ಕಲ್ಯಾಣ ಕರ್ನಾಟಕ ಅಕ್ರಮ ತುರ್ತು ಸರ್ಜರಿ ಅಗತ್ಯ
ಅಕ್ರಮಗಳ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ. ಹಿರಿಯ ಅಧಿಕಾರಿ ತನಿಖೆ ನಡೆಸಿ ವರದಿ ನೀಡಿದರೆ ಸಾಲದು ತಪ್ಪಿತಸ್ತರಿಗೆ ಯಾರೇ ಇರಲಿ ಪಕ್ಷರಹಿತವಾಗಿ ಉಗ್ರಶಿಕ್ಷೆ ಆಗಬೇಕು.
ಕಲ್ಯಾಣ ಕರ್ನಾಟಕ ಅತ್ಯಂತ ಹಿಂದುಳಿದ ಪ್ರದೇಶ. ಇದರ ಅಭಿವೃದ್ಧಿಗೆ ತಲೆಎತ್ತಿದ್ದು ಕೆಕೆಡಿಬಿ ಈಗ ಜನರ ಶೋಷಣೆಯ ಕೇಂದ್ರವಾಗಿದೆ. ಈ ಕೇಂದ್ರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ. ಹಿರಿಯ ಅಧಿಕಾರಿ ತನಿಖೆ ನಡೆಸಿ ವರದಿ ನೀಡಿದರೆ ಸಾಲದು ತಪ್ಪಿತಸ್ಥರಿಗೆ ಯಾರೇ ಇರಲಿ ಪಕ್ಷರಹಿತವಾಗಿ ಉಗ್ರಶಿಕ್ಷೆ ಆಗಬೇಕು. ಅಲ್ಲದೆ ಇಡೀ ಆಡಳಿತ ವ್ಯವಸ್ಥೆಗೆ ಚಾಟಿ ಬೀಸುವ ಕೆಲಸ ನಡೆಯಬೇಕು. ಸರ್ಜರಿ ನಡೆಯಬೇಕು. ರಾಜಕಾರಣಿಗಳು ಸರ್ಕಾರ ನೀಡಿದ್ದ ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಗಳಿವೆ.
ಬಿಜೆಪಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾಗ ೨೦೨೦-೨೦೨೧, ೨೦೨೨-೨೩ ರಲ್ಲಿ ರಾಜ್ಯ ಸರ್ಕಾರ ೩೬೮೩ ಕೋಟಿ ರೂ. ಅನುದಾನ ನೀಡಿತ್ತು. ಇದರಲ್ಲಿ ಮಾರ್ಚ್ ೨೩ ರೊಳಗೆ ಕೇವಲ ೪೩ ರಷ್ಟು ಅನುದಾನ ಬಳಕೆಯಾಗಿದೆ. ಇದರಲ್ಲೂ ದುರುಪಯೋಗವೂ ಕಂಡು ಬಂದಿದೆ. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ ಸರ್ಕಾರ ಎರಡು ವರ್ಷಕ್ಕೆ ೨೦೦ ಕೋಟಿ ರೂ. ನೀಡಿತ್ತು. ಇದರ ವೆಚ್ಚವಂತೂ ನೋಡುವ ಹಾಗಿಲ್ಲ. ಕ್ರಿಯಾ ಯೋಜನೆಯೇ ಬೇರೆ ವೆಚ್ಚವೇ ಬೇರೆ. ಒಂದಕ್ಕೊಂದು ಸಂಬಂಧವಿಲ್ಲ.ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವಕ್ಕೆ ೪ ಕೋಟಿ ರೂ. ವೆಚ್ಚ. ಬಸ್ ಖರೀದಿಗೆ ೪೫ ಕೋಟಿ ರೂ. ಕೊಟ್ಟರೆ ಅದು ಹೋಗಿದ್ದು ಕೊಪ್ಪಳ ರಾಷ್ಟ್ರೀಯ ಹೆದ್ದಾರಿಗೆ. ಮುಖ್ಯಮಂತ್ರಿ ವಿವೇಚನಾ ಕೋಟದಲ್ಲಿ ನೀಡಿದ ಹಣದಲ್ಲಿ ೩೭ ಪ್ರಾಥಮಿಕ ಆರೋಗ್ಯ ನಿರ್ಮಾಣಕ್ಕೆ ಬಳಕೆ. ತಾಲೂಕು ಮಟ್ಟದ ಆಸ್ಪತ್ರೆಗಳ ಅಭಿವೃದ್ಧಿಗೆ ನೀಡಿದ್ದು ಒಟ್ಟು ೭ ಕೋಟಿ ರೂ. ಆದರೆ ಪ್ರತಿ ಆಸ್ಪತ್ರೆಗಳಿಗೆ ಆದ ವೆಚ್ಚ ತಲಾ ೩.೮೦ ಕೋಟಿ ರೂ. ಹೀಗೆ ಸರ್ಕಾರದ ಅನುದಾನ ಕೊಟ್ಟ ಉದ್ದೇಶವೇ ಬೇರೆ ಬಳಸಿದ ಉದ್ದೇಶವೇ ಬೇರೆ.
