For the best experience, open
https://m.samyuktakarnataka.in
on your mobile browser.

ಕಾರವಾರದ ಕಾಳಿ ನದಿ ಸೇತುವೆ ಕುಸಿತ, ನದಿಗೆ ಬಿದ್ದ ಟ್ರಕ್; ಚಾಲಕನ ರಕ್ಷಣೆ

08:28 AM Aug 07, 2024 IST | Samyukta Karnataka
ಕಾರವಾರದ ಕಾಳಿ ನದಿ ಸೇತುವೆ ಕುಸಿತ  ನದಿಗೆ ಬಿದ್ದ ಟ್ರಕ್  ಚಾಲಕನ ರಕ್ಷಣೆ

ಕಾರವಾರ: ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಹಳೆಯ ಸೇತುವೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಟ್ರಕ್ ಕಾಳಿ ನದಿಗೆ ಊರುಳಿದ್ದು, ಅದೃಷ್ಟವಶಾತ್ ಚಾಲಕನನ್ನು ರಕ್ಷಣೆ ಮಾಡಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಕಾರವಾರ ಗೋವಾ ಸಂಪರ್ಕ ಮಾಡುವ ನಗರದ ಕೋಡಿಭಾಗ್ ಬಳಿ ಇರುವ ಈ ಸೇತುವೆ ಬುಧವಾರ ತಡರಾತ್ರಿ ಸುಮಾರು 12.50 ರ ವೇಳೆ ಕುಸಿದು ಬಿದ್ದಿದೆ. ಫಿಲ್ಲರ್ ಕಂಬಗಳ ನಡುವೆ ಸೇತುವೆ ಮೂರ್ನಾಲ್ಕು ಕಡೆ ತುಂಡಾಗಿ ನದಿಗೆ ಬಿದ್ದಿದ್ದು, ಇದೇ ವೇಳೆ ಗೋವಾದಿಂದ ಕಾರವಾರ ಕಡೆಗೆ ಆಗಮಿಸುತ್ತಿದ್ದ ಟ್ರಕ್ ನದಿಗೆ ಬಿದ್ದಿದ್ದು, ತಕ್ಷಣ ಮೀನುಗಾರರು ಹಾಗೂ ಪೋಲಿಸರು ಲಾರಿ ಚಾಲಕ ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ (37) ಎಂಬುವವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಘಟನೆ ಸಂಭವಿಸುವ ವೇಳೆ ಬೈಕ್ ಹಾಗೂ ಕಾರು ಕೂಡ ಇದೇ ಸೇತುವೆ ಮೇಲೆ ಸಂಚಾರ ಮಾಡುತ್ತಿತ್ತು ಎನ್ನಲಾಗಿದ್ದು ಅವರು ಮುಂದೆ ಸಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಟ್ರಕ್ ನೀರಿನಲ್ಲಿ ಬಿದ್ದಿದ್ದು ಮತ್ತೆ ಯಾವುದಾದರೂ ವಾಹನ ಬಿದ್ದಿರುವ ಬಗ್ಗೆ ಸ್ಥಳೀಯ ಮೀನುಗಾರರ ಜೊತೆ ಪೊಲೀಸರು ದೋಣಿಗಳ ಮೂಲಕ ಹುಡುಕಾಟ ನಡೆಸಿದ್ದಾರೆ.
ದೊಡ್ಡದಾಗಿ ಶಬ್ದ ಬಂತು ಹೊರಗೆ ಬಂದು ನೋಡಿದಾಗ ಸೇತುವೆ ಸಂಪೂರ್ಣ ಕುಸಿದಿತ್ತು. ಓರ್ವನನ್ನು ಮೀನುಗಾರರು ಹಾಗೂ ಪೊಲೀಸರು ರಕ್ಷಣೆ ಮಾಡಿದ್ದಾರೆ. ಸದ್ಯ ಒಂದು ಟ್ರಕ್ ಮಾತ್ರ ನದಿಗೆ ಬಿದ್ದಿದೆ ಎನ್ನುತ್ತಿದ್ದಾರೆ. ಬೈಕ್, ಕಾರು ಕೂಡ ಇತ್ತು ಅವರು ಮುಂದೆ ಚಲಿಸಿರಬಹುದು ಎನ್ನುತ್ತಿದ್ದಾರೆ. ಈಗಾಗಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಮೀನುಗಾರರೊಂದಿಗೆ ನದಿಯಲ್ಲಿ ಹುಡುಕಾಟ ನಡರಸಿರುವ ಬಗ್ಗೆ ಸ್ಥಳೀಯರಾದ ನಾಗೇಶ್ ಮಾಹಿತಿ ನೀಡಿದರು.
ಇನ್ನು ರಾಷ್ಟ್ರೀಯ ಹೆದ್ದಾರಿ 66 ಕ್ಕೆ ನಿರ್ಮಿಸಿದ್ದ ಈ ಸೇತುವೆ ಸುಮಾರು 60 ವರ್ಷ ಹಳೆಯದಾದ ಸೇತುವೆ. ಕಳೆದ ಎರಡು ವರ್ಷದ ಹಿಂದೆ ರಿಪೇರಿ ಕೂಡ ಮಾಡಲಾಗಿತ್ತು. ಆದರೆ ಇದೀಗ ಸಂಪೂರ್ಣ ಕುಸಿದು ಬಿದ್ದಿದ್ದು ಸದ್ಯ ಹೊಸ ಸೇತುವೆ ಮೇಲೆಯೂ ಸಂಚಾರ ನಿರ್ಬಂಧಿಸಿರುವ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.