ಸೋಲಾರ್ ದೊರಕುವಾಗ ಎಸ್ಕಾಂ ವಿದ್ಯುತ್‌ಗೆ ಬೇಡಿಕೆ ಇಲ್ಲದ ದಿನಗಳು ಬರಲಿವೆ. ಕೆಎಸ್‌ಆರ್‌ಟಿಸಿ ಕೂಡ ಸೋಲಾರ್ ಬಳಕೆಗೆ ಒಟ್ಟು ಕೊಟ್ಟಲ್ಲಿ ತನ್ನ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಬಸ್ ನಿಲ್ದಾಣಗಳು, ಸಾರಿಗೆ ಇಲಾಖೆ ಕಟ್ಟಡಗಳು ಸೋಲಾರ್ ಉತ್ಪಾದನೆಗೆ ಉತ್ತಮ ತಾಣಗಳು. ಸೋಲಾರ್ ಮೇಲೆ ಬಂಡವಾಳ ಹೂಡಿದರೆ ಅದು ವ್ಯರ್ಥವಾಗುವುದಿಲ್ಲ ಎಂಬುದನ್ನು ರೈಲ್ವೆ ಇಲಾಖೆ ತೋರಿಸಿ ಕೊಟ್ಟಿದೆ ಈ ವಿಷಯದಲ್ಲಿ ತಮಿಳುನಾಡು ಸರ್ಕಾರ ಮುಂಚೂಣಿಯಲ್ಲಿದೆ. ಅಲ್ಲಿ ಎಲ್ಲ ಸರ್ಕಾರಿ ಕಟ್ಟಡಗಳ ಮೇಲೆ ಸೋಲಾರ್ ತಲೆ ಎತ್ತಿವೆ. ಅಲ್ಲದೆ ಕಡ್ಡಾಯ ಮಾಡಲಾಗಿದೆ. ರೈಲ್ವೆ ಇಲಾಖೆಗೆ ಸೂರ್ಯನ ವಿದ್ಯುತ್ ವರದಾನವಾಗಿರುವಾಗ ನಮ್ಮ ಎಸ್ಕಾಂಗಳು ಸೋಲಾರ್ ವಿದ್ಯುತ್ ಬಳಕೆಗೆ ಉತ್ತೇಜನ ನೀಡದೇ ಇರುವುದು ಸೋಜಿಗ. ಕೇಂದ್ರ ಸರ್ಕಾರ ಸೋಲಾರ್ ಬಳಕೆ ಹೆಚ್ಚಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ರೈಲ್ವೆ ಇಲಾಖೆ ಸೋಲಾರ್ ಬಳಸಿ ತನ್ನ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುತ್ತಿರುವಾಗ ಎಸ್ಕಾಂಗಳು ನಷ್ಟದಲ್ಲೇ ಮುಳುಗಿರುವುದು ನಿಜಕ್ಕೂ ದುರಂತ.
ಸೋಲಾರ್ ಬಳಕೆಯಿಂದ ರೈಲ್ವೆಯಲ್ಲಿ ವಿದ್ಯುತ್ ಉಳಿತಾಯವಾಗುವುದಲ್ಲದೆ ಹೈಸ್ಪೀಡ್ ಆಯಿಲ್ ಬಳಸುವುದು ಕಡಿಮೆ ಆಗಲಿದೆ. ಇದರಿಂದ ವಾತಾವರಣ ಕಲುಷಿತಗೊಳ್ಳುವುದು ತಪ್ಪಲಿದೆ. ಎಚ್‌ಎಸ್‌ಡಿ ಆಯಿಲ್ ರೈಲ್ವೆ ಎಂಜಿನ್‌ಗಲ್ಲದೆ ಬೇರೆ ಕಡೆಯೂ ಬಳಕೆಯಾಗುತ್ತಿದೆ. ಇದನ್ನು ಕಡಿಮೆ ಮಾಡಿದರೆ ಜನರ ಜೀವನದ ಮೇಲೆ ಆಗುವ ದುಷ್ಪರಿಣಾಮ ಕಡಿಮೆಯಾಗುತ್ತದೆ. ಹುಬ್ಬಳ್ಳಿಯ ರೈಲ್ವೆ ವಲಯದ ಮೂಲ ಉದ್ದೇಶವೇ ಒಟ್ಟಾರೆ ಪರಿಸರದ ಮೇಲಾಗುವ ಎಲ್ಲ ರೀತಿಯ ದುಷ್ಪರಿಣಾಮವನ್ನು ಕಡಿಮೆ ಮಾಡುವುದು. ಅದಕ್ಕೆ ಸೋಲಾರ್ ವಿದ್ಯುತ್ ಬಳಕೆ ಸಹಕಾರಿಯಾಗಲಿದೆ. ಮುಂಬರುವ ದಿನಗಳಲ್ಲಿ ರೈಲ್ವೆ ಪ್ರಯಾಣಿಕರು ರೈಲುಗಳಲ್ಲಿ ಸ್ವಚ್ಛ ವಾತಾವರಣವನ್ನು ಕಾಣಬಹುದು. ಸ್ವಚ್ಛತೆಯಿಂದ ಜನಸಾಮಾನ್ಯರ ಆರೋಗ್ಯ ಮಟ್ಟ ಕೂಡ ಸುಧಾರಿಸಲಿದೆ.

Next Article