For the best experience, open
https://m.samyuktakarnataka.in
on your mobile browser.

ಕೃಷ್ಣೆ, ಮೇಕೆದಾಟು, ರೈಲ್ವೆ… ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ನಿರೀಕ್ಷೆಗಳೇನು?

03:30 AM Jan 30, 2025 IST | Samyukta Karnataka
ಕೃಷ್ಣೆ  ಮೇಕೆದಾಟು  ರೈಲ್ವೆ… ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ನಿರೀಕ್ಷೆಗಳೇನು

ಕರ್ನಾಟಕದ ಅತ್ಯವಶ್ಯಕ ಯೋಜನೆಗಳು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಾದರೂ ಘೋಷಣೆಯಾಗುವವೇ? ಈ ಹಿಂದೆ ದೊರಕಿದ್ದ ಯೋಜನೆಗಳಿಗೆ ಸೂಕ್ತ ಮೊತ್ತ ನಿಗದಿಯಾದೀತೇ? ಕೇಂದ್ರದಿಂದ ಬರಬೇಕಾದ ಸಾವಿರಾರು ಕೋಟಿ ರೂಪಾಯಿಗಳ ತೆರಿಗೆ ಅನುದಾನಕ್ಕೆ ಕಾದಿರುವ ಬಜೆಟ್ ಹೊಸ್ತಿಲಿನ ಪ್ರಶ್ನೆಗಳಿವು.
ನೀರಾವರಿಯ ಪೈಕಿ ಕಾವೇರಿ ಮತ್ತು ಕೃಷ್ಣೆಯ ಪಾತ್ರಗಳೆರಡೂ ಕೇಂದ್ರದ ನೆರವಿನ ನಿರೀಕ್ಷೆ ಹೊತ್ತಿದ್ದು, ಯಾವುದೇ ಕೇಂದ್ರ ಬಜೆಟ್ ಈ ಬಗ್ಗೆ ಮಾತನಾಡಿಲ್ಲ. ಹಣಕಾಸು ಸಚಿವರು ರಾಜ್ಯದಿಂದ ಪ್ರತಿನಿಧಿಸುತ್ತಿದ್ದರೂ ಅದೇಕೋ ಈ ಎರಡೂ ಜೀವನದಿಗಳ ಯೋಜನೆಗಳು ಗಂಭೀರ ಎಂಬುದಾಗಿ ಕೇಂದ್ರಕ್ಕೆ ಈತನಕ ಅನಿಸಿಲ್ಲ.
ಮೇಕೆದಾಟು ಕುರಿತು ರಾಜ್ಯಕ್ಕೆ ಪೂರಕವಾದ ಮಾತು ಮತ್ತು ಆರಂಭಿಕ ಮೊತ್ತ; ರಾಜ್ಯವೊಂದೇ ಏಕಾಂಗಿಯಾಗಿ ಮುಗಿಸಲು ಸಾಧ್ಯವಿಲ್ಲದಂತಾಗಿರುವ ಕೃಷ್ಣಾ ಮೇಲ್ದಂಡೆ ಕಾಮಗಾರಿಗಳನ್ನು ರಾಷ್ಟ್ರೀಯ ಯೋಜನೆ'ಯಾಗಿ ಘೋಷಿಸಲಿ ಎಂಬ ದೂರದ ಆಸೆಗಳನ್ನು ರಾಜ್ಯ ಹೊತ್ತಿದೆ. ಭದ್ರಾ ಮೇಲ್ದಂಡೆಯನ್ನು ಮೂರು ವರ್ಷಗಳಷ್ಟು ಹಿಂದೆಯೇ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲಾಗಿದೆ. ಆದರೆ ಬಜೆಟ್‌ನಲ್ಲೇ ಪ್ರಕಟಿಸಿದ್ದ ೫೩೦೦ ಕೋಟಿ ರೂಪಾಯಿಗೆ ಇನ್ನೂ ಬಿಡುಗಡೆಯ ಭಾಗ್ಯ ದೊರೆತಿಲ್ಲ. ಈ ಬಗ್ಗೆಯೂ ಸ್ಪಷ್ಟತೆ ದೊರೆಯಬೇಕಿದೆ. ಮಹದಾಯಿಗೆ ಅರಣ್ಯ ಇಲಾಖೆಯ ಅನುಮೋದನೆಯೊಂದೇ ಬಾಕಿ ಉಳಿದಿದೆ. ಈ ಯೋಜನೆ ಕುರಿತ ಮುಂದಿನ ನಡೆ ಏನು? ಆಶಾದಾಯಕ ಮಾತು ಬಂದೀತೇ ಎಂಬುದು ರಾಜ್ಯದ ಇನ್ನೊಂದು ಬಹುಮುಖ್ಯ ನಿರೀಕ್ಷೆಯಾಗಿದೆ. ಔದ್ಯಮಿಕತೆಗೆ ಸಂಬಂಧಿಸಿದಂತೆ ಕರ್ನಾಟಕವನ್ನು ಈ ಬಾರಿಯಾದರೂ ವಿಶೇಷ ಆರ್ಥಿಕ ವಲಯದ (ಎಸ್‌ಇಝಡ್) ಪಟ್ಟಿಗೆ ಸೇರಿಸಿ ಆದ್ಯತೆಯ ಮೇಲೆ ಕೇಂದ್ರ ಸ್ವಾಮ್ಯದ ಬೃಹತ್ ಉದ್ಯಮಗಳನ್ನು ಘೋಷಿಸಬೇಕಾಗಿದೆ. ಇತ್ತೀಚಿನ ದಶಕಗಳಲ್ಲಿ ರಾಜ್ಯಕ್ಕೆ ಒಂದೇ ಒಂದು ಬೃಹತ್ ಘಟಕವನ್ನು ಕೇಂದ್ರ ಕೊಟ್ಟಿಲ್ಲ. ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ಘೋಷಣೆಯಾಗಿ ನಾಲ್ಕು ವರ್ಷಗಳೇ ಆಗಿವೆ. ಆದರೂ ಈ ಕಾರಿಡಾರ್‌ನಲ್ಲಿ ಒಂದೇ ಒಂದು ಉದ್ಯಮ ಬಂದಿಲ್ಲ. ಕೇಂದ್ರ ಸ್ವಾಮ್ಯದ ಘಟಕಗಳನ್ನು ಈ ಕಾರಿಡಾರ್‌ಗೆ ನೀಡುವ ಜೊತೆಗೆ, ಎಸ್‌ಇಝಡ್ ಅನ್ವಯ ರಿಯಾಯ್ತಿಗಳನ್ನು ಕೊಟ್ಟರೆ ಖಾಸಗಿ ಉದ್ಯಮಗಳೂ ಸಹಜವಾಗಿ ಉತ್ಸುಕತೆ ತೋರಲಿವೆ. ಇದರೊಂದಿಗೆ ರಾಜ್ಯದ ಹೆಮ್ಮೆಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪನಿ (ವಿಎಸ್‌ಐಎಲ್- ಶಿವಮೊಗ್ಗ) ಪುನಶ್ಚೇತನಗೊಳಿಸಲು ಅನುದಾನ ಅತ್ಯಗತ್ಯವಾಗಿದೆ. ಕರ್ನಾಟಕದ ಒಂಬತ್ತು ಪ್ರಮುಖ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ನೈಋತ್ಯ ರೈಲ್ವೆಯ ಈ ಯೋಜನೆಗಳಿಗೆ ಕಳೆದ ಬಜೆಟ್‌ನಲ್ಲಿ ೮ ಸಾವಿರ ಕೋಟಿಗೂ ಹೆಚ್ಚು ಹಣವನ್ನು ಘೋಷಿಸಲಾಗಿತ್ತು. ರೈಲ್ವೆ ವಿಷಯದಲ್ಲಿ ಮಾತ್ರ ಕರ್ನಾಟಕಕ್ಕೆ ಸೂಕ್ತ ಅನುದಾನ ಘೋಷಿತವಾಗಿತ್ತು. ಕಳೆದ ಹತ್ತು ವರ್ಷಗಳಲ್ಲಿ ರೈಲ್ವೆಗೆ ವರ್ಷದಿಂದ ವರ್ಷ ಹೆಚ್ಚು ಹಣವನ್ನು ನೀಡಲಾಗುತ್ತಿದೆ. ಹೀಗಾಗಿ ಪ್ರಸಕ್ತ ಬಜೆಟ್ ಕೂಡ ನೈಋತ್ಯ ವಲಯಕ್ಕೆ ಹೆಚ್ಚು ಹಣ ಕೊಡಲಿದೆ ಎನ್ನುವ ನಿರೀಕ್ಷೆ ಇದೆ. ಇತರ ಕೇಂದ್ರ ಪುರಸ್ಕೃತ ಯೋಜನೆಗಳು, ವಿಶೇಷವಾಗಿ ಹೆದ್ದಾರಿಯಂತಹ ಮೂಲಭೂತ ಸೌಕರ್ಯಗಳ ವಿಷಯಗಳ ಪೈಕಿ, ರಾಜ್ಯದಲ್ಲಿ ಹಾದು ಹೋಗಲಿರುವಸೂರತ್- ಚೆನ್ನೈ' ಹೆದ್ದಾರಿ ಮತ್ತು ಉದೇಶಿತ ಹದಿನಾಲ್ಕು ಪಥಗಳ `ಬೆಂಗಳೂರು- ಪುಣೆ' ಎಕ್ಸ್‌ಪ್ರೆಸ್ ಹೆದ್ದಾರಿಗಳ (ಇ-ವೇ) ಬಗ್ಗೆ ಬಜೆಟ್‌ನಲ್ಲಿ ಸ್ಪಷ್ಟತೆ ದೊರೆಯಲಿ ಎಂಬ ನಿರೀಕ್ಷೆ ಮೂಡಿದೆ.

