ಕೃಷ್ಣ-ಲೋಕಲ್ ಟು ಗ್ಲೋಬಲ್
ಮಂಡ್ಯ ಸೀಮೆ ರಾಜಕಾರಣವನ್ನೇ ಉಸಿರಾಡುವ ನೆಲ. ಪ್ರತಿ ಮನೆಯಲ್ಲೂ ರಾಜಕೀಯ ಕಾರ್ಯಕರ್ತರಿರುವ ವಿಶೇಷತೆಯುಳ್ಳ ಈ ಸೀಮೆಯಿಂದ ಹೊರಹೊಮ್ಮಿ ರಾಜಕೀಯದಲ್ಲಿ ಹೆಸರಾದವರು ಅನೇಕರು. ಎಚ್.ಕೆ. ವೀರಣ್ಣಗೌಡ, ಕೆ.ವಿ. ಶಂಕರೇಗೌಡ, ಎಂ. ಮಾದೇಗೌಡ, ಅಂಬರೀಷ್, ಮಳವಳ್ಳಿಯ ನಾಗೇಗೌಡ ಮುಂತಾದ ರಾಜಕಾರಣಿಗಳ ನಡುವೆ ಎಸ್.ಎಂ. ಕೃಷ್ಣ ಅವರದ್ದು ವಿಶಿಷ್ಟ ಸ್ಥಾನ, ಅಚ್ಚಳಿಯದ ಹೆಜ್ಜೆಗುರುತು.
ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯ ರೈತ ಕುಟುಂಬದ ಕುಡಿ ಎಸ್.ಎಂ. ಕೃಷ್ಣ ಅವರು ಹಳ್ಳಿಯಿಂದ ದಿಲ್ಲಿಗೆ ಮಾತ್ರವಲ್ಲ, ದಿಲ್ಲಿಯಾಚೆಗಿನ ಜಾಗತಿಕ ಮಟ್ಟಕ್ಕೆ ಬೆಳೆದ ತ್ರಿವಿಕ್ರಮ ರಾಜಕಾರಣಿ. ಕರ್ನಾಟಕದ ಮಟ್ಟಿಗೆ ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ಕೃಷ್ಣ ಅವರು ಅಲಂಕರಿಸದ ಹುದ್ದೆಗಳಿಲ್ಲ (ಪ್ರಧಾನಿ-ರಾಷ್ಟ್ರಪತಿ ಸ್ಥಾನ ಹೊರತುಪಡಿಸಿ) ಎಂಬುದು ಚಾರಿತ್ರಿಕ ಬೆಳವಣಿಗೆ. ಕೃಷ್ಣಪಥದ ಈ ಮಹಾಜಿಗಿತದ ಪಯಣವೇ ನಿಜಕ್ಕೂ ರೋಚಕ ಕಥನ. ರಾಜಕಾರಣಿಗಳು ಅವಕಾಶಗಳನ್ನು ಬೆನ್ನತ್ತಿ ಬೆಳೆಯುವುದು ಸರ್ವೇಸಾಮಾನ್ಯ, ಆದರೆ, ಅವಕಾಶಗಳೇ ಬೆನ್ನತ್ತಿ ಬಂದು ಅರಳಿಸಿದ್ದು ಎಸ್.ಎಂ.ಕೃಷ್ಣ ಅವರ ವೈಶಿಷ್ಟ್ಯತೆ. ಇಂತಹ ಯೋಗ ಕೂಡಿಬರಲು ಕಾರಣ ಸ್ವತಃ ಎಸ್.ಎಂ. ಕೃಷ್ಣ ಅವರ ವ್ಯಕ್ತಿತ್ವವೇ. ಸಾರ್ವಜನಿಕ ಬದುಕಿನಲ್ಲಿ ಅಪರೂಪವೆನಿಸುವ ಅಪಾರ ಓದು, ಸುಸಂಸ್ಕೃತ ನಡೆ, ಸುಶಿಕ್ಷಣ, ಅಸೀಮ ತಾಳ್ಮೆ, ಸಕಾಲಿಕ ಜಾಣ್ಮೆ, ದೂರದರ್ಶಿತ್ವ, ಹಿತ-ಮಿತದ ಮಾತುಗಾರಿಕೆ, ಅಜಾತಶತ್ರುತ್ವ, ರಾಗ-ದ್ವೇಷವಿರದ ವರ್ತನೆ, ಸ್ಪಷ್ಟವಾದ ಲೋಕ ಗ್ರಹಿಕೆ, ವೈವಿಧ್ಯಮಯ ಹವ್ಯಾಸಗಳು… ಎಲ್ಲಕ್ಕಿಂತ ಮಿಗಿಲಾಗಿ ಮುತ್ಸದ್ಧಿತನದ ಗುಣಗಳು ಕೃಷ್ಣ ಅವರ ಯಶಸ್ಸಿನ ಮೂಲಧಾತು. ಹಾಗಾಗಿಯೇ ಐದು ದಶಕಕ್ಕೂ ಮೀರಿದ ಸುದೀರ್ಘ ಸಕ್ರಿಯ ರಾಜಕಾರಣದಲ್ಲಿ `ನಾ ಏರುವ ಎತ್ತರಕ್ಕೆ ನೀ ಏರಬಲ್ಲೆಯಾ' ಎಂಬ ಕುವೆಂಪು ವಾಣಿಯಂತೆ ಹತ್ತಾರು ಬಗೆಯ ಎತ್ತರಕ್ಕೆ ಏರಿದ ಕೃಷ್ಣ ಅವರಿಗೆ ಕೃಷ್ಣ ಅವರೇ ಸಾಟಿ..!
ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ಶಾಲಾ ಶಿಕ್ಷಣ, ಮಹಾರಾಜ ಕಾಲೇಜಿನಲ್ಲಿ ಪದವಿ, ಬೆಂಗಳೂರಿನಲ್ಲಿ ಕಾನೂನು ಪದವಿ, ಅಮೆರಿಕಾದ ಡಾಲಸ್‌ನಲ್ಲಿ ಸ್ನಾತಕೋತ್ತರ ಕಾನೂನು ಪದವಿ ಮುಗಿಸಿ ವಾಷಿಂಗ್ಟನ್‌ನಲ್ಲಿ ಫುಲ್‌ಬ್ರೈಟ್ ಸಾಲ್ಕರ್‌ಶಿಫ್ ಪಡೆದಿದ್ದ ಕೃಷ್ಣ ಅವರು ರಾಜಕಾರಣಕ್ಕೆ ಧಮುಕಿದ್ದು ವಿಶೇಷವಾದರೂ ಆನಂತರ ತರಹೇವಾರಿ ಹುದ್ದೆಗಳಿಗೆ ಏರಿದ್ದು ವಿಸ್ಮಯಕಾರಿ ಬೆಳವಣಿಗೆ.
೧೯೬೨ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಧೀಮಂತ ರಾಜಕಾರಣಿ ಕೆ.ವಿ.ಶಂಕರಗೌಡರನ್ನೇ ಮಣಿಸಿ ವಿಧಾನಸಭೆ ಪ್ರವೇಶಿಸಿದ್ದು ಮೊದಲ ಸೋಜಿಗ. ಆನಂತರ ಕೃಷ್ಣ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ೧೯೭೬ರಲ್ಲಿ ಸೋಷಿಯಲಿಸ್ಟ್ ಪಕ್ಷದ ಹುರಿಯಾಳಾಗಿ ಸೋತರೂ ಉಪಚುನಾವಣೆಯಲ್ಲಿ ಗೆದ್ದು ೧೯೬೮ರಲ್ಲಿ ಲೋಕಸಭೆ ಪ್ರವೇಶಿಸಿದರು. ೧೯೭೧ರಲ್ಲಿ ಸಂಸದ, ೧೯೭೨ರಲ್ಲಿ ಮೇಲ್ಮನೆಯ ಸದಸ್ಯರಾಗಿ ದೇವರಾಜ್ ಅರಸು ಸಂಪುಟದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರಾಗಿದ್ದು ಮೊದಲ ಪ್ರಮುಖ ಹುದ್ದೆ. ೧೯೮೦ರಲ್ಲಿ ಮತ್ತೆ ಸಂಸತ್‌ಗೆ ಆಯ್ಕೆಯಾದ ಕೃಷ್ಣ ಅವರು ಇಂದಿರಾಗಾಂಧಿ ಸಂಪುಟದಲ್ಲಿ ಕೈಗಾರಿಕೆ ಮತ್ತು ಹಣಕಾಸು ಇಲಾಖೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದು ಕಿರಿಯ ವಯಸ್ಸಿಗೇ ಏರಿದ ಹಿರಿಯ ಸ್ಥಾನವಾಗಿತ್ತು.
