ಕೋಚಿಂಗ್ ಮಾಫಿಯಾಕ್ಕೆ ಇನ್ನೆಷ್ಟು ಬಲಿ?
ಮೌತ್ ಹುಯಿ ಹೈ... ಕೊಯಿ ಮಜಾಕ್ ನಹೀ...'
ದೆಹಲಿಯ ಬೀದಿಗಳಲ್ಲಿ ಕಳೆದ ಮೂರು ದಿನಗಳಿಂದ ಈ ಫಲಕ ಹೊತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಟನೆ ನಡೆದಿದೆ.
ಜನರು ಸತ್ತಿದ್ದಾರೆ.. ಇದು ತಮಾಷೆಯಲ್ಲ'. ಈ ಫಲಕ ಇಡೀ ಕೋಚಿಂಗ್ ಹಾಗೂ ಟ್ಯೂಷನ್ ಮಾಫಿಯಾದ ಕರಾಳ ವಿಜೃಂಭಣೆ ಹಾಗೂ ಅಷ್ಟೇ ಆಘಾತಕ್ಕೆ ಕನ್ನಡಿ. ಓಲ್ಡ್ ರಾಜೇಂದ್ರನಗರದ ಐಎಎಸ್ ಕೋಚಿಂಗ್ ಸೆಂಟರ್ ನೆಲಮಾಳಿಗೆಯಲ್ಲಿ ರವಿವಾರ ರಾತ್ರಿ ಮೂವರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಜೀವ ಜಲಾಪೋಷಣವಾಯಿತು. ಕೆಲವರು ಜೀವನ್ಮರಣ ಹೋರಾಟ ನಡೆಸಿ ಅಂತೂ ಬದುಕುಳಿದರು.
ಈ ಘಟನೆ ದೇಶಕ್ಕಲ್ಲ. ಜಗತ್ತಿಗೇ ಭಾರತದ ಸ್ಪರ್ಧಾತ್ಮಕ ಪರೀಕ್ಷೆಗಳ ಕರಾಳ ಮುಖ, ಅಮಾಯಕರ ಸಾವು-ನೋವು, ಮುಗ್ಧ ಮನಸ್ಸಿನ ವಿದ್ಯಾರ್ಥಿಗಳ ಒತ್ತಡದ ಸ್ಥಿತಿ, ಎಲ್ಲಕ್ಕೂ ಹೆಚ್ಚಾಗಿ ಪರೀಕ್ಷೆಗಳ ಮತ್ತು ಅದರ ನೆಪದಲ್ಲಿ ನಡೆಯುವ ದಂಧೆಯ ಅನೈತಿಕ ವ್ಯವಹಾರವನ್ನು ಬಟ್ಟಂಬಯಲು ಮಾಡಿದೆ.
ದೇಶದ ಶಕ್ತಿ ಕೇಂದ್ರದ ಸ್ಥಳದಲ್ಲೇ ಈ ದುರ್ಘಟನೆ ನಡೆದಿರುವುದು, ಅದೂ ಅಧಿವೇಶನದ ವೇಳೆಯೇ ಇದು ಸಂಭವಿಸಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ.
ದೆಹಲಿ ಕೋಚಿಂಗ್ ಸೆಂಟರ್ ದುರಂತ ಹತ್ತಾರು ಕರಾಳ ಮುಖಗಳನ್ನು ತೆರೆದಿಟ್ಟಿದೆ. ದೇಶದಲ್ಲಿ ಇದರ ಭಯಾನಕ ಸ್ಥಿತಿ ಎಷ್ಟಿದೆ ಎಂದರೆ ೨೦೧೮ರಿಂದ ೨೦೨೪ರ ಜನವರಿವರೆಗೆ ೮೦ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಸರ್ಕಾರವೇ ಹೇಳಿದೆ. ಡಿಪ್ರೆಷನ್, ಮಾನಸಿಕ ಸಮಸ್ಯೆ, ದೈಹಿಕ ತೊಂದರೆ ಅನುಭವಿಸಿ ನರಳುತ್ತಿರುವವರು ಸಾವಿರಾರು ವಿದ್ಯಾರ್ಥಿಗಳು. ಪೋಷಕರ ಅಭಿಲಾಷೆ, ಆಕಾಂಕ್ಷೆ, ಹಣ, ಶ್ರಮ ಎಲ್ಲವೂ ವ್ಯರ್ಥವಾಗಿಸಿದ್ದರ ಜೊತೆಗೆ ಮಕ್ಕಳ ಜೀವ ಉಳಿದುಕೊಂಡರೆ ಸಾಕು ಎನ್ನುವ ಭಯಾನಕ ಸ್ಥಿತಿ ಈ ಮಾಫಿಯಾದಿಂದ ನಡೆದಿದೆ.
ದೆಹಲಿ ಕೋಚಿಂಗ್ ಸೆಂಟರ್ ದುರಂತ ಇಡೀ ಪರೀಕ್ಷಾ ವ್ಯವಸ್ಥೆಯ ವ್ಯವಹಾರವನ್ನು ಹಾಗೂ ಕರಾಳ ಮುಖದ ಜೊತೆಗೆ ಶಿಕ್ಷಣ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸಿದೆ. ಹಾಗಾಗಿಯೇ ಇದನ್ನು ಮಾಫಿಯಾ ಜಗತ್ತು' ಎಂದೇ ವಿಶ್ಲೇಷಿಸಲಾಗುತ್ತಿದೆ. ಅಷ್ಟೇ ಅಲ್ಲ. ದೇಶದ ವೈದ್ಯಕೀಯ, ತಾಂತ್ರಿಕ, ಆಡಳಿತ, ಔದ್ಯಮಿಕ ಲಾಬಿಗಳ ಜೊತೆ ಈ ಕೋಚಿಂಗ್ ಟ್ಯೂಷನ್ ಮಾಫಿಯಾ ಲಾಬಿ ಕೂಡ ಅಷ್ಟೇ ಜೋರಾಗಿದೆ. ರಾಜಸ್ಥಾನದ ಕೋಟ ದೇಶದ ಕೋಚಿಂಗ್ ಸೆಂಟರ್‌ಗಳ ಕೇಂದ್ರ. ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗಿನ ವಿದ್ಯಾರ್ಥಿಗಳು ನಿಟ್, ಜೆಇಇ, ಐಐಟಿ, ಐಎಎಸ್, ಸಿಎ, ಎಂಜಿನಿಯರಿಂಗ್ ಜೊತೆಗೆ ಉನ್ನತ ಶಿಕ್ಷಣದ ವಿವಿಧ ವಿಷಯಗಳಲ್ಲಿ ತರಬೇತಿಗೆ ಇಲ್ಲಿ ಬರುತ್ತಾರೆ. ಇದುವೇ ಕೋಚಿಂಗ್ ಮಾಫಿಯಾದ ಮೂಲ ಕೇಂದ್ರ ಎನ್ನುವ ಟೀಕೆಗಳು ಈಗ ಭಾರತದೆಲ್ಲೆಡೆ ಸಾಮಾನ್ಯ. ದೆಹಲಿಯ ಓಲ್ಡ್ ರಾಜೇಂದ್ರನಗರ ಕೋಚಿಂಗ್ ಸೆಂಟರ್‌ಗಳೂ ಇದಕ್ಕೆ ಪೂರಕ. ಹಳೇ ದೆಹಲಿಯ(ರಾಜೇಂದ್ರನಗರ) ಬೀದಿ ಬೀದಿಗಳಲ್ಲಿ ಹಬ್ಬಿರುವ ಇವುಗಳನ್ನು ಕೋಟ ನಂತರದ ಕೋಚಿಂಗ್ ಅಡ್ಡಾಗಳು ಎಂದೇ ಕರೆಯಲಾಗುತ್ತದೆ. ಇವುಗಳ ನಡುವೆ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು ಪ್ರತಿಭಾನ್ವಿತರಿಗಲ್ಲ. ಸರ್ಕಾರಿ ಹುದ್ದೆ ಅಥವಾ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶ ದುಡ್ಡಿದ್ದವರಿಗೆ ಮಾತ್ರ ಎನ್ನುವ ಕಟು ವಾತಾವರಣವನ್ನು ಸೃಷ್ಟಿಸಿದ್ದು ಈ ಮಾಫಿಯಾಗಳೇ. ದೆಹಲಿ ದುರಂತವಾಯ್ತಲ್ಲ. ಆ ವಿದ್ಯಾರ್ಥಿಗಳನ್ನು ಮತ್ತು ಈ ಕೋಚಿಂಗ್ ಸೆಂಟರ್‌ಗಳಲ್ಲಿ ಸೇರ್ಪಡೆಯಾದ ಮಕ್ಕಳನ್ನು ಮಾತನಾಡಿಸಿ. ಶ್ರೀಮಂತ, ಅತೀ ಶ್ರೀಮಂತ ಮಕ್ಕಳೇ ಕಾಣಸಿಗುತ್ತಾರೆ. ವರ್ಷಕ್ಕೆ ಎಂಟರಿಂದ ಹತ್ತು ಲಕ್ಷ ರೂಪಾಯಿ ಟ್ಯೂಷನ್ ಫೀ ಮತ್ತು ತಿಂಗಳು ಇಪ್ಪತ್ತರಿಂದ ಮೂವತ್ತು ಸಾವಿರ ರೂಪಾಯಿವರೆಗಿನ ದೆಹಲಿಯಲ್ಲಿ ಬಾಡಿಗೆ ಮನೆ. ಉಳಿದಂತೆ ಊಟ ತಿಂಡಿ ಇತ್ಯಾದಿ ಖರ್ಚು. ಅಂದರೆ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಕನಿಷ್ಠ ಇಪ್ಪತ್ತೈದು ಲಕ್ಷ ರೂಪಾಯಿ ವೆಚ್ಚ ಮಾಡಬೇಕಿದೆ. ಈ ದೇಶದ ಮಧ್ಯಮ, ಬಡ ಜನ ಇಷ್ಟು ವ್ಯಯ ಮಾಡಲು ಸಾಧ್ಯವಾ? ಮೊನ್ನೆ ನಡೆದ ನೀಟ್ ಪರೀಕ್ಷೆ ತೆಗೆದುಕೊಳ್ಳಿ. ದೇಶಾದ್ಯಂತ ಹದಿನೆಂಟು ಲಕ್ಷಕ್ಕೂ ಅಧಿಕ ಮಂದಿ ಪರೀಕ್ಷೆ ಎದುರಿಸಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಜನ ಟ್ಯೂಷನ್ ಪಡೆದವರು. ಶೇ. ೯೭ ಮಂದಿ ತಮ್ಮೂರಲ್ಲೇ ಹಾಗೂ ಹೀಗೂ ಅಭ್ಯಸಿಸಿ ತಾವು ವೈದ್ಯರಾಗಬೇಕೆಂಬ ಅಭಿಲಾಷೆಯೊಂದಿಗೆ ಪರೀಕ್ಷೆ ಬರೆದಿದ್ದರು. ನಂತರ ನಡೆದದ್ದು ಗೊತ್ತೇ ಇದೆ. ದುಡ್ಡಿದ್ದ-ಕೊಬ್ಬಿದ್ದ ಮಂದಿ ಪ್ರಶ್ನೆ ಪತ್ರಿಕೆಯನ್ನೇ ಖರೀದಿ ಮಾಡಿಬಿಟ್ಟರು. ಲಕ್ಷಾಂತರ ಬಡ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋದರು. ನ್ಯಾಯಾಲಯ, ಸಂಸತ್ತು, ಅನೇಕ ರಾಜ್ಯಗಳು ಏನೆಲ್ಲ ಕಸರತ್ತು ಮಾಡಿದರೂ ನ್ಯಾಯ ಮಾತ್ರ ಮರೀಚಿಕೆಯಾಯಿತು. ಮಕ್ಕಳ ಮಾನಸಿಕ ಒತ್ತಡ ಪರಿಗಣನೆಗೇ ಬರಲಿಲ್ಲ. ನಿಜ. ಈಗ ಪ್ರಾಥಮಿಕ ಶಾಲೆಯ ಮಕ್ಕಳ ಟ್ಯೂಷನ್ ಬಿಡಿ. ಎಸ್ಸೆಸ್ಸೆಲ್ಸಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳವರೆಗಿನ ದಂಧೆ ಪರಿಣಿತರು ಅಂದಾಜಿಸುವಂತೆ ಸುಮಾರು ೧೦ ಸಾವಿರ ಕೋಟಿಯಷ್ಟು! ಮುಂಜಾನೆ ೫.