For the best experience, open
https://m.samyuktakarnataka.in
on your mobile browser.

ಕೃಷ್ಣನ ಫೋಟೋಗೆ ಅಪಮಾನ: ಆರೋಪಿ ಬಂಧನಕ್ಕೆ ಆಗ್ರಹ

08:36 PM Jan 07, 2025 IST | Samyukta Karnataka
ಕೃಷ್ಣನ ಫೋಟೋಗೆ ಅಪಮಾನ  ಆರೋಪಿ ಬಂಧನಕ್ಕೆ ಆಗ್ರಹ

ಕೋಲಾರ: ಸಮಾಜದ ಸಾಮರಸ್ಯ ಹಾಳು ಮಾಡುತ್ತಿರುವ ಚಂದ್ರಮೌಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಗರದಲ್ಲಿ ಬೈಕ್ ರ್ಯಾಲಿ ನಡೆಸಿದ ಹಿಂದೂಪರ ಸಂಘಟನೆಗಳ ಮುಖಂಡರು ಡಿಸಿ ಮತ್ತು ಎಸ್ಪಿಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದರು.
ಜ. 3ರಂದು ನಡೆದ ಕೋಲಾರ ಬಂದ್ ಹಿನ್ನೆಲೆಯಲ್ಲಿ ಹಿಂದಿನ ದಿನ ಗುರುವಾರ 2ರಂದು ಬೈಕ್ ರ್ಯಾಲಿ ನಡೆದ ಸಂದರ್ಭದಲ್ಲಿ ಡಿಡಿಪಿಐ ಕಚೇರಿಯಲ್ಲಿ ಭಗವಾನ್ ಶ್ರೀ ಕೃಷ್ಣ ಬೋಧಿಸಿದಂತಹ ಭಗವದ್ಗೀತೆಯ ಗೀತೆ ಸಾರದ ಫ್ಲೆಕ್ಸ್ ಹಾಕಿದ ಚಂದ್ರಮೌಳಿ ಮತ್ತು ಸಹಚರರು ಬಂದ್ ಮಾಡುವ ನೆಪದಲ್ಲಿ ಭಗವಾನ್ ಕೃಷ್ಣನಿಗೆ ಅವಮಾನ ಮಾಡಿದ್ದಾರೆ. ಈ ರೀತಿಯ ಗೂಂಡಾ ವರ್ತನೆಯಿಂದ ಧಾರ್ಮಿಕ ಅವಹೇಳನವಾಗಿ ಹಿಂದೂಗಳಿಗೆ ಬಹಳ ನೋವುಂಟಾಗಿದೆ. ನಂತರ ಆರ್‍ಎಸ್‍ಎಸ್‌ನಿಂದ ನಡೆದ ಮೆರವಣಿಗೆ ಸಂದರ್ಭದಲ್ಲಿ ಕ್ಲಾಕ್‍ಟವರ್ ಬಳಿ ಸಹಚರರೊಡನೆ ಬಂದ ಚಂದ್ರಮೌಳಿ ಗಲಾಟೆ ಮಾಡುವಂತೆ ಮುಸ್ಲಿಂ ಯುವಕರಿಗೆ ಪ್ರಚೋದನೆ ಮಾಡುವ ಮೂಲಕ ಗುಂಪು ಸೇರಿಸಿದ್ದಾನೆ. ಆದರೂ ಪೊಲೀಸರು ಗುಂಪನ್ನು ಚದುರಿಸುವ ಮೂಲಕ ಶಾಂತಿಯನ್ನು ಕಾಪಾಡುವುದರೊಂದಿಗೆ ಕೋಮು ಸೌಹಾರ್ದತೆಯನ್ನು ಮೆರೆಸಿದ್ದಾರೆ. ಹೀಗಾಗಿ ಸಮಾಜಘಾತಕವಾಗಿ ಪರಿಣಮಿಸಿರುವ ಚಂದ್ರಮೌಳಿಯನ್ನು ಬಂಧಿಶಿ ಗಡಿಪಾರು ಮಾಡಬೇಕು. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಕಿಡಿಗೇಡಿಗಳಿಗೆ ಕಾನೂನಿನ ರೀತಿ ಶೀಘ್ರವಾಗಿ ಶಿಕ್ಷೆ ಆಗುವಂತೆ ಮಾಡಬೇಕಾಗಿದ್ದು ಇಲ್ಲವಾದಲ್ಲಿ ಕೋಲಾರ ಬಂದ್ ಮಾಡಲು ದಿನಾಂಕವನ್ನು ನಿಶ್ಚಯ ಮಾಡಲಾಗುತ್ತದೆಂದು ಮುಖಂಡ ಶಬರೀಶ್‍ಯಾದವ್ ಎಚ್ಚರಿಸಿದರು.
ಬಿಜೆಪಿ ಮುಖಂಡರಾದ ಓಂಶಕ್ತಿ ಚಲಪತಿ, ರಾಜೇಶ್ ಸಿಂಗ್, ಕೆಂಬೋಡಿ ನಾರಾಯಣಸ್ವಾಮಿ, ವಿಜಯಕುಮಾರ್, ವಕೀಲ ದಿವಾಕರ್, ಪಾಲ್ಗುಣ, ಧನಂಜಯರಾಜ್, ತ್ರಿಭುವನ್ ಸಿಂಗ್, ಮಂಜುಮುದ್ದಪ್ಪ, ಹಿಂದೂಪರ ಸಂಘಟನೆಗಳ ಮುಖಂಡ ಬಾಲಾಜಿ, ರಮೇಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪ್ರತಿಭಟನೆಯಲ್ಲಿ ನೂರಾರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಪೀಠಿಕೆ ಅಳವಡಿಸಿ: ದೇವರನ್ನು ಗೌರವಿಸಿ
ಅಂಬೇಡ್ಕರ್ ಮತ್ತು ದೇವರಾಜ ಅವರು ಅಶಕ್ತರಿಗೆ ಧ್ವನಿ ನೀಡಿದ ಮಹಾನ್ ನಾಯಕರಾಗಿದ್ದು ಜನ ಸಮುದಾಯದವರು ದೇವರಂತೆ ಕಾಣುತ್ತಾರೆ. ಮೀಸಲಾತಿ ಫಲಾನುಭವಿ ಆಗಿರುವ ನನ್ನ ಪತ್ನಿ ಶ್ವೇತಾ ನಗರಸಭೆ ಅಧ್ಯಕ್ಷರಾಗಿಯೂ ಮಾದರಿಯಾಗಿ ಆಡಳಿತ ನಡೆಸಿದ್ದಾರೆ. ಹೀಗಾಗಿ ಸಂವಿಧಾನದ ಪೀಠಿಕೆಯನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಕಬೇಕೆಂಬುದು ನಮ್ಮ ಅಭಿಲಾಷೆಯಾಗಿದೆ. ಹಾಗಂತ ಹಿಂದೂ ದೇವರುಗಳನ್ನು ಅಪಮಾನಿಸುವುದನ್ನು ನಾವು ಸಹಿಸುವುದಿಲ್ಲ. ಕೃಷ್ಣನ ಫೋಟೋ ಹರಿದಿರುವ ಚಂದ್ರಮೌಳಿಯನ್ನು ಬಂಧಿಸಿ ಗಡಿಪಾರು ಮಾಡಬೇಕಾಗಿದೆ ಎಂದು ಯಾದವ ಮುಖಂಡ ಶಬರೀಶ್ ಯಾದವ್ ಆಗ್ರಹಿಸಿದರು.