For the best experience, open
https://m.samyuktakarnataka.in
on your mobile browser.

ಕಾಂತರಾಜು ವರದಿ ತಿರಸ್ಕಾರಕ್ಕೆ ಆಗ್ರಹ

10:53 AM Oct 23, 2024 IST | Samyukta Karnataka
ಕಾಂತರಾಜು ವರದಿ ತಿರಸ್ಕಾರಕ್ಕೆ ಆಗ್ರಹ

ಬೆಂಗಳೂರು: ಅಖಿಲ ಭಾರತವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರಿನಲ್ಲಿ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಸಭೆಯಲ್ಲಿ ಕಾಂತರಾಜು ವರದಿಯ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಅಂತಿಮವಾಗಿ ಕೆಲ ನಿರ್ಣಯಗಳನ್ನು ಕೈಗೊಂಡಿದೆ ಎಂದು ಅಖಿಲ ಭಾರತವೀರಶೈವ ಲಿಂಗಾಯತ ಮಹಾಸಭಾ ತಿಳಿಸಿದೆ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ, ಜಾತಿಗಣತಿ ವರದಿ ಅಂಗೀಕಾರ ವಿರೋಧಿಸಿ ವೀರಶೈವ-ಲಿಂಗಾಯತ ಮಹಾಸಭಾದ ನೇತೃತ್ವದಲ್ಲಿ ಸಮುದಾಯದ ರಾಜಕೀಯ ಮತ್ತು ವಿವಿಧ ಸಂಘಟನೆಗಳ ಪ್ರಮುಖ ಸಭೆ ಮಂಗಳವಾರ ಬೆಂಗಳೂರಿನಲ್ಲಿ ನಡೆಯಿತು. ಸಭೆಯಲ್ಲಿ ವರದಿ ಸ್ವೀಕರಿಸದಂತೆ ಆಗ್ರಹಿಸುವುದು ಸೇರಿದಂತೆ ಐದು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಯತ್ನದ ವಿರುದ್ದ ವೀರಶೈವ-ಲಿಂಗಾಯತ ಮಹಾಸಭಾ ಕೈಗೊಂಡಿರುವ ನಿರ್ಣಯಕ್ಕೆ ಸಚಿವರು, ಶಾಸಕರು ಸಹಿ ಹಾಕಿದ್ದಾರೆ.

ಮಹಾಸಭಾದ ನಿರ್ಣಯಗಳು: ಹತ್ತು ವರ್ಷಗಳ ಹಿಂದೆ ನಡೆಸಲಾದ ಸಮೀಕ್ಷೆಯ ವರದಿಯು ಹಲವು ಲೋಪಗಳಿಂದ ಕೂಡಿದೆ. ಆದ್ದರಿಂದ ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು.
ಕಾಂತರಾಜ್ ನೇತೃತ್ವದ ಆಯೋಗ ನಡೆಸಿದ ಸಮೀಕ್ಷೆಯ ವರದಿಯನ್ನು ಆಧರಿಸಿ, ಈಗ ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಸಲ್ಲಿಸಿದೆ. ಅದು ಅವೈಜ್ಞಾನಿಕ ಮತ್ತು ಅಸಂವಿಧಾನಿಕವಾಗಿದೆ. ಆದ್ದರಿಂದ ವರದಿಗೆ ಸಂಬಂಧಿಸಿದ ಉದ್ದೇಶಿತ ಪ್ರಕ್ರಿಯೆಯನ್ನು ಸಿಎಂ ಕೈಬಿಡಬೇಕು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಲಿಂಗಾಯತ ಉಪ ಜಾತಿಗಳ ಹೆಸರನ್ನು ಮಾತ್ರ ನಮೂದಿಸಲಾಗಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನಂತೆ ಎಲ್ಲಾ ಲಿಂಗಾಯತ ಉಪ ಪಂಗಡಗಳನ್ನು ‘ಲಿಂಗಾಯತ’ ಎಂದು ನಮೂದಿಸಲು ಅವಕಾಶ ನೀಡಬೇಕು.
ವೀರಶೈವ-ಲಿಂಗಾಯತ ಎಲ್ಲಾ ಉಪಪಂಗಡಗಳನ್ನು ಕೇಂದ್ರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳು ಶಿಫಾರಸು ಮಾಡಬೇಕು.
ಸಾಮಾಜಿಕ ಅಸಮಾನತೆಯ ನಿರಾಕರಣೆ ಮತ್ತು ಸಾಮಾಜಿಕ ನ್ಯಾಯ ಕುರಿತಾದ ಸರ್ಕಾರದ ಎಲ್ಲಾ ಸೈದ್ಧಾಂತಿಕ, ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯ ಮುಂಚೂಣಿಯಲ್ಲಿ ನಿಂತು ಬೆಂಬಲಿಸುತ್ತದೆ ಎಂದು ನಮ್ಮ ಸಮುದಾಯದ ಪರವಾಗಿ ಮಹಾಸಭೆಯ ಅಧ್ಯಕ್ಷನಾಗಿ ನಾನು ತುಂಬು ಹೃದಯದಿಂದ ಆಶ್ವಾಸನೆಯನ್ನು ನೀಡುತ್ತೇನೆ ಎಂದು ಶಾಮನೂರು ಶಿವಶಂಕರಪ್ಪ ಪ್ರಕಟಿಸಿದ್ದಾರೆ.

ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸಚಿವರಗಳಾದ ಎಂಬಿ ಪಾಟೀಲ್, ಈಶ್ವರ್ ಖಂಡ್ರೆ, ಶರಣಪ್ಪ ದರ್ಶನಪುರ, ಶಿವಾನಂದ್ ಪಾಟೀಲ್ ಸೇರಿದಂತೆ ಒಟ್ಟು 55ಕ್ಕೂ ಅಧಿಕ ಶಾಸಕರುಗಳು ಭಾಗವಹಿಸಿದ್ದರು.