ಕಿಂಗ್ ಫಿಶರ್ ಗಯಾ.. ಕ್ವೀನ್ ಫಿಶರ್ ಆಯಾ
ನಾ ಮೊದಲೇ ಹೇಳಿದ್ದೆ… ಈ ಬಾರಿ ಕಪ್ ನಮ್ದೇ ಅಂತ. ಹಂಗಾಗಿ ಈಗ ಕಪ್ ನಮ್ದೇ ಆಗಿದೆ ಎಂದು ಮೇಕಪ್ ಮರೆಮ್ಮ ದೊಡ್ಡ ಕಪ್ಪಿನಲ್ಲಿ ಬೆಲ್ಲದ ಚಹ ಕುಡಿಯುತ್ತ ಹೇಳಿದಳು. ಅಲ್ಲಿಯೇ ಕುಳಿತಿದ್ದ ಜ್ಞಾನಿ ಗ್ಯಾನಮ್ಮ… ಹೌದೌದು ಕಳೆದ ಬಾರಿಯೂ ಮೇಕಪ್ ಹೀಗೆಯೇ ಹೇಳಿದ್ದಳು. ಸೋತ ಕೂಡಲೇ ಕಪ್ಪಿನಲ್ಲಿ ಚಹ ಕುಡಿಯುವುದನ್ನೇ ನಿಲ್ಲಿಸಿ ಬರೀ ಸಿಲಾವರ್ ಗ್ಲಾಸಿನಲ್ಲಿ ಕುಡಿಯುತ್ತಿದ್ದಳು ಎಂದು ಹೇಳುತ್ತಿದ್ದಂತೆ ಹೊರಗಡೆ
ಅಯ್ಯೋ ಅಯ್ಯೋ ಕಿಂಗ್ಫಿಶರ್
ಈಗೇನಿದ್ದರೂ ಕ್ವೀನ್ ಫಿಶರ್
ಎಂದು ವಿಜ್ಜಿ ಮಲ್ಲಯ್ಯ ಬರೆದ ಹಾಡನ್ನು ಕರಿಯಪ್ಪ ಮಾಸ್ತರ್ ಕಡೆಯಿಂದ ಹಾಡಿಸಿ ಅದನ್ನು ರಿಕಾರ್ಡಿಂಗ್ ಮಾಡಿಸಿ ಆಟೋಕ್ಕೆ ಮೈಕು ಕಟ್ಟಿ ಓಣಿ.. ಓಣಿಯಲ್ಲಿ ಹಾಡಿಸುತ್ತಿದ್ದರು. ಮಧ್ಯೆ.. ಮಧ್ಯೆ ಮಲ್ಲಯ್ಯನ ಮಾತು.. ನೋಡ್ರೀ ಹೆಣ್ಣುಮಕ್ಕಳೇ… ಆವಾಗ ನಾನು ಹುಡುಗರು ಅಂದರೆ ಕಿಂಗ್.. ಅದಕ್ಕೆ ಕಿಂಗ್ಫಿಶರ್ ಎಂದು ಹೆಸರಿಟ್ಟಿದ್ದೆ. ಈಗ ಏನಿದ್ದರೂ ಹುಡುಗಿಯರು… ಹುಡುಗಿಯರು ಅಂದರೆ ಕ್ವೀನ್… ಅದಕ್ಕಾಗಿ ಈಗ ಎಲ್ಲೆಡೆ ಕ್ವೀನ್ ಫಿಶರ್..ಕ್ವೀನ್ ಫಿಶರ್ ಎಂದು ಹೇಳುತ್ತಿದ್ದ ನಂತರ ಹಾಡು ಆರಂಭವಾಗುತ್ತಿತ್ತು. ಈ ಹಾಡು ಕೇಳಿಸಿಕೊಂಡ ಕರಿಭಾಗೀರತಿ, ಕಂಟ್ರಂಗಮ್ಮತ್ತಿ, ಸತ್ಯಮ್ಮತ್ತಿ ಮುಂತಾದವರು ಈ ಮಲ್ಲಯ್ಯ ಸುಲಭ ಮನುಷ್ಯನಲ್ಲ, ಆಡುವವರು ನಮ್ಮ ಹುಡುಗಿಯರು. ಆ ಮಂದಾನ ಹುಡುಗಿ ಎಷ್ಟು ಚಂದ.. ಏನ್ಕತೀಅಂದ ಕೂಡಲೇ ಕರಿಭಾಗೀರತಿ, ಹೌದೌದು ಅದಕ್ಕೆ ನಾನು ಲೊಂಡೆನುಮನಿಗೆ ಆ ಹುಡುಗಿಯನ್ನು ಕೇಳಬೇಕು ಅಂದುಕೊಂಡಿದ್ದೇನೆ ಅವಳ ಅಪ್ಪ ಮಂದಾನಿನೂ ನನಗೆ ಗೊತ್ತು ಅಂದಳು. ಇಕೀದು ಬರೀ ಇದೇ ಆಯಿತು ಎಂದು ಹೇಳಿದ ಕ್ವಾಟಿಗ್ವಾಡಿ ಸುಂದ್ರವ್ವ ಇರಲಿಬಿಡು ಈಗ ಅದೇನೋ ಕ್ವೀನ್ಫಿಶರ್ ಬರುತ್ತದೆ.. ಹೇಗಿದ್ದರೂ ನಮಗೆ ಪುಗಸೆಟ್ಟಿ ಕೊಡುತ್ತಾನೆ. ಅದನ್ನು ಟೇಸ್ಟ್ ಮಾಡಿ ಪುಗಸೆಟ್ಟಿ ಬಸ್ ಹತ್ತಿ ಎಲ್ಲಿ ಬೇಕಲ್ಲಿ ಹೋದರಾಯಿತು ಬುಡು ಎಂದು ಗ್ವಾಡಿಸುಂದ್ರವ್ವ ಫಾರ್ಮಾನು ಹೊರಡಿಸಿದಳು.