For the best experience, open
https://m.samyuktakarnataka.in
on your mobile browser.

ಕಾಮಾಲೆ ಎಂಬ ಹಳದಿ ಜಗತ್ತು

03:45 AM Sep 10, 2024 IST | Samyukta Karnataka
ಕಾಮಾಲೆ ಎಂಬ ಹಳದಿ ಜಗತ್ತು

ಕಾಮಾಲೆ ಕಣ್ಣಿನವನಿಗೆ ಜಗತ್ತೆಲ್ಲಾ ಹಳದಿ ಎಂಬ ಗಾದೆ ಮಾತೊಂದಿದೆ. ಈ ಗಾದೆಯಂತೆ ಕಾಮಾಲೆ ಕಾಯಿಲೆ ಬಂದರೆ ಹಳದಿ ಬಣ್ಣಕ್ಕೆ ತ್ವಚೆ ತಿರುಗುವುದು ಈ ಕಾಯಿಲೆಯ ಲಕ್ಷಣ. ನಮ್ಮ ದೇಹದ ಅತಿ ದೊಡ್ಡ ಅಂಗವಾದ ಯಕೃತ್ ಪಿತ್ತ ರಸವನ್ನು ಮತ್ತು ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ಇವುಗಳು ಶರೀರಕ್ಕೆ ಸೇವಿಸಿದ ಆಹಾರವನ್ನು ಜೀರ್ಣಗೊಳಿಸಲು ಮತ್ತು ಆಹಾರದ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ. ಅಲ್ಲದೆ ದೇಹದಲ್ಲಿ ಸಕ್ಕರೆ ಮತ್ತು ಪ್ರೋಟೀನ್ ಮಟ್ಟವನ್ನು ನಿಯಂತ್ರಿಸಲು, ಕೊಬ್ಬಿನ ಪ್ರಮಾಣವನ್ನು ನಿಯಂತ್ರಿಸಲು ಹಾಗೂ ದೇಹದಲ್ಲಿ ದಿನವಿಡೀ ಹಲವಾರು ಕಾರ್ಯಗಳ ಮೂಲಕ ಸಂಗ್ರಹಗೊಂಡಿರುವ ಕಲ್ಮಶ ಮತ್ತು ತ್ಯಾಜ್ಯಗಳನ್ನು ಹೊರಹಾಕಿ ನಿವಾರಿಸಲು ನೆರವಾಗುತ್ತದೆ. ಇಂತಹ ಸಮಯದಲ್ಲಿ ಯಕೃತ್ ಕಾರ್ಯಕ್ಷಮತೆಯನ್ನು ಕೆಲವು ಕಾಯಿಲೆಗಳು ಬಾಧಿಸುತ್ತವೆ. ಆಗ ದೇಹದ ಭಾಗದಲ್ಲಿ ಅಥವಾ ಇಡೀ ದೇಹದಲ್ಲಿಯೇ ಇದರ ಪ್ರಭಾವ ಕಂಡು ಬರಬಹುದು. ಯಕೃತ್‌ಗೆ ಆವರಿಸುವ ಕಾಯಿಲೆಗಳಲ್ಲಿ ಪ್ರಮುಖದಲ್ಲಿ ಕಾಮಾಲೆ ಅಥವಾ ಜಾಂಡೀಸ್ ಒಂದು. ಕಾಮಾಲೆ ಹಳದಿ ರೋಗ ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ನೀರು ಕುಡಿಯುತ್ತಾರೆ, ಆದರೆ ನಾವು ಕುಡಿಯುವ ನೀರು ಶುದ್ಧವಾಗಿರಬೇಕು ಹಾಗೂ ಕಾಯಿಸಿದ ನೀರನ್ನು ಕುಡಿಯುತ್ತ ಇರಬೇಕು. ಏಕೆಂದರೆ ಕಾಮಾಲೆ ಕಾಯಿಲೆಗೆ ಕಲುಷಿತ ನೀರು ಮುಖ್ಯ ಕಾರಣ.
