For the best experience, open
https://m.samyuktakarnataka.in
on your mobile browser.

ಕಿವುಡ.. ಕುರುಡನ ಮಾಡೆನ್ನ ತಂದೇ…

03:30 AM Sep 30, 2024 IST | Samyukta Karnataka
ಕಿವುಡ   ಕುರುಡನ ಮಾಡೆನ್ನ ತಂದೇ…

ನಾನು ಪ್ರತಿದಿನ ಬೆಳಗಾದರೆ ಇಂಥ ವೆಲ್ಲ ಕೇಳಿ… ನೋಡಿ ನನಗೆ ಸಾಕಾಗಿದೆ… ಕಿವುಡ-ಕುರುಡ ಎರಡನ್ನೂ ಮಾಡೆನ್ನ ತಂದೆ ಎಂದು ಬೇಡಿಕೊಳ್ಳುವ ಪ್ರಸಂಗ ಬಂದಿದೆ..ನಮ್ಮನ್ನು ಕಾಪಾಡುವವರಾರು ಗುರುವೇ… ಕಾಪಾಡು ವರಾರು? ಎಂದು ಒಂದೇ ಸಮನ ಭೋರಾಡಿ ಅಳುತ್ತ ಕಣ್ಣೀರು ಹಾಕುತ್ತ ಗಿಡದ ಕೆಳಗೆ ಕುಳಿತ ತಿಗಡೇಸಿಯನ್ನು ಯಾರೂ ಸಮಾಧಾನ ಮಾಡಲು ಬರುತ್ತಿಲ್ಲ. ಆ ಕಡೆಯಿಂದ ಹೋಗುವವರು ಆತನನ್ನು ನೋಡಿಕೊಂಡು ಹೋಗುತ್ತಾರೆಯೇ ವಿನಃ ಹತ್ತಿರ ಹೋಗಿ ಯಾರೂ ಮಾತನಾಡಿಸುತ್ತಿಲ್ಲ. ಯಾರೂ ಇತ್ತ ಸುಳಿಯುತ್ತಿಲ್ಲ ಎಂದು ತಿಗಡೇಸಿಯೂ ಎದ್ದು ಮನೆಕಡೆ ಹೋಗುತ್ತಿಲ್ಲ. ಒಂದು ನಮೂನಿ ಪ್ರತಿಭಟನೆ ಮಾಡುವವರು ಮಂತ್ರಿ ಬರುವವರೆಗೆ ಇಲ್ಲಿಂದ ಕದಲುವುದಿಲ್ಲ ಅನ್ನುತ್ತಾರಲ್ಲ ಹಾಗೆ ಕುಳಿತಿದ್ದಾನೆ. ಒಂದು ಸಲ ಕಣ್ಣೀರು ಹಾಕಿ ಒಂದು ಬೀಡಿ ಹಚ್ಚಿ ಹತ್ತು ನಿಮಿಷ ಬಿಟ್ಟು ಮತ್ತೆ ಇಂತಹ ಸುದ್ದಿ ಕೇಳಿ ಕೇಳಿ.. ನೋಡಿ ನೋಡಿ… ಕುರುಡ ಕಿವುಡನ ಮಾಡೋ ಎಂದು ಕೆಟ್ಟ ಧ್ವನಿಯಲ್ಲಿ ಮತ್ತೆ ಹಾಡುತ್ತಿದ್ದ. ತಿಗಡೇಸಿ ಧ್ವನಿಯು ಕಿಲೋಮೀಟರ್ ದೂರದ ಮನೆಯವರೆಗೆ ಕೇಳಿಸಿತು. ಗುಡ್ಡದ ಮೇಲೊಂದು ಮನೆಯ ಮಾಡಿ ಎಂದು ಹಾಡುತ್ತಲೇ ಅಲ್ಲಿ ದೊಡ್ಡ ಮನೆ ಕಟ್ಟಿಕೊಂಡ ಟಿಕ್‌ಟಾಕ್ ಟಾಕಪ್ಪನು ಅದ್ಯಾರೋ ಬೊಳ್ಳೊಳ್ಳಿ ತಿಂದು ಆಡ್ತಿದ್ದಂಗಿದಾನೆ ಎಂದು ಕಾಣ್ತದೆ. ನೊಡ್ರಲಾ ಅಂದ. ಈ ಹಾಡಿನ ದನಿ ಗುತ್ನಾಳ್ ಕೇಳಿಸಿಕೊಂಡು ಸೀದಾ ಗಿಡದ ಹತ್ತಿರ ಹೋಗಿ..ಯಾಕಪಾ ಮುಂಜಾನಿಂದ ಏನು ನಿನ್ನ ಗದ್ದಲ ಏನು ನಿನ್ನ ಹಾಡು? ಎಂದು ಕೇಳಿದಾಗ… ಗುತ್ನಾಳ್ ಸುಬ್ಬಣ್ಣಾ ಕೇಳು ಇಲ್ಲೆ… ಮುಂಜಾನೆ ಹೊರಗೆ ಬಂದ ಕೂಡಲೇ ಏನಾಯ್ತು… ಏನಂತೆ…? ಎಂದು ಕೇಳ್ತಾರೆ… ಮಧ್ಯಾಹ್ನ ಆದ ಕೂಡಲೇ ಕೋರ್ಟಿಂದು ಏನರ ಸುದ್ದಿ? ಅಂತಾರೆ… ಏನೋ ಒಂದು ಹೇಳಿ ಮನೆಗೆ ಹೋಗಿ ನ್ಯೂಸಾದರೂ ನೋಡೋಣ ಎಂದು ರಿಮೋಟ್‌ನಿಂದ ಬಟನ್ ಒತ್ತಿದ ಕೂಡಲೇ… ಯಪ್ಪಾ.. ಯಪ್ಪಾ… ಕಷ್ಟ… ಸಂಕಷ್ಟ… ಪಂಕಷ್ಟ… ಅವನಿಗೆ ಇವನು ಹಂಗಂದ… ಅವನಿಗೆ ಇವನು ಹಿಂಗಂದ… ಅಲ್ಲಿ ಸೋದಿ ಮಾಮಾ ಬಿಡಂಗಿಲ್ಲ ಅಂದ…. ಅಮ್ಮೋರು ಅವನೇನು ಮಾಡ್ತಾನೆ ತಲೀ ಅಂದರು… ಅವನು ತಿಂತಾನೆ ಎಂದು ಇಂವ ಅಂದರೆ…. ಅಂವ… ಅವನು ಹಂದಿ ಇದ್ದಂಗೆ ಅಂತಾರೆ.. ಇವುನ್ನೆಲ್ಲ ಕೇಳಿ.. ನೋಡಿ ನಾನ್ಯಾಕೆ ಕಿವುಡ ಕುರುಡನಾಗಬಾರದು ಎಂದು ಪ್ರಶ್ನೆ ಮಾಡಿದ. ಹಣೆಮೇಲೆ ಇಷ್ಟುದ್ದ ಕುಂಕುಮ ಹಚ್ಚಿಕೊಂಡಿದ್ದನ್ನು ನೀಟಾಗಿ ಉದ್ದ ಮಾಡಿಕೊಂಡ ಗುತ್ನಾಳ್ ಸುಬ್ಬಣ್ಣ… ಸೈಡ್ ಕಿಸೆಯಿಂದ ಸಣ್ಣ ಬಾಟಲಿ ತೆಗೆದು.. ನೋಡಪಾ.. ಇದನ್ನು ಈ ಕಣ್ಣಲ್ಲಿ ನಾಲ್ಕು… ಆ ಕಣ್ಣಲ್ಲಿ ನಾಲ್ಕು ಹನಿ ಹಕ್ಕೊಂಡುಬಿಡು… ಉಳಿದಿದ್ದನ್ನು ಎರಡೂ ಕಿವಿಯಲ್ಲಿ ಹಾಕ್ಕೋ… ತಂತಾನೇ ಕಣ್ಣು ಕಿವಿ ಬಂದ್ ಆಗ್ತವೆ. ಯಾಕೆಂದರೆ ಈಗ ನಾ ಹೇಳಿದ್ದು ಕೇಳಿದಿ ಅಂದರೆ ನೀನು ಈಗಿಂದೀಗಲೇ ಹಾಕ್ಕೊಳ್ಳುತ್ತಿ ಅನ್ನುತ್ತ ಗುತ್ನಾಳ್ ಸುಬ್ಬಣ್ಣ… ನಮ್ಮೋರು ಸಿಎಂ ಆಗಲು ಸಾವಿರ ಕೋಟಿ ತಗದಿಟ್ಟಾರೋ ಅಂದಾಗ…ತಿಗಡೇಸಿ ರಾಮ… ರಾಮಾ… ರಾಮ ರಾಮಾ ಎಂದು ಅಲ್ಲಿಂದ ಓಡಿಹೋದ.