ಹಳ್ಳಿಹಕ್ಕಿನೋ ಸಿಟಿ ಹಕ್ಕಿನೋ?
ಈ ಎಲೆಕ್ಷನ್ನಿನಲ್ಲಿ ಹಕ್ಕಿ ಎತ್ತ ಹಾರುತಿದೆ? ಎಂದು ಬಹುವಾಗಿ ದಿಗಿಲುಗೊಂಡವರು ಪಂ. ಲೇವೇಗೌಡರು. ಯಾಕೋ ಆ ಹಕ್ಕಿಯ ಹಾರಾಟವೇ ಇಲ್ಲ ಎನ್ನುವಷ್ಟರಲ್ಲಿ ಆಕಾಶದಲ್ಲಿ ಹಾರಿಕೊಂಡು ಬಂದ ಹಕ್ಕಿ ವಿಮಾನ ಇಳಿದಂಗೆ ಸಾವಕಾಶವಾಗಿ ಇಳಿಯುತ್ತಿರುವುದನ್ನು ಕಂಡು ಲೇವೇಗೌಡರು ಅರೆಮನಸ್ಸಿನಿಂದ ಏನಪ್ಪ ಇದು ಈ ಕಡೆನೇ ಹಾರಿಕೊಂಡು ಬರುತ್ತಾ ಇದೆ. ಸುಮ್ಮನೇ ಯಾಕಿದ್ದೀತು ಎಂದು ಅಲ್ಲಿಂದ ಕದಲಿದರು. ಇನ್ನೊಂದಡೆ ಮದ್ರಾಮಣ್ಣನವರು ಅಯ್ಯೋ ಈ ಅಕ್ಕಿದು ಎಂಗೋ ಏನೋ ಯಾ ಕಡೆ ಆರುತೈತಿ ಅನ್ನುವುದೇ ಗೊತ್ತಾಗಿಕಿಲ್ಲ ಎಂದು ಸುಮ್ಮನಾದರೆ… ಗಹಗಹಿಸಿ ನಕ್ಕ ಸುಮಾರಣ್ಣ… ಆ ಹಕ್ಕಿ ನಮ್ಮ ಕಡೆಯೂ ಇತ್ತು. ಈಗ ಮತ್ತೆ ನಮ್ಮ ಕಡೆಯೇ ಬರುತ್ತಿದೆ ಎಂದು ವ್ಯಾಖ್ಯಾನ ನೀಡಿದರು. ಸುಮ್ನಿರ‍್ರಿ…. ಆ ಹಕ್ಕಿ ಮೊದಲು ಇದ್ದುದೇ ನಮ್ಮ ಕಡೆಗೆ ಅಂದಾಗ.. ಅಯ್ಯೋ ಅದನ್ನು ಅಲ್ಲಿಂದ ಓಡಿಸಿದ್ದು ನೀವೇ ಎಂದು ಸುಮಾರಣ್ಣ ಕಾಲೆಳೆದು ಸುಮ್ಮನಾಗಿಸಿದ. ಆ ಕಡೆಯಿಂದ ಸುಮಾರಣ್ಣನ ಮೊಬೈಲ್‌ಗೆ ಲೇವೇಗೌಡರು ಕರೆ ಮಾಡಿದರು. ನಾನು ಅಲ್ಲಿಂದ ಬೇಗ ಬಂದುಬಿಟ್ಟೆ. ಆ ಹಕ್ಕಿ ಹಳ್ಳಿಯದೋ-ಸಿಟಿದೋ ಸ್ವಲ್ಪ ನೋಡು ಎಂದು ಹೇಳಿದರು ಹೂಂ ಅಂದ ಸುಮಾರಣ, ಅದೇನು ಹಳ್ಳಿ ಹಕ್ಕಿಯಾ ಹೇಗೆ? ನಮ್ಮ ಕಡೆ ಇದ್ದಾಗ ಒಂಥರಾ ಇತ್ತು. ಈಗ ಒಂಥರಾ ಕಾಣುತ್ತಿದೆ. ನೋಡೋಣ ಅಂದರು. ಅಲ್ಲೆಲ್ಲೋ ಕುಳಿತಿದ್ದ ಕೇಸ್ವರಪ್ಪ… ನೋಡು ಹಳ್ಳಿಹಕ್ಕಿ ನಾನು ಎಲ್ಲರೂ ಒಂದೇ… ಈಗ ನೋಡು ಹಾರಾಡಿ.. ಹಾರಾಡಿ ಮತ್ತೆ ಅಲ್ಲಿಗೇ ಹೋಗುತ್ತಿದೆ ಎಂದು ಕಮೆಂಟ್ ಹಾಕಿದರು. ಸಿಟ್ಯೂರಪ್ಪನವರು ಮಾತ್ರ ನೋಡಿ ಇವರೇ.. ನೀವೆಲ್ಲ ಹೀಗೆ ಮಾತನಾಡಬಾರದು. ಅದು ಹಕ್ಕಿ ಅದಕ್ಕೆ ರೆಕ್ಕೆಗಳಿವೆ. ಅದು ಎಲ್ಲಿ ಬೇಕಲ್ಲಿ ಹಾರಬಹುದು. ಅದಕ್ಕೆ ರೈಟ್ಸ್ ಇದೆ. ನೀವು ಸುಳ್ಳೇ ಇಂಥವೆಲ್ಲ ಮಾಡಬೇಡಿ ಎಂದು ಹೇಳಿದರು. ಅಷ್ಟರಲ್ಲಿ ಹಾರಾಡಿ ಹಾರಾಡಿ ಸಾಕಾಗಿ ಕೆಳಗೆ ಇಳಿದ ಹಳ್ಳಿ ಹಕ್ಕಿ… ಅವರ ಬಾಜು ಕುಳಿತು… ನಾನು ನಿಮ್ಮ ಹಕ್ಕಿ…. ಆವಾಗ ಅವರ ಹಕ್ಕಿ.. ಆ ಸಂದರ್ಭದಲ್ಲಿ ತೆಗೆದರು ಹೆಕ್ಕಿ ಹೆಕ್ಕಿ… ನಾನು ನಿಮ್ಮ ಹಕ್ಕಿ ನಿಮ್ಮ ಹಕ್ಕಿ ಹಳ್ಳಿಹಕ್ಕಿ ಎಂದು ಶುಶ್ರಾವ್ಯಕಂಠದಿಂದ ಹಾಡುತ್ತ ಕುಳಿತಿತ್ತು.