ಕಾರ್ಯವಾಸಿ ಕತ್ತೆ ಕಾಲ್ ಕಟ್ಟು
ರಜಾ ದಿನ ವಿಶ್ವನ ಮನೇಲಿ ಕುಳಿತು ಹರಟೆ ಹೊಡೆಯುತ್ತಿದ್ದೆ, ಎಂದಿನಂತೆ ವಿಶಾಲು ಬಳುಕಾಡುತ್ತ ಬಂದು ಕಾಫಿ ಕೊಟ್ಟಳು, ನಾನು ಕಾಫಿ ರುಚಿ ನೋಡಿದೆ.
“ವಾಹ್ ! ಕಾಫಿ ಗಟ್ಟಿಯಾಗಿದ್ಯಲ್ಲ ! ಏನ್ ಇದರ ಗುಟ್ಟು ?” ಎಂದು ಕೇಳಿದೆ. ವಿಶಾಲು ಅಭಿಮಾನದಿಂದ ಹೇಳಿದಳು.
“ಯಾವಾಗ್ಲೂ ಹಸುವಿನ ಹಾಲಿನಲ್ಲಿ ಕಾಫಿ ಮಾಡ್ತಾ ಇದ್ದೆ, ಇವತ್ತು ಎಮ್ಮೆ ಹಾಲಿನಲ್ಲಿ ಮಾಡಿದ್ದೀನಿ”
“ಅದ್ಯಾಕೆ ಎಮ್ಮೆ ಹಾಲು ಹಾಕಿದ್ದೀರ?”
“ನಮ್ಮ ಯಜಮಾನರಿಗೆ ಎಮ್ಮೆ ಅಂದ್ರೆ ತುಂಬಾ ಇಷ್ಟ, ‘ಎಮ್ಮೆ ನಿನಗೆ ಸಾಟಿ ಇಲ್ಲ’ ಅಂತ ಬಾತ್‌ರೂಮ್‌ನಲ್ಲಿ ತಮ್ಮ ಬಗ್ಗೇನೇ ಹಾಡ್ಕೋತರ‍್ತಾರೆ” ಎಂದಳು. ಅದೇ ವೇಳೆಗೆ ಹೊಸಪೇಟೆಯಿಂದ ವಿಶ್ವನ ದೂರದ ನೆಂಟನೂ ಬಂಟನೂ ಆದ ಸುರೇಶ್ ಎತ್ತಂಗಡಿ ಬಂದಿದ್ದ. ಅವನಿಗೆ ಸುಮಾರು ೩೦ ವರ್ಷ, ಮುಖದಲ್ಲಿ ನೋವಿತ್ತು, ಕೈನಲ್ಲಿ ಬ್ಯಾಗಿತ್ತು.
“ಬಾರೋ ಎತ್ತಂಗಡಿ, ಯಾಕ್ ಸಪ್ಗಿದ್ದೀಯ? ಎಂದು ವಿಶ್ವ ಕೇಳಿದ.
“ಏನ್ ಇದು, ಎತ್ತಂಗಡಿ ಅಂತ ಹೆಸರು ಯಾಕೆ ಇದೆ” ಅಂತ ನಾನು ಕೇಳಿದೆ.
“ನಮ್ಮಪ್ಪ ಯಾವುದೋ ಸರ್ಕಾರಿ ಕೆಲ್ಸದಲ್ಲಿದ್ದ, ಲಂಚ ತಗೊಳ್ತಾ ರ‍್ಲಿಲ್ಲ, ಹೀಗಾಗಿ ವರ್ಷ ವರ್ಷವೂ ಬೇರೆ ಕಡೆ ಟ್ರಾö್ಯನ್ಸ್ಫರ್ ಆಗಿ ಎತ್ತಂಗಡಿ ಆಗ್ತಾ ಇತ್ತು. ಕಡೆಗೆ ಅದು ಫ್ಯಾಮಿಲಿ ನೇಮ್ ಆಯ್ತು” ಎಂದ ಸುರೇಶ್ ಎತ್ತಂಗಡಿ.
“ಎಲ್ಲರ ಥರ ನಾವೂ ಇರಬೇಕು, ರೋಮ್‌ನಲ್ಲಿ ಇರೋವಾಗ ರೋಮನ್ ಥರ ಇರಬೇಕು, ಲಂಚ ತಗೊಳೋರ ಮಧ್ಯೆ ಕೈಚಾಚಿ ಕೂತಿದ್ರೆ ಎತ್ತಂಗಡಿ ಆಗ್ತಿರಲಿಲ್ಲ” ಎಂದಳು ವಿಶಾಲು. ನನಗೆ ಆ ಮಾತು ಸರಿ ಎನಿಸಲಿಲ್ಲ.
