For the best experience, open
https://m.samyuktakarnataka.in
on your mobile browser.

ಕಿಲಾರ ಬದಲು ಪಿಲಾರ : ಅಧಿಕಾರಿಗಳ ಎಡವಟ್ಟು-ಪ್ರಶಸ್ತಿ ಹೆಸರಲ್ಲಿ  ಘೋರ ಅವಮಾನ

11:09 PM Nov 01, 2024 IST | Samyukta Karnataka
ಕಿಲಾರ ಬದಲು ಪಿಲಾರ   ಅಧಿಕಾರಿಗಳ ಎಡವಟ್ಟು ಪ್ರಶಸ್ತಿ ಹೆಸರಲ್ಲಿ nbsp  ಘೋರ ಅವಮಾನ

ಮಂಗಳೂರು: ಅತ್ತ ಜಿಲ್ಲಾ ಪ್ರಶಸ್ತಿ ಇಲ್ಲ, ಇತ್ತ ರಾಜ್ಯ ಪ್ರಶಸ್ತಿ ಇಲ್ಲ ಎಂಬಂತಾಗಿದೆ ಇವರ ಸ್ಥಿತಿ. ಮಂಗಳೂರಿನ ಬಾಬು ಪಿಲಾರ ಅವರ ದುರಾದೃಷ್ಟ ಎನ್ನಬಹುದು.

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯ ಪ್ರಶಸ್ತಿಗೆ ಬಾಬು ಪಿಲಾರ ಎಂಬುವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಅಕ್ಟೋಬರ್ 30ರ ರಾತ್ರಿ ಬೆಂಗಳೂರಿನಿಂದ ಬಾಬು ಅವರಿಗೆ ಫೋನ್ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೀಲಮ್ಮ ಎಂಬುವರು ನಿಮಗೆ ಸುವರ್ಣ ಕರ್ನಾಟಕ 50 ಪ್ರಯುಕ್ತ ಸುವರ್ಣ ಸಂಭ್ರಮ ರಾಜ್ಯ ಪ್ರಶಸ್ತಿ ಘೋಷಣೆಯಾಗಿದೆ, ನೀವು ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ತುರ್ತಾಗಿ ಆಗಮಿಸಬೇಕು ಎಂದು ಆಹ್ವಾನ ನೀಡಿದ್ದರು. ಆಗ ಬಾಬು ಅವರು ಸರಿಯಾಗಿ ನೋಡಿಕೊಳ್ಳಿ ನನ್ನದೇ ಹೆಸರು ಇದೆಯಲ್ಲವೇ ? ಎಂದು ಅಧಿಕಾರಿಗೆ ಸ್ಪಷ್ಟನೆ ಕೇಳಿದ್ದರು. ಆಗ ಅಧಿಕಾರಿ ಹೌದು ನಿಮ್ಮದೇ ಹೆಸರು ಎಂದು ಮರು ಉತ್ತರ ನೀಡಿದ್ದರು. ಅದರಂತೆ ಸುಮಾರು 55 ವರ್ಷದ ಬಾಬು ಪಿಲಾರ ಬೆಂಗಳೂರಿಗೆ ಹೋಗಿ ಪ್ರಶಸ್ತಿ ಪಡೆಯುವ ಖುಷಿಯಲ್ಲಿ ತೆರಳಿದ್ದರು. ಕುಮಾರ ಕೃಪಾ ಸರಕಾರಿ ಅತಿಥಿ ಬಂಗಲೆಯಲ್ಲಿ ತಂಗಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ಆದರೆ ಮಧ್ಯಾಹ್ನದ ಹೊತ್ತಿಗೆ ಬಾಬು ಪಿಲಾರ ಅವರಿಗೆ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರ ಪಿಎ ಕಿರಣ್ ಫೋನ್ ಮಾಡಿ "ಬಾಬು ಕಿಲಾರ' ಅಂತ ಬೇರೊಬ್ಬರು ಇದ್ದಾರೆ. ಅವರು ಮಂಡ್ಯ ಜಿಲ್ಲೆಯ ಕಿಲಾರದವರು. ಅಮೆರಿಕದಲ್ಲಿ ನೆಲೆಸಿದ್ದು ನಿಮ್ಮ ಹೆಸರು ತಪ್ಪಾಗಿ ಬಂದಿದೆ ಎಂದು ಉತ್ತರ ನೀಡಿದ್ದಾರೆ.

