ಕಳ್ಳು+ಬಳ್ಳಿ= ಎಲ್ಲಿದ್ದೀಯಪ್ಪಾ?
ಇನ್ನು ಮುಂದೆ ಕಳ್ಳುಬಳ್ಳಿಗೆ ಮಾತ್ರ ಟಿಕೆಟ್ ಉಳಿದವರಿಗೆ ಹಿತ್ತಾಳಿ ಬಕೆಟ್ ಎಂದು ಡೆಲ್ಲಿಯ ಯಜಮಾನರು ಆವಾಗ ಅಂದಿದ್ದರು. ಅದರಂತೆ ಸ್ವಲ್ಪ ದಿನಗಳ ಕಾಲ ಇಲ್ಲ ಕಳ್ಳುಬಳ್ಳಿ-ಮನೆಯ ಮುಂದೆ ಹೂಬಳ್ಳಿ ಎಂದು ಎಲ್ಲವೂ ಅಂದವು. ಎಷ್ಟು ದಿನ ಅಂತ ಅನಕೊಂಡು ಕುಳಿತಾರು.. ಈಗ ಏನಿದ್ದರೂ ಮತ್ತೆ ಕಳ್ಳುಬಳ್ಳಿ. ಅಲ್ಲಿ ನೋಡಿದರೆ ಅವರ ಮಗ… ಇಲ್ಲಿ ನೋಡಿದರೆ ಇವರ ಧರ್ಮಪತ್ನಿ… ಇನ್ನು ಚಂದದ ಪಟ್ಟಣದಲ್ಲಿ ಸುಳ್ಳ ಸುಳ್ಳೇ ನಮದೇನಿಲ್ಲ ಅನ್ನುತ್ತ ಎಲ್ಲಿದ್ದೀಯಪ್ಪಾ…. ಎಲ್ಲಿದ್ದೀಯಪ್ಪಾ ಎಂದು ಕೂಗುತ್ತಿರುವ ಸದ್ದು ಹತ್ತು ಹರದಾರಿಯ ವರೆಗೆ ಕೇಳಿಸುತ್ತಿದೆ. ಇದು ಈಗಷ್ಟೇ ಅಲ್ಲ. ಅವರಪ್ಪಾರಿಗೆ ದೊಡ್ಡ ಕುರ್ಚಿ, ಮಗನಿಗೆ ಸಣ್ಣ ಕುರ್ಚಿ. ಮಧ್ಯಮದವರಿಗೆ ತಗಡಿನ ಕುರ್ಚಿ… ಹೀಗೆ ಕಳ್ಳುಬಳ್ಳಿಯಲ್ಲಿ ಕುರ್ಚಿ ಹಂಚಿಕೊಂಡರೆ ನಮ್ಮ ಗತಿ… ಅಧೋಗತಿ ಪಾರ್ವತಿ ಪತಿ ಹರಹರ ಮಹಾದೇವ ಎಂದು ತಿಗಡೇಸಿ ದೊಡ್ಡ ವಾಕ್ಯದೊಂದಿಗೆ ಪ್ರವಚನ ಅರಂಭಿಸಿ ಬೇಕಾದರೆ ಪ್ರಶ್ನೆಗಳನ್ನು ಕೇಳಿದರೆ ಕೇಳಬಹುದು ಎಂದು ಹೇಳಿದ ಕೂಡಲೇ ಇದೊಳ್ಳೆ ವಿಚಿತ್ರ ಪ್ರವಚನ, ಲಿಬರಲ್ ಪ್ರವಚನ ಎಂದು ಅಂದುಕೊಂಡು ಕಂಟ್ರಂಗಮ್ಮತ್ತಿ ಅವರು, ಏನಪ್ಪಾ ತಿಗಡೇಸಿ ಇಷ್ಟೆಲ್ಲ ಪ್ರವಚನ ಮಾಡುತ್ತೀಯಲ್ಲ? ಕಳ್ಳು-ಬಳ್ಳಿ ಎಲ್ಲಿಲ್ಲ ಹೇಳು ಎಂದು ಕೇಳಿದಳು. ಅದಕ್ಕೆ ತಿಗಡೇಸಿ ನಿಮ್ಮ ಮಾತಿನ ಅರ್ಥವೇನು? ಎಂದು ಕೇಳಿದ… ಈಗ ನೋಡು ನಿಮ್ಮ ಅಪ್ಪಾಜಿ ಪ್ರವಚನಕಾರ… ನೀನೂ ಅವನೇ… ನಿಮ್ಮ ಮಗನೂ ಅದನ್ನು ಮಾಡಲು ಪ್ರಾಕ್ಟೀಸ್ ಮಾಡುತ್ತಿದ್ದಾನೆ ಅವನೂ ಪ್ರವಚನಕಾರನಾದ ಮೇಲೆ ಕಳ್ಳುಬಳ್ಳಿ ಆಗಲಿಲ್ಲವೇ? ಅದೆಲ್ಲ ಹೋಗಲಿ, ನಮ್ಮ ಲೊಂಡೆನುಮ ಹನುಮಪ್ಪನ ಪೂಜೆ ಮಾಡುತ್ತಾನೆ…. ಅವರಪ್ಪನೂ ಅದನ್ನೇ ಮಾಡಿದ… ಅವರ ಮಗನೂ ದಿನಾಲೂ ಗಂಟೆ ಹಿಡಿದುಕೊಂಡು ಹೋಗುತ್ತಾನೆ. ಇದೇನು ಕಳ್ಳುಬಳ್ಳಿ ಅಲ್ಲವೇ ಅಂದಾಗ ತಿಗಡೇಸಿ ಕರ್ಚೀಫ್‌ನಿಂದ ಮುಖ ವರೆಸಿಕೊಂಡು ಅರೆರೆ… ಕಂಟ್ರಂಗಮ್ಮತ್ತಿ ನಾನು ಹೇಳಿದ್ದು ಎಲೆಕ್ಷನ್ ಕಳ್ಳುಬಳ್ಳಿ ಅಂದ. ಏನೇ ಆಗಲಿ ಕಾಲ ಕೆಟ್ಟು ಹೋಯಿತು ಬಿಡಪ್ಪಾ ಎಂದು ಸುಮ್ಮನಾದಳು. ಮತ್ತೆ ತಿಗಡೇಸಿ ಪ್ರವಚನ ಮುಂದುವರಿಸುತ್ತ…. ಇನ್ನು ಮುಂದೆ ನೀವು ಏನಾಗುತ್ತೀರೋ ಮಕ್ಕಳೂ ಅದನ್ನೇ ಆಗುತ್ತಾರೆ… ಹುಷಾರ್… ಹುಷಾರ್.. ಹುಷಾರ್ ಎಂದು ಹೇಳಿ ಪ್ರವಚನಕ್ಕೆ ಮಂಗಳ ಹಾಡಿದ.