For the best experience, open
https://m.samyuktakarnataka.in
on your mobile browser.

ಬದುಕು ಬದಲಿಸಿದ ನ್ಯೂಯಾರ್ಕ್ ಟೈಮ್ಸ್ ಜಾಹೀರಾತು

04:00 AM Dec 12, 2024 IST | Samyukta Karnataka
ಬದುಕು ಬದಲಿಸಿದ ನ್ಯೂಯಾರ್ಕ್ ಟೈಮ್ಸ್ ಜಾಹೀರಾತು

ಅಮೆರಿಕದ ದಿ ನ್ಯೂಯಾರ್ಕ್ ಟೈಮ್ಸ್' ಪ್ರಕಟಿಸಿದ್ದ ಅದೊಂದು ಜಾಹೀರಾತು ಎಸ್.ಎಂ. ಕೃಷ್ಣ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಆಗತಾನೇ ೨೭ರ ಹರೆಯದ ಚಿಗುರುಮೀಸೆಯ ಯುವಕ ಎಸ್.ಎಂ.ಕೃಷ್ಣ ೧೯೫೭-೫೮ರಲ್ಲಿ ಟೆಕ್ಸಾಸ್‌ನ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಕಾನೂನು ಸ್ನಾತಕಪದವಿ ಮುಗಿಸಿ ವಾಷಿಂಗ್ಟನ್ ಡಿಸಿಗೆ ವೃತ್ತಿಯನ್ನರಸಿ ಹೋಗಿದ್ದರು. ಹೀಗೆ ಕೆಲಸದ ತಲಾಷ್‌ನಲ್ಲಿದ್ದಾಗ ಒಂದು ದಿನ,ದಿ ನ್ಯೂಯಾರ್ಕ್ ಟೈಮ್ಸ್'ನಲ್ಲಿರುವ ಜಾಹೀರಾತೊಂದು ಅವರ ಗಮನ ಸೆಳೆಯಿತು. ಅಸೋಸಿಯೇಶನ್ ಆಫ್ ಅಮೇರಿಕನ್ ಮ್ಯಾನುಫಾಕ್ಚರರ್ಸ್ ಎಂಬ ಸಂಸ್ಥೆ `ಮೆಸೆಂಜರ್' ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಕೃಷ್ಣ ಅವರಿಗೆ ಮೆಸೆಂಜರ್ ಹುದ್ದೆಯ ಕೆಲಸ ಏನು ಎಂಬುದು ಗೊತ್ತಿರಲಿಲ್ಲವಾದರೂ ಕುತೂಹಲದಿಂದಲೇ ಅರ್ಜಿ ಗುಜರಾಯಿಸಿ, ಸಂದರ್ಶನಕ್ಕೂ ಹಾಜರಾದರು. ಅದೊಂದು ಲಾಬಿಗಾರನ ಹುದ್ದೆಯಾಗಿತ್ತು. ಅಂದರೆ, ಅಮೇರಿಕದ ಸೆನೇಟರ್‌ಗಳನ್ನು ಭೇಟಿ ಮಾಡುವುದು, ಅಸೋಸಿಯೇಶನ್ ಪರವಾಗಿ ಸೆನೇಟರ್‌ಗಳ ಮೇಲೆ ಪ್ರಭಾವ ಬೀರುವುದು ಮೆಸೆಂಜರ್ ಹುದ್ದೆಯ ಕೆಲಸವಾಗಿತ್ತು. ಕೆಲಮಟ್ಟಿನ ಹಿಂಜರಿಕೆಯಿಂದಲೇ ಈ ಕೆಲಸವನ್ನು ಒಪ್ಪಿಕೊಂಡ ಎಸ್.