For the best experience, open
https://m.samyuktakarnataka.in
on your mobile browser.

ಕಿವಿಯಲ್ಲಿ ಹೇಳಿದ್ದೇನು..?

02:32 AM Jun 13, 2024 IST | Samyukta Karnataka
ಕಿವಿಯಲ್ಲಿ ಹೇಳಿದ್ದೇನು

ಡಾ. ತಿರ್ಮೂಲಿ ನನ್ನ ಕಿವಿಯಲ್ಲಿ ಹೇಳದೇ ಹೋಗಿದ್ದಿದ್ದರೆ, ಆ ಮಾತನ್ನು ನಾನು ಕಿವಿಯಲ್ಲಿ ಹಾಕಿಕೊಳ್ಳದೇ ಇದ್ದಿದ್ದರೆ ನಾನು ಇವತ್ತು ಎಲ್ಲೋ ಇರುತ್ತಿದ್ದೆ ಎಂದು ತಿಗಡೇಸಿ ಹಗಲೆಲ್ಲ ಹೇಳುತ್ತಿದ್ದಾನೆ. ಅವತ್ತು ತಲೆನೋವು ಎಂದು ಆತನ ಆಸ್ಪತ್ರೆಗೆ ಹೋಗಿದ್ದ ತಿಗಡೇಸಿಗೆ ತಿರ್ಮೂಲಿ ಅದ್ಯಾವುದೋ ಮಾತ್ರೆ ಕೊಟ್ಟು ಅಲ್ಲಿಯೇ ಇದ್ದ ಕಟ್ಟಿಗೆಯ ಬೆಂಚಿನ ಮೇಲೆ ಕೂಡಿಸಿದ್ದ. ಹತ್ತೇ ಹತ್ತು ನಿಮಿಷದಲ್ಲಿ ತಿಗಡೇಸಿ ಆರಾಮಾಗಿದ್ದ. ಕೂಡಲೇ ಆತನನ್ನು ಕರೆದು ಕಿವಿಯಲ್ಲಿ ಏನೋ ಹೇಳಿದ್ದೇ ತಡ ತಿಗಡೇಸಿಯ ಕಣ್ಣುಗಳು ಫಳಫಳ ಎಂದು ಹೊಳೆದವು. ಮರುದಿನವೇ ತಿಗಡೇಸಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ. ಶೇಷಮ್ಮನ ಹೋಟೆಲ್‌ನಲ್ಲಿ ಉದ್ರಿ ಹೇಳಿದ್ದ. ಹತ್ತಾರು ಟೆಂಪೋಗಳನ್ನು ಆಮೇಲೆ ದುಡ್ಡು ಕೊಡುತ್ತೇನೆ ಎಂದು ಹೇಳಿ ಬಾಡಿಗೆ ಪಡೆದಿದ್ದ. ಪೋಸ್ಟರ್, ಫ್ಲೆಕ್ಸ್ ಮಾಡುವವರ ಹತ್ತಿರ ಪೋಸ್ಟರ್ ಮಾಡಿಸಿ ಇನ್ನೂ ಹಣ ಕೊಟ್ಟಿರಲಿಲ್ಲ. ಅವರಿವರ ಹತ್ತಿರ ಕೈಗಡ ಇಸಿದುಕೊಂಡಿದ್ದ. ಕರಿಭೀಮವ್ವನ ಹೊಲ ಮಾರಿಸಿದ್ದ. ಬಡ್ಡಿ ಕೊಡುತ್ತೇನೆ ಎಂದು ಆ ದುಡ್ಡು ಇಸಿದುಕೊಂಡು ಎಲೆಕ್ಷನ್ನಿಗೆ ಖರ್ಚು ಮಾಡಿದ್ದ. ಬೀಗರ ಹತ್ತಿರ ಬಂಗಾರ ಮಾರಿಸಿ ಆ ದುಡ್ಡನ್ನೂ ಸಹ ಖರ್ಚು ಮಾಡಿದ್ದ. ದಲಾಲೆಂಕಣ್ಣನ ಹತ್ತಿರ ಹೋಗಿ ಹಣ ತೆಗೆದುಕೊಂಡು, ಎಲೆಕ್ಷನ್‌ನಲ್ಲಿ ನಾನೇ ಗೆಲ್ಲುತ್ತೇನೆ. ನಂತರ ವಾಪಸ್ ಮಾಡುತ್ತೇನೆ ಎಂದು ಹೇಳಿದ್ದ. ಎಲ್ಲರೂ ತಿಗಡೇಸಿ ಗೆದ್ದೇ ಗೆಲ್ಲುತ್ತಾನೆ ಎಂದು ಹಣಕೊಟ್ಟಿದ್ದರು. ಎಲ್ಲಿ ಬೇಕಲ್ಲಿ ಸಾಲ ಮಾಡಿದ ಹಣ, ಉದ್ರಿ ತಂದ ಬಾಟಲಿಗಳನ್ನು ಚುನಾವಣೆ ಹಿಂದಿನ ದಿನ ಎಲ್ಲರಿಗೂ ಹಂಚಿದ್ದ. ಮರುದಿನ ಓಟು ಹಾಕಲು ನಿಂತಿದ್ದಾಗ ಕೈ ಮುಗಿದಿದ್ದ. ಫಲಿತಾಂಶ ಬಂದಾಗ ಆತನಿಗೆ ಕೇವಲ ಆರು ಓಟು ಮಾತ್ರ ಬಂದಿದ್ದವು. ಒಂದೆರಡು ದಿನ ಸುಮ್ಮನಿದ್ದ ಸಾಲ ಕೊಟ್ಟವರು ಮರುದಿನದಿಂದ ತಿಗಡೇಸಿ ಮನೆಗೆ ಎಡತಾಕತೊಡಗಿದರು. ಹೋಟೆಲ್ ಶೇಷಮ್ಮ ಬ್ಯಾಂಡ್-ಬಾಜೆ ತೆಗೆದುಕೊಂಡು ಬಂದು ಮನೆಯ ಮುಂದೆ ಕುಳಿತಳು. ಎಲ್ಲರೂ ಹೀಗೆ ಗಂಟುಬಿದ್ದಾಗ ತಿಗಡೇಸಿ ಹಿತ್ತಿಲ ಬಾಗಿಲಿನಿಂದ ಸೀದಾ ಡಾ. ತಿರ್ಮೂಲಿ ಕಡೆಗೆ ಓಡಿಬಂದ. ಏದುಸಿರು ಬಿಡುತ್ತ ಕುಳಿತು… ಎಲ್ಲವನ್ನೂ ಹೇಳಿದ. ಕೊನೆಗೆ ತಿರ್ಮೂಲಿ ಮತ್ತೆ ಕಿವಿಯಲ್ಲಿ ಎನೋ ಹೇಳಿದ. ಧೈರ್ಯದಿಂದ ಬಂದ ತಿಗಡೇಸಿಯು… ಎಲ್ಲ ಸಾಲಗಾರರಿಗೆ… ನೀವೆಲ್ಲ ಪೇಪರ್ ನೋಡಿರಬಹುದು. ಟಿವಿಯಲ್ಲಿ ಕೇಳಿರಬಹುದು. ಮಾಡಿದ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಸೋದಿಮಾಮೋರು ನಿನ್ನೆ ಹೇಳಿಬಿಟ್ಟಿದ್ದಾರೆ. ಅಷ್ಟೂ ಮಿಕ್ಕಿ ನಿಮಗೆ ಬೇಕೇ ಬೇಕು ಅಂದರೆ ನೀವು ಅವರನ್ನು ಕೇಳಬಹುದು… ನಾಳೆಯಿಂದ ನನ್ನ ಮೀಟಿಂಗ್ ಶುರುವಾಗಲಿದೆ ನಾನು ಅಲ್ಲಿಗೆ ಹೋಗುತ್ತೇನೆ. ನೀವು ಗಂಟುಬೀಳಬೇಡಿ ಎಂದು ಅಲ್ಲಿಂದ ತಿಗಡೇಸಿ ನಿರ್ಗಮಿಸಿದ.