ನೋಡಿರಿ… ಖುಷಿಪಡಿರಿ
ನಮ್ಮ ಚಾನಲ್‌ನಲ್ಲಿ ರಾಜ್ಯದಲ್ಲಿ ಏನೇನು ನಡೆಯುತ್ತಿದೆಯೋ ಅದನ್ನೆಲ್ಲ ತೋರಿಸುತ್ತೇವೆ. ಇಂಥವನ್ನು ಬೇರೆ ಯಾರೂ ತೋರಿಸಲು ಸಾಧ್ಯವಿಲ್ಲ. ನೋಡಿರಿ ಖುಷಿ ಪಡಿರಿ… ಆಮೇಲೆ ಇವರೇನು ಇವರು ಅನ್ನಬೇಡಿ ಎಂದು ಖಾಸಗಿ ಚಾನಲ್ ನಿರೂಪಕಿ ಕಿವುಡನುಮಿ ಪದೇ ಪದೇ ಟಿವಿಯಲ್ಲಿ ಬಂದು ಹೇಳುತ್ತಿದ್ದಳು. ಓಹೋ ಇದರಲ್ಲೇನು ವಿಶೇಷವಿರಬಹುದು ಎಂದು ಕೆಲವು ಜನರು ಆಶ್ಚರ್ಯಗೊಂಡರು.. ಇನ್ನೂ ಹಲವರು ಗಾಬರಿಯಾದರು. ಹುಚ್ಚುಲುಗ, ತಳವಾರ್ಕಂಟಿ ಮುಂತಾದವರು ಸೀದಾ ಕಿವುಡನುಮಿಗೆ ಕಾಲ್ ಮಾಡಿ ಏನದು ಟಿವ್ಯಾಗ ಎಷ್ಟೊತ್ತಿಗೆ ಎಂದು ಕೇಳಿದರು. ಅದು ಹೇಳುವುದಲ್ಲ… ನೋಡುವುದು… ಸ್ವಲ್ಪ ಇರಿ ಸುಮ್ಮನಿರಿ ನಾ ಹಾಕ್ತಾನೆ ನೀವು ನೋಡಿರಿ ಎಂದು ಬೈಯ್ದಂಗೆ ಹೇಳಿ ಸುಮ್ಮನಾದಳು. ಜನರು ಭಯಂಕರ ಕಾದರು. ಕೆಲವರಂತೂ ಕೆಲಸ-ಬಗಸಿ ಬಿಟ್ಟು ಟಿವಿ ಮುಂದೆ ಕುಳಿತರು. ಮಕ್ಕಳು ಶಾಲೆಗೆ ಹೋಗುವುದನ್ನು ಬಿಟ್ಟು ಟಿವಿ ಮುಂದೆ ಕುಳಿತರು. ಯುವಕ-ಯುವತಿಯರು ಕಾಲೇಜಿಗೆ ಚಕ್ಕರ್ ಹಾಕಿ ಹಾಸ್ಟೆಲ್‌ಗಳಲ್ಲಿ ಟಿವಿ ಹಾಕಿಕೊಂಡು ಕುಳಿತರು. ಅಂದು ಹೇಳಿದ ಟೈಮಿಗೆ ಟಿವಿಯಲ್ಲಿ ಬಂದ ಕಿವುಡನುಮಿ ಮತ್ತೆ… ರಾಜ್ಯದಲ್ಲಿ ಏನೇನು ನಡೆಯುತ್ತಿದೆಯೋ ಅದನ್ನೆಲ್ಲ ತೋರಿಸುತ್ತೇವೆ ಎಂದು ಹೇಳಿದಳು… ನಂತರ ಅಡ್ವರ್ಟೈಸ್‌ಮೆಂಟ್ ಬಂತು. ಇದಾದ ಮೇಲೆ ಬರಬಹುದು ಎಂದ ಕಾಯ್ದರು… ಆಗಲೂ ಬರಲಿಲ್ಲ. ಮತ್ತೆ ಸ್ಕ್ರೀನ್ ಮೇಲೆ ಬಂದ ಕಿವುಡುನುಮಿ ಇಷ್ಟೊತ್ತು ತಡಕೊಂಡಿದೀರಾ ಇನ್ನೂ ಸ್ವಲ್ಪ ತಡಕೊಳ್ಳಿ ನಿಮ್ಮ ಮನೆಯ ಪರದೆಯ ಮೇಲೆ ಬರುತ್ತದೆ… ಬರುತ್ತದೆ… ಬರುತ್ತದೆ ಎಂದು ಹೇಳಿ ನಿರ್ಗಮಿಸಿದಳು. ಅಷ್ಟೊತ್ತಿಗಾಗಲೇ ಭರ್ತಿ ಪಾನಕ ಸೇವಿಸಿ ಕುಳಿತಿದ್ದ ಕನ್ನಾಳ್ಮಲ್ಲ-ಹೋಟ್ಲುದೊಡ್ಡ ಮುಂತಾದವರು ಕೋಲು ಹಿಡಿದುಕೊಂಡು ಟಿವಿ ಕಚೇರಿಯ ಕಡೆಗೆ ತೆರಳಿದರು. ಅವರೆಲ್ಲ ಸಿಟ್ಟಿಗೆದ್ದು ಬರುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ.. ಎಚ್ಚೆತ್ತುಕೊಂಡ ಕಿವುಡನುಮಿ ಮತ್ತೆ ಸ್ಕ್ರೀನ್‌ಮೇಲೆ ಬಂದು.. ವೀಕ್ಷಕರೇ ನಾನು ಹೇಳಿದ ಹಾಗೆ ಬಂದಿದ್ದಾರೆ… ಇವರೇ.. ಅವರೆಲ್ಲ… ಇವರೇ ಅವರೆಲ್ಲ ಎಂದು ಅನ್ನುತ್ತಿದ್ದಂತೆ ಟಿವಿಯಲ್ಲಿನ ಲೈಟ್‌ಗಳು ಆಫ್ ಆದವು. ಕಿವುಡನುಮಿ ಇನ್ನೊಂದು ಬಾಗಿಲಿನಿಂದ ಮನೆ ಸೇರಿದ್ದಳು.