ಕೈ ಕಾರ್ಯಕರ್ತರಿಗೆ ಶಕ್ತಿ ತುಂಬುವಲ್ಲಿ ಯಶಸ್ವಿಯಾದ ಸಮಾವೇಶ
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ದಿಸೆಯಲ್ಲಿ ನಗರದ ಅಡ್ಯಾರಿನ ಸಹ್ಯಾದ್ರಿ ಮೈದಾನದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಯಶಸ್ವಿಯಾಯಿತು. ಯಾವುದೇ ಗದ್ದಲ, ಗೊಂದಲಕ್ಕೆ ಅವಕಾಶವಾಗದಂತೆ ಯೋಜಿತವಾಗಿ ಅಚ್ಚುಕಟ್ಟಾಗಿ ನಡೆದ ಸಮಾವೇಶದಲ್ಲಿ ಉಭಯ ಜಿಲ್ಲೆಗಳ ಸುಮಾರು ೩೦ ಸಾವಿರ ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕಾರ್ಯಕರ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ, ಸುಡು ಬಿಸಿಲಿಗೆ ನೀರು, ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿತ್ತು.
ನಿಗದಿತ ಮಧ್ಯಾಹ್ನ ೨ಕ್ಕೆ ಸಮಾವೇಶ ಆರಂಭಗೊಂಡು ಆರಂಭದಲ್ಲಿ ಸ್ಥಳೀಯ ಮುಖಂಡರು, ಸಚಿವರು, ಮಾಜಿ ಸಚಿವರು ಮಾತನಾಡಿ ಕಾರ್ಯಕರ್ತರನ್ನು ಹುರಿದುಂಬಿಸಿದರು. ಸುಮಾರು ೩.೨೦ಕ್ಕೆ ಹಿರಿಯ ನಾಯಕರುಗಳು ವೇದಿಕೆಯನ್ನು ಆಲಂಕರಿಸಿ ಸಂಜೆ ೫.೪೦ರ ವೇಳೆಗೆ ಕಾರ್ಯಕ್ರಮ ಬಹುತೇಕ ಮುಕ್ತಾಯವಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡದ್ದರಿಂದ ಸಂಚಾರ ವ್ಯವಸ್ಥೆಯಲ್ಲಿ ಸ್ವಲ್ಪಮಟ್ಟಿನ ಆಡಚಣೆಯಾಯಿತು.
ಸಚಿವರಾದ ಡಾ.ಪರಮೇಶ್ವರ, ಮಧು ಬಂಗಾರಪ್ಪ, ದಿನೇಶ್ ಗುಂಡೂರಾವ್, ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್, ಕೆ. ಜೆ. ಜಾರ್ಜ್, ಮಂಕಾಳವೈದ್ಯ,, ಮುನಿಯಪ್ಪ, ಹಿರಿಯ ನಾಯಕ ಆರ್. ವಿ. ದೇಶಪಾಂಡೆ, ಮಾಜಿ ಸಚಿವರಾದ ಮೋಟಮ್ಮ, ಟಿ.ಬಿ. ಜಯಚಂದ್ರ, ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಆಂಜನೇಯ, ವಿನಯ ಕುಮಾರ್ ಸೊರಕೆ ಮಾಜಿ ಸಂಸದ ವಿ. ಎಸ್. ಉಗ್ರಪ್ಪ, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕರಾದ ಅಶೋಕ ಪಟ್ಟಣ, ಅಶೋಕ್ ರೈ, ಮುಖಂಡರಾದ ಶಕುಂತಳಾ ಶೆಟ್ಟಿ, ಗಫೂರ್, ಐವನ್ ಡಿಸೋಜ, ನಾಯಕರಾದ ಮಿಥುನ್ ರೈ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಕೇಂದ್ರ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ, ಮುಖಂಡರಾದ ಬಿ.ಕೆ.ಹರಿಪ್ರಸಾದ್, ಜೆ.ಸಿ.ಚಂದ್ರಶೇಖರ, ಪದ್ಮರಾಜ್, ಪಿ.ವಿ.ಮೋಹನ್ ಮಾಜಿ ಸಂಸದ ಚಂದ್ರಪ್ಪ, ಪಿ. ವಿ. ಮೋಹನ್, ಚಂದ್ರಪ್ಪ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರು, ಜಿಲ್ಲೆ, ರಾಜ್ಯದ ನಾಯಕರು ಉಪಸ್ಥಿತರಿದ್ದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು. ಡ್ರಾ. ಮಂಜುನಾಥ ಭಂಡಾರಿ ಮತ್ತು ಮಮತಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಅನ್ನರಾಮಯ್ಯ:
ಸಮಾವೇಶದಲ್ಲಿ ನಾಯಕರುಗಳ ಹೆಸರು ಹೇಳುವಾಗ ನೆರೆದಿದ್ದ ಕಾರ್ಯಕರ್ತರು ಜೈಕಾರಗಳು ಮುಗಿಲುಮಟ್ಟಿದವು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತು ಆರಂಭಿಸಲು ನಿಂತಾಗ ಜೋರಾದ ಘೋಷಣೆಗಳು ಮೊಳಗಿ ಅನ್ನರಾಮಯ್ಯ ಎಂದು ಜನತೆ ಜಯಕಾರ ಹಾಕಿದರು.
ತಕ್ಕ ಉತ್ತರ ನೀಡಿ:
ಧರ್ಮದ ಹೆಸರಲ್ಲಿ ರಾಜಕೀಯ ಮಾಡುವವರು ಬಡವರು, ದಲಿತರನ್ನು ತುಳಿಯುವ ಗುರಿ ಹೊಂದಿದ್ದಾರೆ. ಇದಕ್ಕೆ ಜನರು ತಕ್ಕ ಉತ್ತರ ನೀಡಬೇಕು. ಕಾರ್ಯಕರ್ತರು ಕಾಂಗ್ರೆಸ್ ನೀಡಿದ, ಮಾಡಿದ ಸಾಧನೆಗಳನ್ನೂ ಜನರಿಗೆ ತಿಳಿಸಬೇಕು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆ, ಬಜೆಟ್ ನೋಡಿದ ಮೇಲೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ ೨೦ ಸ್ಥಾನ ಗೆಲ್ಲಲಿದ್ದೇವೆ. ಅದಕ್ಕೆ ತಳ ಹಂತದ ಕಾರ್ಯಕರ್ತರಿಗೆ ಹೊಣೆಗಾರಿಕೆ ಬೇಕು. ಮಂಗಳೂರು, ಉಡುಪಿ, ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿ ಸೀಟು ಗೆಲ್ಲಬೇಕು :
- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷರು