ರಾಜ್ ಬಿಡುಗಡೆಗೆ ಕೃಷ್ಣ ಗಾರುಡಿ ತಂತ್ರ
ಎಸ್.ಎಂ.ಕೃಷ್ಣ (ಎಸ್‌ಎಂಕೆ) ತಮ್ಮ ಅವಧಿಯಲ್ಲಿ ಸಿಲುಕಿದ್ದ ಅತ್ಯಂತ ದೊಡ್ಡ ಮತ್ತು ಹೇಳತೀರದಷ್ಟು ಭಯಾನಕವಾದ ಸಾಂದರ್ಭಿಕ ಒತ್ತಡವೆಂದರೆ, ಡಾ.ರಾಜ್ ಅಪಹರಣ.
ಆ ಸಂದರ್ಭದಲ್ಲಿ ಸರ್ಕಾರದ ಮುಖ್ಯಸ್ಥರಾಗಿ ಅವರು ತೋರಿದ ಸಂಯಮ ಮತ್ತು ತೆಗೆದುಕೊಂಡ ನಿರ್ಧಾರಗಳು ನಿಜಕ್ಕೂ ದಾಖಲಾರ್ಹ. ಒಳಗಿನ ಒತ್ತಡ ಅಥವಾ ಆತಂಕ ಎರಡನ್ನೂ ತೋರಿಸಿಕೊಳ್ಳದೇ ಈ ಪ್ರಸಂಗವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಮಹಾಭಾರತದ ಕೃಷ್ಣನನ್ನೇ ನೆನಪಿಸುತ್ತದೆ.
ಆ ಸಂದರ್ಭದಲ್ಲಿ ಘೋಷಿತ ಅಪರಾಧಿ, ನರಹಂತಕನ ಜೊತೆ ಮಾತನಾಡಿ ಕೊನೇ ರಾಜತಾಂತ್ರಿಕ' ಯತ್ನಗಳನ್ನು ಮಾಡುವುದಕ್ಕೂ ಎಸ್‌ಎಂಕೆ ಮುಂದಾಗಿದ್ದರು. ಗೌಪ್ಯತೆ ಕಾದುಕೊಳ್ಳಲು ಷರತ್ತು ವಿಧಿಸಿ ಒಂದು ಮೂಲ ತಿಳಿಸಿರುವ ಪ್ರಕಾರ,
ಮಾತಿನ ಶಾಸ್ತ್ರ'ವೂ ಆಗಿತ್ತಂತೆ. ಈ ಬಗ್ಗೆ ಸರ್ಕಾರಿ ದಾಖಲೆಗಳಲ್ಲಿ ಖಚಿತತೆ ಇಲ್ಲ. ಆದ್ದರಿಂದ ಇದು ಅಂತೆ ಕಂತೆಯಲ್ಲೇ ಉಳಿದು ಹೋಗಿರುವ ಮೂರು ದಶಕದ ಹಿಂದಿನ ವಿದ್ಯಮಾನ.
ಅದಲ್ಲಿ ಮುಖ್ಯವಲ್ಲ. ಒಂದು ಕ್ಲಿಷ್ಟ ಸನ್ನಿವೇಶದ ನಿರ್ವಹಣೆಗೆ ಸಮಚಿತ್ತದ ಆಡಳಿತಗಾರ ಯಾವೆಲ್ಲ ತಂತ್ರಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ; ಮಾಜಿ ಸಿಎಂ ಎಷ್ಟು ಬದ್ಧತೆಯಿಂದ ಕೆಲಸ ಮಾಡುತ್ತಿದ್ದರು ಎಂಬುದಕ್ಕೆ ನಿದರ್ಶನವಷ್ಟೇ.