ಹೊಸ ಮಾರ್ಗ, ಕೊಂಕಣ ನಿಗಮ… ಏನು-ಎತ್ತ?
ರಾಜ್ಯ ಸದ್ಯ ಕಾತರದಿಂದ ಕಾಯುತ್ತಿರುವ ಹೊಸ ರೈಲು ಮಾರ್ಗ ಹುಬ್ಬಳ್ಳಿ- ಅಂಕೋಲಾ. ಕರ್ನಾಟಕದ ದಶಕಗಳ ಕನಸು ಈ ಬಜೆಟ್‌ನಲ್ಲಿ ನನಸಾಗುವುದೇ? ಪ್ರಸಕ್ತ ಯೋಜನೆ ಕುರಿತು ಶೀಘ್ರ ಶುಭ ಸುದ್ದಿ ದೊರೆಯಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಇತ್ತೀಚೆಗೆ ಹೇಳಿದ್ದರು. ಹೀಗಾಗಿ ಬಜೆಟ್ ಕಡೆ ನಾಡು ನೋಡುತ್ತಿದೆ. ಇದೇ ರೀತಿ ತುಮಕೂರು- ದಾವಣಗೆರೆ ನೇರ ಮಾರ್ಗದ ಕುರಿತು ಇನ್ನೂ ಇರುವ ಕೆಲವಾರು ಆರ್ಥಿಕ ಗೊಂದಲಗಳನ್ನು ಬಜೆಟ್ ಪರಿಹರಿಸಬೇಕಾಗಿದೆ.

ಎಷ್ಟು ವಂದೇ ಭಾರತ್?
ಸದ್ಯ ಕರ್ನಾಟಕದ ನೈಋತ್ಯ ರೈಲ್ವೆ ವಲಯದಲ್ಲಿ ಮೂರು ವಂದೇ ಭಾರತ್ ಸಂಚರಿಸುತ್ತಿವೆ. ಇವುಗಳನ್ನು ಇನ್ನಷ್ಟು ಹೆಚ್ಚಿಸಿ, ಕಲ್ಯಾಣ ಕರ್ನಾಟಕ ಭಾಗಕ್ಕೂ ಇದರ ಸೌಲಭ್ಯ ದೊರೆಯಬೇಕಿದೆ. ಅಲ್ಲದೇ ಕೆಲವೇ ದಿನಗಳಲ್ಲಿ ಆರಂಭವಾಗಲಿರುವ `ವಂದೇ ಭಾರತ್ ನೈಟ್ ಸರ್ವೀಸ್ ಸ್ಲೀಪರ್' ರೈಲುಗಳನ್ನು ಬೆಂಗಳೂರು- ಧಾರವಾಡ; ಮೈಸೂರು- ಚೆನ್ನೈ; ಹುಬ್ಬಳ್ಳಿ-ಪುಣೆ ಮಾರ್ಗಗಳಲ್ಲಿ ಓಡಿಸಬೇಕು ಎನ್ನುವ ಬೇಡಿಕೆ ಇದೆ.