For the best experience, open
https://m.samyuktakarnataka.in
on your mobile browser.

ಕೇಜ್ರಿಗೆ ಇನ್ನೂ ೪ ದಿನ ಜೈಲೇ ಗತಿ

11:13 PM Apr 10, 2024 IST | Samyukta Karnataka
ಕೇಜ್ರಿಗೆ ಇನ್ನೂ ೪ ದಿನ ಜೈಲೇ ಗತಿ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ತಮ್ಮನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಪ್ರಶ್ನಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಈ ತೀರ್ಪು ಪ್ರಶ್ನಿಸಿ ಬುಧವಾರ ಕೇಜ್ರಿವಾಲ್ ಸುಪ್ರೀಂಕೋರ್ಟ್‌ಗೆ ಮೊರೆ ಹೋದರೂ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಆ ಬಗ್ಗೆ ತುರ್ತು ವಿಚಾರಣೆ ಕೈಗೊಳಲಿಲ್ಲ.
ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಈ ಬೆಳಗ್ಗೆ ಮುಖ್ಯ ನ್ಯಾಯಮೂರ್ತಿಯವರಲ್ಲಿ ತಮ್ಮ ಮನವಿ ಕುರಿತು ಪ್ರಸ್ತಾವಿಸಿದರೂ ಅದರ ವಿಚಾರಣೆಗೆ ಅವಕಾಶ ನೀಡುವುದೇ ಎಂಬುದನ್ನೂ ಚಂದ್ರಚೂಡ್ ಸ್ಪಷ್ಟಪಡಿಸಲಿಲ್ಲ. ನೋಡೋಣ ಎಂದಷ್ಟೇ ಮುಖ್ಯ ನ್ಯಾಯಮೂರ್ತಿ ಪ್ರತ್ಯುತ್ತರಿಸಿದರು. ಇದಲ್ಲದೆ, ತುರ್ತು ವಿಚಾರಣೆಗೆ ವಿಶೇಷ ನ್ಯಾಯಪೀಠವನ್ನೂ ರಚಿಸಿಲ್ಲ ಎಂದು ಹೇಳಲಾಗಿದೆ.
ಈ ನಡುವೆ ಗುರುವಾರ ಮುಸ್ಲಿಮರ ಈದ್ ಉಲ್ ಫಿತರ್ ಹಬ್ಬ, ಶುಕ್ರವಾರ ಸ್ಥಳೀಯ ರಜೆ ಹಾಗೂ ವಾರಾಂತ್ಯದ ಎರಡು ರಜೆ ನಂತರ ಸೋಮವಾರವೇ ಸುಪ್ರೀಂಕೋರ್ಟ್ ಕಲಾಪ ನಡೆಯಲಿದೆ. ಅಷ್ಟರವರೆಗೆ ಕೇಜ್ರಿವಾಲ್‌ಗೆ ದೆಹಲಿಯ ತಿಹಾರ್ ಜೈಲೇ ಗತಿ.
ಜಾರಿ ನಿರ್ದೇಶನಾಲಯವು ಹೊರಡಿಸಿದ ಅನೇಕ ಸಮನ್ಸ್ಗಳಿಗೆ ಕೇಜ್ರಿವಾಲ್ ಪ್ರತಿಸ್ಪಂದಿಸದ ಕಾರಣ ಅವರನ್ನು ಬಂಧಿಸದ ವಿನಹ ಈ ತನಿಖಾ ಸಂಸ್ಥೆಗೆ ಅನ್ಯ ಮಾರ್ಗವಿರಲಿಲ್ಲ. ಇದಲ್ಲದೆ, ಅಬಕಾರಿ ನೀತಿ ಹಗರಣದಲ್ಲಿ ಸಂಪಾದಿಸಿದ ಆದಾಯವನ್ನು ಅವರು ಬಳಕೆ ಮಾಡಿಕೊಂಡಿದ್ದಲ್ಲದೆ, ಆ ವಿಷಯವನ್ನು ಮರೆಮಾಚಿದ್ದಾರೆಂದು ತನಿಖಾ ಸಂಸ್ಥೆ ಆರೋಪಿಸುತ್ತಿರುವುದರಿಂದ ಅವರ ಬಂಧನ ಪ್ರಶ್ನಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ತನಿಖಾ ಸಂಸ್ಥೆಯ ವಿಚಾರಣೆಗೆ ಸಂಬಂಧಿಸಿ ಸಾಮಾನ್ಯ ವ್ಯಕ್ತಿ ಹಾಗೂ ಮುಖ್ಯಮಂತ್ರಿ ಯವರಂಥವರಿಗೆ ಪ್ರತ್ಯೇಕ ಶಿಷ್ಟಾಚಾರಗಳಿಲ್ಲ ಎಂದೂ ಉಲ್ಲೇಖಿಸಿದೆ. ಕೇಜ್ರಿವಾಲ್ ಜನಾದೇಶ ಮೇಲೆ ಸಾರ್ವಜನಿಕರ ಅಧಿಕಾರ ಅನುಭವಿಸಿದ್ದಾರೆ. ಹೀಗಾಗಿ ನಾಗರಿಕರಿಗಿರುವ ಕಾನೂನು ಅವರಿಗೂ ಅನ್ವಯವಾಗುತ್ತದೆ ಎಂದು ಸ್ಪಷ್ಪಪಡಿಸಿದೆ.