For the best experience, open
https://m.samyuktakarnataka.in
on your mobile browser.

ಕುಣಿಕೆಗೆ ಕೊರಳೊಡ್ಡಿದ ಕೀರ್ತಿವಂತರು

03:00 AM Apr 18, 2024 IST | Samyukta Karnataka
ಕುಣಿಕೆಗೆ ಕೊರಳೊಡ್ಡಿದ ಕೀರ್ತಿವಂತರು

ಇತಿಹಾಸವನ್ನು ಮರೆತು ವರ್ತಮಾನದಲ್ಲಿ ಮುನ್ನಡೆದರೆ ಭವಿಷ್ಯ ಕಾರ್ಗತ್ತಲೆಂಬ ಜ್ಯೇಷ್ಠನುಡಿ ಅಕ್ಷರಶಃ ಸತ್ಯ. ಅದರಲ್ಲೂ ಭಾರತೀಯರೇನಾದರೂ ಚರಿತ್ರೆಯನ್ನು ಮರೆತರೆ ಅದು ಅಕ್ಷಮ್ಯ. ಇಂದಿನ ಓಜಸ್ಸು, ತೇಜಸ್ಸು, ವಿಶ್ವದ ಯಾವ ಮೂಲೆಯಲ್ಲಿ ತ್ರಿವರ್ಣಧ್ವಜ ಬೀಸಿದರೂ ಲಭಿಸುವ ಅಭೂತಪೂರ್ವ ಗೌರವಾದರಗಳೆಲ್ಲವೂ ಹಲವು ತಲೆಮಾರುಗಳ ತ್ಯಾಗದ ಫಲಶ್ರುತಿ. ಬೆವರನ್ನು ನೆತ್ತರಾಗಿಸಿ, ಶತ್ರುಗಳ ಸಂಚನ್ನು ಮುರಿದು, ಹಿಂದುಸ್ಥಾನದ ಅಖಂಡತೆಗೆ ಬಲಿಪೀಠವೇರಿ ನೇಣಿನ ಕುಣಿಕೆಯನ್ನು ಮುತ್ತಿಕ್ಕಿದ ಸಾಹಸಿಗಳ ಬಲಿದಾನವೇ ನಮ್ಮುಸಿರಿಗೆ ಕಾರಣ. ಆ ಹೋರಾಟದ ಹಾದಿಯನ್ನು ಮರೆಯುವುದೆಂದರೆ ಕೃತಘ್ನತೆಯ ಪರಮಾವಧಿಯಷ್ಟೇ ಅಲ್ಲ, ನಮ್ಮ ಮರಣಶಾಸನ ರಚನೆಯ ಪ್ರಥಮ ಹೆಜ್ಜೆಯೂ ಹೌದು. ಯೌವನವೆಂಬ ಪರಮ ಪರ್ವಕಾಲವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ವಿನಿಯೋಗಿಸಿ, ಹೌತಾತ್ಮ್ಯವನ್ನೇ ಪ್ರಸಾದವೆಂದು ಸ್ವೀಕರಿಸಿದ ಧೀಮಂತ ಮಹಾನಾಯಕರ ಸಾಲಿನಲ್ಲಿ ಮಿಂಚಿನಂತೆ ಗೋಚರಿಸುವ ಹೆಸರು ಮಹಾರಾಷ್ಟ್ರದ ಮಣ್ಣಿನ ಸ್ವಾಭಿಮಾನಿ ಶಕ್ತಿಯ ಪ್ರತೀಕದಂತಿರುವ ದಾಮೋದರ ಹರಿ ಚಾಪೇಕರ್ ಹಾಗೂ ಅನಂತ ಲಕ್ಷ್ಮಣ ಕಾನ್ಹೇರೆ.
'ಸ್ವಾತಂತ್ರ್ಯದ ಅಪೇಕ್ಷೆ ನನ್ನ ಹಕ್ಕು. ವಿದೇಶೀ ಆಡಳಿತದಿಂದ ಜನ್ಮಭೂಮಿಯನ್ನು ಮುಕ್ತಗೊಳಿಸುವುದು ನನ್ನ ಕನಸು. ಭಾರತಭಂಜಕರನ್ನು ಒದ್ದೋಡಿಸಿ ಆದರ್ಶ ರಾಷ್ಟ್ರ ಸ್ಥಾಪಿಸುವುದು ನನ್ನ ಗುರಿ. ಈ ಉನ್ನತ ಯೋಜನೆಯ ಸಾಧನೆಗಾಗಿ ಬದುಕನ್ನು ಸಮರ್ಪಿಸಲು ಹಿಂದೆ ಮುಂದೆ ನೋಡುವ ಸಣ್ಣತನ ನನ್ನಲಿಲ್ಲ. ಸ್ವದೇಶ ರಕ್ಷಣೆಗಾಗಿ ಪ್ರತಿಯೊಬ್ಬನೂ ಮಾನಸಿಕ ಸೈನಿಕನಾಗದ ಹೊರತು ಅನ್ಯಮಾರ್ಗವಿಲ್ಲ. ಹೋರಾಟದ ಹಾದಿಯಲ್ಲಿ ಸಾವು - ಬದುಕಿನ ಕುರಿತು ಯೋಚಿಸುವ ಮೂಢ ನಾನಲ್ಲ. ಸತ್ತರೆ ಸ್ವರ್ಗ, ಗೆದ್ದರೆ ರಾಜ್ಯವೆಂಬ ಶ್ರೀಕೃಷ್ಣನ ಉಕ್ತಿಯನ್ನು ಯಥಾವತ್ ಪಾಲಿಸುವ ಅವಕಾಶವನ್ನು ಕೈಚೆಲ್ಲುವುದು ಆತ್ಮಹತ್ಯೆಗೆ ಸಮಾನ' ಎಂಬ ಘನಗಂಭೀರ ವೀರವಾಣಿಯಿಂದ ನಿದ್ರಿತ ಭಾರತವನ್ನು ಗುಂಡಿನ ಸದ್ದಿನಿಂದ ಬಡಿದೆಚ್ಚರಿಸಿದ ತ್ರಿಮೂರ್ತಿಗಳಲ್ಲಿ ಹಿರಿಯರಾದ ದಾಮೋದರ ಹರಿ ಚಾಪೇಕರ್, ಸಶಸ್ತ್ರ ಕ್ರಾಂತಿಯ ಎರಡನೆಯ ಅಧ್ಯಾಯ ಬರೆದ ಮಹಾಸಾಹಸಿ. ವಾಸುದೇವ ಬಲವಂತ ಫಡಕೆಯವರ ಉತ್ತರಾಧಿಕಾರಿಯೆಂದೇ ಪ್ರಸಿದ್ಧರಾದ ಚಾಪೇಕರ್, ಪುಣೆಯ ಕೀರ್ತನಕಾರ ಹರಿಪಂತ ಚಾಪೇಕರರ ಮಗ. ದಾಮೋದರರಿಗೆ ಬಾಲ್ಯದಿಂದಲೂ ಇದ್ದ ಕನಸು ಸೈನಿಕನಾಗುವುದು. ತಾನೊಂದು ತಂಡ ಕಟ್ಟಿ, ಬ್ರಿಟಿಷರ ವಿರುದ್ಧ ಹೋರಾಡಿ ಸ್ವತಂತ್ರ ಭಾರತದ ಧ್ವಜ ನಭದೆತ್ತರ ಹಾರಾಡಿಸುವ ಕನಸನ್ನು ನನಸಾಗಿಸುವತ್ತ ಸಾಗಿದ ಚಾಪೇಕರರಿಗೆ ಸಹೋದರರಾದ ಬಾಲಕೃಷ್ಣ ಮತ್ತು ವಾಸುದೇವರದು ಪೂರ್ಣ ಸಹಕಾರ. ಬಾಲಗಂಗಾಧರ ತಿಲಕರ ವಿಚಾರಗಳಿಂದ, ಹರಿತ ಲೇಖನಗಳಿಂದ ಪ್ರೇರಿತರಾಗಿ ಅವರನ್ನೇ ಗುರುವೆಂದು ಭಾವಿಸಿ ರಣಾಂಗಣಕ್ಕಿಳಿದ ಚಾಪೇಕರರು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ನೀತಿಯನ್ನೇ ಪ್ರತಿಪಾದಿಸಿದರು. ಸ್ವರಾಜ್ಯದ ಕಲ್ಪನೆಯನ್ನು ತಲೆಯಲ್ಲಿಟ್ಟುಕೊಳ್ಳುವುದೇ ಮಹಾಪರಾಧವಾಗಿದ್ದ ಕಾಲಘಟ್ಟದಲ್ಲಿ, ಬ್ರಿಟಿಷ್ ಸಾಮ್ರಾಜ್ಯದ ದರ್ಪ, ೧೮೫೭ರ ಸಮರ ಗೆದ್ದ ದಾಷ್ಟ್ರ್ಯದ ನಡುವೆಯೂ ದಾಸ್ಯಮುಕ್ತಿಯ ಪಾಂಚಜನ್ಯ ಮೊಳಗಿಸಿದ ಚಾಪೇಕರ್ ಬದುಕು ಸಾಮಾನ್ಯದ್ದಲ್ಲ.
