ಕಾರ್ತಿಕ ಸ್ನಾನದಿಂದ ಪಾಪ ನಿವೃತ್ತಿ ಜ್ಞಾನ ಪ್ರಾಪ್ತಿ
ನಿತ್ಯದಲ್ಲಿ ಮಾಡುವ ಸದಾಚಾರಗಳ ಬಗ್ಗೆ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಉಲ್ಲೇಖವಿದೆ. ದಿನನಿತ್ಯದಲ್ಲೂ ಪ್ರಾತಃಸ್ನಾನ ಮಾಡಲೇಬೇಕು. ಪ್ರಾತಃಸ್ನಾನ ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಎಂದು ಸದಾಚಾರ ಸ್ಮೃತಿ ತಿಳಿಸಿಕೊಡುತ್ತದೆ. ಸೂರ್ಯೋದಯದ ಮುಂಚೆ, ಆಕಾಶದಲ್ಲಿ ಇನ್ನೂ ನಕ್ಷತ್ರಗಳು ಕಾಣುತ್ತಿರುವಾಗ, ನದಿ, ಪುಷ್ಕರಿಣಿ, ಹಳ್ಳ, ಕೆರೆಯಲ್ಲಿ, ಅರ್ಧ ನೀರಿನಲ್ಲಿ ನಿಂತು ಸಂಕಲ್ಪಸಹಿತವಾಗಿ ಶ್ರೀರಾಮ, ಕೃಷ್ಣಾಷ್ಟಾಕ್ಷರ ಮಂತ್ರವನ್ನು ಹೇಳುತ್ತ ಮೂರು ಬಾರಿ ಉಸಿರನ್ನು ಬಿಗಿಹಿಡಿದು ದೇಹವನ್ನು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಸಿ ಸ್ನಾನ ಮಾಡಬೇಕು. ಹೀಗೆ ನಿತ್ಯದಲ್ಲೂ ಬ್ರಾಹ್ಮಿಮುಹೂರ್ತದಲ್ಲಿ ಸ್ನಾನ ಮಾಡುವುದರಿಂದ ದೇಹಸ್ವಾಸ್ಥ್ಯಕ್ಕೆ ಸಂಬಂಧಿಸಿದ ಆರೋಗ್ಯ, ಆಯುಸ್ಸು, ಸೌಂದರ್ಯ ಮೊದಲಾದ ಫಲಗಳು ದೊರೆಯುತ್ತವೆ. ದೇಹಶುಚಿಯ ನಂತರ ಧ್ಯಾನ, ಜಪಗಳಿಂದ ಮನಸ್ಸು ಶುಚಿಯಾಗಿ ಭಗವಂತನಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಹಕಾರಿಯಾಗುತ್ತದೆ.
ದಿನನಿತ್ಯ ನದಿ, ಪುಷ್ಕರಿಣಿ, ಹಳ್ಳ, ಕೆರೆಗಳಲ್ಲಿ ಸ್ನಾನ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಕಷ್ಟಸಾಧ್ಯ. ಆದುದರಿಂದ ಸ್ನಾನವಿಧಿಯಲ್ಲಿ, ವರ್ಷದ ಚೈತ್ರಾದಿ ಹನ್ನೆರಡು ಮಾಸಗಳಲ್ಲಿ ಪ್ರಮುಖವಾಗಿ ನಾಲ್ಕು ಮಾಸಗಳಲ್ಲಿ ನದಿ, ಪುಷ್ಕರಿಣಿಗಳಲ್ಲಿನ ಸ್ನಾನಕ್ಕೆ ವಿಶೇಷ ಮಹತ್ವ ಕೊಟ್ಟಿದ್ದಾರೆ. ಈ ನಾಲ್ಕು ತಿಂಗಳಲ್ಲಿ ಯಾರು ಪವಿತ್ರವಾದ ನದಿಗಳಲ್ಲಿ ಒಮ್ಮೆಯಾದರೂ ಸ್ನಾನ ಮಾಡುವುದಿಲ್ಲವೋ ಅಂಥವರಿಗೆ ‘ಪಿಶಾಚಿ’ಜನ್ಮ ಪ್ರಾಪ್ತಿಯಾಗುವ ಸಂಭವವಿದೆ ಎಂದು ವಾದಿರಾಜರು, ಪಿಶಾಚಿಯನ್ನು ಉದ್ಧಾರ ಮಾಡುವ ಪ್ರಸಂಗದಲ್ಲಿ ತಿಳಿಸಿಕೊಟ್ಟಿದ್ದಾರೆ.
ಒಮ್ಮೆ ಒಂದು ಊರಿನ ಅರಳಿಮರದಲ್ಲಿ ಭೂತ ಆವಾಸ ಮಾಡಿಕೊಂಡಿತ್ತು. ಆ ರಸ್ತೆಯಲ್ಲಿ ಬರುವ ಎಲ್ಲರಿಗೂ ಅದು ಒಂದು ಪ್ರಶ್ನೆ ಮಾಡುತ್ತಿತ್ತು, ‘ಆ ಕಾ ಮಾ ವೈ ಕೋ ನ ಸ್ನಾತಃ’ ಎಂದು. ಅದಕ್ಕೆ ಯಾರು ಉತ್ತರ ಕೊಡುವುದಿಲ್ಲವೋ ಅವರನ್ನು ಕೊಂದು ತಿಂದುಬಿಡುತ್ತಿತ್ತು. ವಾದಿರಾಜರು ಸಂಚಾರ ಮಾಡುತ್ತ ಅದೇ ಊರಿಗೆ ಬರುವಾಗ, ಆ ಭೂತ ವಾದಿರಾಜರಿಗೂ ಅದೇ ಪ್ರಶ್ನೆ ಮಾಡುತ್ತದೆ. ಅದಕ್ಕೆ ವಾದಿರಾಜರು ಉತ್ತರ ಕೊಡುತ್ತಾರೆ. ‘ಆಷಾಢ ಮಾಸ, ಕಾರ್ತಿಕ ಮಾಸ, ಮಾಘ ಮಾಸ ಹಾಗೂ ವೈಶಾಖ ಮಾಸ ಈ ನಾಲ್ಕು ಮಾಸಗಳಲ್ಲಿ ಯಾರು ಪವಿತ್ರವಾದ ನದಿಗಳಲ್ಲಿ ತೀರ್ಥಸ್ನಾನ ಮಾಡುವುದಿಲ್ಲವೋ ಅವರು ನಿನ್ನಂತೆಯೇ ಭೂತಜನ್ಮ ಪಡೆಯುತ್ತಾರೆ’ ಎಂದಾಗ ತಕ್ಷಣ ಆ ಭೂತ ವಾದಿರಾಜರ ಪಾದಕಮಲಗಳಿಗೆ ಎರಗಿ ತೀರ್ಥಸ್ನಾನದ ಫಲದಿಂದ ಉತ್ತಮವಾದ ಪದವಿಯನ್ನು ಪಡೆಯುತ್ತದೆ.
