ಕುಂಭಮೇಳದಲ್ಲಿ ಜನರ ಸುರಕ್ಷತೆಗೆ ಕ್ರಮ ಅಗತ್ಯ
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆದಿನ ಬೆಳಗಿನ ಜಾವ ೨ ಗಂಟೆಯಲ್ಲಿ ಜನಜಂಗುಳಿ ಉಂಟಾಗಿ ಹಲವರು ಸಾವಿಗೀಡಾಗಿದ್ದು ನೂರಾರು ಜನ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶ ರಾತ್ರೋರಾತ್ರಿ ತುರ್ತು ಪರಿಹಾರ ಕಾಮಗಾರಿಗಳನ್ನು ಕೈಗೊಂಡು ಗಾಯಾಳುಗಳಿಗೆ ತುರ್ತು ಚಿಕಿತ್ಸೆ ದೊರಕುವಂತೆ ಮಾಡುವುದರಲ್ಲಿ ಸಫಲವಾಗಿದೆ. ೧೪೪ವರ್ಷಗಳಿಗೊಮ್ಮೆ ಬರುವ ಈ ಮಹಾ ಕುಂಭಮೇಳದಲ್ಲಿ ಅಮಾವಾಸ್ಯೆ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮದಲ್ಲಿ ಸ್ನಾನ ಮಾಡಿ ಪವಿತ್ರ ಭಾವನೆ ಪಡೆಯಲು ಎಲ್ಲರೂ ಕಾತುರರಾಗಿರುತ್ತಾರೆ. ಅವರು ಶುಭ ಮುಹೂರ್ತಕ್ಕೆ ಕಾಯುತ್ತ ನದಿ ದಡದಲ್ಲೇ ಮಲಗಿದ್ದರು. ಜನ ಇದ್ದಕ್ಕಿದ್ದಂತೆ ನದಿಯತ್ತ ನುಗ್ಗಿದ್ದರಿಂದ ಕತ್ತಲಲ್ಲಿ ಜನಜಂಗುಳಿ ಉಂಟಾಯಿತು. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಜನಜಂಗುಳಿಯನ್ನು ತಡೆಯಲು ಪ್ರಯತ್ನಪಟ್ಟರು. ರಾಜ್ಯ ಸರ್ಕಾರ ಆಸ್ಪತ್ರೆಗಳಲ್ಲಿ ೧ ಸಾವಿರ ವೈದ್ಯರನ್ನು ನೇಮಿಸಿದ್ದು ಎಲ್ಲ ವೈದ್ಯಕೀಯ ಸವಲತ್ತು ಕಲ್ಪಿಸಿಕೊಡಲು ಸನ್ನದ್ಧಗೊಂಡಿದೆ. ಸ್ವತಃ ಪ್ರಧಾನಿಯವರೇ ಉತ್ತರ ಪ್ರದೇಶದ ಸಿಎಂ ಜತೆ ಮಾತನಾಡಿ ಪರಿಹಾರ ಕಾಮಗಾರಿಗೆ ಎಲ್ಲ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಒಂದು ತಿಂಗಳು ನಡೆಯುವ ಈ ಮಹಾಕುಂಭಮೇಳದಲ್ಲಿ ೪೦ರಿಂದ ೪೫ ಕೋಟಿ ಜನ ಬರಲಿದ್ದಾರೆ ಎಂದು ಅಧಿಕಾರಿಗಳು ನಿರೀಕ್ಷಿಸಿದ್ದಾರೆ. ದೇಶದ ಪ್ರಮುಖ ನಗರಗಳಿಂದ ಪ್ರತಿದಿನ ರೈಲು, ವಿಮಾನಗಳ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಜನಸಾಗರದಲ್ಲಿ ಪ್ರಯಾಗ್ರಾಜ್ ತುಂಬಿ ಹೋಗಿದೆ. ಜನಜಂಗುಳಿ ನಡೆದಿದ್ದರೂ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವವರ ಸಂಖ್ಯೆ ಇಳಿಮುಖಗೊಂಡಿಲ್ಲ. ಈಗ ಡ್ರೋನ್ ಮತ್ತು ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಇದರಿಂದ ಜನ ಸಾಗರವನ್ನು ನಿಯಂತ್ರಿಸಲು ಸಾಧ್ಯವಾಗಿದೆ.
