ಅಮಾವಾಸ್ಯೆ ನಂತರ ಜಾತ್ರೆ
ನೀವು ನಮಗೇ ಹಾಕಬೇಕು ಎಂದು ಅವರು… ನೀವು ನಮಗೆ ಬಿಟ್ಟು ಬೇರೆ ಯಾರಿಗೂ ಹಾಕಬಾರದು ಎಂದು ಅವರು… ಹೇ ಹೇ ಅವರಿಬ್ಬರಿಗೂ ಹಾಕಿದ್ದೀರಿ ಈ ಬಾರಿ ನಮಗೆ ಹಾಕಿ ಎಂದು ಇನ್ನೊಬ್ಬರು. ಈ ಎಲ್ಲಮಂದಿ ಪುರಾಣ ಕೇಳಿ ಸಾಕು ಸಾಕಾಗಿದೆ ಎಂದು ಕನ್ನಾಳ್ಮಲ್ಲ… ಕಿವುಡನ ಮಾಡಯ್ಯ ತಂದೇ ಎಂದು ಹತ್ತು ಹರದಾರಿಗೆ ಕೇಳುವಂತೆ ಒದರಿದ. ಅದ್ಯಾವ ಅಶ್ವಿನಿ ದೇವತೆಗೆ ಈತನ ಧ್ವನಿ ಕೇಳಿಸಿತೋ ಏನೋ ಆ ದೇವತೆ ತಥಾಸ್ತು ಅಂದುಬಿಟ್ಟಳು. ಅಂದಿನಿಂದ ಕನ್ನಾಳ್ಮಲ್ಲನ ಕಿವಿ ಢಮಾರ್ ಆದವು. ಮರುದಿನ…ಮುಂಜಾನೆ ಮನೆಯ ಕಡೆ ಬಂದ ಮದ್ರಾಮಣ್ಣ… ಮಲ್ಲಣ್ಣೋರೆ ನಮಸ್ಕಾರ ಎಂದು ಕೈ ಮುಗಿಯದೇ ಹೇಳಿದ… ಅದಕ್ಕೆ ಮಲ್ಲ.. ಏನೋ ಏನೋರಿ… ಒಂದ್ಹನಿಯೂ ಮಳೆ ಇಲ್ಲ ಏನ್ಮೋಡುದು ಅಂದ. ಅದಕ್ಕೆ ಅಲ್ಲ ಮಲ್ಲಣ್ಣ ಈ ಬಾರಿ ನಮ್ ಮನಿಷಾನಿಗೆ ಓಟು ಹಾಕಬೇಕು ಅಂದಾಗ…ಅಯ್ಯೋ ಇಷ್ಟು ಹೊತ್ತಿನ ವರೆಗೆ ಜಿಲಿಬಿಲಿ ಎಲ್ಲವ್ವ ಇಲ್ಲೇ ಇದ್ಲು ಸಂತೀಗೆ ಹೋಗಿರಬೇಕು ಅಂದ… ಮಲ್ಲಣ್ಣ ಅದಲ್ಲ ಓಟು… ಓಟು ಅಂತ ಮದ್ರಾಮಣ್ಣ ಜೋರಾಗಿ ಕೂಗಿದಾಗ…ಅಯ್ಯೋ ಏನೂಟ ಬಿಡ್ರಿ ಮೊದ್ಲೇ ಮಳೆಗಾಲ ಬೆಳೆ ಇಲ್ಲ ಏನಿಲ್ಲಅಂದ. ತಥ್ ಇವನೌನ ಅಂದು ಮದ್ರಾಮಣ್ಣ ಅಲ್ಲಿಂದ ಹೋದ.ಅದಾಗಿ ಅರ್ಧತಾಸಿನ ನಂತರ ಸೋದಿ ಮಾಮಾ ಅಲ್ಲಿಗೆ ಆಗಮಿಸಿ…ಓಹೋ ಮಲ್ಲಣ್ಣೋರು ಎಂದು.. ಮಲ್ಲಣ್ಣ ನಮನ್ನ ಮರೀಬೇಡಿ ಅಂತ ಹೇಳಿದರು… ಅಯ್ಯೋ ಎಲ್ಲಿ ನಾಯಿಮರಿ ಬುಡ್ರಿ ಸಾಹೇಬ್ರೆ..