ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕುತಂತ್ರಿ ನರಿಗಳ ಹಾವು-ಏಣಿ ಆಟ!

06:17 AM Mar 09, 2024 IST | Samyukta Karnataka

ಸಿನಿಮಾ: ಕರಟಕ ದಮನಕ
ನಿರ್ದೇಶನ: ಯೋಗರಾಜ್ ಭಟ್
ನಿರ್ಮಾಣ: ರಾಕ್‌ಲೈನ್ ವೆಂಕಟೇಶ್
ತಾರಾಗಣ: ಶಿವರಾಜ್‌ಕುಮಾರ್, ಪ್ರಭುದೇವ, ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್, ರವಿಶಂಕರ್ ಇತರರು.

ರೇಟಿಂಗ್ಸ್: 3.5

-ಜಿ.ಆರ್.ಬಿ

ಮಾತಿನಲ್ಲೇ ಮೋಡಿ ಮಾಡುವ ಇಬ್ಬರು ಸ್ನೇಹಿತರು. ಬಾಲ್ಯದಿಂದಲೂ ಆಪ್ತರಾಗಿರುವ ಅವರು, ತಮ್ಮ ಚಾಲಾಕಿತನದಿಂದಲೇ ಜೀವನ ಸಾಗಿಸುತ್ತಿರುತ್ತಾರೆ. ನರಮಾನವರ ಮಧ್ಯೆ ನರಿಗಳಂತೆ ಹೊಂಚು ಹಾಕಿ ಕಾರ್ಯ ಸಾಧಿಸುವ ಅವರು, ಸಿಕ್ಕವರಿಗೆಲ್ಲ ಟೋಪಿ ಹಾಕುವುದೇ ಅವರ ಕಾಯಕ. ಇಂತಿಪ್ಪ ಕುತಂತ್ರಿ ನರಿಗಳು ಅದ್ಯಾವುದೋ ಒಂದು ಸಮಯದಲ್ಲಿ ಪೊಲೀಸರ ಅತಿಥಿಯಾಗುತ್ತಾರೆ..! ಜೈಲಿನಲ್ಲಿ ಮುದ್ದೆ ಮುರಿಯಲು ಹೋದವರಿಗೆ ಜೈಲರ್ ತನ್ನ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳಲು ಪೆರೋಲ್ ಮೇಲೆ ಅವರಿಬ್ಬರನ್ನೂ ಹೊರಗೆ ಬಿಡುತ್ತಾರೆ. ಅಲ್ಲೀವರೆಗೂ ತಮ್ಮ ಚಾಲಾಕಿತನದಿಂದಲೇ ಜನರನ್ನು ಮೋಸ ಮಾಡಿಕೊಂಡು ಬಂದವರು, ಜೈಲರ್‌ಗೂ ಮಂಕುಬೂದಿ ಎರಚುತ್ತಾರಾ ಎಂಬುದೇ ಅಸಲಿ ಕಥೆ.

ಜೈಲಿನಿಂದ ಹೊರಬಂದ ಮೇಲೆ ಉತ್ತರ ಕರ್ನಾಟಕದ ನಂದಿಕೋಲೂರಿನತ್ತ ಪಯಣ ಬೆಳೆಸುವ ಅವರು, ಮತ್ತಷ್ಟು ವಿಸ್ಮಯ ಘಟನೆಗಳಿಗೆ ಸಾಕ್ಷಿಯಾಗುತ್ತಾರೆ. ಕರಟಕ ದಮನಕ ಜೋಡಿ ಎಂದೇ ಕರೆದುಕೊಳ್ಳುವ ಅವರ ಬಾಳಿನಲ್ಲಿ ಹಾವು-ಏಣಿ ಆಟ ಸಾಗುತ್ತಲೇ ಇರುತ್ತದೆ. ಆದರೆ ಅದಕ್ಕೊಂದು ಫುಲ್‌ಸ್ಟಾಪ್ ಇಡಲು ಪೊಲೀಸ್ ಎಂಟ್ರಿ ಕೊಡಲೇಬೇಕಾಗುತ್ತದೆ. ಆಗ ಮತ್ತೊಂದು ಟ್ವಿಸ್ಟ್..!

ಇಡೀ ಚಿತ್ರದಲ್ಲಿ ಒಂದಷ್ಟು ವಾಸ್ತವತೆಯನ್ನು ಕಟ್ಟಿಕೊಡುವುದರ ಜತೆಗೆ ಮನರಂಜನೆಯ ರಸದೌತಣ ಬಡಿಸಲು ಮುಂದಾಗಿದ್ದಾರೆ ನಿರ್ದೇಶಕ ಯೋಗರಾಜ್ ಭಟ್. ಉತ್ತರ ಕರ್ನಾಟಕದ ಸೊಗಡನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವುದರ ಜತೆಗೆ ನೀರಿನ ಸಮಸ್ಯೆ, ಬಿಟ್ಟು ಬಂದ ಊರು, ಊರಿನ ಮಹತ್ವದ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ.

ಕರಟಕನಾಗಿ ಶಿವರಾಜ್ ಕುಮಾರ್ ಆವರಿಸಿಕೊಂಡಿದ್ದಾರೆ. ಎಂದಿನಂತೆ ನಟನೆ, ಮ್ಯಾನರಿಸಂ ಮೂಲಕವೇ ಸೆಳೆಯುತ್ತಾರೆ. ದಮನಕನಾಗಿ ಕಾಣಿಸಿಕೊಂಡಿರುವ ಪ್ರಭುದೇವ, ಡಾನ್ಸ್, ಡೈಲಾಗ್ ಡೆಲಿವರಿ ಮೂಲಕ ಆಪ್ತವಾಗುತ್ತಾರೆ. ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ಹಾಡುಗಳ ಜತೆಗೆ ಕೆಲವೊಂದು ದೃಶ್ಯಗಳಲ್ಲಿ ಪೈಪೀಟಿಗೆ ಬಿದ್ದವರಂತೆ ನಟಿಸಿದ್ದಾರೆ. ಉಳಿದಂತೆ ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ, ರವಿಶಂಕರ್, ತನಿಕೆಲ್ಲ ಭರಣಿ, ಬಿರಾದಾರ್, ಮೂಗು ಸುರೇಶ್, ಗೋವಿಂದೇ ಗೌಡ ಮೊದಲಾದವರು ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ.

ವಿ.ಹರಿಕೃಷ್ಣ ಸಂಗೀತ ನೀಡಿರುವ ಹಾಡುಗಳಲ್ಲಿ ಮೂರ‍್ನಾಲ್ಕು ಗುನುಗುವಂತಿದೆ. ಸಂತೋಷ್ ರೈ ಪತಾಜೆ ಕ್ಯಾಮೆರಾ ಸಿನಿಮಾಕ್ಕೆ ಪೂರಕವಾಗಿದೆ.

Next Article