‘ಬತ್ತಲೆಯವರ ಸಂಘದಲ್ಲಿ ಬಟ್ಟೆ ಹಾಕಿಕೊಂಡಿರೋವನ್ನ ಗೇಲಿ ಮಾಡ್ತಾರೆ’ ಎಂಬ ಗಾದೆ ನೆನಪಾಯಿತು.
“ವಿಷಯಕ್ಕೆ ಬರೋಣ, ಹೇಳೋ ಸುರೇಶ ನಿನಗೇನು ತೊಂದ್ರೆ ?” ಎಂದು ವಿಶ್ವ ಕೇಳಿದ.
“ಕತ್ತೇನ ನಂಬಿ ಮೋಸ ಹೋಗಿಬಿಟ್ಟೆ ಅಂಕಲ್” ಎಂದಾಗ ಎಲ್ಲರಿಗೂ ಆಶ್ಚರ್ಯವಾಯ್ತು.
“ಕುದುರೇನ ನಂಬಿ ಮೋಸ ಹೋಗಿರುವವರನ್ನ ನೋಡಿದ್ದೀನಿ, ಕತ್ತೇನ ನಂಬಿ ಹೇಗೋ ಮೋಸ ಹೋಗ್ತೀಯಾ ?” ಎಂದು ವಿಶ್ವ ಕೇಳಿದ.
“ನಮ್ಮ ವಿಜಯನಗರ ಜಿಲ್ಲೇಲಿ ಒಂದು ‘ಡಾಂಕಿ ಮಿಲ್ಕ್ ಕಂಪೆನಿ’ ಶುರುವಾಗಿತ್ತು. ಅವರು ಒಂದು ಲೀಟರ್ ಕತ್ತೆ ಹಾಲಿಗೆ ೨,೩೦೦/- ಕೊಟ್ಟು ಕೊಳ್ತಾ ಇದ್ರು, ಯಾರ್ ಕೊಟ್ರೂ ಹಾಲು ತಗೊಳೋರು.”
“ಲೀಟರ್‌ಗೆ ೨,೩೦೦/- ರೂಪಾಯಾ ?”
“ಪ್ಯೂರ್ ಕತ್ತೆ ಹಾಲು ಆಗಿರಬೇಕು”
“ಪ್ಯೂರ್ ಕತ್ತೆ ಅಂದರೆ ಕತ್ತೆಗೆ ಸ್ನಾನ ಮಾಡಿಸಿ ಕೆಚ್ಚಲಿಗೆ ಎಣ್ಣೆ ಅಪ್ಲೆöÊ ಮಾಡಿ ಮಾಲೀಶ್ ಮಾಡಿ ಹಾಲು ಕರೀಬೇಕಾ ?” ಎಂದು ವಿಶಾಲು ಜೋಕ್ ಎಸೆದಳು, ಸುರೇಶ್ ನಗುವ ಸ್ಥಿತಿಯಲ್ಲಿ ಇರಲಿಲ್ಲ.
“ಕತ್ತೆ ಹಾಲಲ್ಲಿ ಪೌಷ್ಠಿಕಾಂಶಗಳು ಜಾಸ್ತಿ ಇರುತ್ತೆ, ಒಣಕೆಮ್ಮು, ಸಂಧಿವಾತ, ಮಂಡಿನೋವು ಕಡಿಮೆ ಆಗುತ್ತೆ” ಎಂದು ವಿಶ್ವ ಕತ್ತೆಯ ಪರವಾಗಿ ಓಟ್ ಮಾಡಿದ.
“ಕತ್ತೆ ಹೇಳಿದ್ದಾ” ಎಂದೆ.
“ಅಲ್ಲ, ನಾನೇ ಹೇಳ್ತಿದ್ದೀನಿ” ಎಂದ ವಿಶ್ವ.