ಇದರಿಂದ ಮಂಗಳೂರು 'ಬಾಬು ಪಿಲಾರ' ಅವರಿಗೆ ತೀವ್ರ ನಿರಾಸೆಯಾಗಿದೆ. ಆಗ ಬಾಬು ಅವರು ನಾನೇನು ಪ್ರಶಸ್ತಿ ಕೇಳಿಕೊಂಡು ಬಂದಿದ್ದೇನೆಯೇ ಎಂದು ನೀಲಮ್ಮ ಅವರಿಗೆ ಫೋನ್ ಕರೆ ಮಾಡಿದಾಗ ನಾನು ಕಾರ್ಯಕ್ರಮದಲ್ಲಿ ಇದ್ದೇನೆ. ಏನೋ ತಪ್ಪಾಗಿದೆ ಎಂದು ಉತ್ತರಿಸಿದ್ದಾರೆ.

ಬಾಬು ಅವರು ಮಂಗಳೂರು ಹೊರವಲಯದ ತೊಕ್ಕೊಟ್ಟಿನಲ್ಲಿ ನಿಸ್ವಾರ್ಥವಾಗಿ ಸಾವಿರಾರು ಅನಾಥ ಮತ್ತು ಬಡವರ ಶವಗಳ ಅಂತ್ಯವಿಧಿ ನೆರವೇರಿಸುವ ಮೂಲಕ ತಮ್ಮಷ್ಟಕ್ಕೆ ಸಮಾಜ ಸೇವೆಯಲ್ಲಿ ತೊಡಗಿದ್ದರು. ಆದರೆ, ರಾಜ್ಯ ಸರಕಾರದ ಅಧಿಕಾರಿಗಳು ತಾವೇ ಮಾಡಿಕೊಂಡ ಗೊಂದಲದಲ್ಲಿ
ಬಾಬು ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಕರಾವಳಿಯ ಮತ್ತೊಬ್ಬ ಸಾಧಕರಿಗೆ ಘೋರ ಅವಮಾನ ಮಾಡಿದ್ದಾರೆ. ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಕುಂದಾಪುರದ ಪ್ರಾಚಾರ್ಯ ರಾಮಕೃಷ್ಣ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿತ್ತು. ನಂತರ
ಅವರು ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಬಂದ ಕಾಲೇಜು ವಿದ್ಯಾರ್ಥಿನಿಯರ ವಿರುದ್ದ ಕ್ರಮ ಜರುಗಿಸಿದ್ದು ಸರಕಾರದ ಗಮನಕ್ಕೆ ಬಂದ ತಕ್ಷಣ ಅವರಿಗೆ ಪ್ರಶಸ್ತಿ ನೀಡದೆ ವಾಪಸ್ ಕಳಿಸಿ ಅವಮಾನ ಮಾಡಿತ್ತು.

ಇಷ್ಟಕ್ಕೂ ಈಗ ಬಾಬು ಪಿಲಾರ ಅವರ ಮೊಬೈಲ್ ಸಂಖ್ಯೆ ಹಾಗೂ ಸಾಧನೆಗಳ ವಿವರವನ್ನು ಬೆಂಗಳೂರು ಅಧಿಕಾರಿಗಳಿಗೆ ಕೊಟ್ಟವರು ಯಾರು ? ಸ್ಥಳೀಯ ಶಾಸಕ, ಸ್ಪೀಕರ್ ಖಾದರ್ ಅವರ ಬೆಂಬಲಿಗರ ಕಡೆಯಿಂದ ಹೋಗಿದೆಯಾ ಎಂಬ ಚರ್ಚೆ ನಡೆದಿದೆ.