ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಅಗತ್ಯ
ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ನೈಸರ್ಗಿಕ ಅರಣ್ಯದ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ. ಹೀಗಾಗಿ ಪ್ರತಿವರ್ಷವೂ ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಭವಿಷ್ಯ ಹೇಗಿರಬಹುದೆಂಬ ಆತಂಕ ಶುರುವಾಗಿದೆ. ಕರ್ನಾಟಕದಲ್ಲಿ ಅರಣ್ಯ ದೊಡ್ಡ ಪ್ರಮಾಣದಲ್ಲಿ ಕಾಣೆಯಾಗಿದೆ. ಈ ವರ್ಷ ಅರಣ್ಯ ಇದ್ದ ಜಾಗದಲ್ಲಿ ಮುಂದಿನ ವರ್ಷ ಕೃಷಿಭೂಮಿಯಾಗಿಯೊ, ರೆಸಾರ್ಟ್ ಆಗಿಯೊ ಇಲ್ಲವೆ ಬಹುಮಹಡಿಗಳ ಕಟ್ಟಡವಾಗಿಯೊ ಪರಿವರ್ತನೆಯಾಗಿರುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇಂತಹ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಇನ್ನು ಕೆರೆಗಳು, ಗೋಮಾಳಗಳು, ಕಂದಾಯ ಜಾಗಗಳು, ಉದ್ಯಾನವನಗಳು ಕಣ್ಣಿಗೆ ಕಾಣದಂತಾಗಿವೆ. ಅಲ್ಲಿ ಅವುಗಳ ಕುರುಹುಗಳು ಕೂಡ ಪತ್ತೆಯಾಗದಂತೆ ಮಾಡಲಾಗುತ್ತಿದೆ. ಈ ಭೂಮಾಫಿಯಾ, ಅರಣ್ಯ ಮತ್ತು ಭೂಗಳ್ಳರೇ ಸರ್ಕಾರವನ್ನು ನಿಯಂತ್ರಿಸುತ್ತಿದ್ದು, ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಕಾನೂನು ಮಾಡುವವರೇ ಕಾನೂನು ಮುರಿಯುವುದರಲ್ಲಿ ನಿಸ್ಸೀಮರಾಗಿದ್ದಾರೆ. ಆಡಳಿತ ಮಾಡುವವರಿಗೊಂದು ಕಾನೂನು, ಸಾಮಾನ್ಯ ಜನರಿಗೊಂದು ಕಾನೂನು ಎಂಬಂತ ಪರಿಸ್ಥಿತಿ ನಮ್ಮ ದೇಶದಲ್ಲಿ ಉದ್ಭವವಾಗಿದೆ. ಮಾತೆತ್ತಿದರೆ `ಸಂವಿಧಾನದ ರಕ್ಷಣೆ’ ಮಾತನ್ನಾಡುವ ಇವರೆಲ್ಲ ರಾಜಾರೋಷವಾಗಿ ಸಂವಿಧಾನ ಉಲ್ಲಂಘನೆ ಮಾಡುವುದು ಮಾತ್ರ ವಿಪರ್ಯಾಸವಾಗಿದೆ.