“ಆ ಡಾಂಕಿ ಮಿಲ್ಕ್ ಕಂಪೆನಿಯವರು ನಮ್ಮಂಥ ನಿರುದ್ಯೋಗಿ ಯುವಕರ ಬದುಕಿಗೆ ಹೊಸ ದಾರಿ ತೋರಿಸಿದರು, ಒಂದು ಯೂನಿಟ್ ಅಂದ್ರೆ ಮೂರು ಕತ್ತೆಗಳು, ನೀವು ಡಾಂಕಿ ಯೂನಿಟ್‌ಗಳನ್ನು ತಗೊಳ್ಳಿ ೩ ಲಕ್ಷ ರೂಪಾಯಿ ಆಗುತ್ತೆ, ದಿನಕ್ಕೆ ಒಟ್ಟು ೪ ಲೀಟರ್ ಹಾಲು ಸಿಗುತ್ತೆ, ಒಂದು ಲೀಟರ್‌ಗೆ ೨,೩೦೦/-ಉ ಕೊಡ್ತೀವಿ, ಸುಮಾರು ೧೦ ಸಾವಿರ ರೂಪಾಯಿ ಆದಾಯ ನಿತ್ಯ ಬರುತ್ತೆ, ಅಂತ ಅವರು ಗಾಳ ಹಾಕಿದ್ರು” ಅಂದ ಸುರೇಶ.
“ಭೇಷ್ ದಿನಕ್ಕೆ ೧೦ ಸಾವಿರ ಅಂದ್ರೆ ತಿಂಗಳಿಗೆ ಮೂರು ಲಕ್ಷ ಆಯ್ತು, ಟ್ಯಾಕ್ಸಿ ಓಡಿಸೋ ಬದಲು ಕತ್ತೇನ ಸಾಕಬಹುದು” ಎಂದೆ.
“ಮೂರು ಲಕ್ಷ ಕೊಟ್ಟು ಮೂರು ಕತ್ತೆ ಖರೀದಿ ಮಾಡಿದ್ವಿ. ಪ್ರಾರಂಭದಲ್ಲಿ ಕಂಪೆನಿಗೆ ಹಾಲು ಹಾಕಿದ ತಕ್ಷಣ ದುಡ್ಡು ಕೊಡೋರು, ಆಮೇಲೆ ತಿಂಗಳಿಗೊಂದು ಸಲ ೩ ಲಕ್ಷ ಕೊಡ್ತೀವಿ ಅಂದ್ರು” ಎಂದು ಸುರೇಶ ಹೇಳಿದಾಗ ವಿಶಾಲುಗೆ ಸೀರೆ ಚೀಟಿ ನೆನಪಾಯ್ತು.
“ಸೀರೆ ಚೀಟಿ ನಡೆಸೋನು ಹಾಗೇ ಮಾಡೋದು, ಮೊದಮೊದಲು ಚೀಟಿ ಬಂದವರಿಗೆ ಮುಂದಿನ ಕಂತು ಕಟ್ಟೋಷ್ಟಿಲ್ಲ ಅಂತಾನೆ. ನೂರು ಜನ ಚೀಟಿಗೆ ಸರ‍್ತಾರೆ, ಹನ್ನೆರಡು ತಿಂಗಳು ಸೀರೆ ಕೊಟ್ಟು ಉಳಿದವರ ದುಡ್ಡು ಎತ್ಕೊಂಡು ನಾಪತ್ತೆ ಆಗ್ತಾನೆ” ಎಂದಳು.
“ಇದು ಅದೇ ರೀತಿ ಕೇಸು ಆಂಟಿ, ಸುಮಾರು ೩೦೦ ಜನ ಮೂರು ಮೂರು ಲಕ್ಷ ಕೊಟ್ಟು ಕತ್ತೆಗಳ್ನ ಖರೀದಿ ಮಾಡಿದರು, ಅವನು ನಮ್ಮ ವಿಜಯನಗರ ಜಿಲ್ಲೇಲೇ ೧೩ ಕೋಟಿ ಹಣ ವಂಚನೆ ಮಾಡಿದ್ದಾನೆ. ಪೇರ‍್ನಲೆಲ್ಲ ಬಂದಿದೆ ನೋಡಿ” ಎಂದು ಪೇಪರ್ ಕಟ್ಟಿಂಗ್ಸ್ ತೋರಿಸಿದ ಸುರೇಶ. ವಿಶಾಲುಗೆ ಆಶ್ಚರ್ಯ ಆಯ್ತು,
“ಏನ್ರೀ ಇದು, ನಿಷ್ಠಾವಂತ ಕತ್ತೇನ್ನೂ ಬಳಸಿಕೊಂಡು ಮೋಸ ಮಾಡ್ತಾ ಇದ್ದಾರಲ್ಲ” ಎಂದಳು.
“ಮೋಸ ಹೋದವರು ಕತ್ತೆಗಳು ಕಣೇ” ಎಂದ ವಿಶ್ವ.
“ರೈತರಿಂದ, ನಮ್ಮಂಥ ಬಡ ನಿರುದ್ಯೋಗಿ ಯುವಕರಿಂದ ಮೂರು ಲಕ್ಷ ತಗೊಂಡು ಮೂರು ಕತ್ತೆಗಳು ಕೊಟ್ರು, ಕತ್ತೆ ಹಾಲಿಗೆ ಸ್ವಲ್ಪ ಎಮ್ಮೆ ಹಾಲು ಸೇರಿಸಿ ಬಿಟ್ರೆ ೫ ಲೀಟರ್ ಮಾಡಬಹುದು, ಸಖತ್ ದುಡ್ಡು ಮಾಡಿಕೊಳ್ಳಬಹುದು ಅಂತ ನಾವು ಆಸೆ ಪಟ್ವಿ” ಎಂದು ಸುರೇಶ ಸತ್ಯ ಹೇಳಿದ.
“ಅವರೇ ಫ್ರಾಡು ಅಂದ್ರೆ ಅವರ ಹತ್ರನೇ ಮೋಸ ಮಾಡೋಕ್ ನೀವು ಹೊರಟ್ರಿ, ಮೋಸಕ್ಕೆ ಡಬಲ್ ಮೋಸ !”
“ತಿಂಗಳಾದ ಮೇಲೆ ಮಿಲ್ಕ್ ಕಂಪೆನೀನೇ ನಾಪತ್ತೆ, ನಾವು ಯಾರಿಗೆ ಹಾಲು ಮಾರೋದು, ಕತ್ತೆ ಹಾಲು ಬೇಕಾ ಅಂದ್ರೆ ಯಾವ ಕತ್ತೇನೂ ತಗೊಳೋದಿಲ್ಲ, ಆದಾಯ ಇಲ್ಲ, ಖರ್ಚು ಜಾಸ್ತಿ ಆಗ್ತಿದೆ”.
“ಪೋಲೀಸ್ ಕಂಪ್ಲೆöÊAಟ್ ಕೊಡು” ಎಂದ ವಿಶ್ವ.
“ಪೋಲೀಸ್ ಕಂಪ್ಲೆöÊAಟ್ ಕೊಟ್ಟಿದ್ದಾಗಿದೆ, ಆದ್ರೆ ಪೋಲೀಸರು ಹೇಳ್ತಾರೆ ಅನೇಕ ಜಿಲ್ಲೆಗಳಲ್ಲಿ ಈ ಕತ್ತೆ ಮೋಸದ ಜಾಲ ಹರಡಿದೆ, ಬರೀ ಮುನ್ನೂರು ಜನ ಅಲ್ಲ ಸಾವಿರಾರು ಜನಕ್ಕೆ ಅವನು ಟೋಪಿ ಹಾಕಿದ್ದಾನೆ, ಸುಮಾರು ೧೦೦ ಕೋಟಿ ಹಣ ವಂಚನೆ ಆಗಿದೆ, ಈ ಕೇಸನ್ನು ಸಿ.ಬಿ.ಐ.ಗೆ ವಹಿಸಬಹುದು, ಅಲ್ಲಿವರೆಗೂ ಕತ್ತೆಗಳ್ನ ಚೆನ್ನಾಗಿ ನೋಡಿಕೊಂಡು ಅದರ ಹಾಲನ್ನು ನಿಮ್ಮ ಮನೆಯವರೆಲ್ಲ ಕುಡೀರಿ ಅಂದ್ರು” ಎಂದ ಸುರೇಶ.
“ಈಗೇನು ಮಾಡ್ತೀಯಾ ಕತ್ತೆಗಳ್ನ ?” ಎಂದು ವಿಶಾಲು ಕೇಳಿದಳು.
“ಅದೇ ಆಂಟಿ, ಯಾರಿಗಾದ್ರೂ ಈ ಕತ್ತೆಗಳನ್ನ ಮಾರಿಬಿಡಬೇಕು, ಅರ್ಧ ಬೆಲೆಗೆ ನಿಮಗೆ ಒಂದು ಕತ್ತೆ ಮರ‍್ಲಾ !” ಎಂದು ಕಳಕಳಿಯಿಂದ ಕೇಳಿದ ಸುರೇಶ.
“ಖಂಡಿತ ಬೇಡ, ಈಗಾಗಲೇ ಒಂದು ನಮ್ಮ ಮನೇಲಿ ಇದ್ಯಲ್ಲ” ಎಂದು ವಿಶ್ವನ ಕಡೆ ತೋರಿಸಿದಾಗ ನಾನು ನಕ್ಕೆ, ವಿಶ್ವ ಹಲ್ಲು ಮಸೆದ.