ಮತ್ತೆ ರಾಜ್ಯ ರಾಜಕಾರಣದತ್ತ ಮುಖ ಮಾಡಿದ ಕೃಷ್ಣ ಅವರು ೧೯೮೯ರ ಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾಗಿ ಸಭಾಧ್ಯಕ್ಷರಾಗಿದ್ದು ಹೊಸ ಜಿಗಿತ. ಸಾರೆಕೊಪ್ಪದ ಬಂಗಾರಪ್ಪ ಪದಚ್ಯುತಿಯ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದರೂ ಉಪಮುಖ್ಯಮಂತ್ರಿ ಪಟ್ಟ ದಕ್ಕಿಸಿಕೊಂಡ ಕೃಷ್ಣ ೧೯೯೬ರಿಂದ ೯೯ರವರೆಗೆ ರಾಜ್ಯಸಭಾ ಸದಸ್ಯರೂ ಆದರು. ೧೯೯೯ರಲ್ಲಿ ರಾಜ್ಯ ರಾಜಕಾರಣಕ್ಕೆ ಮರಳಿ ಕೆಪಿಸಿಸಿ ಅಧ್ಯಕ್ಷರಾಗಿ ಪಾಂಚಜನ್ಯ ಮೊಳಗಿಸಿ ಮುಖ್ಯಮಂತ್ರಿಯಾಗಿದ್ದು ಯಶಸ್ವಿಯಾಗಿ ನಾಲ್ಕೂವರ್ಷ ಆಡಳಿತ ನಡೆಸಿದ್ದು ಇತಿಹಾಸ. ೨೦೦೪ರಲ್ಲಿ ವಿಧಾನಸಭೆಗೆ ಮರು ಆಯ್ಕೆಯಾದ ಬೆನ್ನಲ್ಲೇ ಮಹಾರಾಷ್ಟ್ರದ ರಾಜ್ಯಪಾಲರಾಗಿ ಬಡ್ತಿ ಪಡೆದಿದ್ದ ಕೃಷ್ಣ ಅವರು ೨೦೦೮ರಲ್ಲಿ ರಾಜ್ಯಸಭೆಗೆ ನಾಮಕರಣಗೊಂಡರಲ್ಲದೆ, ಮನಮೋಹನ್‌ಸಿಂಗ್ ಅವರ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಮೂರೂ ವರ್ಷ ಕೆಲಸ ಮಾಡಿದರು. ಈ ಹುದ್ದೆಯಿಂದ ನಿರ್ಗಮಿಸುವುದರೊಂದಿಗೆ ಕೃಷ್ಣರ ಅಧಿಕಾರದ ರಾಜಕಾರಣವೂ ಅಂತ್ಯಗೊಂಡಿತು. ಮನಮೋಹನ್‌ಸಿಂಗ್ ಅವರಿಗಿಂತ ವಯಸ್ಸಿನಲ್ಲಿ ದೊಡ್ಡವರಾಗಿರದಿದ್ದರೆ ಪ್ರಧಾನಿ ಹುದ್ದೆ ಒಲಿಯುವ ಅವಕಾಶವೂ ಕೃಷ್ಣ ಅವರಿಗಿತ್ತು. ಆದರದಕ್ಕೆ ಯೋಗ ಕೂಡಿಬರಲಿಲ್ಲವಷ್ಟೇ. ಮೂರು ಬಾರಿ ಸಂಸದ, ಎರಡು ಬಾರಿ ರಾಜ್ಯಸಭಾ ಸದಸ್ಯ, ರಾಜ್ಯದ ಎರಡೂ ಸದನಗಳ ಸದಸ್ಯ, ನಾಲ್ಕು ಬಾರಿ ಶಾಸಕ, ವಿಧಾನಸಭಾಧ್ಯಕ್ಷ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲ, ಎರಡು ಬಾರಿ ಕೇಂದ್ರದ ಸಚಿವ.. ಹೀಗೆ ಕೃಷ್ಣ ಅವರಂತೆ ಅಸೀಮವೆನಿಸುವ ಅಧಿಕಾರದ ಹುದ್ದೆಗಳಲ್ಲಿ ರಾರಾಜಿಸಿದ ಮತ್ತೊಬ್ಬ ರಾಜಕಾರಣಿ ದೇಶದಲ್ಲೇ ಇಲ್ಲ ಎಂಬುದು ಹೆಗ್ಗಳಿಕೆಯ ವಿಚಾರವೂ ಹೌದು, ಕೃಷ್ಣ ಅವರ ಸಾಧನಾ ಹೆಗ್ಗುರುತೂ ಕೂಡ.
ಅಮೆರಿಕಾ ಅಧ್ಯಕರ ಪರ ಚುನಾವಣಾ ಪ್ರಚಾರ
ಆಗ ಕೃಷ್ಣ ಅವರು ಅಮೆರಿಕಾದ ಡಾಲಸ್‌ನಲ್ಲಿ ಸ್ನಾತಕೋತ್ತರ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾಗ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಾನ್ ಎಫ್ ಕೆನಡಿ ಪರ ಚುನಾವಣಾ ಪ್ರಚಾರ ಮಾಡಿದ್ದು ಅವರ ವರ್ಚಸ್ಸಿಗೆ ಹಿಡಿದ ಕನ್ನಡಿ. ಆ ಚುನಾವಣೆಯಲ್ಲಿ ಕೆನಡಿ ಗೆದ್ದದ್ದು ಮತ್ತೊಂದು ವಿಶೇಷ.
ವಿಶ್ವಸಂಸ್ಥೆಯಲ್ಲಿ ಭಾಷಣ
ಜಾಗತಿಕ ಮಟ್ಟದಲ್ಲಿ ವಿಶ್ವಸಂಸ್ಥೆಯೇ ಪರಮೋಚ್ಛ ಸಂಸ್ಥೆ. ಎಸ್.ಎಂ. ಕೃಷ್ಣ ಅವರು ವಿದೇಶಾಂಗ ಸಚಿವರಾಗಿದ್ದಾಗ ವಿಶ್ವಸಂಸ್ಥೆಯಲ್ಲಿ ನಡೆದ ಅಧಿವೇಶನವೊಂದರಲ್ಲಿ ಭಾಷಣ ಮಾಡಿದ್ದು ನಿಜಕ್ಕೂ ಹೆಗ್ಗಳಿಕೆ. ಹಲವು ವಿದೇಶಗಳಿಗೆ ತೆರಳಿದ ಸಂಸದೀಯ ನಿಯೋಗಗಳಲ್ಲಿ ಕೃಷ್ಣ ಸದಸ್ಯರಾಗಿದ್ದರು. ಅಪಾರ ವಿದೇಶಿ ಸ್ನೇಹಿತರನ್ನೂ ಹೊಂದಿದ್ದರು.
ವಿಂಬಲ್ಡನ್ ಪ್ರೇಮಿ
ಕ್ರೀಡಾಸಕ್ತಿ ಕೃಷ್ಣ ಆವರ ವ್ಯಕ್ತಿತ್ವದ ವಿಶೇಷಗಳಲ್ಲೊಂದು. ಟೆನಿಸ್‌ನ ಅಪಾರ ಪ್ರೇಮಿಯಾಗಿದ್ದ ಕೃಷ್ಣ ಅವರು ಪ್ರತಿ ವರ್ಷ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ವೀಕ್ಷಕರಾಗಿ ತಪ್ಪದೇ ಹಾಜರಾಗುತ್ತಿದ್ದರು. ಬಹುತೇಕ ಟೆನಿಸ್ ತಾರೆಗಳಿಗೆ ಪರಿಚಿತರೂ ಆಗಿದ್ದರು.