೩೦ರಿಂದ ರಾತ್ರಿ ೯ ಗಂಟೆಯವರೆಗೆ ಕೋಚಿಂಗ್ ನೆಪದಲ್ಲಿ ಮಕ್ಕಳನ್ನು ಹಿಡಿದಿಟ್ಟುಕೊಂಡು, ಮಾನಸಿಕ ಒತ್ತಡ ಹೇರಿ, ಅನಾರೋಗ್ಯ, ಅಸಹ್ಯ ಮಾತು ಎಲ್ಲವನ್ನೂ ತುರುಕಿ ಈ ಮಕ್ಕಳ ಚಿಂತನಾ ಶಕ್ತಿಯನ್ನೇ ನಾಶ ಮಾಡಿಸಲಾಗುತ್ತಿರುವುದನ್ನು ಎಲ್ಲ ಶಿಕ್ಷಣ ತಜ್ಞರು ತೀವ್ರವಾಗಿ ಆಕ್ಷೇಪಿಸಿದ್ದಾರೆ. ವರ್ಗ, ಜಾತಿ ಮತ್ತು ತಳಸ್ತರದ ಜನರಿಗೆ ಎಲ್ಲಿಯ ಕೋಚಿಂಗ್? ಎಲ್ಲಿಯ ಟ್ಯೂಷನ್ ಎಂದು ಪ್ರಶ್ನಿಸಿದ್ದಾರೆ. ಇಷ್ಟಾಗಿಯೂ ದುಡ್ಡಿದ್ದವರಿಗೆ ಮಾತ್ರ ಈ ಟ್ಯೂಷನ್ ಕ್ಲಾಸ್‌ಗಳು. ಮೊನ್ನೆ ಸಂಸತ್‌ನಲ್ಲಿ ಒಂದು ಸವಾಲು ಕೇಳಿಬಂತು. ಈ ಕೋಚಿಂಗ್ ಕ್ಲಾಸ್‌ಗಳ ಲೆಕ್ಚರರುಗಳಿಗೆ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಕೊಡಿ. ಉತ್ತೀರ್ಣರಾಗುತ್ತಾರಾ ನೋಡಿ ಎಂದು! ಭ್ರಮಾಲೋಕ ಸೃಷ್ಟಿಸಿ ದುಡ್ಡು ಕೀಳುವ ಈ ಕೇಂದ್ರಗಳೆಲ್ಲ ರಾಜಕೀಯ ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಮಿಲಾಪಿ!! ಕಳೆದ ವರ್ಷ ನೀಟ್‌ನಲ್ಲಿ ದೇಶಕ್ಕೆ ಉತ್ತಮ ರ‍್ಯಾಂಕ್ ಪಡೆದಿದ್ದ ವಿದ್ಯಾರ್ಥಿಯೊಬ್ಬನ ಪಾಲಕರು ಸಂತಸದ ಖುಷಿಯಲ್ಲಿ
ಕಳೆದೊಂದು ವರ್ಷದಿಂದ ಮಗನನ್ನು ಕೋಚಿಂಗ್ ಸೆಂಟರ್‌ಗೆ ಕಳಿಸುತ್ತಿದ್ದೆ. ಅವರು ಅತ್ಯುತ್ತಮವಾಗಿ ಟ್ಯೂಷನ್ ನೀಡಿರುವುದರಿಂದ ಮಗ ರ‍್ಯಾಂಕ್ ಪಡೆದ' ಎಂದರು. ಬೆಂಗಳೂರಿನ ವಿದ್ಯಾರ್ಥಿ ರಾಜಸ್ಥಾನ ಕೋಟಾದ ಕೋಚಿಂಗ್ ಸೆಂಟರ್‌ನಲ್ಲಿ ವರ್ಷವಿಡೀ ಉಳಿದು ನೀಟ್, ಐಐಟಿ ಎರಡಲ್ಲೂ ರ‍್ಯಾಂಕ್ ಪಡೆದಾಗ ಆತನ ಪಿಯುಸಿ ದ್ವಿತೀಯ ವರ್ಷದ ಹಾಜರಾತಿ ಮತ್ತು ಪರೀಕ್ಷೆಗೆ ಅವಕಾಶ ಹೇಗೆ ದೊರೆಯಿತು? ಕಾಲೇಜಿನ ಪ್ರಾಚಾರ್ಯರಿಗೆ ಕೇಳಿದಾಗ ಉತ್ತರ ಇರಲಿಲ್ಲ.' ಕೋಚಿಂಗ್ ಸೆಂಟರ್ ಮತ್ತು ಕಾಲೇಜುಗಳ ನೆಕ್ಸಸ್ ಅಷ್ಟಿದೆ. ಅದೇ ಕೋಚಿಂಗ್ ಸೆಂಟರ್‌ಗೆ ಹೋಗದ, ಕಾಲೇಜಿಗೆ ನಿಯತ್ತಾಗಿ ಬರುವ ವಿದ್ಯಾರ್ಥಿಗಳಿಗೆ ಅಟೆಂಡೆನ್ಸ್ ಇಲ್ಲ. ಆ ಕ್ಲಾಸ್‌ಗಳಿಗೆ ಹಾಜರಾಗಿಲ್ಲ ಎಂದು ಪರೀಕ್ಷೆ ನಿರಾಕರಣೆ. ಜೊತೆಗೆ ಸರ್ಕಾರದ ಶೇ. ೭೫ರಷ್ಟು ಹಾಜರಾತಿಯ ಆದೇಶ ಎಲ್ಲ ಬಡ ಮಕ್ಕಳಿಗೆ ಮಾತ್ರ ಅನ್ವಯ.
