ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕುದುರೆ ಏರಿ ವರ್ಷವಾಯ್ತು ನೋಡಿರಣ್ಣಾ ..

02:15 AM May 20, 2024 IST | Samyukta Karnataka
ಶ್ರೀ ಯು.ಬಿ ವೆಂಕಟೇಶ <br><br>ಅಧ್ಯಕ್ಷರು

ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಮೊದಲನೆಯ ವರ್ಷದ ಆಡಳಿತದ ರಥಯಾತ್ರೆಯಲ್ಲಿ ಸಿಕ್ಕುತ್ತಿರುವ ಜನಬೆಂಬಲದ ಜೊತೆಗೆ ಈ ಅವಧಿಯಲ್ಲಿ ಆಡಳಿತದ ವಿಧಾನ ಹಾಗೂ ವಿನ್ಯಾಸವನ್ನು ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಅವರಿಂದ ಸ್ವಾನುಭವದ ಧಾಟಿಯ ವಿಶ್ಲೇಷಣೆ ಇಲ್ಲಿದೆ.

ಕಾಂಗ್ರೆಸ್ ನೇತೃತ್ವದ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು ಬರೋಬ್ಬರಿ ವರ್ಷ ಉರುಳಿದ್ದು ಅಷ್ಟಾಗಿ ಯಾರ ಗಮನಕ್ಕೂ ಬಾರದೇ ಇರಲು ಕಾರಣಗಳು ಹಲವಾರು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿಗೆ ತಕ್ಕಂತೆ ಐದು ಗ್ಯಾರಂಟಿಗಳನ್ನು ಒಂದರ ಒಂದರಂತೆ ಜಾರಿ ಮಾಡಲು ಹೊರಟ ಪರಿಣಾಮವೆಂದರೆ ಸಾರ್ವಜನಿಕರಿಗೆ ಅಚ್ಚರಿಯ ಜೊತೆಗೆ ಕುತೂಹಲದ ಕಣ್ಣು. ಏಕೆಂದರೆ, ಜನರ ಅನುಭವದ ಆಧಾರದ ಮೇರೆಗೆ ಹೇಳುವುದಾದರೆ ಇದುವರೆಗಿನ ಯಾವುದೇ ಸರ್ಕಾರವು ನುಡಿದಂತೆ ನಡೆದು ಭರವಸೆಗಳನ್ನು ಈಡೇರಿಸಿದ್ದನ್ನು ಕಂಡರಲಿಲ್ಲವಂತೆ. ಹೀಗಾಗಿಯೇ ಇಡೀ ವರ್ಷ ಒಂದು ರೀತಿಯಲ್ಲಿ ಹಬ್ಬದ ವಾತಾವರಣ.
ನಿಜ. ಕಾಂಗ್ರೆಸ್ ಪಕ್ಷದವರಾದ ನಾವು ಸರ್ಕಾರದ ಬಗ್ಗೆ ಮೆಚ್ಚುಗೆ ಸೂಚಿಸಿದರೆ ಹೊಗಳುವಿಕೆ ಎಂದು ಹೇಳುವುದು ಸ್ವಾಭಾವಿಕವೇ. ಈ ಎಚ್ಚರ ನನಗೂ ಇದೆ. ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಬೆಂಗಳೂರಿನ ಸುತ್ತಮುತ್ತ ಓಡಾಡಿದಾಗ ಜನರ ತಲಸ್ಪರ್ಶಿ ಅನುಭವ ಏನೆಂಬುದರ ಅರಿವು ನನಗಿತ್ತು. ಆದರೂ ಇದನ್ನು ಹಂಚಿಕೊಳ್ಳುವ ಎದೆಗಾರಿಕೆಗೆ ಸಂಕೋಚ ಅಡ್ಡಿಬಂತು. ಪಟ್ಟಣವಾಸಿಗಳಿಗೆ ಕಷ್ಟದ ಅರ್ಥ ಏನು ಗೊತ್ತು ಎಂದು ಹೇಳಿ ಸ್ವಾನುಭವದ ಮಾತನ್ನು ವಿರೋಧಿಗಳು ನಿರಾಕರಿಸಬಹುದು ಎಂಬ ಅಳುಕು ಇದ್ದುದರಿಂದ ಸುಮ್ಮನಾಗಿದ್ದೆ. ಬೆಂಗಳೂರು ಬಿಟ್ಟು ಕಲಬುರಗಿ, ಕೊಪ್ಪಳ, ಯಾದಗಿರಿ, ಉಡುಪಿ, ಮಂಗಳೂರು ಪ್ರದೇಶಗಳಲ್ಲಿ ಜನರನ್ನು ಮಾತಿಗೆಳೆದಾಗ ಒಂದೊಂದೇ ವಿಚಾರಗಳು ಹೊರಗೆ ಬಂದವು. ಈ ಪೈಕಿ ಕಾಂಗ್ರೆಸ್ ಪಕ್ಷ ಘೋಷಿಸಿದ ಗ್ಯಾರಂಟಿಗಳ ಜಾರಿ ಪ್ರಕ್ರಿಯೆ ಬಗ್ಗೆ ಹರ್ಷೋದ್ಗಾರಗಳು ಕೇಳಿಬಂದವು. ಇದರ ಜೊತೆಗೆ ಎಐಸಿಸಿ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಜೊತೆಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಾಜಮುಖಿಯಾಗಿ ನಡೆದುಕೊಳ್ಳುತ್ತಿರುವ ಬಗೆಯನ್ನು ಬೇರೆ ಪಕ್ಷಗಳ ಮುಖಂಡರನ್ನು ಹೋಲಿಸಿ ಮಾತನಾಡುತ್ತಿದ್ದದ್ದು ಹೊಸ ತಿಳುವಳಿಕೆ ಒದಗಿಸಿತು.
ಅಭಿವೃದ್ಧಿ ಕೆಲಸಗಳಲ್ಲಿ ರಾಜಕಾರಣ ಬೆರೆಸುವುದು ಸರಿಯಲ್ಲ ಎಂಬುದು ನನ್ನ ಬುದ್ಧಿಪೂರ್ವಕ ನಂಬಿಕೆ. ಜನರ ಜೊತೆ ಒಡನಾಡುವಾಗ ಯಾವುದೇ ಕಾರಣಕ್ಕೆ ರಾಜಕೀಯ ಸುಳಿಯದಂತೆ ನೋಡಿಕೊಂಡು ಸರ್ಕಾರದ ಆಡಳಿತದ ಸ್ವರೂಪಕ್ಕೆ ಮಾತ್ರ ಸೀಮಿತವಾಗುವಂತೆ ಎಚ್ಚರಿಕೆಯನ್ನು ವಹಿಸಿದ್ದರಿಂದ ಜನರು ವಸ್ತುನಿಷ್ಠವಾಗಿ ಹಲವಾರು ರೀತಿಯ ವಿಶ್ಲೇಷಣೆಯನ್ನು ಮಾಡುವಾಗ ಹಿಂದಿನ ಸರ್ಕಾರಗಳ ಭರವಸೆ ಮತ್ತು ಈಡೇರಿಕೆಯ ಪ್ರಸ್ತಾಪಗಳನ್ನು ನೆನಪಿಸಿದ್ದು ಮಾತ್ರ ಅವರ ಜಾಣತನದ ದಿಕ್ಸೂಚಿ. ಬೆಂಗಳೂರಿನಿಂದ ರಾಜ್ಯದ ಆಗುಹೋಗುಗಳನ್ನು ಗಮನಿಸುವವರಿಗೆ ಕಲಬುರಗಿ ಹಾಗೂ ಯಾದಗಿರಿ ಮೊದಲಾದ ಕಲ್ಯಾಣ ಕರ್ನಾಟಕದ ಪ್ರದೇಶಗಳು ಅತ್ಯಂತ ಹಿಂದುಳಿದ ಪ್ರದೇಶಗಳು ಎಂಬ ಭಾವನೆ. ಇದಕ್ಕೆ ಪೂರಕವಾಗಿ ಸರ್ಕಾರ ಹಾಗೂ ಸಾರ್ವಜನಿಕರು ವ್ಯಕ್ತಮಾಡುವ ಅಭಿಪ್ರಾಯಗಳು ಕೂಡಾ ಕಾರಣವಿರಬಹುದು. ಆದರೆ, ಕಲ್ಯಾಣ ಕರ್ನಾಟಕದ ಈಗಿನ ಪ್ರಗತಿಯನ್ನು ಗಮನಿಸಿ ಹೇಳುವುದಾದರೆ ಈಗ ಅದು ಯಾವುದೇ ಮುಂದುವರಿದ ಪ್ರದೇಶಕ್ಕೆ ಕಮ್ಮಿ ಇಲ್ಲ. ಆಗಬೇಕಾದ ಪ್ರಗತಿ ಸಾಕಷ್ಟಿರಬಹುದು. ಈಗ ಕೈಗೊಂಡಿರುವ ಪ್ರಗತಿ ಮುಗಿದರೆ ಇನ್ನಷ್ಟು ಸುಂದರವಾಗಿ ಕಂಗೊಳಿಸಲೂಬಹುದು. ನೀರಾವರಿಯಿಂದ ಹಿಡಿದು ಉದ್ಯಮಗಳವರೆಗೆ, ಕೃಷಿಯಿಂದ ಹಿಡಿದು ಶಿಕ್ಷಣ ಸೌಲಭ್ಯದವರೆಗೆ ಕಲ್ಯಾಣ ಕರ್ನಾಟಕದಲ್ಲಿ ಆಗಿರುವ ಪ್ರಗತಿ ನಿಜಕ್ಕೂ ದಾಖಲಾರ್ಹ. ಇದಕ್ಕೆಲ್ಲ ಪ್ರೇರಕಶಕ್ತಿಯಾಗಿರುವವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ರೂಪಿಸಿದ ವಿಕಾಸದ ನಕ್ಷೆಗೆ ಅನುಗುಣವಾಗಿ ಸರ್ಕಾರ ಕೈಗೊಂಡಿರುವ ಕ್ರಮ.
ಸರ್ಕಾರದ ಆಡಳಿತಗಾರರು ಯಾವಾಗಲೂ ಕೂಡಾ ಸಂಪನ್ಮೂಲದ ಆಧಾರದ ಮೇಲೆ ಕಣ್ಣಿಟ್ಟುಕೊಂಡು ಅಭಿವೃದ್ಧಿಯ ನಕ್ಷೆಯನ್ನು ರೂಪಿಸಬೇಕು. ಈ ಬಾರಿಯ ಸನ್ನಿವೇಶ ವಿಶಿಷ್ಟ. ಕೊಟ್ಟ ಮಾತಿಗೆ ಅನುಗುಣವಾಗಿ ಗ್ಯಾರಂಟಿಗಾಗಿ ೫೨ ಸಾವಿರ ಕೋಟಿ ರೂಪಾಯಿ ಹಣವನ್ನು ಮುಂಗಡಪತ್ರದಲ್ಲಿ ಮೀಸಲಿಟ್ಟದ್ದು ಸಾಮಾನ್ಯ ಸಂಗತಿಯಲ್ಲ. ೩೭೧೩೮೨ ಕೋಟಿ ಗಾತ್ರದ ಮುಂಗಡ ಪತ್ರದಲ್ಲಿ ೫೨ ಸಾವಿರ ಕೋಟಿಯನ್ನು ಈ ಬಾಬಿಗೆ ತೆಗೆದಿಡಲು ರಾಜಕೀಯ ಸಂಕಲ್ಪದ ಜೊತೆಗೆ ಜನಕಲ್ಯಾಣದ ಬದ್ಧತೆ ಅತ್ಯಗತ್ಯ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಯೋಜನೆಗೆ ೩೦೦೦ ಕೋಟಿ ಹಣ ಒದಗಿಸಲಾಗಿದೆ. ಇದುವರೆಗೆ ೨೦೦ ಕೋಟಿಗೂ ಹೆಚ್ಚು ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂಬುದು ಒಂದು ಚಾರಿತ್ರಿಕ ದಾಖಲೆ. ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ೨೦೦ ಯೂನಿಟ್ ಉಚಿತ ವಿದ್ಯುತ್ ಪೂರೈಸುವ ಯೋಜನೆಗೆ ತಗಲುವ ವೆಚ್ಚ ಅಪಾರ. ಇದಿನ್ನೂ ಲೆಕ್ಕಾಚಾರದ ಹಂತದಲ್ಲಿಯೇ ಇದೆ. ಉಚಿತ ಆಹಾರ ಧಾನ್ಯಗಳ ಪೂರೈಕೆ ಯೋಜನೆಗೆ ಹಲವು ರೀತಿಯ ಅಡ್ಡಿಗಳು ಎದುರಾದರೂ ಒಬ್ಬರಿಗೆ ಐದು ಕೆ.ಜಿ. ಅಕ್ಕಿ ಹಾಗೂ ಉಳಿದ ೫ ಕೆ.ಜಿ. ಅಕ್ಕಿಯ ದರವನ್ನು ನಗದಿನಲ್ಲಿ ಪಾವತಿ ಮಾಡುತ್ತಿರುವ ವಿಧಾನ ವಿನೂತನ.
ಅಭಿವೃದ್ಧಿಯ ಯೋಜನೆಗಳನ್ನು ಮುಂಗಡಪತ್ರದಲ್ಲಿ ಪ್ರಕಟಿಸುವುದು ಸುಲಭ. ಆದರೆ, ಜಾರಿ ಮಾಡುವುದು ದೊಡ್ಡ ಸವಾಲು. ಏಕೆಂದರೆ, ಸಂಪನ್ಮೂಲದ ಮುಗ್ಗಟ್ಟು. ಆದರೆ, ಹಣಕಾಸಿನ ನಿರ್ವಹಣೆಯಲ್ಲಿ ಸಿದ್ಧಹಸ್ತರೆಂಬ ಮಾತಿಗೆ ಹೆಸರಾಗಿರುವ ಸಿದ್ದರಾಮಯ್ಯನವರು ಆದಾಯ ಮತ್ತು ವೆಚ್ಚವನ್ನು ಸರಿದೂಗಿಸಿಕೊಂಡು ಜನರ ಬಾಳನ್ನು ಹಸನು ಮಾಡುವ ಕಡೆ ಹೆಜ್ಜೆ ಹಾಕುತ್ತಿರುವುದು ಗಮನಿಸಬೇಕಾದ ಅಂಶ. ನಿಯಮಾವಳಿಯಂತೆ ಕೇಂದ್ರ ಸರ್ಕಾರದ ಅನುದಾನವೂ ಒದಗಿಬಂದಿದ್ದರೆ ಇನ್ನಷ್ಟು ಸೌಲಭ್ಯ ದೊರಕಿಸಲು ಸಾಧ್ಯವಾಗುತ್ತಿತ್ತೇನೋ. ಇದರ ನಡುವೆಯೂ ಕೂಡಾ ೨೪ ಸಾವಿರ ಮಂದಿ ಪೌರಕಾರ್ಮಿಕರ ನೇಮಕಾತಿಗೆ ನಿರ್ಧಾರ ಮಾಡಿರುವುದು ಸಾಮಾನ್ಯ ಸಂಗತಿಯಲ್ಲ. ಸಾರಿಗೆ ನಿಗಮಗಳಿಗೆ ಎಲೆಕ್ಟಿçಕ್ ಬಸ್‌ಗಳ ಸೇರ್ಪಡೆ ಮಾಡಿರುವುದು ಕೂಡಾ ಇದೇ ಸಾಲಿಗೆ ಸೇರಿರುವ ಯೋಜನೆ. ಬೆಂಗಳೂರಿನ ಸಂಚಾರ ಬವಣೆಯನ್ನು ನೀಗುವ ನಿಟ್ಟಿನಲ್ಲಿ ೧೫೬೦೦ ಕೋಟಿ ವೆಚ್ಚದಲ್ಲಿ ಮೆಟ್ರೋ ರೈಲಿನ ೩ನೇ ಹಂತಕ್ಕೆ ನಿರ್ಧಾರ ಕೈಗೊಂಡಿರುವುದೂ ಸರ್ಕಾರದ ದೂರದೃಷ್ಟಿಯ ಪ್ರತೀಕ.