ಕಂಡು ಕೇಳರಿಯದ ರೀತಿಯಲ್ಲಿ ಪುಣೆಯನ್ನು ಹಿಪ್ಪೆಹಿಂಡಿದ್ದ ಪ್ಲೇಗ್ ರೋಗಕ್ಕೆ ಜನಸಾಮಾನ್ಯರು ತತ್ತರಿಸಿದ್ದರು. ಕಷ್ಟವಾಗುತ್ತಿದ್ದ ಬದುಕನ್ನು ಸರಿದಾರಿಗೆ ತರಬೇಕಿದ್ದ ಸರಕಾರ ಜನರ ಭಾವನೆಗಳ ಜೊತೆಗೆ ಆಟವಾಡತೊಡಗಿತು. ಪ್ಲೇಗ್ ನಿವಾರಣಾ ಕಮೀಷನರ್ ಆಗಿ ನಿಯುಕ್ತನಾದ ಅಧಿಕಾರಿ ರಾಂಡ್, ಕಣ್ಣೀರೊರೆಸುವ ಬದಲು ತನ್ನ ದರ್ಪ ತೋರಿಸಲು ಆರಂಭಿಸಿದ. ರೋಗನಿರ್ವಹಣೆಯ ಹೆಸರಲ್ಲಿ ಮನೆಯೊಳಗೆ ನುಗ್ಗಿ ನಡೆಸಿದ ಅತ್ಯಾಚಾರ, ಲೂಟಿಗೆ ಕೊನೆ ಮೊದಲಿರಲಿಲ್ಲ. ಕಣ್ಣೆದುರೇ ಮನೆಗಳಿಗೆ ಬೆಂಕಿ ಹಚ್ಚಲು ಆದೇಶಿಸಿದ ರಾಂಡ್, ಗಣೇಶೋತ್ಸವ ಮತ್ತು ಶಿವಾಜಿ ಜಯಂತಿಯ ಆಚರಣೆಯನ್ನೇ ನಿರ್ಬಂಧಿಸಿ ಧಾರ್ಮಿಕ ಭಾವನೆಗಳನ್ನೇ ಹತ್ತಿಕ್ಕಿದ. ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿ, ಕೈಗೆ ಸಿಕ್ಕವರನ್ನೆಲ್ಲ ಬಡಿದು ಕೊಳ್ಳೆ ಹೊಡೆಯುವ ದುರುಳ ವರ್ತನೆ ನೋಡಿ ಕ್ರುದ್ಧರಾದ ದಾಮೋದರ ಚಾಪೇಕರ್ ಸೇಡು ತೀರಿಸಲು ಸಿದ್ಧರಾದರು. ಗಾಯದ ಮೇಲೆ ಬರೆಯೆಳೆದಂತೆ ಜನರ ನೋವನ್ನು ಪರಿಗಣಿಸದೆ ವಿಕ್ಟೋರಿಯಾ ಪಟ್ಟಾಭಿಷೇಕ ವಜ್ರಮಹೋತ್ಸವ ಆಚರಣೆಗೆ ಹೊರಟ ಸರಕಾರದ ನಿರ್ಧಾರ ಬೆಂಕಿಗೆ ತುಪ್ಪ ಸುರಿಸಿತು. ರಾಂಡ್ ವಧೆಗೆ ನಿರ್ಧರಿಸಿದ ಸಹೋದರರು ಸರಿಯಾದ ಸಮಯಕ್ಕೆ ಕಾದು ತಮ್ಮ ಕಾರ್ಯದಲ್ಲಿ ಯಶಸ್ವಿಯಾದರು. ಕಾಡ್ಗಿಚ್ಚಿನಂತೆ ದೇಶದಾದ್ಯಂತ ಪಸರಿಸಿದ ಸಾಹಸಕೃತ್ಯಕ್ಕೆ ಪ್ರಶಂಸೆಯ ಸುರಿಮಳೆಯಾಯಿತು. ಆದರೇನು ಮಾಡುವುದು? ಸರಕಾರ ಘೋಷಿಸಿದ ದುಡ್ಡಿನಾಸೆಗೆ ಬಲಿಯಾದ ದ್ರೋಹಿಯ ಕಾರಣದಿಂದ ಬ್ರಿಟಿಷರ ಬಲೆಗೆ ಸಿಕ್ಕಿಬಿದ್ದ ಚಾಪೇಕರ್ ಕೊಂಚವೂ ಭೀತರಾಗಲಿಲ್ಲ. ವಿಚಾರಣೆಯೆಂಬ ನಾಟಕವನ್ನು ಮಾನ್ಯಮಾಡದೆ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು, ನಗುನಗುತ್ತಲೇ ಹುತಾತ್ಮರಾದ ದಾಮೋದರ ಹರಿ ಚಾಪೇಕರ್ ಕ್ರಾಂತಿಮಹಾವೃಕ್ಷಕ್ಕೆ ರಕ್ತತರ್ಪಣಗೈದ ಮಹಾಸಾಧಕರಷ್ಟೇ ಅಲ್ಲ, ಭವಿಷ್ಯತ್ಕಾಲದಲ್ಲಿ ಸಾವಿರಾರು ಕ್ರಾಂತಿಕಾರಿಗಳ ಸೃಷ್ಟಿಗೆ ಕಾರಣರಾದ ಯುಗಪುರುಷರೂ ಹೌದು.
'ಸಾಮಾನ್ಯರಲ್ಲಿ ಸಾಮಾನ್ಯ ಬಾಲಕನ ಕ್ರಾಂತಿಕಾರ್ಯಕ್ಕೆ ಇಷ್ಟು ಸುಸ್ತಾದ ನಿಮಗೆ ದೇಶದ ಕೀಲಿಕೈ ಬೇಕೇ? ತೆಪ್ಪಗೆ ವ್ಯಾಪಾರ ಮಾಡಿ ತೆರಳುವ ಬದಲು ಭಾರತದಲ್ಲೇ ನೆಲೆನಿಂತು ಸಂಪತ್ತು ಲೂಟಿಹೊಡೆವ ಕಳ್ಳರ ಸೊಕ್ಕನ್ನು ಮುರಿಯಲು ನನ್ನಂತೆ ಸಾವಿರಾರು ತರುಣರು ಸಿದ್ಧರಾಗಿದ್ದಾರೆ. ಈ ಒಂದು ಜನ್ಮ ಮಾತ್ರವಲ್ಲ, ಭಾರತದ ಏಳಿಗೆಗಾಗಿ ಸಾವಿರ ಜನ್ಮವೆತ್ತಿದರೂ ಪ್ರಾಣ ಕೊಡುವೆ' ಎಂದು ನುಡಿದು ಹದಿನೆಂಟರ ಹರೆಯದಲ್ಲೇ ನೇಣಿನ ಕುಣಿಕೆಗೆ ಕೊರಳೊಡ್ಡಿದ ಮಹಾಸಾಹಸಿ ಅನಂತ ಲಕ್ಷ್ಮಣ ಕಾನ್ಹೇರೆ, ದೇಶದಾದ್ಯಂತ ಕ್ರಾಂತಿಕಿಡಿ ಹೊತ್ತಿಸಿದ ಧೀರತರುಣ. ರತ್ನಗಿರಿಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅನಂತ ಕಾನ್ಹೇರೆಗೆ, ಶಾಲಾದಿನಗಳಲ್ಲಿಯೇ ಕ್ರಾಂತಿಕಾರರ ಪರಿಚಯವಾಯಿತು. ಸ್ವಾತಂತ್ರ್ಯ ಹೋರಾಟ, ಬಲಿದಾನಗಳ ಅರ್ಥ ತಿಳಿಯದಿದ್ದರೂ ದೇಶಕ್ಕಾಗಿ ಸೇವೆ ಸಲ್ಲಿಸಬೇಕೆಂಬ ಉತ್ಕಟ ಆಸೆ ಚಿಗುರೊಡೆದುದು ಅಲ್ಲೇ. ದೇಶದೊಳಗಡೆ ನಡೆಯುತ್ತಿದ್ದ ಹೋರಾಟಗಳು, ವಿದೇಶಗಳಲ್ಲಿ ಭಾರತೀಯ ಯುವಕರು ತೋರುತ್ತಿದ್ದ ಕೆಚ್ಚಿನ ಕಥೆಗಳನ್ನು ಕೇಳುತ್ತಲೇ ತಾರುಣ್ಯ ಪ್ರವೇಶಿಸಿದ ಕಾನ್ಹೇರೆಗೆ ದೇಶಕ್ಕಾಗಿ ಬದುಕಬೇಕೆಂಬ ಹಂಬಲ ತೀವ್ರವಾಯಿತು. ಯುವ ನ್ಯಾಯವಾದಿ ಕೃಷ್ಣಾಜಿ ಗೋಪಾಲ ಕರ್ವೆಯವರ ಸ್ನೇಹಿತವರ್ಗ ಹಾಗೂ ವಿನಾಯಕ ದೇಶಪಾಂಡೆಯವರ ತರುಣ ಸಭಾದ ಚಟುವಟಿಕೆಗಳಿಂದ ಪ್ರೇರಿತರಾದ ಕಾನ್ಹೇರೆಯ ರಾಷ್ಟ್ರೀಯ ಚಿಂತನೆಗಳ ತಳಪಾಯ ಗಟ್ಟಿಯಾದುದು ಸಾವರ್ಕರರ ಅಭಿನವ ಭಾರತದ ಸಂಪರ್ಕದಿಂದ. ನಾಸಿಕ್ ಗುಪ್ತದಳದ ಸದಸ್ಯನಾಗಿ ಸಶಸ್ತç ಕ್ರಾಂತಿಯ ಪಥದಲ್ಲಿ ಹೆಜ್ಜೆಹಾಕಿ ಜೊತೆಗಾರರ ಸ್ವಾತಂತ್ರ್ಯ ಸ್ನೇಹಬಂಧದ ಕುರಿತು 'ಮಿತ್ರಪ್ರೇಮ' ಕಾದಂಬರಿ ರಚಿಸಿ ಕ್ರಾಂತಿಸಾಹಿತ್ಯ ವಿತರಣೆಯಲ್ಲೂ ತೊಡಗಿಸಿದರು.
ಬ್ರಿಟಿಷ್ ವಿರೋಧಿ ಭಾವದಿಂದ ಕೊತಕೊತನೆ ಕುದಿಯುತ್ತಿದ್ದ ನಾಸಿಕ್, ಬಾಬಾರಾವ್ ಸಾವರ್ಕರರ ಕಾರ್ಯಕ್ಷೇತ್ರ. ಯುವಕರನ್ನು ದೇಸೀ ಹೋರಾಟಕ್ಕೆ ಅಣಿಗೊಳಿಸುವ ಕಾಯಕದಲ್ಲಿ ತೊಡಗಿದ್ದ ಅವರನ್ನು ತನ್ನ ಬದುಕಿನ ನಾಯಕನನ್ನಾಗಿ ಸ್ವೀಕರಿಸಿದ ಕಾನ್ಹೇರೆಗೆ, ದೇಶಭಕ್ತಿಯ ಕವನ ಪ್ರಕಟಿಸಿದ ಆರೋಪದಡಿ ಬಾಬಾರಾವ್ ಬಂಧಿತರಾದುದು ಸಹಿಸದಾಯಿತು. ಇದರ ಹಿಂದಿದ್ದ ಧೂರ್ತ ಬ್ರಿಟಿಷ್ ಅಧಿಕಾರಿ ಜಾಕ್ಸನ್ ಹತ್ಯೆಗೆ ಮುಹೂರ್ತ ನಿಶ್ಚಯಿಸಿದ ಅನಂತ, ಸರಿಯಾದ ಸಮಯಕ್ಕೆ ಕಾಯುತ್ತಿದ್ದರು. ವಯಸ್ಸಿನಲ್ಲಿ ಕಿರಿಯನಾಗಿದ್ದರೂ ಯೋಚನೆಯಲ್ಲಿ ಹತ್ತುಪಟ್ಟು ಮುಂದಿದ್ದ ಕಾನ್ಹೇರೆ, ಬ್ರಿಟಿಷರ ಆಟ ಅರಿತು ದೇಶವಾಸಿಗಳಿಗೆ ಸತ್ಯದರ್ಶನಗೈಯಲು ಸಮಯ ಮೀಸಲಿಟ್ಟರು. ಸ್ವದೇಶೀ ವಸ್ತುಗಳ ಬಳಕೆ, ದಾಸ್ಯದ ತಿರಸ್ಕಾರ, ವಂದೇ ಮಾತರಂ ಘೋಷಣೆ, ಕಾಲೇಜು