ಎಂ.ಕೃಷ್ಣ ಅಮೇರಿಕದ ಸಂಸತ್ತಿನ ಕೆಳಮನೆಯ ಸದಸ್ಯರ ಮೇಲೆ ಉದ್ದಿಮೆದಾರರ ಪರವಾಗಿ ಪ್ರಭಾವ ಬೀರುವುದು, ಉತ್ಪಾದನಾ ವಲಯದ ನೀತಿ-ನಿರೂಪಣೆ ಕುರಿತಂತೆ ಮಾಹಿತಿ ಸಂಗ್ರಹಿಸುವ ಕೆಲಸ ಆರಂಭಿಸಿದರು. ಹೀಗಾಗಿ ಕ್ಯಾಪಿಟಲ್ ಹಿಲ್ ಅವರಿಗೆ ಅಪ್ಯಾಯಮಾನವಾಗ ತೊಡಗಿತು. ಮಾತಿನಲ್ಲಿ ವಿನಯಶೀಲತೆ, ಅಗಾಧ ಓದು ಮತ್ತು ಎದುರಿನ ವ್ಯಕ್ತಿಗಳು ಹೇಳುವ ವಿಷಯವನ್ನು ಗಮನವಿಟ್ಟು ಕೇಳುವ ಕಲೆ ಅವರಿಗೆ ಕರಗತವಾಗ ತೊಡಗಿತು. ಹೀಗಾಗಿ ಕೆಲವೇ ವಾರಗಳಲ್ಲಿ ಎಸ್.ಎಂ. ಕೃಷ್ಣ ೧೯೫೦-೬೦ರ ದಶಕದ ಅಮೇರಿಕದ ಪ್ರಭಾವಿ ರಾಜಕಾರಣಿಗಳ ಸಂಪರ್ಕಕ್ಕೆ ಬರತೊಡಗಿದರು.
ಆಗಿನ ದಿನಗಳಲ್ಲಿ ಅಮೇರಿಕ ವಿಭಿನ್ನ ಮತ್ತು ಕಡಿಮೆ ಭದ್ರತೆ ಇರುವ ದೇಶವಾಗಿತ್ತು. ಜಾನ್ ಎಫ್. ಕೆನಡಿ ಸೇರಿದಂತೆ ಅನೇಕ ಸೆನೇಟರ್‌ಗಳನ್ನು ಅವರು ಸಲೀಸಾಗಿ ಭೇಟಿ ಮಾಡುತ್ತಿದ್ದರು. ಮಂಗಳವಾರ ನಸುಕಿನ ಜಾವ ಕೊನೆಯುಸಿರು ಎಳೆಯುವವರೆಗೂ ಬದುಕಿನುದ್ದಕ್ಕೂ ಜಾನ್ ಎಫ್.ಕೆನಡಿ ಅವರ ಅನುಯಾಯಿ ಆಗಿದ್ದರು ಎಸ್.ಎಂ.ಕೃಷ್ಣ. ಕೆನಡಿ ಅಮೇರಿಕ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದಾಗ ಕೃಷ್ಣ ಅವರು ಪ್ರಚಾರ ಕಾರ್ಯಕ್ಕೆ ಧುಮುಕಿದರು. ಕೃಷ್ಣರ ಪ್ರಚಾರ ಕಾರ್ಯಕ್ಕೆ ಮನಸೋತ ಕೆನಡಿ ಅವರು ಕೃತಜ್ಞತಾ ಪತ್ರವೊಂದನ್ನು ಬರೆದಿದ್ದರು. ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಆ ಪತ್ರ ಇಂದಿಗೂ ಕೃಷ್ಣ ಕಾಯ್ದಿರಿಸಿದ್ದಾರೆ.
