ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕೊಟ್ಟವ ಕೋಡಂಗಿ, ತಿಂದವ ಈರಭದ್ರ

03:23 AM Aug 07, 2024 IST | Samyukta Karnataka

ಮಳೆಯಂತೂ ಸಮೃದ್ಧವಾಗಿ ಬಂದಿದೆ. ನಾಡೆಲ್ಲ ಹಸಿರು, ಎಲ್ಲೆಲ್ಲೂ ಮನ ತಣಿಸುವ ನೀರು. ಪ್ರಕೃತಿ ಸೌಂದರ್ಯದ ಮುಂದೆ ಬೇರೇನೂ ಇಲ್ಲ. ಟೀವಿಯಲ್ಲಿ ತೋರಿಸುತ್ತಿದ್ದ ದೃಶ್ಯಗಳು ನೋಡಿ ವಿಶಾಲುಗೆ ಆನಂದವಾಯಿತು.
“ಮಳೆಯಲ್ಲಿ ನೆನೆಯೋ ಆಸೆ ಆಗ್ತಿದೆ” ಎಂದಳು.
“ಎಮ್ಮೆಗಳು ಮಾತ್ರ ಮಳೆಯಲ್ಲಿ ನೆನೆಯೋಕೆ ಇಷ್ಟ ಪಡುತ್ತೆ” ಎಂದು ವಿಶ್ವ ರೇಗಿಸಿದ. ಈ ಹೋಲಿಕೆ ವಿಶಾಲೂಗೆ ಇಷ್ಟವಾಗಲಿಲ್ಲ. ಗಂಡನೊಡನೆ ಕಾದಾಡಲು ಪದಗಳು ಹುಡುಕುತ್ತಿರುವಾಗ ಕಂಟ್ರಾö್ಯಕ್ಟರ್ ಸೂರಿ ಬಂದ.
“ನಮಸ್ಕಾರ ಸಾರ್, ಗಿಡ ನೆಡೋ ಸ್ಕೀಮು ನಿಮ್ಮ ಹತ್ರ ಹೇಳಿದ್ನಲ್ಲ” ಎಂದ.
“ಓಹ್ ! ಅದಾ? ಚೆನ್ನಾಗಿದೆ. ನಿಮ್ಗೆ ಮೇಲ್ಗಡೆ ಯಾರಾದ್ರೂ ಗುರುತಿದ್ರೆ ಪ್ರಾಜೆಕ್ಟ್ ಬೇಗ ಮಂಜೂರಾಗುತ್ತೆ ಸೂರಿ” ಎಂದ ವಿಶ್ವ.
“ನಾಯಕರೊಬ್ಬರು ನಮ್ಮ ಫ್ರೆಂಡು ಸಾರ್, ಖಂಡಿತವಾಗ್ಲೂ ಅವರು ನಮ್ಗೆ ಈ ಪ್ರಾಜೆಕ್ಟ್ ಮಾಡ್ಕೊಡ್ತಾರೆ” ಎಂದು ಸೂರಿ ವಿಶ್ವಾಸದಿಂದ ಹೇಳಿದ.
“ಇಷ್ಟಕ್ಕೂ ಗಿಡಗಳು ಯಾಕೆ ನೆಡಬೇಕು? ಪರಿಸರ ರಕ್ಷಣೇನಾ? ಆಮ್ಲಜನಕ ಹೆಚ್ಚು ಮಾಡೋಕಾ?” ಎಂದು ವಿಶಾಲು ಕೇಳಿದಳು.
“ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿ ಮಾಡ್ಕೊಳ್ಳೋಕೆ” ಎಂದು ಸೂರಿ ಪ್ರಾಮಾಣಿಕವಾಗಿ ಹೇಳಿದ.
“ಎಷ್ಟು ಗಿಡ ನೆಡ್ಬೇಕು ಅಂತ ಇದ್ದೀರ?”
“ಕಳೆದ ವರ್ಷದ ಥರಾನೇ ಒಂದು ಲಕ್ಷ ಗಿಡಗಳ್ನ ನೆಡೋ ಸ್ಕೀಂನ ನಾನು ಮೇಲಿನವರಿಗೆ ಕೊಟ್ಟಿದ್ದೀನಿ” ಎಂದ.
“ಭೇಷ್! ಒಂದು ಲಕ್ಷ ಸಸಿ ನೆಡೋದು ಅಂದ್ರೆ ಎಷ್ಟು ಖರ್ಚು ಆಗುತ್ತೆ?”