ಒಟ್ಟು ಭೂಪ್ರದೇಶದ ಶೇ.೩೩ರಷ್ಟು ಅರಣ್ಯ ಇರಬೇಕು. ಆದರೆ ಪ್ರಸ್ತುತ ಕರ್ನಾಟಕದಲ್ಲಿ ಶೇ.೨೨ರಷ್ಟು ಮಾತ್ರ ಅರಣ್ಯ ಉಳಿದುಕೊಂಡಿದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಅರಣ್ಯ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಬೇಕಿದೆ. ತಲಾತಲಾಂತರದಿಂದ ಜೀವನೋಪಾಯಕ್ಕಾಗಿ ೩ ಎಕರೆ ಒಳಗಿನ ಒತ್ತುವರಿ ಹೊರತುಪಡಿಸಿ ಬಲಾಢ್ಯರು ಒತ್ತುವರಿ ಮಾಡಿಕೊಂಡಿರುವ ಅರಣ್ಯ ಭೂಮಿಯನ್ನು ಮುಲಾಜಿಲ್ಲದೆ ಸ್ವಾಧೀನ ಮಾಡಿಕೊಳ್ಳಬೇಕೆಂದು ರಾಜ್ಯದ ಅರಣ್ಯ ಸಚಿವರೇ ತಮ್ಮ ಇಲಾಖೆ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ. ಆದರೆ ಭೂಗಳ್ಳರೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿರುವ ಅಧಿಕಾರಿಗಳು ಸಚಿವರ ಈ ಆದೇಶವನ್ನು ಎಷ್ಟರಮಟ್ಟಿಗೆ ಜಾರಿಗೊಳಿಸುತ್ತಾರೆ ಎಂಬುದನ್ನು ಸಚಿವರೇ ಹೇಳಬೇಕು. ಮಲೆನಾಡಿನಲ್ಲಿ ಅಧಿಕಾರಸ್ಥ ಮಂದಿಯೇ ನೂರಾರು ಎಕರೆ ಅರಣ್ಯ ಭೂಮಿಗೆ ಅನಧಿಕೃತವಾಗಿ ವಾರಸುದಾರರಾಗಿದ್ದಾರೆ. ಕಾಫಿ, ಅಡಿಕೆ, ತೆಂಗಿನ ತೋಟಗಳನ್ನು ನಿರ್ವಹಣೆ ಮಾಡುವ ಮೂಲಕ ನಮಗೆ ಯಾವ ಕಾನೂನುಗಳೂ ಅನ್ವಯವಾಗುವುದಿಲ್ಲ ಎಂಬಂತೆ ವರ್ತಿಸುತ್ತಿರುವುದು ವ್ಯವಸ್ಥೆಯ ಕೈಗನ್ನಡಿಯಾಗಿದೆ. ಮತ್ತೊಂದು ಕಡೆಗೆ ಅರಣ್ಯ ಕಡಿದು ಅನಧಿಕೃತವಾಗಿ ರೆಸಾರ್ಟ್, ಹೋಂಸ್ಟೇಗಳ ನಿರ್ಮಾಣವೂ ಅಧಿಕವಾಗಿವೆ.
೩-೪ ದಶಕಗಳ ಹಿಂದೆ ಮಲೆನಾಡಿನ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಹುಲಿ-ಸಿಂಹ, ಕಾಡಾನೆಗಳು ದೊಡ್ಡ ಸಂಖ್ಯೆಯಲ್ಲಿದ್ದರೂ ನಾಡಿನೊಳಗೆ ಬರುತ್ತಿರಲಿಲ್ಲ. ಏಕೆಂದರೆ ಪ್ರಾಣಿಗಳಿಗೆ ಅಗತ್ಯ ಇರುವ ಆಹಾರ ಕಾಡಿನೊಳಗೇ ಯಥೇಚ್ಛವಾಗಿ ಸಿಗುತ್ತಿತ್ತು. ಆದರೆ ಕಾಡಿನಲ್ಲಿ ಮಾನವ ಹಸ್ತಕ್ಷೇಪ ಹೆಚ್ಚಾಗುತ್ತಿದ್ದಂತೆ ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗತೊಡಗಿತು. ಆಹಾರ ಅರಸಿಕೊಂಡು ಕಾಡುಪ್ರಾಣಿಗಳು ಅರಣ್ಯದಂಚಿನ ಊರುಗಳಿಗೆ, ಹೊಲ-ಗದ್ದೆಗಳಿಗೆ ನುಗ್ಗತೊಡಗಿದವು. ಇದರಿಂದ ಗ್ರಾಮಸ್ಥರು ಭಯಭೀತರಾಗಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಜಗಳಕ್ಕೆ ನಿಂತರು. ಸರ್ಕಾರ ಕಾಡಾನೆ ಉಪಟಳ ತಪ್ಪಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬ ಫರ್ಮಾನು ಕೂಡ ಹೊರಡಿಸಿತು.
