ಪ್ರತಿಭಟನೆ ಮಾಡುವ ಹಕ್ಕಿದೆ ಆದರೆ ಗೀತೆಯ ಸಾರವನ್ನು …
ವಕ್ಫ್ ಬೋರ್ಡ್ ಹೆಸರು ನಮೂದಾದಾಗ ಈ ಪ್ರತಿಭಟನಕಾರರು ಎಲ್ಲಿದ್ದರು
ಬೆಂಗಳೂರು: ಪ್ರತಿಭಟನೆ ಮಾಡುವ ಹಕ್ಕಿದೆ ಆದರೆ ಗೀತೆಯ ಸಾರವನ್ನು ಹರಿದು ಹಾಕುವ ಹಕ್ಕು ಖಂಡಿತ ಇಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭಾರೀ ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕೋಲಾರ ನಗರದ ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಕಾರಿಡಾರ್‌ನಲ್ಲಿ ಶಿಷ್ಟಾಚಾರವನ್ನು ನೆಪವನ್ನಿಟ್ಟುಕೊಂಡು ಭಗವದ್ಗೀತೆಯ ಸಾರವನ್ನು ತೋರಿಸುವ ಭಾವಚಿತ್ರವನ್ನು ಹರಿದುಹಾಕಿರುವ ಪ್ರಸಂಗ ನಡೆದಿರುವುದು ಪ್ರತಿಭಟನಾಕಾರರ ಅಸಹಿಷ್ಣುತೆ ತೋರಿಸುತ್ತದೆ.
ಶಿಷ್ಟಾಚಾರ ಪಾಲನೆ ಆಗದೆ ಇದ್ದರೆ ಅದಕ್ಕೆ ದೂರು ನೀಡುವ ವ್ಯವಸ್ಥೆ ಇದೆ, ಪ್ರತಿಭಟನೆ ಮಾಡುವ ಹಕ್ಕಿದೆ ಆದರೆ ಗೀತೆಯ ಸಾರವನ್ನು ಹರಿದು ಹಾಕುವ ಹಕ್ಕು ಖಂಡಿತ ಇಲ್ಲ. ರೈತರ ಜಮೀನುಗಳಿಗೆ ಯಾವುದೇ ನೋಟೀಸು ನೀಡದೆ ಆರ್.ಟಿ.ಸಿ.ಯ ಕಾಲಂ 11 ರಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾದಾಗ ಈ ಪ್ರತಿಭಟನಕಾರರು ಎಲ್ಲಿದ್ದರು ಹಾಗೂ ಯಾಕೆ ಪ್ರತಿಭಟನೆ ಮಾಡಲಿಲ್ಲ ಎಂದು ಹೇಳಲಿ.
ಅನ್ಯ ಕೋಮಿನ ಹಬ್ಬಗಳಲ್ಲಿ ಪ್ರಾಣಿ ಹತ್ಯೆ ಮಾಡಿದ್ದಾಗ ಅದರ ಬಗ್ಗೆ 'ಚ' ಕಾರವೆತ್ತದ ಇವರು ಹಿಂದೂಗಳ ಪವಿತ್ರ ಗ್ರಂಥವನ್ನು ಅಪಮಾನಗೊಳಿಸಿದ್ದು ಅಕ್ಷಮ್ಯ. ಪೊಲೀಸರು ಈ ರೀತಿಯಾದ Rent-a-Cause ಪ್ರತಿಭಟನಾಕಾರರ ಮೇಲೆ ಕೇಸು ದಾಖಲಿಸಿ ವಿಚಾರಣೆಗೆ ಒಳಪಡಿಸಲಿ ಎಂದಿದ್ದಾರೆ.