ಇದ್ದುವೆಲ್ಲ ಇಡ್ಕೊಂಡು ಹೋದ್ರು ನೀವು ಈಗ ಮರಿಮರಿ ಅಂದರೆ ಹೇಗೆ ಅಂದ. ಗಾಬರಿಯಾದ ಸೋದಿ ಮಾಮಾ… ಏನ್ರೀ ಇದು ಸಿಟ್ಯೂರಪ್ಪರೇ ಅಂದರು. ಅದಕ್ಕೆ ಸಿಟ್ಯೂರಪ್ಪ…ಅಯ್ಯೋ ಎಮರ್ಜನ್ಸಿ ಕಾಲಕ್ಕೆ ಇವರ ಊರಿಗೆ ಬಂದಿದ್ದೆ. ಇವನು ಆಗ ಬಹಳ ಚಿಕ್ಕವ ಅಂದರು. ನಾನು ಯಾಕರ ಬಂದೆನೋ ಅಂತ ಅಲ್ಲಿಂದ ಎದ್ದು ಹೋದರು. ಮರುದಿನ ಸುಮಾರಣ್ಣೋರು ಬಂದು… ಏನ್ ಬ್ರದರ್ ಮಲ್ಲಣ್ಣ… ನಾವು ನಮಪ್ಪಾರು…ಸೋದಿ ಕಡೆ ಹೋಗಿಬಿಟ್ಟೆವು ಅಂದರು. ಅಯ್ಯೋ ಲಾದುಂಚಿ ಜಾತ್ರೆ ಅಮವಾಸ್ಯೆ ಕಳೆದ ಮೇಲೆ ಇದೇರಿ…ನೀವೇನು ಈಗಲೇ ಪಟ್ಟಿ ಕೇಳೋಕೆ ಬಂದ್ರೆಲ ಅಂದಾಗ ಅಯ್ಯೋ ಇದೇನ್ರೀ ಇದೂ ಅಂತ ಅಲ್ಲಿಂದ ಎದ್ದು ಬಂದ. ಮಲ್ಲಣ್ಣ ಹೀಗೆ ಮಾತಾಡುವ ಸುದ್ದಿ ಇಂಡಿಪೆಂಡೆಂಟ್ ಇರುಪಣ್ಣನಿಗೆ ಗೊತ್ತಾಯಿತು. ಮರುದಿನವೇ ಮಲ್ಲಣ್ಣನ ಮನೆಗೆ ಹೋಗಿ..ಈ ಬಾರಿ ಮಳೆ ಇಲ್ಲ ಅಂದ. ಅದಕ್ಕೆ ಮಲ್ಲಣ್ಣ..ಹೂಂ. ಎಲೆಕ್ಷನ್ನು ಜೋರೈತಿ ಎಂದು ಹೇಳಿದ. ಹುರುಪುಗೊಂಡ ಇರಪಣ್ಣ…ನಾಯಿ ಮರಿಹಾಕಿತ್ತು ಮಾರಾಯಾ ಅಂದಾಗ…ಅಯ್ಯೋ ಮದ್ರಾಮಣ್ಣ…. ಸೋದಿಮಾಮಾ..ಸುಮಾರಣ್ಣ ಎಲ್ಲರೂ ಬಂದು ಹೋದರು ಅಂದ. ಈ ಬಾರಿ ಬೋರು ಹಾಕಿಸು ಹೊಲಕ್ಕೆ ಅಂತ ಹೇಳಿದಾಗ…ಅಯ್ಯೋ ಇರಪಣ್ಣ ಅವರದೂ ನೋಡಿವಿ…ಇವರದೂ ಕಂಡೀವಿ… ಈಬಾರಿ ಓಟು ನಿಮಗೇ ಅಂದ…ನಿಟ್ಟುಸಿರುಬಿಟ್ಟ ಇರಪಣ್ಣ ಅಲ್ಲಿಂದ ಎದ್ದು ಬಂದ.