For the best experience, open
https://m.samyuktakarnataka.in
on your mobile browser.

ಕುಂಟ್ ಸತ್ಯಪ್ಪನಿಗೆ ಕಾಲಿಲ್ಲ…

01:33 PM Mar 06, 2024 IST | Samyukta Karnataka
ಕುಂಟ್ ಸತ್ಯಪ್ಪನಿಗೆ ಕಾಲಿಲ್ಲ…

ಇರಪಣ್ಣ ಸಣ್ಣವನಿದ್ದಾಗ ಕಟ್ಟಿಗೆ ಕಡಿಯಲು ಹೋಗಿ ಅದರ ತುಂಡು ಕಣ್ಣಿಗೆ ಬಡಿದು ಎಡಗಣ್ಣು ಸ್ವಲ್ಪ ಸಮಸ್ಯೆಯಾಗಿತ್ತು. ಆವಾಗಿನಿಂದ ಆತನಿಗೆ ಕುಲ್ಡ್ ಇರುಪಣ್ಣ ಎಂದು ಕರೆಯುತ್ತಿದ್ದರು. ಆತ ಈವರೆಗೂ ನಿಜವೇ ಮಾತಾಡಿಲ್ಲ. ಬಾಯಿ ತೆಗೆದರೆ ಬರೀ ಸುಳ್ಳು ಹೇಳುತ್ತಾನೆ… ಕುಲ್ಡನಿಗೆ ಚಾಷ್ಠಿ ಹೆಚ್ಚಂತೆ ಎಂದು ಸತ್ಯವಾನ್ ಕುಂಟ್ ಸತ್ಯಪ್ಪ ಅಂದಿದ್ದ ಮಾತು ಇರಪಣ್ಣನ ಕಿವಿಗೆ ತಲುಪಿತ್ತು. ನಾನು ಸುಳ್ಳು ಹೇಳುವುದು ಈತನಿಗೆ ಹೇಗೆ ಗೊತ್ತಾಯಿತು? ಯಾವ ವಿಷಯದ ಬಗ್ಗೆ ಆತ ನನಗೆ ಸುಳ್ಳು ಹೇಳುತ್ತಿದ್ದಾನೆ ಎಂದು ಹೇಳಿದ್ದಾನೆ. ಈ ಎಲ್ಲ ಸಂಗತಿಗಳು ಇರುಪಣ್ಣನನ್ನು ಹೊರಗೆ ಬಾರದ ಪರಿಸ್ಥಿತಿಗೆ ತಂದಿತ್ತು. ಒಬ್ಬ ಸತ್ಯಪ್ಪ ಅಂದರೇನಾಯಿತು. ನಾನೂ ಆತನ ಬಗ್ಗೆ ಹೇಳಿಕೊಂಡು ಅಡ್ಡಾಡುತ್ತೇನೆ ಎಂದು ಶಪಥ ಮಾಡಿದ. ಅಂದಿನಿಂದ ಸತ್ಯವಾನ್ ಸತ್ಯಪ್ಪನ ಬಗ್ಗೆ ಹೇಳಿಕೊಂಡು ತಿರುಗುವುದಕ್ಕೆ ಶುರು ಮಾಡಿದ. ಮೊನ್ನೆ ಸತ್ಯಪ್ಪ ನನ್ನನ್ನು ಭೇಟಿಯಾಗಿ ನಾನು ಬುಲ್ಲೆಟ್ ಬೈಕ್ ತೆಗೆದುಕೊಳ್ಳಬೇಕು ನನಗೆ ಹಣದ ಸಹಾಯ ಮಾಡು ಅಂದ. ನಾನು ಅದ್ಹೇಗೆ ಸಾಧ್ಯ? ನಿನ್ನ ಕಾಲು ನೋಡಿದರೆ ಹೀಗೆ ಎಂದು ಹೇಳಿದಾಗ…. ಅಯ್ಯೋ ನಾನು ಬೆಳ್ಳಿ ಕಾಲು ಹಾಕಿಸಿಕೊಳ್ಳುತ್ತೇನೆ ಅಂದ ನೋಡಿ ಎಂದು ಹೇಳಿದ್ದಕ್ಕೆ ಕೆಲವರು ನಂಬಿದರು ಇನ್ನುಳಿದವರು ನಂಬಲಿಲ್ಲ. ಆದರೆ ಇಬ್ಬರ ಮಧ್ಯೆ ಮಾತ್ರ ಇಂತಹ ಜಂಜಾಟಗಳು ನಡೆಯುತ್ತಲೇ ಇದ್ದವು. ಹೀಗಿದ್ದಾಗ ಚುನಾವಣೆ ಘೋಷಣೆಯಾದವು. ಕುಲ್ಡ್ ಇರಪಣ್ಣ-ಕುಂಟ್ ಸತ್ಯಪ್ಪ ಇಬ್ಬರೂ ಒಂದೇ ವಾರ್ಡಿಗೆ ಬೇರೆ, ಬೇರೆ ಪಕ್ಷದಿಂದ ಸ್ಪರ್ಧಿಸಿದರು. ಎಲ್ಲಿಬೇಕಲ್ಲಿ ಭಾಷಣ ಆರಂಭಿಸುತ್ತಿದ್ದರು. ನೋಡಿ ಮಹಾಜನಗಳೇ… ಇವತ್ತಿನ ದಿನ ಪರಿಸ್ಥಿತಿ ನೀವು ತಿಳಿದುಕೊಂಡ ಹಾಗೆ ಇಲ್ಲ. ನನ್ನನ್ನು ಗೆಲ್ಲಿಸಿ ನೋಡಿ… ಮದ್ರಾಮಣ್ಣನಿಗಿಂತ ಹೆಚ್ಚು ಅಕ್ಕಿ ಕೊಡುತ್ತೇನೆ. ಸೋದಿ ಮಾಮಾ ೨೯ ರೂ. ಗೆ ಕೆಜಿ ಅಕ್ಕಿ ಕೊಟ್ಟರೆ ಅದರ ಅರ್ಧಕ್ಕೆ ನಾನು ಕೊಡುತ್ತೇನೆ. ನೀವು ನನ್ನನ್ನು ನಂಬಿ ಎಂದು ಹೇಳುತ್ತಿದ್ದ. ಈ ಕಡೆ ಕುಂಟ್ ಸತ್ಯಪ್ಪ… ಮಹಾ ಜನಗಳೇ ನಿಮಗೆ ಗೊತ್ತಿದೆ. ನಾನು ಎಂತಹ ಸತ್ಯವಾನ ಎಂದು. ಸತ್ಯವನ್ನು ಬಿಟ್ಟು ಬೇರೇನೂ ಹೇಳುವುದಿಲ್ಲ ಎಂದು ನಮ್ಮ ತಂದೆ ಸಾಯುವಾಗ ಭಾಷೆ ಕೊಟ್ಟಿದ್ದೆ. ಅಂದಿನಿಂದ ಇಂದಿನವರೆಗೆ ಸತ್ಯವನ್ನೇ ಹೇಳುತ್ತ ಬಂದಿದ್ದೇನೆ. ಹೀಗಾಗಿ ನೀವು ನನಗೇ ಮತ ಹಾಕಬೇಕು ಎಂದು ಜನರ ಹತ್ತಿರ ಹೋಗಿ ಕೈ ಮುಗಿದು ನಾಲ್ಕು ಅಕ್ಕಿಕಾಳು ಕೊಡುತ್ತಿದ್ದ. ಬಂದವರಿಗೆಲ್ಲ ಮಂಡಾಳೊಗ್ಗಣ್ಣಿ ಮಿರ್ಚಿ ಕೊಡು ನನ್ನ ಲೆಕ್ಕಕ್ಕೆ ಹಚ್ಚು ಎಂದು ಇರಪಣ್ಣ ಹೇಳಿದ್ದ. ಹೀಗಾಗಿ ಆ ಹೋಟೆಲ್‌ನಲ್ಲಿ ಭಯಂಕರ ರಷ್ ಇರುತ್ತಿತ್ತು. ಕುಂಟ್ ಸತ್ಯಪ್ಪನು ನಾಲ್ಕು ಜನರನ್ನು ಕರೆದುಕೊಂಡು ಅವರ ಹತ್ತಿರ ಬ್ಯಾಗ್ ಕೊಟ್ಟು ಅದರಲ್ಲಿ ಕಲ್ಲುಸಕ್ಕರೆ ಹಾಕಿ ಎಲ್ಲರಿಗೂ ನಾಲ್ಕು ತುಂಡು ಹಂಚಿಬಂದಿದ್ದ. ಚುನಾವಣೆ ಮುಗಿದು ಫಲಿತಾಂಶ ಬಂದಿತ್ತು. ಸತ್ಯಪ್ಪನಿಗೆ ತನ್ನದಷ್ಟೇ ಓಟು ಬಿದ್ದಿತ್ತು. ಜನರು ಮಾತ್ರ ಕುಂಟ್ ಸತ್ಯಪ್ಪನಿಗೆ ಕಾಲಿಲ್ಲ ಎಂದು ಮಾತನಾಡಿಕೊಳ್ಳತೊಡಗಿದರು. ಪಾಪ ಆತನಿಗೆ ಕಾಲೇ ಇಲ್ಲ ಎಂದು ಕುಲ್ಡ್ ಇರುಪಣ್ಣ ವ್ಯಂಗ್ಯವಾಡಿದ್ದ.