ಕಣ್ಣಿನ ಬಿಳಿ ಭಾಗ, ಮೂತ್ರ, ಮೈ ಚರ್ಮ, ಉಗುರು, ಬಾಯಿಯ ಒಳ ಪದರ, ನಾಲಿಗೆ ಅಡಿ ಭಾಗ, ಮಲ ಇವುಗಳಲ್ಲಿ ಹಳದಿ ಅಥವಾ ತಿಳಿ ಹಸಿರು ಬಣ್ಣಗಳಲ್ಲಿ ಕಾಣಿಸಿಕೊಳ್ಳುವುದು ಕಾಮಾಲೆ ಕಾಯಿಲೆಯ ಲಕ್ಷಣಗಳಾಗಿವೆ. ಅಂದರೆ ಈ ರೀತಿ ವರ್ಣ ವ್ಯತ್ಯಾಸವಾಗುವುದು ವೈದ್ಯಕೀಯವಾಗಿ ಬೇರೆ ಇನ್ನೊಂದು ರೋಗದ ಒಂದು ಲಕ್ಷಣವೂ ಆಗಿರಬಹುದಾದ ಸಾಧ್ಯತೆಯಿರುತ್ತದೆ. ಈ ರೀತಿಯಲ್ಲಿ ಹಳದಿ, ಎಳೆ ಹಸಿರು ವರ್ಣಗಳ ವ್ಯತ್ಯಾಸ ಹಲವು ರೋಗಗಳಲ್ಲಿ ಕಾಣಿಸಬಹುದು. ಈ ತೊಂದರೆಗಳಿದ್ದಲ್ಲಿ ಎಚ್ಚರ!
ಬಿಟ್ಟು ಬಿಟ್ಟು ಜ್ವರ, ಬಾಯಾರಿಕೆ, ಸುಸ್ತು, ಚರ್ಮದ ತೆಳು ಪದರಗಳಲ್ಲಿ ಹಳದಿ, ಹಸಿರು ಛಾಯೆಯ ವ್ಯತ್ಯಾಸ, ಹಸಿವೆ ಆಗದಿರುವುದು ಆಹಾರ ನೋಡಿ ವಾಕರಿಕೆ ಬಂದಂತೆನಿಸುವುದು. ಹಳದಿ ಬಣ್ಣದ ಹುಳಿ, ಬಿಸಿಯಾಗಿ ಪಿತ್ತವಾಂತಿಯಾಗುವುದು ಇದೆಲ್ಲವೂ ಕಾಮಾಲೆ ಕಾಯಿಲೆಗಳ ಲಕ್ಷಣವಾಗಿವೆ.
ಮನೆಯಲ್ಲಿ ಹಿರಿಜೀವಿಗಳಿದ್ದಲ್ಲಿ ಅವರ ಅನುಭವದ ಮನೆ ಮದ್ದಿನಲ್ಲಿಯೇ ಕಾಮಾಲೆ ರೋಗವನ್ನು ಖಂಡಿತ ಗುಣ ಪಡಿಸಬಹುದು. ನಿರ್ಲಕ್ಷ್ಯ ವಹಿಸಿದಲ್ಲಿ ವೈದ್ಯರ ಬಳಿ ಹೋಗಬೇಕಾದ ಅನಿವಾರ್ಯತೆ ಖಂಡಿತ ತಪ್ಪಿದ್ದಲ್ಲ! ಎಚ್ಚರ.

ಇದರ ಬಗ್ಗೆ ಎಚ್ಚರಿಕೆ ವಹಿಸಿ
ಗಮನಿಸಬೇಕಾದ ಅಂಶವೆಂದರೆ ಜನರಲ್ಲಿರುವ ಕೆಲವು ಕಲ್ಪನೆಗಳು ನಾಟಿ ಮದ್ದು ಮತ್ತಿತರ ವಿಧಾನಗಳ ಬಗ್ಗೆ ಎಚ್ಚರಿಕೆ ವಹಿಸುವುದು. ಕೈಗೆ ಮೂಲಿಕೆ ಕಟ್ಟುವುದು, ಮೂಗಿಗೆ ಔಷಧಿ ಹಾಕುವುದು ಇತ್ಯಾದಿ ವಿಧಾನಗಳು ಪಿತ್ತವನ್ನು ಅಸಹಜ ಮಾರ್ಗದ ಮೂಲಕ ಹೊರಹಾಕಿ ಕಾಮಾಲೆ ಲಕ್ಷಣವನ್ನು ಕಡಿಮೆ ಮಾಡುವುದು. ಆದರೆ ಸಂಪೂರ್ಣವಾಗಿ ರೋಗ ನಿವಾರಕವಾಗದಿದ್ದರೆ ರೋಗ ಮರುಕಳಿಸುವ ಸಾಧ್ಯತೆ ಹೆಚ್ಚು! ವಿಪರೀತ ಔಷಧ ಬಳಕೆ ದೇಹಕ್ಕೆ ಹಾನಿಯಾದೀತು.

ಕಾಮಾಲೆ ಬಗ್ಗೆ ನಿರ್ಲಕ್ಷ್ಯ ಸಲ್ಲ
ಕುಡಿಯಲು ಆದಷ್ಟು ಬಿಸಿ ನೀರನ್ನು ಬಳಸಿ, ಪ್ರಯಾಣದ ಸಮಯದಲ್ಲಿ ಬಾಟಲಿ ನೀರನ್ನು ಮಾತ್ರ ಕುಡಿಯಿರಿ ಮತ್ತು ಪೂರ್ಣ ಬೇಯಿಸದ ಆಹಾರವನ್ನು ತಿನ್ನಲೇಬೇಡಿ, ನೀರಿನಿಂದ ಹರಡುವ ಯಾವುದೇ ರೋಗಗಳಿಂದ ಬಳಲುತ್ತಿದ್ದರೆ ಇದು ಇನ್ನೊಬ್ಬರಿಗೆ ಹರಡದೆ ಇರಲು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಕೆಲಸಕ್ಕೂ ಹೋಗದಿರಿ ಹಾಗೂ ಗುಂಪು ಜನರೊಡನೆ ಬೆರೆಯದಿರಿ. ಜಾಂಡಿಸ್ ಕಾಯಿಲೆಗೆ ಒಂದರ್ಥದಲ್ಲಿ ನಿರ್ಲಕ್ಷ್ಯತನದಿಂದ ಸೂಕ್ತ ಚಿಕಿತ್ಸೆ ಮಾಡದ್ದಿದ್ದಲ್ಲಿ ಪ್ರಾಣಕ್ಕೆ ಅಪಾಯವಾಗುವ ಸಂಭವ ಹೆಚ್ಚು. ಇಂದಿನ ಸಮಾಜದಲ್ಲಿ ಹಲವಾರು ಜನರು ತಮ್ಮ ದಿವ್ಯ ನಿರ್ಲಕ್ಷ್ಯದಿಂದ ಜಾಂಡೀಸ್ ಕಾಯಿಲೆಯಿಂದ ಮರಣವನ್ನಪ್ಪಿರುವುದನ್ನು ಕಾಣಬಹುದು. ಕಾಯಿಲೆಗೆ ಒಳಗಾದವರು ಮದ್ಯಪಾನ ಮಾಡಲೇಬಾರದು. ಜೊತೆಗೆ ಧೂಮಪಾನವನ್ನು ಬಿಡುವುದು ಒಳಿತು. ರೋಗ ಸಂಪೂರ್ಣ ಗುಣವಾದ ಬಳಿಕ ಕನಿಷ್ಠ ಒಂದೂವರೆ ತಿಂಗಳು ಮಾಂಸಹಾರ ಬಿಟ್ಟು ಪೂರ್ಣ ಸಸ್ಯಾಹಾರ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆಹಾರ ಸೇವನೆಯಲ್ಲಿ ಪಥ್ಯ ಕ್ರಮ ಬಹುಮುಖ್ಯ ಪಾತ್ರ ವಹಿಸುತ್ತದೆ.

ಈ ಆಹಾರಗಳಿಂದ ಬೇಗ ಗುಣ
ಕಬ್ಬಿನ ರಸದ ಸೇವನೆಯಿಂದ ಯಕೃತ್‌ನ ಕಾರ್ಯವಿಧಾನ ಉತ್ತಮಗೊಳ್ಳುತ್ತದೆ. ಒಂದು ಲೋಟ ತಾಜಾ ಕಬ್ಬಿನ ರಸವನ್ನು ನಿತ್ಯವೂ ಸೇವಿಸುವ ಮೂಲಕ ರೋಗದಿಂದ ಶೀಘ್ರ ಗುಣಮುಖರಾಗಲು ಸಾಧ್ಯವಾಗುತ್ತದೆ. ಟೊಮೆಟೊದಲ್ಲಿರುವ ಲ್ಯೆಕೋಪಿನ್ ಎಂಬ ಪೋಷಕಾಂಶಕ್ಕೆ ಯಕೃತ್‌ನ ತೊಂದರೆಗಳನ್ನು ನಿವಾರಿಸುವ ಗುಣವಿದೆ. ಇದಕ್ಕಾಗಿ ಒಂದು ಲೋಟ ಬೀಜ ಮತ್ತು ಸಿಪ್ಪೆ ನಿವಾರಿಸಿ ಸಂಗ್ರಹಿಸಿದ ಟೊಮೆಟೊ ತಿರುಳಿನ ರಸವನ್ನು ಕೊಂಚ ಉಪ್ಪು ಮತ್ತು ಸಕ್ಕರೆ ಬೆರೆಸಿ ರೋಗಿಗೆ ಕುಡಿಯಲು ನೀಡಬೇಕು. ನಿತ್ಯವೂ ಬೆಳಗಿನ ಪ್ರಥಮ ಆಹಾರವಾಗಿ ಸೇವಿಸುತ್ತಾ ಬಂದರೆ ಕಾಮಾಲೆ ಶೀಘ್ರವಾಗಿ ಗುಣವಾಗುತ್ತದೆ. ನಿಂಬೆಹಣ್ಣಿನಲ್ಲಿರುವ ಉರಿಯೂತ ನಿವಾರಕ ಗುಣ ಕಾಮಾಲೆಯನ್ನು ಗುಣಪಡಿಸಲು ನೆರವಾಗುತ್ತದೆ. ಒಂದು ಹಿಡಿಯಷ್ಟು ಪಪ್ಪಾಯಿಯ ಎಲೆಯನ್ನು ಸಂಗ್ರಹಿಸಿ ಇದನ್ನು ಅರೆದು ಲೇಪ ತಯಾರಿಸಿ ಇದಕ್ಕೆ ಕೊಂಚ ಜೇನು ಬೆರೆಸಿ, ಈ ಲೇಪವನ್ನು ನಿತ್ಯವೂ ಒಂದು ದೊಡ್ಡ ಚಮಚದಷ್ಟು ಪ್ರಮಾಣದಲ್ಲಿ ನಿತ್ಯವೂ ಒಂದೇ ಹೊತ್ತಿನಲ್ಲಿ ಸೇವಿಸುತ್ತಾ ಬಂದರೆ ಎರಡೇ ವಾರಗಳಲ್ಲಿ ಕಾಮಾಲೆ ಕಾಯಿಲೆ ವಾಸಿಯಾಗುತ್ತದೆ, ಕಾಮಾಲೆಗೆ ಇದು ಒಂದು ಯಶಸ್ವಿ ಚಿಕಿತ್ಸೆಯಾಗಿದೆ. ಪಾಲಕ್ ಮತ್ತು ಬಸಳೆಯ ದಪ್ಪ ಎಲೆಗಳಲ್ಲಿ ಕಬ್ಬಿಣದ ಅಂಶ ಹೆಚ್ಚಿರುತ್ತದೆ ಹಾಗಾಗಿ ಇವುಗಳ ರಸವು ಹೆಚ್ಚಿನ ಫಲ ನೀಡುತ್ತದೆ. ಒಂದು ಲೋಟ ಮಜ್ಜಿಗೆಗೆ ಕೊಂಚ ಉಪ್ಪು ಕಾಡು ಮೆಣಸಿನ ಪುಡಿ ಜೀರಿಗೆಗಳನ್ನು ಬೆರೆಸಿ ಪ್ರತಿ ಊಟದ ಬಳಿಕ ಸೇವಿಸುವ ಮೂಲಕ ಕಾಮಾಲೆ ರೋಗ ಶೀಘ್ರವೇ ಗುಣವಾಗುತ್ತದೆ. ಅರಿಶಿನದ ಉಪಯೋಗ ಆಹಾರದಲ್ಲಿ ಬೇಡ, ಅಡಿಗೆಗೆ ಕಲ್ಲುಪ್ಪು ಸೂಕ್ತ, ಖರ್ಜೂರ, ದಾಳಿಂಬೆ ಹಣ್ಣು, ನೆಲ್ಲಿಕಾಯಿ ರಸ, ಚಟ್ನಿ ಪುಡಿ, ತಂಬುಳಿ, ಸೌತೆಕಾಯಿಗಳನ್ನು ಆಹಾರದಲ್ಲಿ ಬಳಸುವುದು ಹಿತಕರ. ಬಿಸಿಲು, ಬಿಸಿಯಲ್ಲಿ ಅಳೆಯುವುದು, ವ್ಯಾಯಾಮ, ದೇಹ ಆಯಾಸ ನಿಷೇಧ. ಟಿವಿ, ಮೊಬೈಲ್, ಓದುವುದು ಇತ್ಯಾದಿ ಕಣ್ಣಿನ ಬಳಿಕೆಯಲ್ಲಿ ಮಿತಿ ಇರಲಿ.