ಸರ್ಕಾರವೆಂಬುದು ಒಂದು ನಿರಂತರ ಆಡಳಿತ ವ್ಯವಸ್ಥೆ. ಈ ವ್ಯವಸ್ಥೆಗೆ ಕಾಲದ ಮಿತಿಯನ್ನು ಹಾಕಿ ವಿಂಗಡಿಸಿ ನೋಡುವುದು ಕಷ್ಟವೇ. ಆದರೂ ರಾಜಕೀಯ ಸ್ಥಿತ್ಯಂತರಗಳ ನಡುವೆ ಆಗಿರುವ ಬದಲಾವಣೆಯನ್ನು ಗುರುತಿಸುವ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಈ ವರ್ಷದವರೆಗೆ ಒಟ್ಟಾರೆ ಆಡಳಿತದ ಸ್ವರೂಪವನ್ನು ಗಮನಿಸಿ ವಿಶ್ಲೇಷಿಸುವುದಾದರೆ ಸಲಹೆ - ಸೂಚನೆಗಳನ್ನು ಗಮನಿಸಿ ಸಾರ್ವಜನಿಕ ಹಿತ ಯಾವುದು ಎಂಬುದನ್ನು ಪರಿಗಣಿಸಿ ಜನತಂತ್ರಾತ್ಮಕ ಪದ್ಧತಿಯಲ್ಲಿ ನಿರ್ಧಾರಗಳನ್ನು ಕೈಗೊಂಡು ಜಾರಿ ಪ್ರಕ್ರಿಯೆಗೆ ಹೊರಟಿರುವ ಆಡಳಿತ ವಿಧಾನ ಈಗಿನ ಕಾಲಕ್ಕೆ ಹೊಂದುವAತದ್ದು. ಹಾಗೆ ನೋಡಿದರೆ, ಇದೇ ವರ್ಷ ಮುಗಿಯುವ ವೇಳೆಗೆ ಸರ್ಕಾರದ ಸಾಧನೆ ನೋಡಿರಣ್ಣಾ ಹೇಗಿದೆ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡು ಹೆಮ್ಮೆಯಿಂದ ಹೇಳಬಹುದಾದ ಉದ್ಗಾರದ ಮಾತು.
ಸರ್ಕಾರದ ಆಡಳಿತ ಒಬ್ಬರ ಮೂಲಕ ನಡೆಯುತ್ತದೆ. ಆದರೆ, ಈ ಆಡಳಿತದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಇದ್ದರಷ್ಟೆ ಅದಕ್ಕೆ ಯಶಸ್ಸು. ಟೀಕೆ ಟಿಪ್ಪಣಿಗಳ ನಡುವೆಯೂ ಕೂಡಾ ಒಳಿತು ಕೆಡಕುಗಳನ್ನು ವಿಂಗಡಿಸಿ ಪ್ರಾಂಜಲ ಮನಸ್ಸಿನಿಂದ ಜನಕಲ್ಯಾಣದ ಯಾತ್ರೆಗೆ ಹೊರಟಿರುವ ಸರ್ಕಾರದ ಮೂಲಕ ಕರ್ನಾಟಕದಲ್ಲಿ ಹೊಸ ಪರ್ವ ಆರಂಭವಾಗುದು ಖಂಡಿತ.
ಕರ್ನಾಟಕ ಗ್ಯಾರಂಟಿ ಯೋಜನೆಗಳ ಪ್ರಭಾವ ರಾಷ್ಟ್ರದಲ್ಲಿ ಮಾರ್ದನಿಯಾಗುವಂತಹ ವಾತಾವರಣ ರೂಪುಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಗ್ಯಾರಂಟಿ ಯೋಜನೆಗಳ ಬೆಳಕಿನಲ್ಲಿ ಹೊಸ ಕಾರ್ಯಕ್ರಮಗಳನ್ನು ರಾಷ್ಟ್ರಮಟ್ಟದಲ್ಲಿ ತರುವ ನಿಟ್ಟಿನಲ್ಲಿ ಬಹಿರಂಗವಾಗಿ ಮಾತನಾಡಿರುವುದು ಕರ್ನಾಟಕ ಸರ್ಕಾರದ ಒಂದು ವರ್ಷದ ಆಡಳಿತದ ಯಶಸ್ಸಿನ ಮಾನದಂಡ.

Next Article