ರಾಜ್ ಬಿಡುಗಡೆಗಾಗಿ ಕೃಷ್ಣ ತಮ್ಮ ಆಪ್ತ ಸಚಿವದ್ವಯರಾಗಿದ್ದ ಡಾ.ಜಿ.ಪರಮೇಶ್ವರ್ ಹಾಗೂ ಡಿ.ಕೆ. ಶಿವಕುಮಾರ ಇಬ್ಬರನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮದೇ ಕೃಷ್ಣ ಗಾರುಡಿ' ಮಾಡಿದ್ದು ಕೆಲವರಿಗಾದರೂ ತಿಳಿದಿರುವ ಸತ್ಯ. ಈ ಅವಧಿಯಲ್ಲಿ ಮೈಸೂರು ಜೈಲಿನಲ್ಲಿದ್ದ ವೀರಪ್ಪನ್ ಸಹಚರರ ಬಿಡುಗಡೆ ಬೇಡಿಕೆ ವಿಷಯವಾಗಿ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಚಾಟಿ ಬೀಸಿತ್ತಷ್ಟೇ. ಕೋರ್ಟ್ ತಪರಾಕಿ ನಂತರ ರಾಜ್ ಹೊರತರುವ
ತಂತ್ರಗಾರಿಕೆ' ಮರು ರೂಪಗೊಳ್ಳಬೇಕಾಗಿತ್ತು. ಸದ್ದು ಗದ್ದಲ ಇಲ್ಲದೇ ಹೊಸತಂತ್ರವನ್ನು ಹೆಣೆದಿದ್ದರು ಮಾಜಿ ಸಿಎಂ. ಇದರ ಅನ್ವಯ ಬೆಂಗಳೂರಿನ ಅಂದಿನ ಕೆಲ ಟಫ್ ಕಾಪ್‌ಗಳನ್ನು (ಎಂದೂ ತುಟಿ ಬಿಚ್ಚದವರು) ಗುರುತಿಸಿ ಕೆಲಸ ವಹಿಸಿದ್ದರು. ವಿಷಯದ ಗೌಪ್ಯ ಸೋರಿಕೆಗೆ ಕನಿಷ್ಠ ಅವಕಾಶವನ್ನೂ ನೀಡಲಿಲ್ಲ. ಸಾಮಾನ್ಯ ಬುದ್ಧಿಶಕ್ತಿಯ ಯಾರೂ ಮಾಡಲಾಗದ ಕೆಲಸ-ಸಾಧನೆ ಅದಾಗಿತ್ತು.
ಇದಾದ ಕೆಲವು ದಿನಗಳ ನಂತರ (೧೦೮ ದಿನಗಳಾದ ಮೇಲೆ) ಕೃಷ್ಣ ಸಂಧಾನ'ದಿಂದಾಗಿ ಪ್ರಕರಣ ಸುಖಾಂತ್ಯವಾಯಿತು ಎಂಬುದು ಬೇರೆ ವಿಷಯ. ಆದರೆ ಕೃಷ್ಣರ ಪಾತ್ರ, ಬದ್ಧತೆ ಮತ್ತು ಯಾವುದೇ ಅವಘಡಕ್ಕೆ ಆಸ್ಪದ ಇಲ್ಲದಂತೆ ರಾಜ್ ಅವರನ್ನು ಬಿಡಿಸಿದ ಮಹತ್ವ
ಕೆಲವರಿಗೆ' ಕಾಣಲೇ ಇಲ್ಲ. ಇದು ನಿಜಕ್ಕೂ ದುರಂತವೇ ಸರಿ ! ಅಷ್ಟೇ ಏಕೆ ಎಲ್ಲಿ ಮುಖ್ಯಮಂತ್ರಿಗಳ ಹೆಸರು ಪ್ರಸ್ತಾಪಿಸಿ, ಧನ್ಯವಾದ ಅರ್ಪಿಸಬೇಕಿತ್ತೋ ಅಲ್ಲೇ `ಮರೆಯಲಾಗಿತ್ತು' !!
ಇದು ಕೃಷ್ಣರಿಗೆ ತುಂಬ ನೋವು ತಂದಿದ್ದ ವಿದ್ಯಮಾನವಾಗಿತ್ತು. ಆದರೆ ಎಸ್‌ಎಂಕೆ ಎಷ್ಟು ಎತ್ತರದ ವ್ಯಕ್ತಿ ಎಂದರೆ, ಒಂದೇ ಒಂದು ಅಸಮಾಧಾನದ ಮಾತನ್ನು ಹೊರಹಾಕಲಿಲ್ಲ. ರಾಜಕೀಯ ನೇತಾರ ಸೂಕ್ಷ್ಮ ಮತ್ತು ಅಗಾಧ ಪ್ರತಿಭಾಶಾಲಿಯಾಗಿದ್ದರೆ ಇಂತಹ ಸನ್ನಿವೇಶಗಳನ್ನು ಹೇಗೆ ನಿಭಾಯಿಸಬಲ್ಲ ಎಂಬುದಕ್ಕೆ ಎಸ್‌ಎಂಕೆ ಅವರ ರಾಜ್ ಪ್ರಕರಣ ನಿರ್ವಹಣೆ ಅಧ್ಯಯನ ಯೋಗ್ಯ.
ತಮಿಳರಿಗೆ ಏನೂ ಆಗಕೂಡದು!
ರಾಜ್ ಅಪಹರಣದ ಸುದ್ದಿ ಬರುತ್ತಿದ್ದಂತೇ ಅಂದಿನ ಡಿಜಿಪಿ ದಿನಕರ್ ಮತ್ತು ಪೊಲೀಸ್ ಆಯುಕ್ತ ಟಿ. ಮಡಿಯಾಳ್ ಅವರಿಗೆ ಎಸ್‌ಎಂಕೆ ಮೊದಲು ಹೇಳಿದ ಮಾತು, `ಬೆಂಗಳೂರಿನಲ್ಲಿರುವ ತಮಿಳರನ್ನು ರಕ್ಷಿಸಬೇಕು'!