ಇದಕ್ಕೆ ಮುಖ್ಯ ಕಾರಣ ಸರ್ಕಾರಿ ಮಟ್ಟದಲ್ಲಿ ಮೇಲ್ವಿಚಾರಣೆ ಇಲ್ಲದಿರುವುದು. ಅಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಅನುಕೂಲ ಎಂದರೆ ಬೆಂಗಳೂರಿನಿಂದ ಯಾವ ಹಿರಿಯ ಅಧಿಕಾರಿಯೂ ಖುದ್ದು ಪರಿಶೀಲನೆಗೆ ಬರೋಲ್ಲ. ಸರ್ಕಾರಕ್ಕೆ ಬೇಕಿರುವುದು ಲೆಕ್ಕಪತ್ರ ಅಷ್ಟೆ. ಅದನ್ನು ಸೃಷ್ಟಿಸುವುದರಲ್ಲಿ ಅಲ್ಲಿಯ ಸರ್ಕಾರಿ ಸಿಬ್ಬಂದಿ ನಿಸ್ಸೀಮರು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದರೆ ಯಾವ ತನಿಖೆಯೂ ನಡೆಯುವುದಿಲ್ಲ. ಈಗಲೂ ನಿವೃತ್ತ ಐಎಎಸ್ ಅಧಿಕಾರಿಯ ತನಿಖೆ ಸತ್ಯಾಂಶ ಹೊರಗೆ ತರುವುದು ಕಷ್ಟ. ಸರ್ಕಾರಿ ಕಡತದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಪ್ರತಿ ಯೋಜನೆಗೂ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರೆ ಮಾತ್ರ ನಿಜಾಂಶ ತಿಳಿಯುತ್ತದೆ. ಹಿಂದೆ ರಾಜ್ಯದ ರಾಜ್ಯಪಾಲರಾಗಿದ್ದ ಗೋವಿಂದ ನಾರಾಯಣ ರಾಷ್ಟ್ರಪತಿ ಆಳ್ವಿಕೆ ಕಾಲದಲ್ಲಿ ಬರಗಾಲದ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅಕ್ರಮಗಳನ್ನು ಸದೆಬಡಿಯುತ್ತಿದ್ದರು. ಈಗ ಮುಖ್ಯಮಂತ್ರಿಯಿಂದ ಹಿಡಿದು ಎಲ್ಲ ಸಚಿವರು ಕಲ್ಯಾಣ ಕರ್ನಾಟಕಕ್ಕೆ ಬಂದು ಹಾರ ತುರಾಯಿ ಸ್ವೀಕರಿಸುತ್ತಾರೆಯೇ ಹೊರತು ಯೋಜನೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸುವುದೇ ಇಲ್ಲ. ಅಲ್ಲಿಯ ಜನ ಸಚಿವ ಸಂಪುಟದ ಎಲ್ಲ ಸಚಿವರ ಮುಖವನ್ನೇ ನೋಡಿಲ್ಲ.
