ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಅರ್ಚಕ ವೇಷಧಾರಿ ಪೊಲೀಸರು
ಲಖನೌ: ವಾರಾಣಸಿಯ ಕಾಶಿ ವಿಶ್ವನಾಥ ದೇವರ ದರ್ಶನಕ್ಕೆ ಭಕ್ತರನ್ನು ನಿಯಂತ್ರಿಸುವುದು ಈಗ ದೇವಾಲಯದ ಭದ್ರತೆಗೆ ನಿಯೋಜಿಸಿದ ಪೊಲೀಸರಿಗೆ ಬಹಳ ಸಮಸ್ಯೆಯಾಗಿದೆ. ಹೀಗಾಗಿ ಈ ದೇವಸ್ಥಾನದಲ್ಲಿರುವ ಪೊಲೀಸರೂ ಅರ್ಚಕರಂತೆ ವೇಷ ಧರಿಸುತ್ತಾರೆ. ಭಕ್ತರು ಅರ್ಚಕರ ಮಾತನ್ನು ಪಾಲಿಸುವ ಕಾರಣ ವಾರಾಣಸಿ ಪೊಲೀಸ್ ಕಮಿಷನರ್ ಮೋಹಿತ್ ಅಗರ್‌ವಾಲ್ ಇಂತಹ ವಿಶಿಷ್ಟ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಅರ್ಚಕ ವೇಷಧಾರಿ ಪೊಲೀಸರು ಕೊರಳಿನಲ್ಲಿ ರುದ್ರಾಕ್ಷಿ ಮಾಲೆ, ಹಣೆಯಲ್ಲಿ ತ್ರಿಪುಂಡ ಭಸ್ಮ ಹಾಗೂ ಕೆಂಪುಬಣ್ಣದ ಉಡುಗೆತೊಡುಗೆಗಳನ್ನು ಧರಿಸುತ್ತಾರೆ. ಈ ಪೊಲೀಸರು ಯಾವ ರೀತಿಯಲ್ಲಿ ವಿಶ್ವನಾಥನ ದರ್ಶನ ಮಾಡಬೇಕೆಂಬುದರ ಕುರಿತು ಭಕ್ತರಿಗೆ ಮಾರ್ಗದರ್ಶನ ನೀಡುತ್ತಾರೆ. ಆದಾಗ್ಯೂ ದೇವಸ್ಥಾನದ ಎಲ್ಲಾ ಪೊಲೀಸರು ಅರ್ಚಕರ ವೇಷದಲ್ಲಿರುವುದಿಲ್ಲ. ಕೆಲವರು ನಿಯಮಿತ ಸಮವಸ್ತ್ರದಲ್ಲಿರುತ್ತಾರೆ. ಮಹಿಳಾ ಪೊಲೀಸರು ದರ್ಶನ ಪಡೆದ ಮಹಿಳೆಯರ ದಟ್ಟಣೆ ಕಡಿಮೆ ಮಾಡುವ ಕ್ರಮ ಕೈಗೊಳ್ಳುತ್ತಾರೆ. ದೇವಸ್ಥಾನದ ಕರ್ತವ್ಯ ಪೊಲೀಸ್ ಠಾಣೆಗಿಂತ ವಿಭಿನ್ನವಾಗಿರುವುದರಿಂದ ಅರ್ಚಕರ ವೇಷ ಧರಿಸುವ ಪೊಲೀಸರಿಗೆ ಮೂರು ದಿನಗಳ ತರಬೇತಿ ನೀಡಲಾಗುತ್ತದೆ ಎಂದು ಮೋಹಿತ್ ಅಗರ್‌ವಾಲ್ ತಿಳಿಸಿದ್ದಾರೆ.