ಕುರ್ಚಿ ಆಟ-ಕೊಡುತ್ತೇವೆ ಕಾಟ..
ಕುರ್ಚಿಆಟ-ಮಾಡಿಸಿದ್ದಾರೆ ಮಾಟ-ಅವರದ್ದು ನೆಟ್ಟಿದೆ ನೋಟ-ನಮ್ಮವರದ್ದೇ ಬಲುಕಾಟ ಎಂದು ರೈಮಿಂಗ್‌ನಲ್ಲಿ ಹಾಡುತ್ತ ಹಾಡುತ್ತ ನಿಂತವರ ಮುಖ ಬೆವೆತು ಬೆವತು ರಾಡಿ ಆಯಿತಂತೆ. ಕೈ ಮಂದಿಯೆಲ್ಲ ಮೈದಾನದಲ್ಲಿ ನಿಂತು ಕುರ್ಚಿ ಆಟ ಶುರುಮಾಡಿದರು. ಸ್ವಲ್ಪ ಹೊತ್ತು ನಾನೇ ಕೂಡುತ್ತೇನೆ ನಂತರ ಅವರು ಕೂಡಲಿ ಎಂದು ಅಂಪೈರ್‌ಗಳನ್ನು ಒಪ್ಪಿಸಿದರು. ಅವರೂ ಸಹ ಇರಲಿ ಬುಡು ಅವರೇ ಕೂಡಲಿ, ಆಮೇಲೆ ಬಿಡಲಿ ಎಂದು ಹೇಳಿದರು. ನಂತರ ಬಿಡಪ್ಪಾ ಕುರ್ಚಿ ಅಂದರೆ ಇಲ್ಲಿಲ್ಲ ಡಿಫರಂಟ್ ಆಗಿ ಮ್ಯುಸಿಕಲ್ ಕುರ್ಚಿ ಆಡನ… ಯಾರು ಗೆಲ್ಲುತ್ತಾರೋ ಅವರು ಕೂಡಲಿ ಅದರಲ್ಲೇನಿರುತ್ತದೆ ಎಂದು ಅಂದಾಗ ಬಂಡೆಸಿವು ಮುಂತಾದವರು ಹೂಂ ಅಂದರು. ಆಟ ಶುರುವಾಯಿತು. ಮೈದಾನದಲ್ಲಿ ಮಧ್ಯೆ ಹಾಕಿದ ಒಂದು ಕುರ್ಚಿಯಲ್ಲಿ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತ ಮದ್ರಾಮಣ್ಣೋರು ಸುತ್ತಮುತ್ತ ನೋಡಿದರು. ಬಿಳಿ ಜುಬ್ಬಾ-ಬಿಳಿ ಪೈಜಾಮಾ ಹಾಕಿಕೊಂಡು ಬಂದಿದ್ದ ಡೆಲ್ಲಿಯ ಕುರ್ಚೇವಾಲ ಅವರು ಸೀಟಿ ಊದಲೇ… ಸೀಟಿ ಊದಲೇ ಎಂದು ಎರಡು ಸಲ ಕೇಳಿ ಸೊಂಯ್ ಎಂದು ಊದಿದಾಗ… ಹಿನ್ನೆಲೆಯಲ್ಲಿ ಕುರ್ಚಿ-ಆಟ- ಮಾಡಿಸಿದ್ದಾರೆ ಮಾಟ ಎಂಬ ಹಾಡು ಕೇಳಿಸುತ್ತಿತ್ತು. ಎಲ್ಲರೂ ತಾಳಕ್ಕೆ ತಕ್ಕಂತೆ ಕುಣಿಯುತ್ತ ಕುಣಿಯುತ್ತ ಸುತ್ತಲೂ ತಿರುಗುತ್ತಿದ್ದರು. ಕುರ್ಚೇವಾಲಾ ಒಮ್ಮಿಂದೊಮ್ಮೆಲೇ ಸೀಟಿ ಊದಿದಾಗ ಮದ್ರಾಮಣ್ಣನ ತೊಡೆಯ ಮೇಲೆ ಇಬ್ಬರು ಕುಳಿತಾಗ.. ಇದು ಫಾಲ್ಸ್… ಫಾಲ್ಸ್ ಎಂದು ಸವ್ಕಾರ್ ಹುಡುಗ, ಗಾಜಣ್ಣ ಸೇರಿ ಹಲವು ಮಂದಿ ಕೂಗಿದರು. ನೋ ಇದು ಕರೆಕ್ಟ್… ಇದು ಕರೆಕ್ಟ್ ಎಂದು ಬಂಡೆಸಿವು ಜೋರಾಗಿ ಒದರಿದರು. ನೋ ನೋ ಎಂದು ಇವರು ಬಾಯಿ ಮಾಡಿದಾಗ… ಮತ್ತೆ ಹಾಡು ಹಾಕಿದರು. ಎಲ್ಲರೂ ಸುತ್ತಲೂ ತಿರುಗುತ್ತಿದ್ದರು. ಹಾಡು ನಿಲ್ಲಿಸಿದಾಗ ಮತ್ತೆ ಕುಳಿತುಕೊಳ್ಳಲು ಹೋದಾಗ ಸಟಕ್ಕನೇ ಎದ್ದು ನಿಂತ ಮದ್ರಾಮಣ್ಣ ಕುರ್ಚಿಯನ್ನು ಹಿಂದೆ ತೆಗೆದುಕೊಂಡರು. ಇಬ್ಬರು ಮೂವರು ದಬಕ್ಕನೇ ಬಿದ್ದಾಗ ಮದ್ರಾಮಣ್ಣ ಗಹಗಹಿಸಿ ನಕ್ಕರು. ನೋಡಿದ್ರಾ… ನೋಡಿದ್ರಾ ಎಂದು ಬಂಡೆಸಿವು ಕುರ್ಚೇವಾಲನ ಕಡೆ ನೋಡಿದಾಗ.. ಅವರು ಎಸ್..ಎಸ್. ಎಂದು ಅಂದು ಹೀಗೆ ಆಟ ಆಡುವುದು ಬೇಡ ಅಂದಾಗ ಸವ್ಕಾರ್‌ಹುಡುಗ ಇನ್ನಿತರರು ಜಗಳಕ್ಕೆ ಬಿದ್ದರು. ಮಧ್ಯೆ ಪ್ರವೇಶಿಸಿದ ಬಂಡೆಸಿವು ಮೊದಲೇ ಕುರ್ಚಿ ಬಿಡುತ್ತೇನೆ ಅಂದವರು ಈಗ ಆಟ ಸುರುಮಾಡವ್ರೆ ಎಂದು ಕೆಲವರು ಅಂದರು. ಅದೇಪ್ಪ ಕುರ್ಚಿ ಆಟ ನಾವು ಕೊಡುತ್ತೇವೆ ಕಾಟ ಎಂದು ಹಾಡುತ್ತಿದ್ದಂತೆ ಹೊತ್ತು ಮುಳುಗಿತ್ತು. ಆಟ ಮುಂದೂಡಲಾಗಿತ್ತು.