ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಹಾವೇರಿ(ಶಿಗ್ಗಾವಿ): ಶಿಗ್ಗಾವಿ ಸವಣೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ರೌಡಿಶೀಟರ್ ಓಪನ್ ಇದೆ ಅಂತ ಹಾವೇರಿ ಎಸ್ಪಿ ಹೇಳಿದ್ದಾರೆ. ಅಂದರೆ ಅವರ ವಿರುದ್ಧ ಇನ್ನೂ ಹಲವಾರು ಕೇಸ್‌ಗಳು ಇವೆ ಅಂತ ಅರ್ಥ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಳೆದ ವರ್ಷ ತಮ್ಮ ಮೇಲೆ ಹದಿನೇಳು ಹದಿನೆಂಟು ಕೇಸ್ ಇದೆಯಂತೆ ನಾಮಪತ್ರದಲ್ಲಿ ಆಪಿಡವಿಟ್ ಸಲ್ಲಿಸಿದ್ದರು. ಈಗ ಅದ್ಯಾವುದು ಅನ್ವಯಿಸುವುದಿಲ್ಲ ಅಂತ ಹಾಕಿದ್ದಾರೆ. ಆದರೆ, ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧದ ಪ್ರಕರಣ ಒಪನ್ ಇದೆ ಎಂದು ಹೇಳಿದ್ದಾರೆ. ಅವರ ಇನ್ನೂ ಪ್ರಕರಣಗಳಿವೆ ಅಂತ ಅದರ ಅರ್ಥ ಎಂದು ಹೇಳಿದರು.
ಅಜ್ಜಂಪೀರ್ ಖಾದ್ರಿಯವರು ಚುನಾವಣೆ ಮುಂಚೆ ಕಾಂಗ್ರೆಸ್ ಅಭ್ಯರ್ಥಿ ರೌಡಿ ಅಂತ ಹೇಳಿದ್ದರು. ಆದರೆ, ಆ ಮೇಲೆ ಅವರು ಅವರೊಂದಿಗೆ ಸೇರಿಕೊಂಡರು, ಅವರಂತವರು ಹೇಳಿದ ಮೇಲೆ ಅದನ್ನು ಅಲ್ಲಗಳೆಯಲು ಆಗುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ಚುನಾವಣಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ಮಾಡಬೇಕು. ಅವರ ವಿರುದ್ಧ ರೇಪ್ ಕೇಸ್ ಸೆರಿದಂತೆ 17 ಕೇಸ್ ಇತ್ತು. ಅವರ ವಿರುದ್ಧದ ಪ್ರಕರಣಗಳ ಕುರಿತು ಚುನಾವಣಾಧಿಕಾರಿಗಳು ಸರ್ಕಾರದ ಒತ್ತಡಕ್ಕೆ ಮಣಿದು ಪರಿಶಿಲನೆ ನಡೆಸಿಲ್ಲ. ಈಗ ಎಸ್ಪಿಯವರು ಅವರ ವಿರುದ್ದ ಪ್ರಕರಣ ಇದೆ ಅಂತ ಹೇಳಿದ್ದಾರೆ. ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ನಾನು ಚುನಾವಣಾ ಆಯೋಗಕ್ಕೆ ಇಂದೇ ದೂರು ಕೊಡುತ್ತೇವೆ ಎಂದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಹಾವೇರಿ ಡಿಸಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಚುನಾವಣಾಧಿಕಾರಿ ಎಸಿಗೆ ದೊಡ್ಡ ಜವಾಬ್ದಾರಿ ಇದೆ. ಅವರು ಪರಿಶೀಲನೆ ಮಾಡಿ ಕೂಡಲೆ ಕ್ರಮ ಕೈಗೊಳ್ಳಬೇಕು. ವಾಸ್ತವ ಏನಿದೆ ಅಂತ ಜನರಿಗೆ ತಿಳಿಸಬೇಕು. ಇಲ್ಲದಿದ್ದರೆ ಅವರೂ ಕಟಕಟೆಯಲ್ಲಿ ನಿಲ್ಲುವ ಪರಿಸ್ಥಿತಿ ಬರುತ್ತದೆ. ನಾವು ಮೊದಲು ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ನಂತರ ಕಾನೂನಿನ ಹೋರಾಟ ಮಾಡುತ್ತೇನೆ. ಸುಳ್ಳು ಅಫಿಡವಿಟ್ ಕೊಟ್ಟು ಜನರಿಗೆ ಮೋಸ ಮಾಡಿದ್ದಾರೆ. ಇದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಚುನಾವಣಾಧಿಕಾರಿಗಳು ಮಾಡಿರುವ ನಾಮಪತ್ರ ಪರೀಶೀಲನೆಯನ್ನು ನಾವು ನಂಬಿದ್ದೇವು. ಜನರು ಯಾರನ್ನು ಆಯ್ಕೆ ಮಾಡಬೇಕೆಂದು ತೀರ್ಮಾನ ಮಾಡಬೇಕು. ಜನರ ಸೇವೆ ಮಾಡುವವರನ್ನಾ ಅಥವಾ ಜನರ ಜೊತೆ ಕುಸ್ತಿ ಆಡುವವರನ್ನು ಆಯ್ಕೆ ಮಾಡಬೇಕಾ ಅಂತ ತೀರ್ಮಾನ ಮಾಡಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಿಯಲ್ ಎಸ್ಟೇಟ್ ಮಾಡುವುದು ಅವರ ಉದ್ಯೋಗ, ಆದರೆ ಇದೆ ರೀತಿ ಬಿಟ್ಟರೆ ಎಲ್ಲ ಜಮೀನು ಮಾರುತ್ತಾರೆ ಎಂದು ಹೇಳಿದರು.