ಕೆನಡಿ ಮಾತ್ರವಲ್ಲದೇ ಅಂದಿನ ಅಮೇರಿಕದ ಉಪಾಧ್ಯಕ್ಷ ರಿಚರ್ಡ್ ನಿಕ್ಸನ್ ಜೊತೆಗೂ ಕೃಷ್ಣ ಉತ್ತಮ ಬಾಂಧವ್ಯ ಹೊಂದಿದ್ದರಲ್ಲದೇ ಖಾಸಗಿಯಾಗಿ ಭೇಟಿ ಮಾಡುತ್ತಿದ್ದರು. ಅಮೇರಿಕದಲ್ಲೇ ನೆಲೆನಿಂತು ಕೆನಡಿ ಅವರೊಂದಿಗೆ ಪೂರ್ಣಾವಧಿ ಕೆಲಸ ಮಾಡುವ ಇಚ್ಛೆ ಕೃಷ್ಣ ಅವರಿಗಿತ್ತು. ಡೆಮಾಕ್ರಟಿಕ್ ಪಕ್ಷದಿಂದ ಕೆನಡಿ ಅಮೇರಿಕ ಅಧ್ಯಕ್ಷ ಹುದ್ದೆಗೆ ನಾಮನಿರ್ದೇಶನಗೊಂಡಾಗ ಆ ಅಭೂತಪೂರ್ವ ಸಮಾರಂಭವನ್ನು ಎಸ್.ಎಂ.ಕೃಷ್ಣ ಅವರೇ ತಮ್ಮ ಚಿಕ್ಕ ವಿಡಿಯೋ ಕ್ಯಾಮರಾದಲ್ಲಿ ಸಂಪೂರ್ಣ ಸೆರೆ ಹಿಡಿದಿದ್ದರು. "ಕೆನಡಿ ಅವರಿಂದ ಕೇವಲ ೨೦ ಅಡಿ ದೂರದಲ್ಲಿ ನಿಂತು ಚಿತ್ರೀಕರಿಸಿದ್ದೆ. ಅಧ್ಯಕ್ಷ ಹುದ್ದೆ ಒಪ್ಪಿಕೊಂಡು ತಮ್ಮ ಲಿಖಿತ ಭಾಷಣವನ್ನು ಓದುತ್ತಿದ್ದಾಗ ಕೆನಡಿ ಅವರ ಕೈಗಳು ನಡುಗುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆ ಕ್ಷಣವನ್ನು ನಾನೆಂದಿಗೂ ಮರೆಯಲಾರೆ," ಎಂದು ಎಸ್.ಎಂ.ಕೃಷ್ಣ ಅವರು ಆ ಐತಿಹಾಸಿಕ ಕ್ಷಣದ ಕುರಿತು ಮೆಲುಕು ಹಾಕಿದ್ದರು.
ದುರದೃಷ್ಟವಶಾತ್ ಬೆಂಗಳೂರಿನಲ್ಲಿ ಎಸ್.ಎಂ.ಕೃಷ್ಣ ಅವರು ಸದಾಶಿವ ನಗರಕ್ಕೆ ತಮ್ಮ ಮನೆ ಸ್ಥಳಾಂತರ ಮಾಡುವಾಗ ಐತಿಹಾಸಿಕ ಕೆನಡಿ ಪದಗ್ರಹಣದ ವಿಡಿಯೋ ಕಳೆದು ಹೋಯಿತು. ಆ ಬಗ್ಗೆ ಕೃಷ್ಣ ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದರು. ಕೆನಡಿ ಮಾತ್ರವಲ್ಲದೇ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರನ್ನೂ ಅಲಬಾಮಾ ಚರ್ಚ್ನಲ್ಲಿ ಕೃಷ್ಣ ಭೇಟಿ ಮಾಡಿದ್ದರು. ಅಷ್ಟೇ ಅಲ್ಲ, ಅವರ ಕುಟುಂಬದ ಸದಸ್ಯರ ಜತೆಗೂ ಕೃಷ್ಣ ಸಂಪರ್ಕ ಹೊಂದಿದ್ದರು. ಭಾರತಕ್ಕೆ ಮಾರ್ಟಿನ್ ಲೂಥರ್ ಕಿಂಗ್ ೧೯೫೯ರಲ್ಲಿ ಭೇಟಿ ಮಾಡಿದ್ದರು. ಅದರ ಸ್ಮರಣಾರ್ಥ ಕಿಂಗ್ ಮೊಮ್ಮಗ ೨೦೦೯ರಲ್ಲಿ ಭಾರತಕ್ಕೆ ಬಂದಾಗ ಬೆಂಗಳೂರಿನ ಸದಾಶಿವ ನಗರದ ಎಸ್.ಎಂ. ಕೃಷ್ಣ ನಿವಾಸಕ್ಕೂ ಭೇಟಿ ನೀಡಿದ್ದರು.
