ಅರ್ಥಪೂರ್ಣ ಮಹಿಳಾದಿನ..
ಬುಸ್ಯವ್ವ, ಮೇಕಪ್ ಮರೆಮ್ಮನ ಗ್ಯಾಂಗ್ ಮಹಿಳಾದಿನ ಇತಿಹಾಸದ ಪುಟದಲ್ಲಿ ಬರೆದಿಡಬೇಕು ಹಾಗೆ ಅದೆಷ್ಟು ಮಹಿಳೆಯರು ಏನ್ಕತೆ ಎಂದು ಕಂಟ್ರಂಗಮ್ಮತ್ತಿ ಕಥೆಮಾಡಿ ಹೇಳುತ್ತಿದ್ದರೆ ಕುಳಿತ ಮಂದಿ ಬಾಯಿ ತೆರೆದುಕೊಂಡು ಕೇಳುತ್ತಿದ್ದರು. ಅಂತಹ ಕಾರ್ಯಕ್ರಮ ನ ಭೂತೋ ನ ಭವಿಷ್ಯತಿ ಅನ್ನುವ ಹಾಗೆ ಆಯಿತು. ನೀವು ಬರಬೇಕಿತ್ತು… ನಾವಂತೂ ಆ ಕಾರ್ಯಕ್ರಮ ಕಣ್ಣಲ್ಲಿ ತುಂಬಿಕೊಂಡು ಬಂದಿದ್ದೇವೆ… ಅಬ್ಬ! ಎಂದು ಒಂದು ಗುಟುಕು ನೀರು ಕುಡಿಯದೇ ಹೇಳುತ್ತಿದ್ದಳು. ಅವತ್ತು ರೊಕ್ಕದ ಮಂತ್ರಿಣಿ ನಿಮ್ಮಕ್ಕ, ಸೀತಾರಾಮಣ್ಣ ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆಗೆ ಹೋಗಿದ್ದ ಗ್ಯಾನಮ್ಮನಿಗೆ ಕಂಟ್ರಂಗಮ್ಮತ್ತಿ ಹೇಳಿದ್ದು ಕೇಳಿ… ಛೆ..ಛೆ ಅನ್ನಿಸಿದೇ ಇರಲಿಲ್ಲ. ಕಾರ್ಯಕ್ರಮದಲ್ಲಿ ಅಂಥದ್ದು ಆಗಿದ್ದಾದರೂ ಏನು, ಭಯಂಕರ ಅರ್ಥಪೂರ್ಣ ಎನ್ನಿಸಿಕೊಳ್ಳಲು ಕಾರಣವೇನು? ಸಾಧಕರಿಗೆ ಬಹುಮಾನ ಕೊಟ್ಟು ಗೌರವಿಸಲಾಯಿತಂತೆ… ಅವರು ಯಾವ ಸಾಧನೆ ಮಾಡಿದ್ದರು?. ಅದಕ್ಕೆ ಮಾನದಂಡಗಳಾದರೂ ಏನಿದ್ದವು. ನನಗೆ ನೀನು ಹೇಳಲೇಬೇಕು ಎಂದು ಗಂಟು ಬಿದ್ದಾಗ…. ಕಂಟ್ರಂಗಮ್ಮತ್ತಿ ಸೆರಗಿನಿಂದ ಮುಖಕ್ಕೆ ಗಾಳಿ ಹಾಕಿಕೊಳ್ಳುತ್ತ… ಗಟಗಟ ನೀರು ಕುಡಿದು…. ಕೇಳು ಎಂದು ಹೇಳಲು ಶುರುಮಾಡಿದಳು. ಯಾರಿಗೆ ಗೌರವ ಎಂದು ಕೇಳಿದೆಯಲ್ಲ… ಯಾವ ಸಾಧನೆ ಎಂದು ಕೇಳಿದೆಯಲ್ಲ… ನಂಬರ್ ಹಾಕಿ ಹೇಳುವೆ ಕೇಳು
೧) ಹೊಸದಾಗಿ ಗಂಡನ ಮನೆಗೆ ಬಂದು ವರ್ಷದೊಳಗೆ ಅವರ ಅತ್ತೆ ಜತೆ ಜಗಳವಾಡಿ ನಂತರ ತನ್ನ ಗಂಡನಿಂದ ಆಕೆಯನ್ನು ದೂರ ಮಾಡಿ ಜಯಸಿದವಳು.
೨) ಮೊದ ಮೊದಲು ಗಂಡನನ್ನು ಕೈಯಲ್ಲಿ ಇಟ್ಟುಕೊಳ್ಳಲಾಗದೇ ಹೆಣಗಾಡಿ ನಂತರ ಗಂಡನನ್ನು ತನ್ನ ಮಾತು ಕೇಳುವಂತೆ ಮಾಡಿ.. ಅದರಲ್ಲಿ ಯಶಸ್ವಿಯಾದ ಸಾಧಕಿ
೩) ಅಕ್ಕ-ಪಕ್ಕದವರು ತರುವಂತಹ ವಸ್ತುಗಳಿಗಿಂತ ಎರಡು ಮೂರು ಪಟ್ಟು ಜಾಸ್ತಿ ರೊಕ್ಕ ಕೊಟ್ಟು ತಂದು ನೇಬರ್‌ಗಳನ್ನು ಕರೆಕರೆದು ತೋರಿಸುವ ನಾರಿಮಣಿಗೆ ಗೌರವಿಸಲಾಗಿದೆ.
೪) ಯಾವತ್ತೂ ಗಂಡನ ರಿಲೇಷನ್ನುಗಳನ್ನು ಮೈಲುಗಟ್ಟಲೇ ದೂರವಿಟ್ಟು.. ತಮ್ಮ ರಿಲೇಶನ್‌ನವರನ್ನು ಹೊಸ್ತಿಲ ಒಳಗೆ ಕರೆದು ಸತ್ಕರಿಸುವ ಕಲಾವಿದೆಗೆ ಬಹುಮಾನ
೫) ಮಹಿಳಾ ಸಂಘ ಕಟ್ಟಿ.. ಓಣಿಗಳಲ್ಲಿ ಚೀಟಿ ಹಾಕಿ… ಅಲ್ಲಿ ಬರುವ ಹಣವನ್ನು ಅಪರಾ ತಪರಾ ಮಾಡಿ ಅದನ್ನು ಬೇರೆಯವರ ಮೇಲೆ ಹಾಕಿ ತಾನು ಪಾರಾದ ಮಹಿಳೆಗೆ ಬಹುಮಾನ ದೊರೆತಿದೆ..