“ಒಂದು ಗಿಡಕ್ಕೆ ೨೫೦ ಆದ್ರೆ ಎರಡೂವರೆ ಕೋಟಿ ರೂಪಾಯಿ ಖರ್ಚಾಗುತ್ತೆ”
“ಗಿಡ ನೆಡೋಕೆ ಎರಡೂವರೆ ಕೋಟಿ ರೂಪಾಯಾ?” ವಿಶಾಲು ಗಾಬರಿ ಪಟ್ಟಳು.
“ಹೌದು ಮೇಡಂ, ಬೇರೆ ಬೇರೆ ಜಾಗಗಳಲ್ಲಿ ನಾವು ನೆಲ ಅಗೀಬೇಕು, ಪಾತಿಗಳು ಮಾಡಿಸ್ಬೇಕು, ಗೊಬ್ಬರ ಹಾಕಿಸ್ಬೇಕು, ಗಿಡ ನೆಡ್ಬೇಕು, ಅದಕ್ಕೆ ಮಣ್ಣನ್ನ ಮತ್ತೆ ಹಾಕಿ ಮುಚ್ಬೇಕು, ನೀರು ಹಾಕ್ಬೇಕು. ತುಂಬಾ ಲೇಬರ್ ಬೇಕಾಗುತ್ತೆ. ಒಂದು ಗಿಡಕ್ಕೆ ಇನ್ನೂರೈವತ್ತು ಜಾಸ್ತಿ ಅಲ್ಲ” ಎಂದ.
“ಹೌದು, ಈ ಮುಂಚೆ ಕೂಡ ನೀವು ಗಿಡ ನೆಟ್ಟ ನೆನಪಿದೆಯಲ್ಲ?” ಎಂದಳು ವಿಶಾಲು.
“ಹೌದು, ಕಳೆದ ವರ್ಷ ಒಂದು ಲಕ್ಷ ಗಿಡ ನೆಟ್ವಿ, ಪ್ರತಿ ವರ್ಷ ಲಕ್ಷ ಲಕ್ಷ ಗಿಡಗಳು ನೆಡೋದೇ ನಮ್ಮ ಉದ್ಯೋಗ. ಹೇಗಾದರೂ ದುಡ್ಡು ಮಾಡಬೇಕಲ್ಲ?” ಎಂದ.
“ಕಳೆದ ವರ್ಷದ ಲಕ್ಷ ಗಿಡಗಳು ಏನಾದ್ವು?” ಎಂದಳು ವಿಶಾಲು.
“ಗೊತ್ತಿಲ್ಲ ಮೇಡಂ, ಮೇಕೆಗಳಿಗಂತೂ ಒಳ್ಳೇ ಆಹಾರ ಆಯ್ತು”
“ಮೇಕೆಗಳ ಮೇಲೆ ಕೇಸ್ ಹಾಕೋಕೂ ಆಗೊಲ್ಲ” ಎಂದ ವಿಶ್ವ.
“ಅಲ್ಲ, ಗಿಡ ನೆಟ್ಮೇಲೆ ಅದಕ್ಕೊಂದು ಟ್ರೀ ಗಾರ್ಡ್ ಬೇಡ್ವಾ?”
“ಬೇಲಿ ಕಟ್ಟೋದು ತುಂಬಾ ದುಬಾರಿ ಆಗುತ್ತೆ, ಅದಕ್ಕೆ ಹೆಚ್ಚಿನ ಹಣ ಸಿಗೋದಿಲ್ಲ. ಮೇಲಿನವರು ಹೇಳಿದಂತೆ ಗಿಡ ನೆಡೋದಷ್ಟೇ ನಮ್ಮ ಕೆಲ್ಸ” ಎಂದ ಸೂರಿ.
“ಮೇಲಿನವರು ಅಂದ್ರೆ?”
“ನಮ್ಮ ಬಡಾವಣೆ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ, ಅಲ್ಲಿ ಕೋಟ್ಯಂತರ ರೂಪಾಯಿ ಫಂಡ್ಸ್ ಇದೆ. ಸರ್ಕಾರ ಈ ಸ್ಕೀಮ್‌ಗೆ ಹೆಲ್ಪ್ ಮಾಡುತ್ತೆ”
“ಗಿಡ ನೆಟ್ಮೇಲೆ ಮೇಕೆಗಳನ್ನಾದ್ರೂ ಕಂಟ್ರೋಲ್ ಮಾಡಿ”
“ನಮ್ಮದೇ ಮೇಕೆಗಳು, ಕಂಟ್ರೋಲ್ ಮಾಡೋದು ತಪ್ಪಾಗುತ್ತೆ” ಎಂದ ಸೂರಿ.
“ನೀವು ಮೇಕೆಗಳ್ನೂ ಸಾಕಿದ್ದೀರಾ?”