ಕಲ್ಯಾಣ ಕರ್ನಾಟಕ ಏಕೀಕರಣಕ್ಕೆ ಮುನ್ನ ಹೈದರಾಬಾದ್ ನಿಜಾಂ ಆಡಳಿತಕ್ಕೆ ಒಳಪಟ್ಟಿತ್ತು. ಹಿಂದೆ ರಜಾಕಾರರ ದಬ್ಬಾಳಿಕೆಯನ್ನು ಮಾತ್ರ ಅಲ್ಲಿಯ ಜನ ಕಂಡಿದ್ದರು. ಇಂಥ ಪ್ರದೇಶದ ಅಭಿವೃದ್ಧಿಗೆ ಡಾ. ನಂಜುಂಡಪ್ಪ ವರದಿಯಂತೆ ಪ್ರತ್ಯೇಕ ಮಂಡಳಿ ರಚಿಸಲಾಯಿತು. ಹೈದರಾಬಾದ್ ಕರ್ನಾಟಕ ಹೋಗಿ ಕಲ್ಯಾಣ ಕರ್ನಾಟಕ ಆಗಿದ್ದು ಹೊರತುಪಡಿಸಿದರೆ ಮತ್ತೇನೂ ಆಗಿಲ್ಲ. ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಕೇಂದ್ರದಿಂದ ವಿಧಿ ೩೭೧ ಜೆಯಂತೆ ಉದ್ಯೋಗ ಮೀಸಲಾತಿ ತಂದರು. ಅಲ್ಲದೆ ಕಲಬುರ್ಗಿ ನಗರದದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಕೈಗೊಂಡರು. ಅವರ ಪ್ರಯತ್ನ ಹೊರತುಪಡಿಸಿದರೆ ಉಳಿದವರ ಕೊಡುಗೆ ಏನು ಎಂದು ಕೇಳುವ ಕಾಲ ಬಂದಿದೆ. ವೀರೇಂದ್ರ ಪಾಟೀಲರು ಸಚಿವರಾಗಿದ್ದಾಗ ಸಾಕಷ್ಟು ನೀರಾವರಿ ಯೋಜನೆಗಳನ್ನು ಕೈಗೊಂಡರು. ಅದರಿಂದ ಬರಗಾಲದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಲು ಸಾಧ್ಯವಾಯಿತು. ಅಣ್ಣಾರಾವ್ ಗಣಮುಖಿ ಶಿಕ್ಷಣ ಸಚಿವರಾಗಿ ಶಾಲೆಗಳನ್ನು ತೆರೆದರು. ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ಮಗ್ದುಂ ಅವರ ಕೊಡುಗೆ ಗಮನಾರ್ಹ. ಇವೆಲ್ಲ ಕಲ್ಯಾಣ ಕರ್ನಾಟಕದ ಇತಿಹಾಸ ಪುಟಗಳಲ್ಲಿ ಅಲ್ಲಲ್ಲಿ ಕಂಡುಬಂದ ಬೆಳವಣಿಗೆ ಕ್ಷಣಗಳು. ಬಹುತೇಕ ದಿನಗಳಲ್ಲಿ ಇಲ್ಲಿಯ ಜನ ಬಡತನವನ್ನೇ ಬದುಕಾಗಿ ಮಾಡಿಕೊಂಡವರು. ರಾಜಧಾನಿಯಿಂದ ದೂರ ಇರುವ ಎಲ್ಲ ಪ್ರದೇಶಗಳ ಪರಿಸ್ಥಿತಿ ಇದೇ ಎನ್ನುವುದರಲ್ಲಿ ಸಂದೇಹವಿಲ್ಲ. ಪ್ರತಿ ಜಿಲ್ಲೆಗೆ ಒಬ್ಬ ಕಾರ್ಯದರ್ಶಿ ಉಸ್ತುವಾರಿ ಎಂದು ಹೇಳಲಾಗಿದೆ. ಕಲ್ಯಾಣ ಕರ್ನಾಟಕದತ್ತ ಅವರು ಯಾರೂ ತಲೆಹಾಕಿ ಮಲಗುವುದಿಲ್ಲ.