ಅಮೇರಿಕದಲ್ಲಿ ಪಿಎಚ್‌ಡಿ ಪದವಿ ಪಡೆಯುತ್ತಿರುವಾಗಲೇ ಎಸ್.ಎಂ.ಕೃಷ್ಣ ಅವರ ತಂದೆ ಅನಾರೋಗ್ಯಕ್ಕೀಡಾಗಿ ನಂತರ ನಿಧನರಾದ ಕಾರಣಕ್ಕೆ ತಮ್ಮ ಪಿಎಚ್‌ಡಿ ಪದವಿಯನ್ನು ಅಪೂರ್ಣಗೊಳಿಸಿ ಕೃಷ್ಣ ಭಾರತಕ್ಕೆ ವಾಪಸಾದರು. ದೊಡ್ಡ ಕುಟುಂಬದ ಜವಾಬ್ದಾರಿ ಕೃಷ್ಣ ಅವರ ಮೇಲೆ ಇದ್ದುದರಿಂದ ಅವರು ಅಮೇರಿಕಕ್ಕೆ ವಾಪಸ್ ತೆರಳಲಿಲ್ಲ.
ಆದರೆ ಎಸ್.ಎಂ. ಕೃಷ್ಣ ಅವರಿಗೆ ಅಮೇರಿಕ ರಾಜಕಾರಣದಲ್ಲೇ ಬಹುದೊಡ್ಡ ಹೆಸರು ಮಾಡುವ ಆಕಾಂಕ್ಷೆ ಇತ್ತು. ಅಲ್ಲಿನ ರಾಜಕಾರಣದ ಶೈಲಿ ತಮಗೆ ಒಪ್ಪುತ್ತದೆ ಎಂದು ಅವರು ಭಾವಿಸಿದ್ದರು. ಅದೃಷ್ಟವಶಾತ್ ಅವರು ಕರ್ನಾಟಕ ಮತ್ತು ಭಾರತದ ರಾಜಕಾರಣದಲ್ಲೂ ಉನ್ನತ ಪದವಿಗೇರಿದರು. ಹೀಗಾಗಿ ತಮ್ಮ ಬದುಕಿನ ಸಾಧನೆಗಳ ಬಗೆಗೆ ಎಸ್.ಎಂ. ಕೃಷ್ಣ ಅವರಿಗೆ ತೃಪ್ತಿ ಇತ್ತು.
ಕೃಷ್ಣ ಅವರಿಗೆ ಜವಾಹರಲಾಲ್ ನೆಹರು ಅವರ ರಾಜಕೀಯ ನೀತಿಗಳ ಬಗೆಗೆ ಒಪ್ಪಿಗೆ ಇರಲಿಲ್ಲ. ಜಾನ್ ಎಫ್.ಕೆನಡಿ ಅವರ ನೀತಿಗಳಲ್ಲಿ ಒಲವು ಹೊಂದಿದ್ದರು. ಹೀಗಾಗಿಯೇ ಅವರು ಸಮಾಜವಾದಿ ಸಿದ್ದಾಂತಗಳಲ್ಲಿ ನಂಬಿಕೆ ಇಟ್ಟಿದ್ದರು. ಆದರೆ ಮುಂದೆ ರಾಜಕೀಯ ಬದುಕಿನ ಬಹುತೇಕ ಯಶಸ್ಸು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಅವರನ್ನು ಅರಸಿ ಬಂತು. ರಾಜಕೀಯ ನಿವೃತ್ತಿ ಘೋಷಿಸಿದ ಬಳಿಕ ಬಿಜೆಪಿ ಸೇರ್ಪಡೆಯಾದದ್ದು ಕೂಡ ಈಗ ಇತಿಹಾಸ.