“ಸಾವಿರ ಮೇಕೆ ಸಾಕಿದ್ದೀವಿ. ಅದರ ಹಿಕ್ಕೆ ಒಳ್ಳೇ ಗೊಬ್ಬರ. ಅದೇ ಗೊಬ್ಬರ ಗಿಡಕ್ಕೆ ಹಾಕೋದು”
“ಗಿಡಗಳು ಒಣಗಿ ಹಾಳಾದಾಗ ಮೇಲಿನವರು ತಕರಾರು ತೆಗೆದ್ರೆ?” ವಿಶ್ವ ಕೇಳಿದ.
“ತೆಗೆಯೊಲ್ಲ ಸಾರ್, ಯಾಕೇಂದ್ರೆ ಮೇಲಿನವರಲ್ಲೂ ಹುಳುಕು ಬೇಕಾದಷ್ಟಿರುತ್ತೆ. ಅವರು ನನ್ನ ಎರಡು ಕೋಟಿ ಹಗರಣದ ಬಗ್ಗೆ ಕೇಳಿದ್ರೆ ನಾನು ಅವರ ಇಪ್ಪತ್ತು ಕೋಟಿ ಹಗರಣದ ಬಗ್ಗೆ ಕೆದಕ್ತೀನಿ. ಮೇಲಿನವರು ಹಣ ಗುಳುಂ ಮಾಡಿದ್ದಕ್ಕೆ ನನ್ಹತ್ರ ದಾಖಲೆಗಳಿವೆ” ಎಂದ.
“ಭೇಷ್! ಪರಸ್ಪರ ಹಗರಣಗಳು ಬಯಲು ಮಾಡೋ ಬಯಲಾಟ”
“ಸಮಾಜಸೇವೆಗೆ ಇಳಿದ ಮೇಲೆ ಹಗರಣ ಮಾಡಿದ್ರೆ ಮಾತ್ರ ದುಡ್ ಸಿಗುತ್ತೆ. ನ್ಯಾಯವಾಗಿ ಇದ್ದರೆ ಹಳೇ ಸ್ಕೂಟರ್‌ನಲ್ಲಿ ಓಡಾಡಬೇಕಾಗುತ್ತೆ” ಎಂದ ಸೂರಿ.
“ಅಂದ್ರೆ ಈ ಸ್ಕೀಮಲ್ಲಿ ಎಲ್ರೂ ದುಡ್ ತಿಂತಾರಾ?”
“ತಿನ್ನೋಕೆ ಬಾಯಿ ಇದ್ರೆ ಸಾಲ್ದು. ತಲೇನೂ ಇರಬೇಕು. ತಿನ್ನೋದರಲ್ಲಿ ಮಾತ್ರ ನಮ್ಮಲ್ಲಿ ಒಗ್ಗಟ್ಟಿದೆ. ಪಕ್ಷಭೇದ ಇಲ್ಲ. ಅವರು ನಮ್ಮ ಗಿಡದ ಬಗ್ಗೆ ಕೇಳಿದ್ರೆ ನಾವು ಅವರ ಬುಡ ಹಿಡಿದು ಅಲ್ಲಾಡಿಸ್ತೀವಿ. ಗಿಡ ನೆಡೋಕೆ ಐವತ್ತು ಸಾವಿರ ರೂಪಾಯಿ ಪ್ರಾರಂಭಿಕ ಖರ್ಚು ಆಗುತ್ತೆ. ಎರಡು ಕೋಟಿ ಲಾಭ ಅಂತೂ ಇದ್ದೇ ಇದೆ” ಎಂದ ಸೂರಿ.
ಅಷ್ಟರಲ್ಲಿ ಸೂರಿಯ ಪ್ರಳಯಾಂತಕ ಅಣ್ಣನಾದ ಸತ್ತಿ ಬಂದ. ಅವನು ಕಳೆದ ವರ್ಷ ಇದೇ ರೀತಿ ಗಿಡ ನೆಟ್ಟವನು. ಅವನು ಬ್ಲಾಕ್‌ಲಿಸ್ಟ್ಗೆ ಹೋಗಿದ್ದರಿಂದ ಈ ಸಲ ತಮ್ಮನಿಗೆ ಆ ಕೆಲಸವನ್ನು ವೈಟ್‌ಲಿಸ್ಟಲ್ಲಿ ಕೊಡಿಸಿದ್ದ. ಐವತ್ತು ಸಾವಿರ ರೂಪಾಯಿ ಖರ್ಚಾಗುತ್ತೆ ಎಂದು ಸೂರಿ ಹೇಳಿದಾಗ ಸತ್ತಿ ಒಪ್ಪಲಿಲ್ಲ.