ಆವರಣದಲ್ಲಿ ಕ್ರಾಂತಿಸಭೆಗಳ ಆಯೋಜನೆಗೈದು ಜನಜಾಗೃತಿಯಲ್ಲಿ ತೊಡಗಿ ನಾಯಕತ್ವ ಗುಣದಿಂದ ಸರ್ವಪ್ರಶಂಸೆಗೆ ಪಾತ್ರರಾದರು. ಪೂರ್ವಜನ್ಮದಲ್ಲಿ ಬ್ರಾಹ್ಮಣ, ಮರಾಠಿ - ಸಂಸ್ಕೃತವೆಂದರೆ ಪ್ರಾಣವೆಂದೇ ಹೇಳಿ ಭಾರತೀಯರ ವಿಶ್ವಾಸ ಗಳಿಸಿದ್ದ ಜಾಕ್ಸನ್ ಮುಂಬೈಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಅಭಿನಂದನಾ ಸಭೆಯ ಮಾಹಿತಿ ಲಭಿಸಿದ ಅನಂತ ಕಾನ್ಹೇರೆ ಶಸ್ತ್ರಸಜ್ಜಿತನಾಗಿಯೇ ಕಾರ್ಯಕ್ರಮಕ್ಕೆ ಆಗಮಿಸಿದರು. ಅವಕಾಶ ಲಭಿಸಿದ ತಕ್ಷಣ ಗುರಿಹೊಡೆದ ಪರಿಣಾಮ ಶತ್ರುವಿನ ಶರೀರ ಧರೆಗುರುಳಿತು. ಕಿಂಚಿತ್ತೂ ಮಿಸುಕಾಡದೆ, ಧೈರ್ಯದಿಂದ, ನಗುನಗುತ್ತಲೇ ಬಂಧಿಯಾದ ಅನಂತ ಕಾನ್ಹೇರೆ ತನ್ನ ಸಾಹಸಕೃತ್ಯಕ್ಕೆ ಕ್ಷಮೆ ಕೋರಲಿಲ್ಲ, ವಿಷಾದ ವ್ಯಕ್ತಪಡಿಸಲಿಲ್ಲ. ವಿಚಾರಣೆಯೆಂಬ ಕಪಟದ ಬಗ್ಗೆ ತಲೆಕೆಡಿಸಿಕೊಳ್ಳದೆ ತನ್ನ ಧ್ಯೇಯದತ್ತ ಮನಸ್ಸನ್ನು ಕೇಂದ್ರೀಕರಿಸಿದ ಅನಂತ ಕಾನ್ಹೇರೆ ನೇಣಿನ ಕುಣಿಕೆಗೆ ಕೊರಳೊಡ್ಡಿದಾಗ ಸ್ವಾಭಿಮಾನದ ಗರ್ವವೇ ರಾರಾಜಿಸುತ್ತಿತ್ತು. ಸ್ವಾತ್ಮಾರ್ಪಣೆಯಿಂದ ರಾಷ್ಟ್ರವನ್ನು ಬಡಿದೆಚ್ಚರಿಸಿದ ಕಾನ್ಹೇರೆಯ ಅನಂತ ದೇಶಪ್ರೇಮ ನಾಡಿಗೆ ಸದಾ ಸ್ಫೂರ್ತಿ. ಚಾಪೇಕರ್ ಮತ್ತು ಕಾನ್ಹೇರೆಯವರ ಸ್ಮತಿದಿನ ದೇಶಕ್ಕೆ ಪ್ರೇರಣೆಯಷ್ಟೇ ಅಲ್ಲ, ಸಂಕಷ್ಟದ ಸಂದರ್ಭದಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತ ರಾಷ್ಟ್ರವೇ ಮೊದಲೆಂಬ ಪಾಠವೂ ಅಡಗಿದೆ. ನಾಯಕನೆಂದರೆ ಯಾರು ಎಂಬ ಪ್ರಶ್ನೆಗೆ ಉತ್ತರವೆಂಬಂತೆ ತೋರುವ ಮಹನೀಯರ ಬಾಳು ನಮಗೆ ಬೆಳಕಾಗಲಿ.