ಆದರೆ ಕಾಡಾನೆಗಳ ಹಿಂಡಿನ ಹಾವಳಿಯಿಂದ ಬೆಳೆೆ ಹಾನಿ, ಸಾವು, ನೋವು ಸಂಭವಿಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಅವರು ಕೇವಲ ತಮ್ಮ ತೋಟ ರಕ್ಷಣೆ ಮಾಡಿಕೊಳ್ಳುವ ಮಂತ್ರಿಯಾಗಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ತಮ್ಮ ಕಾಫಿತೋಟ-ಗದ್ದೆಗಳನ್ನು ಉಳಿಸಿಕೊಳ್ಳಲು ಏನೆಲ್ಲ ಸೌಲಭ್ಯಗಳು ಬೇಕೊ ಅದೆಲ್ಲವನ್ನೂ ಮಾಡಿಕೊಳ್ಳುತ್ತಾರೆ. ಊರಿನ ಉಸಾಬರಿ ತೆಗೆದುಕೊಂಡು ಅವರೇನು ಮಾಡುತ್ತಾರೆ ಎಂದು ವಿರೋಧ ಪಕ್ಷಗಳವರು ಹರಿಹಾಯುತ್ತಾರೆ. ಕಾಡಾನೆಗಳ ಹಾವಳಿಯಿಂದ ಸಣ್ಣ ರೈತರು ತಮ್ಮ ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟ ಎದುರಿಸಬೇಕಾಗಿದೆ. ಬೆಳೆಹಾನಿ, ಜೀವಹಾನಿ ಆದರೂ ಸರ್ಕಾರ ಕ್ಯಾರೆ ಅನ್ನುತ್ತಿಲ್ಲ ಎಂದು ಆಕ್ರೋಶಿತಗೊಂಡಿರುವ ಮಲೆನಾಡಿನ ಜನತೆ ಪ್ರತಿಭಟನೆಗೂ ಇಳಿದಿದ್ದಾರೆ. ಆನೆಗಳ ಚಲನವಲನಗಳ ಬಗ್ಗೆ ಅಧ್ಯಯನ ಮಾಡಿದ ತಜ್ಞರಿದ್ದಾರೆ. ಅವರೊಂದಿಗೆ ಚರ್ಚಿಸಿ ಆನೆಗಳು ಏಕೆ ದಾಳಿ ಇಡುತ್ತಿವೆ, ಅವುಗಳಿಗೆ ಉಂಟಾಗಿರುವ ಆಹಾರದ ಸಮಸ್ಯೆ ಏನು ಎಲ್ಲವನ್ನೂ ತಿಳಿದುಕೊಂಡು ಅದಕ್ಕೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಬಾರದೇಕೇ ಎನ್ನುವ ಹತ್ತಾರು ಪ್ರಶ್ನೆಗಳನ್ನು ರೈತರು ಸರ್ಕಾರದ ಮುಂದಿಡುತ್ತಾರೆ. ಆದರೆ ಸಾಮಾನ್ಯ ಜನತೆ ಮಾಡುವ ಯೋಚನೆಯನ್ನು ಜಿಲ್ಲಾ ಮಂತ್ರಿಗಳು, ಜಿಲ್ಲಾಧಿಕಾರಿಗಳು ಮಾಡುತ್ತಿಲ್ಲವಲ್ಲ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಕೇವಲ ಟೈಂ ಪಾಸ್ ಮಾಡುತ್ತಿದ್ದಾರೆ. ಅವರ ವರ್ತನೆ ಇದೇ ರೀತಿ ಮುಂದುವರಿದರೆ ಗೋ ಬ್ಯಾಕ್ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಪ್ರತಿಭಟನಾಕಾರರು ನೀಡಿದ್ದಾರೆ. ಕಾಡಾನೆಗಳ ದಾಳಿಯಿಂದ ಬೆಳೆ ಹಾನಿಯಾದ ರೈತರಿಗೆ ತಕ್ಷಣ ಪರಿಹಾರ ದೊರಕಿಸಬೇಕು ಹಾಗೂ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಎಂಎಂಡಿ ಹಳ್ಳಿ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಆನೆಗಳು ಬೀಡುಬಿಟ್ಟಿದ್ದರೂ ಅವುಗಳನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತಿಲ್ಲ. ಈ ಭಾಗದಲ್ಲಿ ಸಣ್ಣ ರೈತರೇ ಹೆಚ್ಚಿದ್ದೇವೆ. ಆನೆಗಳಿಂದಾಗಿರುವ ಹಾನಿಯಿಂದ ರೈತರು ಅನುಭವಿಸುತ್ತಿರುವ ಗೋಳು ಕೇಳುವವರಿಲ್ಲ. ಗದ್ದೆಯಲ್ಲಿ ಮಾಡಿದ ನಾಟಿಯಿಂದ ಒಂದು ಹಿಡಿ ಭತ್ತ ಕೈಗೆ ಸಿಗುತ್ತಿಲ್ಲ. ಒಂದೂ ಅಡಕೆ ಗಿಡ ಬಿಡದೆ ಆನೆಗಳು ಕಿತ್ತು ಹಾಕುತ್ತಿವೆ. ಆನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಬಹಳಷ್ಟು ಬಾರಿ ಒತ್ತಾಯ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ರೈತರಿಗಾಗಿರುವ ನಷ್ಟಕ್ಕೆ ಪರಿಹಾರ ಕೊಡಿಸಬೇಕು ಎಂಬ ನಮ್ಮ ಮನವಿಗೆ ಸರ್ಕಾರ ಕಿವಿಗೊಡುತ್ತಿಲ್ಲ. ಜಿಲ್ಲಾ ಸಚಿವರು ಮಾತ್ರ ತಮ್ಮ ವೈಯಕ್ತಿಕ ಕೆಲಸಕಾರ್ಯ ಮುಗಿಸಿಕೊಂಡು ಹೋಗುತ್ತಾರೆ ಎಂಬ ಆರೋಪಕ್ಕೆ ಇಂಬು ಕೊಡುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಕೊಡಲಾಗಿದೆಯೇ? ಎಂಬ ಪ್ರಶ್ನೆಯನ್ನೂ ಕಾಫಿ ನಾಡಿನ ಜನ ಕೇಳುತ್ತಿದ್ದಾರೆ. ಇಂದಿನ ಸ್ಥಿತಿಯಲ್ಲಿ ರೈತರು ಭತ್ತವನ್ನು ಬೆಳೆಯುವುದೇ ಕಷ್ಟವಾಗಿದೆ. ಹೀಗಿದ್ದರೂ ಬೆಳೆದು ನಿಂತ ಫಸಲನ್ನು ಆನೆಗಳು ಸಂಪೂರ್ಣ ಹಾನಿಪಡಿಸಿವೆ. ಹೀಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಿದ್ದರೆ, ವರ್ಷವಿಡೀ ನಮ್ಮ ಹೊಟ್ಟೆಗೆ ಗತಿ ಏನು, ಹಸು-ಎಮ್ಮೆಗಳಿಗೆ ಮೇವೂ ಸಿಗದೆ ಪರದಾಡಬೇಕಾದ ಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ, ಜಿಲ್ಲಾ ಮಂತ್ರಿಗಳು ಸರ್ಕಾರದಿಂದ ಶಾಶ್ವತ ಪರಿಹಾರ ಕಲ್ಪಿಸುವ ಬದಲು ಅಧಿಕಾರಿಗಳಿಗೆ ಸೂಚನೆ ನೀಡಿ ಹೋಗುತ್ತಾರೆ. ಇದು ಇದೆಲ್ಲ ಎಷ್ಟರಮಟ್ಟಿಗೆ ಸರಿ, ಇದರಿಂದ ಸರ್ಕಾರದ ಮೇಲೆ ಇಟ್ಟಿರುವ ಜನರ ನಂಬಿಕೆ ಹುಸಿಯಾಗುವುದಿಲ್ಲವೆ?