ಆಷಾಢ, ಕಾರ್ತಿಕ, ಮಾಘ, ವೈಶಾಖ ಮಾಸಗಳಲ್ಲಿ ತೀರ್ಥಸ್ನಾನ ಮಾಡಿದರೆ, ಕಡೆಪಕ್ಷ ಅಂತ್ಯಪುಷ್ಕರಿಣಿ ಸ್ನಾನ ಎಂದರೆ ಕಾರ್ತಿಕ ಮಾಸದ ಪೌರ್ಣಮಿಗೆ ಮುಂಚೆ ಬರುವ ತ್ರಯೋದಶಿ, ಚತುರ್ದಶಿ ಹಾಗೂ ಪೂರ್ಣಿಮೆ ಪರ್ವಕಾಲಗಳಲ್ಲಿ ಬ್ರಾಹ್ಮಿಮುಹೂರ್ತದಲ್ಲಿ ಮಹಾನದಿಗಳ ಸ್ನಾನ ಮಾಡುವುದರಿಂದ ಪೈಶಾಚಿಕ ಜನ್ಮ ಬರಲು ಸಾಧ್ಯವೇ ಇಲ್ಲ ಹಾಗೂ ಬಂದಿರುವ ಪೈಶಾಚಿಕ ಪ್ರವೃತ್ತಿ ನಿವಾರಣೆಯಾಗಿ ಸದ್ಗತಿ ಪ್ರಾಪ್ತಿಯಾಗುತ್ತದೆ. ಅದರಲ್ಲೂ, ಕಾರ್ತಿಕ ಮಾಸದಲ್ಲಿ ಕಾವೇರಿ ನದಿಯಲ್ಲಿ ವಿಶೇಷವಾಗಿ ಗಂಗಾ ಸನ್ನಿಧಾನ ಇರುವುದರಿಂದ ಕಾವೇರಿ ಸ್ನಾನಕ್ಕೆ ವಿಶೇಷ ಸ್ಥಾನವಿದೆ. ಕಾರ್ತಿಕ ಅಂತ್ಯ ಪುಷ್ಕರಿಣಿ ಸ್ನಾನದಿಂದ, ದಾನ, ಧರ್ಮ ಜಪ-ತಪ ಅನುಷ್ಠಾನ ಮಾಡುವುದರಿಂದ ವರ್ಷಗಳಿಂದ ಸಂಚಿತವಾದ ಪಾಪಗಳು ನಿವೃತ್ತಿಯಾಗುತ್ತವೆ.
ಇನ್ನೊಂದು ವಿಶೇಷವೆಂದರೆ ಆಷಾಢ, ಕಾರ್ತಿಕ, ಮಾಘ, ವೈಶಾಖ ಪೌರ್ಣಮಿಗಳು ವ್ಯಾಸಪೌರ್ಣಮಿಗಳೆಂದು, ವೇದವ್ಯಾಸದೇವರು ವೇದಗಳನ್ನು ವಿಭಾಗ ಮಾಡಿಕೊಟ್ಟ ವಿಶೇಷ ದಿನಗಳೆಂದು, ಅಂದು ಮಹಾನದಿಗಳ ಸ್ನಾನದಿಂದ ವೇದ, ಉಪನಿಷತ್, ಶಾಸ್ತ್ರ ಪ್ರವಚನ, ಪಾರಾಯಣ, ಜಪ, ತಪ, ಹೋಮ, ವ್ರತಗಳನ್ನು ಆಚರಿಸುವುದರಿಂದ ಸಿಗುವ ವಿಶೇಷ ಫಲಗಳನ್ನು ತಿಳಿಸಿ; ಜ್ಞಾನ, ಭಕ್ತಿ, ವೈರಾಗ್ಯಕ್ಕೆ ಕಾರಣವಾಗುತ್ತದೆ ಎಂಬುವುದು ಹಿಂದೂ ಸಂಸ್ಕೃತಿಯಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ನಂಬಿಕೆ. ಹಿಂದೂ ಸಂಸ್ಕೃತಿಯನ್ನು ಪಾಲಿಸುವ ಸರ್ವ ವರ್ಣದವರೂ, ‘ಆ ಕಾ ಮಾ ವೈ’ ಈ ನಾಲ್ಕು ತಿಂಗಳುಗಳಲ್ಲಿ, ಕೊನೆಪಕ್ಷ ಅಂತ್ಯ ಪುಷ್ಕರಿಣಿ ಕಾರ್ತಿಕ ಪೌರ್ಣಮಿಯ ಪರ್ವಕಾಲದಲ್ಲಿ ಮಹಾನದಿಯಲ್ಲಿ ಸಂಕಲ್ಪ ಸ್ನಾನ, ಧ್ಯಾನ ಹಾಗೂ ಸತ್ಪಾತ್ರರಿಗೆ ದಾನ ಮಾಡಿದರೆ, ಆರೋಗ್ಯ, ಜ್ಞಾನ ವೃದ್ಧಿಯಾಗಿ ನದ್ಯಂತರ್ಗತನಾದ ಭಗವಂತನಾದ ಆ ಮಹಾವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.