“ಅಷ್ಟು ಖರ್ಚಾಗೊಲ್ಲ. ಹತ್ತು ಸಾವಿರಕ್ಕೆ ಒಂದು ಲಕ್ಷ ಗಿಡಗಳು ನೆಡಬಹುದು” ಅಂದ.
“ಸಸಿಗಳ್ನ ಯಾವ ನರ್ಸರಿಯೂ ಬಿಟ್ಟಿ ಕೊಡೊಲ್ಲ” ಎಂದ ಸೂರಿ.
“ಮಾವಿನ ಮರ, ಬೇವಿನ ಮರದ ಕೊಂಬೆಗಳ್ನ ಕಡ್ಕೊಳ್ಳೋದು. ಕಡ್ಡಿಗಳಾಗಿ ವಿಂಗಡಿಸೋದು. ಮನೆಗೆ ತೋರಣ ಕಟ್ತೀವಲ್ಲ ಆ ಥರ ಒಂದೊಂದು ಕಡ್ಡೀನ ನೆಲದಲ್ಲಿ ಅಲ್ಲಲ್ಲಿ ಚುಚ್ತಾ ಹೋದ್ರೆ ಸಾಕು.
“ಕಡ್ಡಿಗೆ ಬೇರು ಗೀರು ಏನೂ ಬೇಡವಾ?” ಎಂದ ವಿಶ್ವ.
“ಬೇರು ಬಿಟ್ಟ ಬಾಸು ನಮ್ಕಡೆ ಇರೋವಾಗ ಕಡ್ಡಿಗೆ ಬೇರು ಯಾಕೆ ಬೇಕಾಗುತ್ತೆ?”
“ಮಾವಿನಕಡ್ಡಿ ನೆಟ್ಟು ಮಾವಿನಮರ ಮಾಡೋದುಂಟಾ?” ವಿಶಾಲು ಆಶ್ಚರ್ಯ ಪಟ್ಟಳು.
“ಇದೇ ರೀತಿ ನಾವು ಈವರೆಗೆ ಲಕ್ಷಾಂತರ ಗಿಡಗಳ್ನ ನೆಟ್ಟಿದ್ದೀವಿ, ಕೋಟಿ ಕೋಟಿ ಹಣ ಪಡೆದಿದ್ದೀವಿ” ಎಂದ ಸತ್ತಿ.
“ಮುಂದೆ ತೊಂದ್ರೆ ಇಲ್ವಾ?” ಅಣ್ಣನನ್ನು ಸೂರಿಯೇ ಕೇಳಿದ.
“ಎಂಥದ್ದೂ ಇಲ್ಲ ತಮ್ಮ, ಈ ವರ್ಷದ ಕಾಂಟ್ರಾಕ್ಟ್ ನಿನ್ಗೆ ಕೊಡಿಸಿದ್ದೀನಿ. ಆರಾಮವಾಗಿ ಗಿಡ ನೆಡು, ಹಣ ಹೊಡಿ” ಎಂದ.
“ಕೇಳೋವರೇ ಇಲ್ಲವಾ?” ಎಂದು ವಿಶ್ವ ಮತ್ತೆ ಕೇಳಿದ.
“ಎರಡೂವರೆ ಕೋಟಿ ಕೊಡ್ತಾರೆ, ಐದು ಕೋಟಿಗೆ ಸೈನ್ ತಗೋತಾರೆ. ನಮಗಿಂತ ಮೇಲ್ಗಡೆ ತಿನ್ನೋವರೇ ಜಾಸ್ತಿ. something ಕೊಟ್ಟ ಮೇಲೆ ಅವರು anything ಮಾಡೊಳ್ಳಿ ಅಂತ ಸುಮ್ಮನಾಗಿಬಿಡ್ತಾರೆ” ಎಂದ ಸತ್ತಿ.
“ಅದ್ಸರಿ, ಈ ಹಣ ಎಲ್ಲಾ ಯರ‍್ದು?”
“ನಿಮ್ಮದೇ ಸಾರ್! ನೀವು ಕೊಡೋ ಟ್ಯಾಕ್ಸ್ ಹಣ ಸಾರ್!”
ವಿಶಾಲೂ ನಿಟ್ಟುಸಿರಿಟ್ಟು ಹೇಳಿದಳು: `ಟ್ಯಾಕ್ಸ್ ಕಟ್ಟೋ ಕುರಿ ಕೋಡಂಗಿ, ಗಿಡ ತಿನ್ನೋ ಮೇಕೆ ಈರಭದ್ರ!

Next Article