For the best experience, open
https://m.samyuktakarnataka.in
on your mobile browser.

ಕರ್ನಾಟಕ ಸೇರಿ ೩ ರಾಜ್ಯಗಳಲ್ಲಿ ಮುಂದುವರಿದ ಬಿಸಿಲಿನ ಬೇಗೆ

12:05 AM Mar 28, 2024 IST | Samyukta Karnataka
ಕರ್ನಾಟಕ ಸೇರಿ ೩ ರಾಜ್ಯಗಳಲ್ಲಿ ಮುಂದುವರಿದ ಬಿಸಿಲಿನ ಬೇಗೆ

ನವದೆಹಲಿ: ಕರ್ನಾಟಕ, ಗುಜರಾತ್ ಹಾಗೂ ರಾಜಸ್ಥಾನದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನ ೪೦ ಡಿಗ್ರಿ ಸೆಲ್ಸಿಯಸ್ ದಾಟಿದೆ. ಅಲ್ಲದೆ, ಮುಂದಿನ ಎರಡು ದಿನಗಳಲ್ಲಿ ಈ ರಾಜ್ಯಗಳಲ್ಲಿ ಗರಿಷ್ಠ ತಾಪಮಾನ ಪರಿಸ್ಥಿತಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಭುಜ್‌ನಲ್ಲಿ ೪೧.೬ ಡಿಗ್ರಿ ಸೆಲ್ಸಿಯಸ್, ರಾಜ್‌ಕೋಟ್‌ನಲ್ಲಿ ೪೧.೧ ಡಿಗ್ರಿ ಸೆಲ್ಸಿಯಸ್, ಅಕೋಲಾದಲ್ಲಿ ೪೧.೫ ಡಿಗ್ರಿ ಸೆಲ್ಸಿಯಸ್ ಮತ್ತು ವಾಶಿಮ್‌ನಲ್ಲಿ ೪೧.೪ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಈ ರಾಜ್ಯಗಳಲ್ಲಿ ಗರಿಷ್ಠ ತಾಪಮಾನವು ಎರಡರಿಂದ ಮೂರು ಪಟ್ಟುಗಳಷ್ಟು ಹೆಚ್ಚಾಗಿದ್ದರೂ ಕಡುಬಿಸಿಲಿನ ಮಾನದಂಡ ತಲುಪಿಲ್ಲ ಎಂದು ಈ ಹವಾಮಾನ ಇಲಾಖೆ ವಿವರಿಸಿದೆ.
ಕರ್ನಾಟಕದ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮಾ.೨೭ರಿಂದ ೨೯ರವರೆಗೆ, ಸೌರಾಷ್ಟç ಹಾಗೂ ಗುಜರಾತ್‌ನ ಕಛ್ ಪ್ರದೇಶದಲ್ಲಿ ಮಾ.೨೭ರಿಂದ ೨೮ರವರೆಗೆ, ರಾಜಸ್ಥಾನದ ವಾಯವ್ಯ ಭಾಗದಲ್ಲಿ ಮಾ.೨೭ರಂದು ತೀವ್ರ ಬಿಸಿಲಿನ ಬೇಗೆ ಪರಿಸ್ಥಿತಿ ಉಂಟಾಗಬಹುದು ಎಂದೂ ತಿಳಿಸಿದೆ.
ಗುಜರಾತ್, ಮರಾಠವಾಡ ಹಾಗೂ ಮಧ್ಯ ಮಹಾರಾಷ್ಟçದ ಕೆಲವು ಭಾಗಗಳಲ್ಲಿ ಮಾ.೨೭ರಿಂದ ೨೭ರವರೆಗೆ ರಾತ್ರಿಯ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಬಹುದೆಂದೂ ಇಲಾಖೆ ಎಚ್ಚರಿಕೆ ನೀಡಿದೆ. ಕೊಂಕಣ ಹಾಗೂ ಗೋವಾದಲ್ಲಿ ಮಾ.೨೭,೨೮ರಂದು, ರಾಯಲಸೀಮಾ, ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ ಹಾಗೂ ಮಾಹೆ ಪ್ರದೇಶಗಳಲ್ಲಿ ಮಾ.೨೭ರಿಂದ ೩೧ರವರೆಗೆ ಬಿಸಿ ಹಾಗೂ ಆರ್ದ ಹವಾಮಾನ ಇರಬಹುದೆಂದು ಅಂದಾಜಿಸಲಾಗಿದೆ.
ಈ ಹಿಂದೆ ಎಲ್‌ನಿನೋ ಪರಿಸ್ಥಿತಿ ಮೇ ತಿಂಗಳವರೆಗೂ ಮುಂದುವರಿಯುವ ಸಂಭವವಿದೆ. ಹೀಗಾಗಿ ಹಾಲಿ ವರ್ಷದಲ್ಲಿ ಭಾರತದ ಬೇಸಿಗೆ ಕಾಲದಲ್ಲಿ ಕಡು ಬಿಸಿಲಿನ ಬೇಗೆ ಇರಬಹುದೆಂದು ಈ ಇಲಾಖೆ ಮುನ್ಸೂಚನೆ ನೀಡಿತ್ತು. ದೇಶದ ಈಶಾನ್ಯ, ಪಶ್ಚಿಮ ಹಿಮಾಲಯ ಪ್ರದೇಶ, ಆಗ್ನೇಯ ದ್ವೀಪಕಲ್ಪ ಹಾಗೂ ಪಶ್ಚಿಮ ಕರಾವಳಿ ಹೊರತುಪಡಿಸಿ ಮಾರ್ಚ್ನಿಂದ ಮೇ ತಿಂಗಳವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದ ಕಡು ಬಿಸಿಲು ಇರುವ ಸಾಧ್ಯತೆ ಇದೆ.