ಅನಂತಿ ಮದುವೆ ಮುನ್ನ…..
ಪುಗಸೆಟ್ಟೆ ಬಸ್ಸಿನಲ್ಲಿ ಬರೀ ಗುಡಿ ಗುಂಡಾರ… ಬೀಗರ ಊರು… ಬಿಜ್ಜರ ಊರು ಅಡ್ಡಾಡಿ ಸಾಕಾಗಿದೆ. ಎಲ್ಲರೂ ದೂರ ಹೋಗಿ ಬರೋಣ… ನಮಗೇನು ಚಾರ್ಜಿಲ್ಲ ಏನಿಲ್ಲ ಎಂದು ಬುಸ್ಯವ್ವ, ಮೇಕಪ್ ಮರೆಮ್ಮ, ಗ್ಯಾನಮ್ಮ… ಕರಿಭಾಗೀರತಿ, ಕ್ವಾಟಿಗ್ವಾಡಿ ಸುಂದ್ರವ್ವ ಮುಂತಾದವರು ಚರ್ಚೆ ಮಾಡಿದರು. ಹೋಗುವುದಾದರೆ ಎಲ್ಲಿಗೆ ಹೋಗುವುದು? ಎಂದು ತಲೆ ಕೆಡೆಸಿಕೊಂಡರು… ಊಟಿ.. ಕೋಟಿ ಕೆನಾಲು ಕೊಡೆ ಎಂದು ಕೆಲವರು ಹೇಳಿದರು. ಒಂದು ಕಡೆ ಸುಮ್ಮನೇ ಕುಳಿತಿದ್ದ ಗ್ಯಾನಮ್ಮ ಮಾತ್ರ…. ಏಯ್ ಸುಮ್ಮನೇ ಯಾಕೆ ಸಮಯ ಹಾಳು ಮಾಡುವುದು? ನಾನು ಹೇಳಿದ ಕಡೆ ಹೋದರೆ…. ನೀವು ಇನ್ನೊಂದು ಸಲ ಅಲ್ಲಿಯೇ ಹೋಗೋಣ ಅನ್ನುತ್ತೀರಿ ಅಂದಳು… ಎಲ್ಲರೂ ಎಲ್ಲಿ? ಎಲ್ಲಿ ಎಂದು ಕೇಳಿದಾಗ… ಅದೇ ಮುಕೇಸಿ ಮಗ ಅನಂತಿದು ಲಗ್ನ ಮುಂಚಿನ ಕಾರ್ಯಕ್ರಮ ಇಟಗೊಂಡಾರೆ…. ಅದೇನು ಕೇಳ್ತೀರಿ… ಅಲ್ಲಿ ಸಿನೆಮಾ ನಟನಟಿಯರು… ಅವರು ಇವರು ಸೇರಿದಂತೆ ಎಲ್ಲ ದೊಡ್ ಮಂದಿ ಬರುತ್ತಾರೆ… ನೋಡ್ರೀ ಅಲ್ಲಿ ಎಲ್ಲರಿಗೂ ಬಂಗಾರದ ತಾಟಿನಲ್ಲಿ ಊಟ ಕೊಡ್ತಾರ… ಮನೆಯಲ್ಲಿ ಮಗು ಐತಿ ಅಂದರ ಬೆಳ್ಳಿ ಡಬ್ಬಿಯೊಳಗ ಕಟ್ಟಿ ಕೊಡುತ್ತಾರೆ. ಬರೋವಾಗ… ಎಲ್ಲರಿಗೂ ತೋಪಸೆರಗಿನ ಸೀರಿ… ಗಂಡಸರಿಗೆಕೊಡ್ರಿ ಎಂದು ಜೋಡಿ ಧೋತರ ಕೊಡುತ್ತಾರೆ… ಸುಮ್ಮನೇ ಅಲ್ಲಿಗೆ ಹೋಗೋಣ ಅಂದಾಗ… ಎಲ್ಲರೂ ಗಾಬರಿ ಮುಖ ಮಾಡಿ ಹೋಗೋಣ ಅಂದರು. ಹೌದೂ ಅಲ್ಲಿನವರು ನೀವ್ಯಾರು ಅಂತ ಕೇಳಿದರೆ ಏನು ಹೇಳೋದು ಅಂತ ತಲೆ ಕೆರೆದುಕೊಂಡರು. ಅದಕ್ಕೆ ಭಾಗೀರತಕ್ಕ… ಅಯ್ಯೋ ಮುಕೇಸಿ ಇದಾನಲ್ಲ ಅವನು ಬೇರೆ ಯಾರೂ ಅಲ್ಲ… ನಮ್ ಮದ್ರಾಮೇಸಿ ಸೋದರ ಮಾವನ ಹೆಣ್ ಮಮ್ಮಗ… ಅವರದ್ದೇ ಹೆಸರು ಹೇಳಾಣ ಅಂತ ಅಂದಳು ಎಲ್ಲರಿಗೂ ಇದು ಸರಿ ಅನಿಸಿತು. ಮರುದಿನ ಎಲ್ಲರೂ ರೊಟ್ಟಿ ಬುತ್ತಿ ಕಟ್ಟಿಕೊಂಡು ಊರ ತುಂಬ ಹೇಳಿ ಬಸ್ಟ್ಯಾಂಡಿಗೆ ಹೋದರು.
ಅಲ್ಲಿಂದ ಜಿಲ್ಲೆಗೆ ಹೋಗಿ ಮುಂಬೈ ಬಸ್ಸು ಹತ್ತಿದರು. ಕರ್ನಾಟಕ ಬಾರ್ಡರ್ ದಾಟುತ್ತಿದ್ದಂತೆ ಕಂಡಕ್ಟರ್ ಟಿಕೆಟ್ ತಗೊಳ್ಳಿ ಎಂದು ಕೇಳುತ್ತಿದ್ದಂತೆ ಈ ಎಲ್ಲರೂ ಜಗಳಕ್ಕೆ ನಿಂತರು. ಕಂಡಕ್ಟರ್ ಸೀಟಿ ಹೊಡೆದು ಬಸ್ಸು ನಿಲ್ಲಿಸಿ ಎಲ್ಲರನ್ನೂ ಬಸ್ಸಿನಿಂದ ಹೊರ ಹಾಕಿದ. ಅವರೆಲ್ಲ ಅಲ್ಲೇ ಇದ್ದ ಗಿಡದ ನೆರಳಿನಲ್ಲಿ ತಾವು ಒಯ್ದಿದ್ದ ಬುತ್ತಿಗಂಟು ಬಿಚ್ಚಿ ತಿಂದು ಹಳ್ಳದಲ್ಲಿ ನೀರು ಕುಡಿದು ಬಸ್ಸಿಗೆ ಕಾಯ್ದರು. ಅನೇಕ ಬಸ್ಸುಗಳು ಅಲ್ಲಿ ನಿಲ್ಲಲಿಲ್ಲ. ಕೊನೆಗೆ ಕಬ್ಬು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ನವನ ಕೈಕಾಲು ಹಿಡಿದು ಸಮೀಪದ ಊರಿಗೆ ಬಂದು ಅಲ್ಲಿಂದ ಕೆಂಪು ಬಸ್ಸು ಹಿಡಿದು ಊರಿಗೆ ಬಂದರು. ಅವರವರ ಗಂಡಂದಿರಿಗೆ ಈ ವಿಷಯ ತಿಳಿದು ಮರೆಯಲ್ಲಿ ಮುಸುಮುಸು ನಗೆಯಾಡಿ… ಜೈ ರಾಮಲಿಂಗೇಶ್ವರಾ ಎಂಬ ಜೈಕಾರ ಹಾಕಿದರು.