For the best experience, open
https://m.samyuktakarnataka.in
on your mobile browser.

ಕುಂದಾನಗರಿಯ ಗಲ್ಲಿ ಗಲ್ಲಿಯಲ್ಲೂ ರಾಮೋತ್ಸವ

10:01 PM Jan 22, 2024 IST | Samyukta Karnataka
ಕುಂದಾನಗರಿಯ ಗಲ್ಲಿ ಗಲ್ಲಿಯಲ್ಲೂ ರಾಮೋತ್ಸವ

ಕೀರ್ತಿಶೇಖರ, ಕಾಸರಗೋಡು
ಬೆಳಗಾವಿ:
ಕುಂದಾನಗರಿ ಬೆಳಗಾವಿಯಲ್ಲಿ ಸೋಮವಾರ ಗಲ್ಲಿ ಗಲ್ಲಿಯಲ್ಲೂ ಅದ್ಧೂರಿ ರಾಮೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರಪೂರ್ತಿ ಹಬ್ಬದ ವಾತಾವರಣ ನೆಲೆಗೊಂಡಿತು.
ಜಿಲ್ಲೆಯ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಮುಖ್ಯರಸ್ತೆಗಳಲ್ಲಿ ಅಯೋಧ್ಯಾ ಶ್ರೀ ರಾಮಮಂದಿರಕ್ಕೆ ಹೋಲುವ ಮಂದಿರದ ಪ್ರತಿಕೃತಿಗಳನ್ನು ಸ್ಥಾಪಿಸಿ ಶ್ರೀ ರಾಮದೇವರ ದೊಡ್ಡ ದೊಡ್ಡ ಕಟೌಟ್‌ಗಳನ್ನು ನಿಲ್ಲಿಸಿ ಸಡಗರದಿಂದ ಬೆಳಗಿನಿಂದಲೇ ಭಜನೆ, ಭಕ್ತಿಗೀತೆಗಳ ಮೂಲಕ ಭಾವಪರವಶರಾಗುವಂತಹ ನೋಟ ಕಾಣಸಿಗುತ್ತಿತ್ತು.
ರಾಮನಾಮ ಭಜಿಸಿದವರಿಗುಂಟೆ ಭವದ ಬಂಧನ, ರಾಮಮಂತ್ರವ ಜಪಿಸೋ….. ಸೇರಿದಂತೆ ದಾಸರ ಗೀತೆಗಳ ಮಾಧುರ್ಯದ ಜತೆ ಜತೆಗೆ ಡೀಜೆ ಹಾಡುಗಳ ಅಬ್ಬರವೂ ಮುಗಿಲು ಮುಟ್ಟುವಂತಿತ್ತು.
ಪ್ರತಿ ಏರಿಯಾಗಳಲ್ಲಿ ದೊಡ್ಡ ಸ್ಕ್ರೀನ್ ಅಳವಡಿಸಿ ಅದರಲ್ಲಿಯೇ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದೃಶ್ಯಗಳ ನೇರ ಪ್ರಸಾರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು. ಮಧ್ಯಾಹ್ನದ ಆರತಿಯ ನಂತರ ಪ್ರಸಾದ ವಿತರಣೆ ಮಾಡಲಾಯಿತು. ನಗರದ ವಿವಿಧ ಭಾಗಗಳಲ್ಲಿ ರಾಮಭಕ್ತರು ಪಾನಕ, ಮಜ್ಜಿಗೆ ಜತೆ ಸಿಹಿ ಹಂಚಿದರೆ ಹಲವು ಕಡೆ ಮಹಾಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಯಿತು. ನಗರಪೂರ್ತಿ ಹೆಂಗಳೆಯರು ಕೇಸರಿ ಬಣ್ಣದ ಸೀರೆ ಉಟ್ಟು ಹಬ್ಬದ ರಂಗೇರಿಸಿದರೆ, ಪುರುಷರು ಬಿಳಿ ಕುರ್ತಾ ಪೈಜಾಮ ಧರಿಸಿ ಹೆಗಲಿಗೆ ಕೇಸರಿ ಶಲ್ಯವನ್ನು ಏರಿಸುವ ಮೂಲಕ ದೇಸೀ ಲುಕ್‌ನಲ್ಲಿ ಗಮನ ಸೆಳೆದರು. ಒಟ್ಟಿನಲ್ಲಿ ರಾಮೋತ್ಸವದ ರಂಗು ದಿನವಿಡೀ ನಗರದಲ್ಲಿ ಕಂಡು ಬಂತು. ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ವ್ಯಾಪಾರ ಬಂದ್ ಮಾಡಿ ಹಬ್ಬವನ್ನು ಆಚರಿಸಿದರು. ಶಾಲಾ-ಕಾಲೇಜುಗಳಲ್ಲಿಯೂ ಮಕ್ಕಳ ಸಂಖ್ಯೆ ಕುಸಿತವಿದ್ದುದು ಕಂಡುಬಂತು.