ಆ ನಂತರ ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ತಮಿಳುನಾಡಿಗೆ ಧಾವಿಸಿದ್ದರು. ಆಗಿನ ಅಲ್ಲಿಯ ಸಿಎಂ ಎಂ. ಕರುಣಾನಿಧಿ ಜೊತೆ ಮಾತುಕತೆ ಮಾಡಿ ಅದೇ ಸಂಜೆ ಮರಳುತ್ತಿದ್ದಂತೇ ಅವರಿಗೆ ಖಾಲಿ ರಸ್ತೆಗಳು; ದೊಂಬಿ ನಡೆಸುತ್ತಿದ್ದ ಗುಂಪುಗಳು; ರಸ್ತೆಗಳ ಮೇಲೆ ಟಯರ್‌ಗೆ ಹಚ್ಚಿದ್ದ ಬೆಂಕಿ ಸ್ವಾಗತಿಸಿದ್ದವು. ಕಳವಳಗೊಂಡ ಕೃಷ್ಣ ಬೆಳಗ್ಗೆ ನೀಡಿದ್ದ ಸೂಚನೆಯನ್ನು ಪುನರಾವರ್ತಿಸಿ ತಮ್ಮ ನಿಲುವಿನ ದೃಢತೆಯನ್ನು ಕಾರ್ಯಾಂಗಕ್ಕೆ ನೆನಪು ಮಾಡಿಕೊಟ್ಟರು. ಎಸ್‌ಎಂಕೆ ಸಂವಿಧಾನಬದ್ಧವಾಗಿ ನಡೆದುಕೊಂಡ ಕಾರಣಕ್ಕೇ ಬೆಂಗಳೂರಿನ ತಮಿಳರು ಆ ದಿನಗಳಲ್ಲಿ ಮನೆಗಳಿಂದ ಹೊರಬಂದು ಬದುಕಲು ಸಾಧ್ಯವಾಗಿತ್ತು. ಮುತ್ಸದ್ದಿಯ ಈ ನಿಲುವು ಕರ್ನಾಟಕದ ಮಾನ ಕಾಪಾಡಿತೆಂಬುದೂ ಕೂಡ ವಾಸ್ತವ.
ತಲೆದಂಡ ಮಾಡಲಿಲ್ಲ
ರಾಜ್ ಅಪಹರಣವಾದಾಗ ಅಂದಿನ ಗುಪ್ತಚರ ಮುಖ್ಯಸ್ಥರ ಬಗ್ಗೆ ಲಘುವಾದ ಟೀಕೆಗಳು ಕೇಳಿ ಬಂದಿದ್ದವು. ಅಪಹರಣ ಸಾಧ್ಯತೆಯ ಬಗ್ಗೆ ಆ ಅಧಿಕಾರಿ ಸಿಎಂ ಅವರಿಗೆ ಗೌಪ್ಯ ವರದಿಯನ್ನು ಮೊದಲೇ ಕೊಟ್ಟಿದ್ದರು ನಿಜ. ಆದರೂ ಅವರ ವಿರುದ್ಧ ಕ್ರಮಕ್ಕೆ ರಾಜಕೀಯ ಆಗ್ರಹ ಕೇಳಿ ಬಂದಿತ್ತು. ಅವರ ಸಚಿವ ಸಂಪುಟ ಕೆಲ ಸಹೋದ್ಯೋಗಿಗಳೂ ಹೀಗೆ ಆಗ್ರಹ ಮಾಡಿದವರಲ್ಲಿ ಸೇರಿದ್ದರು. ಎಸ್‌ಎಂಕೆ ಇದಕ್ಕೆ ಬಗ್ಗಲಿಲ್ಲ. ಅಷ್ಟೇ ಅಲ್ಲ. ಅವರನ್ನು ಗುಪ್ತದಳದಿಂದ ವರ್ಗಾಯಿಸಲೂ ಇಲ್ಲ. ಸಮರ್ಪಕವಾಗಿ ಕೆಲಸ ಮಾಡುವ ಕಾರ್ಯಾಂಗದ ನೈತಿಕ ಬಲ ಕುಗ್ಗಿಸಬಾರದು ಎಂಬುದು ಅವರ ಬದ್ಧತೆಯಾಗಿತ್ತು. ರಾಜಕೀಯ ವಿರೋಧಿಗಳನ್ನು ಮೆಚ್ಚಿಸಲು ಮುಂದಾಗದೇ ಇದ್ದುದು ಆಗ ಎಲ್ಲರ ಗಮನ ಸೆಳೆದ ವಿದ್ಯಮಾನವಾಗಿತ್ತು. ಕಾರ್ಯಾಂಗ ಕೃಷ್ಣರನ್ನು ಮೆಚ್ಚುತ್ತಿದ್ದುದಕ್ಕೆ ಇಂತಹ ಅನೇಕ ಕಾರಣಗಳಿವೆ.