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ, ಮೂಡಿಗೆರೆ, ಶೃಂಗೇರಿ, ಕೊಪ್ಪ ತಾಲ್ಲೂಕಿನಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ ಅಭಿಯಾರಣ್ಯ ಪ್ರದೇಶದಲ್ಲಿ ಆನೆಗಳ ದಾಳಿ ವ್ಯಾಪಕವಾಗಿವೆ. ಚೋರಡಿ ಮತ್ತು ಸೂಡೂರು ಭಾಗದಲ್ಲಿ ಆನೆಗಳು ಓಡಾಡುತ್ತಿದ್ದು, ಎಚ್ಚರಿಕೆ ವಹಿಸಬೇಕೆಂದು ಅರಣ್ಯ ಇಲಾಖೆ ಸ್ಥಳೀಯರಿಗೆ ಸೂಚಿಸಿದೆ. ಉಭಯ ಜಿಲ್ಲೆಗಳಲ್ಲಿ ಆನೆ ದಾಳಿಯಿಂದ ಇದುವರೆಗೆ ೨೧ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆನೆಗಳು ಮತ್ತು ಮಾನವ ಸಂಘರ್ಷದಲ್ಲಿ ಈ ಎರಡೂ ಜಿಲ್ಲೆಗಳಲ್ಲಿ ೧೧ಕ್ಕೂ ಹೆಚ್ಚು ಆನೆಗಳು ಕೂಡ ಸಾವಿಗೀಡಾಗಿವೆ. ಆನೆ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ಐದು ಲಕ್ಷ ರೂ. ಪರಿಹಾರ ಕೊಟ್ಟು ಕುಳಿತರೆ ಶಾಶ್ವತ ಪರಿಹಾರ ಮಾಡಿದಂತಾಗುತ್ತದೆಯೇ? ಆನೆಗಳು ಏಕೆ ಊರುಗಳಿಗೆ ನುಗ್ಗುತ್ತಿವೆ, ಅದಕ್ಕೆ ಪರಿಹಾರವೇನು ಎಂಬುದನ್ನು ಸರ್ಕಾರ ಮೊದಲು ಕಂಡುಕೊಳ್ಳಬೇಕು, ಅದಕ್ಕೆ ತಕ್ಕಂತೆ ಪರಿಹಾರ ಕಲ್ಪಿಸಬೇಕಿದೆ.
ಆನೆಗಳಿಗೆ ಅರಣ್ಯದಲ್ಲೇ ಆಹಾರ ಸಿಗಬೇಕು
ಮಲೆನಾಡು ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ಮುಂದಾಗಬೇಕಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ರೈತರು ಗದ್ದೆಗಳಲ್ಲಿ ಬೆಳೆ ಬೆಳೆಯಲು ಹಿಂಜರಿಯುತ್ತಿದ್ದಾರೆ. ಗದ್ದೆಗಳಿಗೆ ಹೋಗಲೂ ಭಯಪಡುತ್ತಿದ್ದಾರೆ. ಕಾಡಾನೆಗಳು ಜನ ವಸತಿ ಪ್ರದೇಶಗಳಲ್ಲಿಯೇ ವಾಸ ಮಾಡುತ್ತಿದ್ದು ಹಾಗೂ ನಿರಂತರವಾಗಿ ಗ್ರಾಮಗಳಿಗೆ ಲಗ್ಗೆ ಇಡುತ್ತಿದ್ದು, ಅರಣ್ಯ ಇಲಾಖೆಯ ಮಾರಕ ಕಾನೂನು, ಕಾಯ್ದೆಗಳೇ ಕಾರಣವಾಗಿದೆ. ಅರಣ್ಯ ಭಾಗದಲ್ಲಿ ಆನೆಗಳಿಗೆ ಅಗತ್ಯವಿರುವ ಬಿದಿರು, ಬೈನೆ, ಹಲಸು ಸೇರಿದಂತೆ ವಿವಿಧ ಕಾಡು ಜಾತಿಯ ಹಣ್ಣಿನ ಗಿಡಗಳನ್ನು ನೆಟ್ಟರೆ ಆನೆಗಳು ನಾಡಿಗೆ ಬರುವ ಪ್ರಮೇಯವೇ ಇರುವುದಿಲ್ಲ. ಆಹಾರ ಅರಸಿಕೊಂಡು ಗ್ರಾಮಗಳಿಗೆ ನುಗ್ಗುವ ಆನೆಗಳು ಆಹಾರ ತಿನ್ನುವುದಕ್ಕಿಂತ ನಷ್ಟ ಮಾಡುವುದೇ ಹೆಚ್ಚಾಗಿರುತ್ತದೆ. ಅವುಗಳಿಗೆ ಬೇಕಾದ ಆಹಾರ ಕಾಡಿನಲ್ಲೇ ದೊರೆಯುವಂತಾದರೆ ನಾಡಿಗೆ ಬರುವುದನ್ನು ನಿಲ್ಲಿಸುತ್ತವೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚನೆ ಮಾಡಬೇಕಿದೆ.