For the best experience, open
https://m.samyuktakarnataka.in
on your mobile browser.

ಕಾಯಕಯೋಗಿ ಶಿವಲಿಂಗೇಶ್ವರ ಶ್ರೀ ಲಿಂಗೈಕ್ಯ

11:57 AM Nov 17, 2024 IST | Samyukta Karnataka
ಕಾಯಕಯೋಗಿ ಶಿವಲಿಂಗೇಶ್ವರ ಶ್ರೀ ಲಿಂಗೈಕ್ಯ

ನಶಿಸಿ ಹೋಗುತ್ತಿದ್ದ ಅಲ್ಲಮಪ್ರಭುವಿನ ಮನೆಯನ್ನು ಅನುಭವ ಮಂಟಪ‌ವನ್ನಾಗಿಸಲು
ಸಿದ್ಧತೆ ನಡೆಸಿದ್ದರು. ಗ್ರಂಥ ಪ್ರಕಟಣೆಗಳ ಮೂಲಕ ವಚನಗಳ ಸಂರಕ್ಷಣೆಗೆ ಮುಂದಾಗಿದ್ದರು.

ಹುಬ್ಬಳ್ಳಿ: ತಾಲೂಕಿನ ಮಂಟೂರು, ಕಲಘಟಗಿ ತಾಲೂಕಿನ‌ ಬಮ್ಮಿಗಟ್ಟಿ ಗ್ರಾಮದ ಅಡವಿ ಸಿದ್ಧೇಶ್ವರ ಮಠ ಹಾಗೂ ಶಿವಮೊಗ್ಗ ಜಿಲ್ಲೆ ಬಳ್ಳಿಗಾವಿ ಶ್ರೀ ಅಲ್ಲಮಪ್ರಭು ಅನುಭಾವ ಪೀಠ ವಿರಕ್ತಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಮನಿಪ್ರ ಶಿವಲಿಂಗೇಶ್ವರ ಸ್ವಾಮೀಜಿ (82) ಭಾನುವಾರ ಬೆಳಿಗ್ಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.
ಹೃದಯಾಘಾತವಾಗಿದ್ದ ಸ್ವಾಮೀಜಿಯವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 11 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿದ್ದ ಶ್ರೀಗಳು ಭಾನುವಾರ ಬೆಳಿಗ್ಗೆ 1 ಗಂಟೆಗೆ ಕೊನೆಯುಸಿರು ಎಳೆದಿದ್ದಾರೆ.
ತಾಲೂಕಿನ ಮಂಟೂರು ಹಾಗೂ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಅಡವಿ ಸಿದ್ಧೇಶ್ವರ ಮಠ,
ಹುಬ್ಬಳ್ಳಿ ಹರುಷದೇವರ ಮಠ, ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗೆರಕೊಪ್ಪ- ಬೊಪ್ಪಗೊಂಡನಕೊಪ್ಪ ಇಂದುಧರೇಶ್ವರ ಮಠ, ಶಿಕಾರಿಪುರ ತಾಲೂಕು ಬೆಳ್ಳಿಗಾವಿಯ ಶ್ರೀ ಅಲ್ಲಮಪ್ರಭು ಅನುಭಾವ ಪೀಠ ವಿರಕ್ತಮಠ ಹಾಗೂ ಬೀದರ ಜಿಲ್ಲೆ ಬಸವಕಲ್ಯಾಣ ಕೆಳಗಿ ಪೀಠದ ಪೀಠಾಧಿಪತಿಗಳಾಗಿದ್ದರು.
ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ
ಮಂಟೂರು ಗ್ರಾಮದ ಗುರುಪಾದಮ್ಮ ಶಿವಜೋಗಯ್ಯನವರ ಮಗನಾಗಿ 1943 ಜುಲೈ 2ರಂದು ಜನಸಿದ್ದ ಅವರು ಶ್ರೀಗಳು ತಮ್ಮ‌ ಬಾಲ್ಯ ವಿದ್ಯಾಭ್ಯಾಸವನ್ನು ಮಂಟೂರಿನಲ್ಲಿ ಪೂರ್ಣಗೊಳಿಸಿದ್ದರು. ಶಿವಯೋಗ ಮಂದಿರದಲ್ಲಿ ಅಧ್ಯಯನ ಹಾಗೂ ವಾರಾಣಾಸಿಯಲ್ಲಿ ತಮ್ಮ ಎಂ.ಎ ಸಂಸ್ಕೃತ ಅಧ್ಯಯನ ಮಾಡಿದ್ದರು.
ಮಂಟೂರುನಲ್ಲಿ ಶಿವಲಿಂಗೇಶ್ವರ ಪ್ರೌಢ ಶಾಲೆ ಸ್ಥಾಪಿಸಿ‌ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ.
ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಅಡವಿ ಸಿದ್ಧೇಶ್ವರ ಮಠವನ್ನು ಭಕ್ತರ ದೇಣಿಗೆ ಹಾಗೂ ಅವಿರತ ಶ್ರಮದಿಂದ ಅಭಿವೃದ್ಧಿ ಪಡಿಸಿದ್ದಾರೆ. ಭಕ್ತರೊಂದಿಗೆ ಸೇರಿ ರಾಜ್ಯಕ್ಕೆ ಮಾದರಿಯಾಗುವಂತಹ ರಥ ನಿರ್ಮಿಸಿದ್ದಾರೆ.
ಶಿವಲಿಂಗೇಶ್ವರ ಸ್ವಾಮೀಜಿ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರ ಕೋರಿಕೆ ಮೇರೆಗೆ ಎರಡು ದಿನಗಳ ಹಿ‌ಂದೆಯೇ, ಇಂದೂಧರ ದೇವರ ಅವರನ್ನು ಆಸ್ಪತ್ರೆ ಆವರಣದಲ್ಲಿ ಮಂಟೂರು ಮತ್ತು ಬಳ್ಳಿಗಾವಿಯ ಅಲ್ಲಮಪ್ರಭು ಅನುಭಾವ ಪೀಠದ ಉತ್ತರಾಧಿಕಾರಿಯನ್ನಾಗಿ ಸಾಂಕೇತಿಕವಾಗಿ ಘೋಷಿಸಲಾಗಿತ್ತು.

ಮಂಟೂರಿನಲ್ಲಿ ಅಂತ್ಯಕ್ರಿಯೆ : ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ ಅಡವಿ ಸಿದ್ಧೇಶ್ವರ ಮಠದ ಆವರಣದಲ್ಲಿ ನ.17ರಂದು ಸಂಜೆ 5 ಗಂಟೆಗೆ ಅಂತ್ಯಕ್ರಿಯೆ‌ ನೆರವೇರಲಿದೆ ಎಂದು ಬೊಮ್ಮನಹಳ್ಳಿ ಶಿವಯೋಗೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

Tags :