ಜನಜಂಗುಳಿ ಮತ್ತು ತ್ರಿವೇಣಿ ಸಂಗಮ ಮೊದಲನಿಂದಲೂ ನಡೆದುಕೊಂಡು ಬಂದಿದೆ. ೧೮೫೪ ರಲ್ಲಿ ಜನಜಂಗುಳಿಯಲ್ಲಿ ೮೦೦ ಜನ ಸತ್ತಿದ್ದರು. ೨೦೦೩ ರಲ್ಲಿ ನಾಸಿಕ್ನಲ್ಲಿ ೪೦ ಜನ, ೨೦೧೩ರಲ್ಲಿ ಇದೇ ಪ್ರಯಾಗ್ರಾಜ್ನಲ್ಲಿ ೪೨ ಜನ ಸತ್ತಿದ್ದರು. ಹೀಗಾಗಿ ಇಂದಿನ ಘಟನೆ ಹೊಸತೇನಲ್ಲ. ಲಕ್ಷಾಂತರ ಜನರನ್ನು ನಿಯಂತ್ರಿಸಲು ಉತ್ತರ ಪ್ರದೇಶ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಫೆಬ್ರವರಿ ೨೬ರಂದು ಮಹಾಕುಂಭ ಮೇಳ ಮುಕ್ತಾಯಗೊಳ್ಳಲಿದೆ. ಜನಜಂಗುಳಿಯಿಂದ ಗಾಬರಿಗೊಂಡ ಜನ ಕಸದ ಗುಂಡಿಗಳಲ್ಲೂ ರಾತ್ರಿ ಹೊತ್ತು ಬಿದ್ದ ಘಟನೆಗಳು ನಡೆದಿವೆ. ಜಗತ್ತಿನಲ್ಲೇ ಅತಿ ದೊಡ್ಡ ಮೇಳವಾಗಿರುವುದರಿಂದ ಸರ್ಕಾರಕ್ಕೆ ಎಲ್ಲ ವ್ಯವಸ್ಥೆ ಕಲ್ಪಿಸಿಕೊಡುವುದು ದೊಡ್ಡ ಸವಾಲಾಗಿದೆ. ಜನಜಂಗುಳಿಗಿಂತ ವದಂತಿಗಳೇ ಅಪಾಯವನ್ನು ತಂದಿದೆ. ಇದನ್ನು ಅಲ್ಲಗಳೆಯುವುದೇ ಪೊಲೀಸರಿಗೆ ದೊಡ್ಡ ಕೆಲಸವಾಗಿದೆ. ಸ್ವತಃ ಮುಖ್ಯಮಂತ್ರಿಗಳೇ ವದಂತಿಗಳನ್ನು ನಂಬದಂತೆ ಮನವಿ ಮಾಡಿದ್ದಾರೆ. ಜನರ ಉತ್ಸಾಹ ಮಾತ್ರ ಕುಗ್ಗಿಲ್ಲ. ತ್ರಿವೇಣಿ ಸಂಗಮದಲ್ಲೇ ಸ್ನಾನ ಮಾಡಬೇಕೆಂದು ಬಯಸಬೇಡಿ. ನದಿ ದಡದಲ್ಲಿ ಎಲ್ಲಿ ಬೇಕಾದರೂ ಸ್ನಾನ ಮಾಡಬಹುದು ಎಂದು ಸಿಎಂ ಹೇಳಿದ್ದಾರೆ. ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಈಗಲೂ ಜನ ಪ್ರಯಾಗ್ರಾಜ್ಗೆ ಹೋಗಲು ಕಾಯುತ್ತಿದ್ದಾರೆ. ಇಂಥ ಬೃಹತ್ ಜನಸ್ತೋಮವನ್ನು ನಿಯಂತ್ರಿಸುವುದು ಸುಲಭದ ಕೆಲಸವಲ್ಲ. ಇದಕ್ಕೆ ಉತ್ತರ ಪ್ರದೇಶಕ್ಕೆ ಕೇಂದ್ರವೂ ಸೇರಿದಂತೆ ಉಳಿದ ರಾಜ್ಯಗಳ ನೆರವು ಆಗತ್ಯ. ಮಹಾಕುಂಭ ಮೇಳಕ್ಕೆ ರಾಜ್ಯ ಸರ್ಕಾರ ಕಳೆದ ಒಂದು ವರ್ಷದಿಂದ ಸಿದ್ಧತೆ ಮಾಡಿಕೊಂಡಿತ್ತು. ದೇಶ ವಿದೇಶಗಳಿಂದ ಭಕ್ತರು ಜನಸಾಗರದ ರೀತಿಯಲ್ಲಿ ಹರಿದು ಬರುವುದು ಮೊದಲೇ ತಿಳಿದಿತ್ತು. ಎಷ್ಟೇ ಪೂರ್ವ ಸಿದ್ಧತೆ ಮಾಡಿಕೊಂಡಿದ್ದರೂ ಜನ ಸಮೂಹ ಯಾವ ರೀತಿ ವರ್ತಿಸುತ್ತದೆ ಎಂದು ಹೇಳುವುದು ಕಷ್ಟ.
ನದಿಯ ದಡದಲ್ಲಿ ಸ್ನಾನಘಟ್ಟಗಳನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸಿದ್ದರೂ ಬೆಳಗಿನ ಜಾವ ಜನ ಎಲ್ಲ ಅಡೆತಡೆಗಳನ್ನು ಕಿತ್ತು ನುಗ್ಗಿದಾಗ ಪೊಲೀಸರು ಎಲ್ಲರನ್ನೂ ನಿರ್ವಹಿಸಲು ಹರಸಾಹಸವೇ ಪಡಬೇಕಾಯಿತು. ದುರಂತಗಳು ನಡೆಯದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದರೂ ಅವೆಲ್ಲವನ್ನೂಮೀರಿ ಜನ ಬಂದಾಗ ಯಾವ ಎದುರಿಸಬೇಕು ಎಂಬುದನ್ನು ರಕ್ಷಣಾ ಸಿಬ್ಬಂದಿಗೆ ತರಬೇತಿ ನೀಡುವುದು ಕಷ್ಟ. ಇದೊಂದು ರೀತಿಯಲ್ಲಿ ಜನ ಸುನಾಮಿ. ಇದರಿಂದ ಆಗುವ ಅಪಾಯವನ್ನು ಕಡಿಮೆ ಮಾಡಬಹುದೇ ಹೊರತು ಸಂಪೂರ್ಣವಾಗಿ ನಿಯಂತ್ರಿಸುವುದು ಕಷ್ಟ. ಪ್ರಯಾಗ್ರಾಜ್ನಲ್ಲಿ ಇನ್ನೂ ಲಕ್ಷಾಂತರ ಜನ ಇರುವುದರಿಂದ ಎಲ್ಲರಿಗೂ ರಕ್ಷಣೆ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಇಡೀ ಜಗತ್ತು ಪ್ರಯಾಗ್ ರಾಜ್ ಕಡೆ ತಿರುಗಿರುವುದಂತೂ ನಿಶ್ಚಿತ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ತಮ್ಮ ಜನ್ಮ ಸಾರ್ಥಕ ಎಂಬ ಭಾವನೆ ಜನರಲ್ಲಿರುವುದರಿಂದ ಆ ಭಾವನೆಗೆ ಧಕ್ಕೆ ಒದಗದಂತೆ ಕ್ರಮ ಕೈಗೊಳ್ಳುವುದು ಅಗತ್ಯ. ಈ ದಿಕ್ಕಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳಬೇಕಿದೆ.