For the best experience, open
https://m.samyuktakarnataka.in
on your mobile browser.

ಕೃಷಿತ್ಯಾಜ್ಯ ಸುಡಬೇಡಿ: ವಿದ್ಯುತ್ ಉತ್ಪಾದನೆಗೆ ಸಹಕಾರಿ

03:29 AM Oct 04, 2024 IST | Samyukta Karnataka
ಕೃಷಿತ್ಯಾಜ್ಯ ಸುಡಬೇಡಿ  ವಿದ್ಯುತ್ ಉತ್ಪಾದನೆಗೆ ಸಹಕಾರಿ

ಈಗ ರೈತರು ಎಲ್ಲ ಕಡೆ ಬತ್ತ-ಕಬ್ಬು ಸೇರಿದಂತೆ ಎಲ್ಲ ಬೆಳೆಗಳ ಕಟಾವು ಆದಮೇಲೆ ಉಳಿದ ತ್ಯಾಜ್ಯಕ್ಕೆ ಅಲ್ಲೇ ಬೆಂಕಿ ಸುಟ್ಟು ಬಿಡುತ್ತಾರೆ. ಇದರಿಂದ ಪರಿಸರ ಮಲಿನಗೊಳ್ಳುವುದಲ್ಲದೆ ವಿದ್ಯುತ್ ಉತ್ಪಾದನೆಗೆ ಉಪಯೋಗವಾಗುವ ವಸ್ತುಗಳನ್ನು ಹಾಳು ಮಾಡುತ್ತಿದ್ದೇವೆ.
ಕೇಂದ್ರ ಸರ್ಕಾರ ಈಗ ಕೃಷಿ ತ್ಯಾಜ್ಯವನ್ನು ಬಳಸಿಕೊಳ್ಳಲು `ಸಮರ್ಥ್' ಎಂಬ ಹೊಸ ಯೋಜನೆಯನ್ನು ಆರಂಭಿಸಿದೆ. ಕರ್ನಾಟಕದಲ್ಲಿ ಒಟ್ಟು ಮೂರು ಸರ್ಕಾರಿ ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆಗಳಿವೆ. ಇವುಗಳಿಗೆ ಕಲ್ಲಿದ್ದಲು ಕೊರತೆ ಇದ್ದೇ ಇದೆ. ನಮ್ಮಲ್ಲಿ ಕಲ್ಲಿದ್ದಲು ಗಣಿ ಇಲ್ಲ. ದೂರದ ಪ್ರದೇಶಗಳಿಂದ ಕಲ್ಲಿದ್ದಲು ಸರಬರಾಜಾಗಬೇಕು. ಅಲ್ಲದೆ ಕಲ್ಲಿದ್ದಲು ಬೆಲೆ ಕೂಡ ಅಧಿಕಗೊಳ್ಳುತ್ತಿದೆ. ಇದರಿಂದ ವಿದ್ಯುತ್ ದರ ಕೂಡ ಪ್ರತಿ ವರ್ಷ ಅಧಿಕಗೊಳ್ಳುತ್ತದೆ. ಕಲ್ಲಿದ್ದಲು ಸುಡುವುದರಿಂದ ಪರಿಸರ ಮಾಲಿನ್ಯ ಅಧಿಕಗೊಳ್ಳುತ್ತದೆ. ಜಾಗತಿಕ ಮಟ್ಟದಲ್ಲಿ ಈಗ ಕಲ್ಲಿದ್ದಲು ಆಧರಿತ ವಿದ್ಯುತ್ ಕೇಂದ್ರಗಳನ್ನು ಮುಚ್ಚಲು ಆಂದೋಲನ ಆರಂಭಗೊಂಡಿದೆ. ಕೆನಡಾ ತನ್ನ ಬಳಿ ಇದ್ದ ಎಲ್ಲ ಕಲ್ಲಿದ್ದಲು ಆಧರಿತ ವಿದ್ಯುತ್ ಕೇಂದ್ರಗಳನ್ನು ಮುಚ್ಚಿವೆ. ನಮ್ಮ ರಾಜ್ಯದಲ್ಲಿ ಮೂರು ಕಲ್ಲಿದ್ದಲು ಆಧರಿತ ವಿದ್ಯುತ್ ಕೇಂದ್ರಗಳಿಗೆ ೨೫ ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬಳಸುತ್ತಿದ್ದೇವೆ. ಇದನ್ನು ಕಡಿಮೆ ಮಾಡಬೇಕು ಎಂದರೆ ನಮಗಿರುವುದು ಎರಡೇ ದಾರಿ ಕಲ್ಲಿದ್ದಲು ಆಧರಿತ ವಿದ್ಯುತ್ ಕೇಂದ್ರಗಳನ್ನು ಮುಚ್ಚುವುದು. ಅದನ್ನು ಮುಚ್ಚಿದರೆ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ತಲೆ ಎತ್ತುತ್ತವೆ. ಎರಡನೇ ದಾರಿ ಕಲ್ಲಿದ್ದಲಿಗೆ ಪರ್ಯಾಯ ಇಂಧನವನ್ನು ಕಂಡುಕೊಳ್ಳಬೇಕು.

ಕೃಷಿ ತ್ಯಾಜ್ಯ
ಈಗ ಕಲ್ಲಿದ್ದಲಿನೊಂದಿಗೆ ಕೃಷಿ ತ್ಯಾಜ್ಯ ಉರಿಸುವುದರಿಂದ ವಿದ್ಯುತ್ ಉತ್ಪಾದನೆಯೊಂದಿಗೆ ಪರಿಸರ ಮಾಲಿನ್ಯವನ್ನೂ ಕಡಿಮೆ ಮಾಡಬಹುದು. ನಮ್ಮ ದೇಶದಲ್ಲಿ ಪ್ರತಿ ವರ್ಷ ೨೩೦ ದಶಲಕ್ಷ ಮೆಟ್ರಿಕ್ ಟನ್ ಕೃಷಿ ತ್ಯಾಜ್ಯವನ್ನು ಸುಟ್ಟು ಹಾಕುತ್ತಿದ್ದೇವೆ. ಅದರಲ್ಲಿ ಬತ್ತ, ಕಬ್ಬು, ಗೋಧಿ ಹುಲ್ಲು ಅತಿ ಹೆಚ್ಚು. ದೆಹಲಿ ಬಳಿ ಈ ರೀತಿ ಹೊಲಗಳಲ್ಲಿ ಕೂಳೆಗೆ ಬೆಂಕಿ ಹಾಕುವುದರಿಂದ ನಗರಗಳಲ್ಲಿ ಶ್ವಾಸಕೋಶದ ತೊಂದರೆಗಳು ಅಧಿಕಗೊಂಡಿದೆ.
ಸುಪ್ರೀಂ ಕೋರ್ಟ್ ಕೂಡ ಇದಕ್ಕೆ ಪರಿಹಾರ ಕಂಡು ಹಿಡಿಯಲು ಸರ್ಕಾರಗಳಿಗೆ ತಿಳಿಸಿದೆ. ರೈತರು ಹೊಲದಲ್ಲಿರುವ ಕೂಳೆಯನ್ನು ಕೀಳಲು ಹೋಗುವುದಿಲ್ಲ. ಅದಕ್ಕೆ ಕೂಲಿ ಕೊಡುವವರು ಯಾರು ಎಂಬುದು ರೈತರ ಪ್ರಶ್ನೆ. ಬೆಂಕಿ ಹಾಕುವುದು ಸುಲಭ. ಪರಿಸರ ಮಾಲಿನ್ಯದ ಬಗ್ಗೆ ರೈತರು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.

ಕೃಷಿ ಇಂಧನ
ಹೊಲದಲ್ಲಿ ಉಳಿಯುವ ಎಲ್ಲ ತ್ಯಾಜ್ಯವನ್ನು ಕೃಷಿ ಇಂಧನವಾಗಿ ಪರಿವರ್ತಿಸಬಹುದು. ಗೋಡಂಬಿ, ಶೇಂಗಾ, ಜೋಳ, ಸಜ್ಜೆ, ಗೋಧಿ, ಕಬ್ಬು, ಬತ್ತ, ಸೋಯಾಬೀನ್, ಹತ್ತಿ, ಸೆಣಬು, ಕಾಫಿ, ತಂಬಾಕು ಸೇರಿದಂತೆ ಎಲ್ಲ ತ್ಯಾಜ್ಯಗಳನ್ನು ಉಂಡೆಗಳಾಗಿ, ಇಟ್ಟಿಗೆಗಳ ರೂಪದಲ್ಲಿ ಅಥವಾ ಬೇಲ್ ರೂಪದಲ್ಲಿ ಪರಿವರ್ತಿಸಬಹುದು. ಇದನ್ನು ಬಾಯ್ಲರ್‌ಗಳಿಗೆ ಕಲ್ಲಿದ್ದಲು ಜತೆ ಮಿಶ್ರಣ ಮಾಡಿ ಬಳಸಬಹುದು. ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಕಲ್ಲಿದ್ದಲು ಜತೆ ಶೇಕಡ ೫-೩೦ ರಷ್ಟು ಇದನ್ನು ಮಿಶ್ರಣ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ. ಇದರಿಂದ ಹೊಲದಲ್ಲಿರುವ ಎಲ್ಲ ತ್ಯಾಜ್ಯಗಳು ರೈತರಿಗೆ ಮತ್ತೊಂದು ಆದಾಯದ ಮೂಲ ಆಗಲಿದೆ.
ನಮ್ಮ ರಾಜ್ಯದಲ್ಲಿ ೨೫ ಸಾವಿರ ದಶಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಬಳಕೆಯಾಗುತ್ತಿದೆ. ಇದಕ್ಕೆ ೭೫೦ ದಶಲಕ್ಷ ಮೆಟ್ರಿಕ್ ಟನ್ ಕೃಷಿ ತ್ಯಾಜ್ಯ ಮಿಶ್ರಣ ಮಾಡಬಹುದು.

ಜೈವಿಕ ಇಂಧನ
ಹೊಲದ ತ್ಯಾಜ್ಯವನ್ನು ಜೈವಿಕ ಇಂಧನವಾಗಿ ಪರಿವರ್ತಿಸುವ ಸಣ್ಣ ಕೈಗಾರಿಕೆಗಳು ಈಗ ತಲೆ ಎತ್ತುತ್ತಿವೆ. ಎನ್‌ಟಿಪಿಸಿ ಇದಕ್ಕೆ ಸಂಬಂಧಿಸಿದಂತೆ `ನೇತ್ರ' ಎಂಬ ಸಂಸ್ಥೆಯನ್ನು ಸ್ಥಾಪಿಸಿದೆ. ಇದರ ಮೂಲಕ ನವ್ಯೋದ್ಯಮಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಕೇಂದ್ರ ಸರ್ಕಾರ ಸಹಾಯಧನ ಮತ್ತು ಸುಲಭ ದರದಲ್ಲಿ ಸಾಲ ನೀಡುತ್ತಿದೆ. ಹಳ್ಳಿಗಳಲ್ಲಿ ಇದನ್ನು ಸಣ್ಣ ಕೈಗಾರಿಕೆಗಳಾಗಿ ಸ್ಥಾಪಿಸಿ ಅಲ್ಲಿಯ ಯುವಕರಿಗೆ ಉದ್ಯೋಗ ದೊರಕುವಂತೆ ಮಾಡಬಹುದು. ಇದಕ್ಕೆ ಬೇಕಾಗುವುದು ಕೆಲವು ಯಂತ್ರಗಳು. ಆದರೆ ಸ್ಥಳಾವಕಾಶ ಹೆಚ್ಚು. ಕೃಷಿ ತ್ಯಾಜ್ಯಗಳು ಚೆನ್ನಾಗಿ ಒಣಗಿರಬೇಕು. ಮರದ ಹೊಟ್ಟು ಮತ್ತಿತರ ವಸ್ತುಗಳನ್ನು ಬಳಸಿ ಎಲ್ಲ ತ್ಯಾಜ್ಯಗಳನ್ನು ಒಂದು ಆಕಾರಕ್ಕೆ ತರಬಹುದು. ಆಗ ಅದು ಸರಬರಾಜಿಗೆ ಸಿದ್ಧವಾಗುವುದಲ್ಲದೆ, ಕಲ್ಲಿದ್ದಲು ಜತೆ ಮಿಶ್ರಣ ಮಾಡಲು ಸಾಧ್ಯವಾಗುತ್ತದೆ. ಈ ರೀತಿ ತ್ಯಾಜ್ಯ ಉಂಡೆ ಮತ್ತು ಇಟ್ಟಿಗೆ ತಯಾರಿಸುವುದರಲ್ಲಿ ಹಲವು ಸುಧಾರಣೆಗಳಾಗಿವೆ.

ಟಾರೆಂಟ್ ಕೃಷಿ ತ್ಯಾಜ್ಯ
ಜೈವಿಕ ತ್ಯಾಜ್ಯಗಳನ್ನು ಉಂಡೆ ಮತ್ತು ಇಟ್ಟಿಗೆ ರೂಪದಲ್ಲಿ ನೇರವಾಗಿ ಬಳಸಬಹುದು. ಇವುಗಳನ್ನು `ಟಾರೆಂಟ್' ತಂತ್ರಜ್ಞಾನಕ್ಕೆ ಅಳವಡಿಸಿದರೆ ಕಲ್ಲಿದ್ದಲು ರೂಪದಲ್ಲೇ ಹೆಚ್ಚಿನ ಉಷ್ಣಾಂಶ ಕೊಡುವಂತೆ ಮಾಡಬಹುದು. ಇದರಿಂದ ಹೆಚ್ಚಿನ ದರವೂ ಸಿಗುತ್ತದೆ. ಕೃಷಿ ತ್ಯಾಜ್ಯಗಳು ಒಂದು ರೂಪಕ್ಕೆ ಬಂದ ಮೇಲೆ ಅವುಗಳನ್ನು ೨೦೦-೩೦೦ ಉಷ್ಣಾಂಶದಲ್ಲಿ ಕಡಿಮೆ ಅಮ್ಲಜನಕದಲ್ಲಿ ಹಾದು ಹೋಗುವಂತೆ ಮಾಡಲಾಗುವುದು. ಆಗ ಅದರಲ್ಲಿರುವ ತೇವಾಂಶ ಹೋಗಿ ಇಂಧನ ಶಕ್ತಿ ಅಧಿಕಗೊಳ್ಳುತ್ತದೆ. ಕಲ್ಲಿದ್ದಲಿಗೆ ಸಮಾನ ಲಕ್ಷಣಗಳನ್ನು ಇದು ಹೊಂದಿರುತ್ತದೆ.
ಇದಕ್ಕೆ ಈಗ ಹೆಚ್ಚಿನ ಬೇಡಿಕೆ ಬಂದಿದೆ. ಈ ತಂತ್ರಜ್ಞಾನ ಇನ್ನೂ ಬೆಳವಣಿಗೆ ಹಂತದಲ್ಲಿದೆ. ರೈತರು ಇದೆಲ್ಲವನ್ನೂ ಅರಿತು ಹೊಲದಲ್ಲಿ ಯಾವುದನ್ನೂ ಸುಡದೆ ಮಾರಾಟ ಮಾಡಲು ಚಿಂತಿಸುವುದು ಒಳಿತು.
ಹಳ್ಳಿಗಳಲ್ಲಿ ಈಗ ತಿಪ್ಪೆ ಇಲ್ಲ. ಜನ ಎಲ್ಲ ಕಸವನ್ನು ಬೇಡವಾದ ಸ್ಥಳದಲ್ಲಿ ಹಾಕಿ ಬೆಂಕಿ ಹಾಕುವುದು ರೂಢಿ. ಇದರಿಂದ ಪರಿಸರ ಹಾಳಾಗುವುದಲ್ಲದೆ ಅದರಿಂದ ಹಣವೇನೂ ಬರುವುದಿಲ್ಲ. ನಮ್ಮಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಸ್ಥಾಪನೆಗೆ ಕೋಟ್ಯಂತರ ರೂ. ತೆರಿಗೆದಾರರ ಹಣವನ್ನು ಬಂಡವಾಳವಾಗಿ ತೊಡಗಿಸಿದ್ದೇವೆ. ಅದು ವ್ಯರ್ಥವಾಗಬಾರದು. ಕಲ್ಲಿದ್ದಲು ಆಧರಿತ ವಿದ್ಯುತ್ ಕೇಂದ್ರಗಳಿಗೆ ಕೃಷಿ ತ್ಯಾಜ್ಯ ಬಳಸುವುದರಿಂದ ವಾತಾವರಣ ಕೂಡ ಸ್ವಚ್ಛವಾಗಿರುವುದು. ರೈತರ ಆದಾಯ ಕೂಡ ಅಧಿಕಗೊಳ್ಳುತ್ತದೆ.