ದೂಡಿದ್ದು ಯಾರು?
ಮೊನ್ನೆ ದೊಡ್ಡಕ್ಕ ಧಬಕ್ಕನೇ ಬಿದ್ದು ಹಣೆಗೆ ಗಾಯ ಮಾಡಿಕೊಂಡು ಅಯ್ಯಯ್ಯಪ್ಪೋ ಎಂದು ದವಾಖಾನೆಯಲ್ಲಿ ಡಾ. ತಿರ್ಮೂಲಿ ಹತ್ತಿರ ಟ್ರೀಟ್ ಮೆಂಟೇನೋ ತೆಗೆದುಕೊಂಡರು. ಆದರೆ ಹಿಂದಿನಿಂದ ದೂಡಿದ್ದು ಯಾರು? ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಶಿಫಾರಸ್ಸು ಮಾಡುತ್ತೇನೆ ಎಂದು ಅಕ್ಕಮ್ಮ ಅತ್ತಿಂದಿತ್ತ ತಿರುಗಾಡುತ್ತಿದ್ದಾರೆ. ಅವತ್ತು ಬಿದ್ದ ಅಕ್ಕಮ್ಮನನ್ನು ದವಾಖಾನೆಗೆ ಕರೆತರಲಾಯಿತು. ಅಲ್ಲಿ ಅಕ್ಕಮ್ಮನನ್ನು ಗಾಲಿ ಕುರ್ಚಿಯ ಮೇಲೆ ಕುಳ್ಳರಿಸಿಕೊಂಡು ಠೀಕಂ ಠಾಕ್ ಆಗಿ ಕುಳಿತಿದ್ದ ಡಾ. ತಿರ್ಮೂಲಿಯ ಮುಂದೆ ಗಾಲಿ ಕುರ್ಚಿ ನಿಲ್ಲಿಸಿದಾಗ… ಆಕೆಯ ಹಣೆಯ ಮೇಲಿಂದ ಮೂಗಿನ ತನಕ ಇಳಿಯುತ್ತಿದ್ದ ರಕ್ತನೋಡಿದ ತಿರ್ಮೂಲಿ ಹೌಹಾರಿ ಕೆಳಗೆ ಬಿದ್ದು ಎಚ್ಚರತಪ್ಪಿದ. ಅಲ್ಲಿದ್ದವರು ಅಲ್ಲಿಯೇ ಮೂಲೆಯಲ್ಲಿದ್ದ ಕೆಂಪುಬಣ್ಣದ ಗಡಿಗೆಯಿಂದ ಒಂದು ಚಂಬು ನೀರು ತಂದು ಮುಖಕ್ಕೆ ಛಬಕ್ ಛಬಕ್ ಎಂದು ನೀರು ಚಿಮುಕಿಸಿದರು. ಮೆಲ್ಲನೇ ಎದ್ದು ಕುಳಿತ ಡಾ. ತಿರ್ಮೂಲಿ ಅಕ್ಕಮ್ಮಾ… ಅಕ್ಕಮ್ಮಾ ಹಣೆ ಮೇಲೆ ರಕ್ತ ಹೆಂಗಮ್ಮಾ ಎಂದು ಕೂಗಿದ… ಅದಕ್ಕೆ ಅಕ್ಕನ ಉತ್ತರ ಬರೀ ಕಣ್ಣೀರು… ಏನು ಮಾಡಲಿ… ನಾನು ಅವತ್ತು ಧಬಕ್ಕನೇ ಬಿದ್ದಾಗ… ಅಲ್ಲಿದ್ದವರು ಯಾರೂ ಎಬ್ಬಿಸಿ ನಿಲ್ಲಿಸಲಿಲ್ಲ….. ಸಾವರಿಸಿಕೊಂಡು ಗೋಡೆ ಹಿಡಿದುಕೊಂಡು ಸಾವಕಾಶವಾಗಿ ಬಂದು ಬಿದುರಿನ ಕುರ್ಚಿ ಮೇಲೆ ಕುಳಿತೆ. ಎಷ್ಟೋ ಹೊತ್ತಿನ ನಂತರ ಕರಿಭಾಗೀರತಿ ಬಂದಳು…. ಏನೇ ಇದು ಬಿಸಿಲೂ… ನೀನು ಎಷ್ಟು ಬೆವೆತಿದಿಯ? ಹಣೆ ಮೇಲಿನ ಕುಂಕುಮ ಕರಗಿ ಮೂಗಿನ ಹತ್ತಿರ ಇಳಿದಿದೆ…ಎಲೆಕ್ಷನ್ ಟೈಮಲ್ಲಿ ಇಂಥವೆಲ್ಲ ಆಗಬಾರದು ಎಂದು ಹೇಳಿ ಹತ್ತಿರ ಬಂದು ನೋಡಿದಳು.. ಅಯ್ಯೋ ಇದು ಕುಂಕುಮ ಅಲ್ಲ ರಕ್ತ…ರಕ್ತ ಎಂದು ಕಿರುಚಾಡಿದಳು…. ನನಗೆ ಅಲ್ಲಿಯೇ ಒರಸಿಕೊಳ್ಳಬೇಕು ಅಂತ ಮನಸ್ಸಾಗಿತ್ತು ಆದರೆ ಕರಿಭಾಗೀರತಿ… ಬೇಡ…ಬೇಡ… ರಕ್ತದಲ್ಲಿ ಕೆಟ್ಟ ಅಣುಗಳು ಸೇರಿಕೊಂಡು ಅಪಾಯ ಮಾಡುವ ಚಾನ್ಸ್ ಹೆಚ್ಚಿದೆ ಎಂದು ಹೇಳಿದ್ದಕ್ಕೆ ಇಲ್ಲಿಗೆ ಬಂದೆ ಅಂದಳು…ಅಲ್ಲ ಅಕ್ಕಮ್ಮ ಇದನ್ನು ಕಡಿಮೆ ಮಾಡಬಹುದು ಆದರೆ ನಿನ್ನನ್ನು ದೂಡಿದವರು ಯಾರು ಎನ್ನುವುದು ಬೇಡವೇ? ಎಂದದ್ದಕ್ಕೆ ಭುಸುಗುಡುತ್ತ ಅಕ್ಕಮ್ಮ…ಇಲ್ಲ ತಿರ್ಮೂಲಿ ನನಗೆ ಆತ ಬಿಳಿಗಡ್ಡದಾತನ ಮೇಲೆ ಡೌಟಿದೆ… ಆ ಟಕಳೇಸಿ ಮೇಲೆ ಡೌಟಿದೆ… ಅವರೇ ಇದನ್ನು ಮಾಡಿರಬಹುದು. ನಾನು ಸುಮ್ಮನೇ ಕೂಡುವ ಹೆಣ್ಣುಮಗಳಲ್ಲ… ಆವಾಗ ಹೀಗೆಯೇ ದೂಡಿ ನನ್ನ ಕಾಲು ಮುರಿದಿದ್ದರು. ನನಗೆ ಒಂದೊಂದು ಬಾರಿ ಭಾಗೀರತಿ ಮೇಲೆ ಡೌಟು ಬರುತ್ತದೆ… ಅದಿರಲಿ ತಿರ್ಮೂಲಿ ಕಳೆದ ಸಲ ನನ್ನ ಎಡಗಾಲಿಗೆ ಪೆಟ್ಟು ಆಗಿತ್ತು. ನಾನು ಬ್ಯಾಂಡೇಜ್ ಹಾಕಿಕೊಂಡಿದ್ದೆ. ನಂತರ ನಿನ್ನ ಕಡೆ ಬಂದಾಗ ಬಲಗಾಲಿಗೆ ಬ್ಯಾಂಡೇಜ್ ಹಾಕಿ ಕಳುಹಿಸಿದೆ.. ಎಲ್ಲರೂ ಏನ್ರೀ ನಿಮ್ಮ ಎಡಗಾಲು ಮುರುದಿತ್ತು..ನೀವು ಬಲಗಾಲಿಗೆ ಬ್ಯಾಂಡೇಜ್ ಹಾಕಿಕೊಂಡಿದ್ದಿರಿ ಎಂದು ಗೇಲಿ ಮಾಡಿದಳು. ನೋಡು ಈ ಬಾರಿ ಹಾಗೆ ಮಾಡಬೇಡ ಎಂದು ಜಬರಿಸಿ ಹಣೆಗೆ ಮುಲಾಮು ಹಚ್ಚಿಸಿಕೊಂಡರು.