ಪ್ರಾಥಮಿಕ ಶಾಲೆಯಿಂದ ಒಂಬತ್ತನೇ ವರ್ಗದವರೆಗಿನ ಕೋಚಿಂಗ್‌ಗಳ ಮಾಫಿಯಾ ತಾಲ್ಲೂಕು, ಜಿಲ್ಲೆ, ನಗರಗಳಿಗೆ ಸೀಮಿತವಾಗಿದ್ದರೆ ಇಲ್ಲಿ ದೇಶವ್ಯಾಪಿ. ದೇಶದ ಬಹುತೇಕ ಕೋಚಿಂಗ್ ಸೆಂಟರ್‌ಗಳ ಬೆನ್ನು ಮೂಳೆ ಬಹುತೇಕ ರಾಜಕಾರಣಿಗಳದ್ದು. ಅಥವಾ ಉದ್ಯಮಿಗಳದ್ದು.
ಕೋಚಿಂಗ್‌ಗೆ ಹೋಗದ ವಿದ್ಯಾರ್ಥಿ ಉತ್ಕೃಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಎನ್ನಿ ಆಗ ಪ್ರಖ್ಯಾತ ಕೋಚಿಂಗ್ ಕ್ಲಾಸ್‌ಗಳ ಪೈಪೋಟಿ ನೋಡಬೇಕು… ಲಕ್ಷ, ಐದು ಲಕ್ಷ ಕೊಡುತ್ತೇವೆ, ನಮ್ಮ ಸೆಂಟರ್‌ನ ಆನ್‌ಲೈನ್ ಕೋಚಿಂಗ್ ಪಡೆದೆ ಎಂದು ಹೇಳು..ನಿನ್ನ ಫೋಟೊ ದೇಶವ್ಯಾಪಿ ಜಾಹೀರಾತು ಹಾಕುತ್ತೇವೆ ಎಂಬ ಆಮಿಷ!
ಕಳೆದ ವರ್ಷ ಕೋಟಾದಲ್ಲಿ ಕೋಚಿಂಗ್ ಪಡೆಯುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಾಗ ಬರೆದ ಪತ್ರ ಮನಕಲಕುವಂತಿತ್ತು. ಅಮ್ಮಾ ನಾನು ನೀಟ್ ಪಾಸಾಗಲೇಬೇಕೆಂದು ಕೋಚಿಂಗ್‌ಗೆ ಕಳಿಸಿದಿರಿ. ನಾನು ಪ್ರಾಮಾಣಿಕವಾಗಿ ಅಧ್ಯಯನ ಮಾಡಿದೆ. ಆದರೆ ಇಲ್ಲಿಯ ವ್ಯವಸ್ಥೆ ನನ್ನನ್ನು ಹತಾಶ ಮನಸ್ಥಿತಿಗೆ ಮತ್ತು ಆಘಾತಕ್ಕೆ ತಂದು ನಿಲ್ಲಿಸಿದೆ. ನಾನು ಪಾಸಾಗಲಾರೆ. ನಿಮ್ಮ ಆಕಾಂಕ್ಷೆಯನ್ನು ಈಡೇರಿಸಲಾಗದ್ದಕ್ಕೆ ಕ್ಷಮೆ ಕೋರುತ್ತೇನೆ. ನಾನು ಮಾನಸಿಕವಾಗಿ ಕುಗ್ಗಿ ಹೋಗಿ ಮುಖ ತೋರಿಸದ ಸ್ಥಿತಿಯಲ್ಲಿದ್ದೇನೆ' ಎಂದು ಬರೆದು ಆತ್ಮಹತ್ಯೆಗೆ ಶರಣಾಗಿದ್ದಳು. ಇದು ಒಬ್ಬ ವಿದ್ಯಾರ್ಥಿಯ ಕಥೆಯಲ್ಲ. ಆತ್ಮಹತ್ಯೆಗೆ ಮೊರೆ ಹೋದ ಎಂಬತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಿಂದೆ ಕರಾಳ ನೋವಿದೆ. ಹತಾಶೆ ಇದೆ. ಇಡೀ ಟ್ಯೂಷನ್ ಮಾಫಿಯಾದ ಹಿಂಸೆ ಇದೆ. ಒಂದು ವೈದ್ಯಕೀಯ ಡಿಗ್ರಿ, ಎಂಡಿ, ಎಂಎಸ್ ಮುಗಿಸಲು ಈಗ ಹತ್ತು ಕೋಟಿ ವ್ಯಯಿಸಬೇಕಾಗಿದೆ. ಒಂದು ವರ್ಷಕ್ಕೆ ಎಂಬಿಬಿಎಸ್ ವಿದ್ಯಾರ್ಥಿ ಕನಿಷ್ಠ ಮೂವತ್ತು ಲಕ್ಷ ರೂಪಾಯಿ ವ್ಯಯಿಸಬೇಕಾಗಿದೆ. ಅದೂ ನೀಟ್ ಪಾಸಾದರೂ ಕೂಡ. ಜನಸಾಮಾನ್ಯರಿಂದಂತೂ ಸಾಧ್ಯವಿಲ್ಲ. ಹೀಗಾಗಿಯೇ ಜನ ಉಕ್ರೇನ್‌ನಂತಹ ದೇಶಕ್ಕೆ ಹೋಗುತ್ತಿದ್ದಾರೆ. ನೀಟ್ ಫೇಲ್ ಆದವರು ಉಕ್ರೇನ್‌ನಂತಹ ದೇಶಕ್ಕೆ ಹೋಗುತ್ತಾರೆ ಎಂದು ಸಚಿವರೊಬ್ಬರು ಸಂಸತ್ತಿನಲ್ಲಿ ಉತ್ತರ ಕೊಟ್ಟರು. ಆದರೆ ವಾಸ್ತವ ಅದಲ್ಲ. ನೀಟ್‌ಗೆ ಕೋಚಿಂಗ್ ಪಡೆಯಲು, ಇಲ್ಲಿಯ ಫೀಸ್ ಕಟ್ಟಲು, ಗೊಂದಲ ಎದುರಿಸಲು ಅಸಾಧ್ಯವಾಗಿರುವುದರಿಂದಲೇ ಉಕ್ರೇನ್‌ನಂತಹ ದೇಶಕ್ಕೆ ಹೋಗುತ್ತಿದ್ದಾರೆ. ನಮ್ಮ ರಾಜಕಾರಣಿಗಳಿಗೆ ಅಥವಾ ವ್ಯವಸ್ಥೆ ರೂಪಿಸುವವರಿಗೆ ಇದು ಗೊತ್ತಿಲ್ಲವೆಂದಲ್ಲ. ಕಳೆದ ಹತ್ತು ವರ್ಷಗಳಿಂದ ಈ ಮಾಫಿಯಾವನ್ನು ಪೋಷಿಸುತ್ತಿರುವವರೇ ಈ ಮಹಾಶಯರು! ಮೊನ್ನೆ ದೆಹಲಿ ದುರಂತದ ಬಗ್ಗೆಯೂ ಸಂಸತ್ತಿನಲ್ಲಿ ಶಿಕ್ಷಣ ಮಂತ್ರಿ ನೀಡಿದ ಉತ್ತರ ದೇಶದ ಜನತೆ ಘಾಸಿಗೊಳ್ಳುವಂತಿತ್ತು. ಮಕ್ಕಳು ಸಾಯುತ್ತಿದ್ದಾರೆ. ಕುಬ್ಜರಾಗುತ್ತಿದ್ದಾರೆ. ಪೋಷಕರು ಹಣ-ಶ್ರಮ ಎಲ್ಲ ಕಳೆದುಕೊಳ್ಳುತ್ತಿದ್ದಾರೆ. ಆದಾಗ್ಯೂ ವ್ಯವಸ್ಥೆಯ ಸುಧಾರಣೆ, ನಿಯಂತ್ರಣ ಮಾತ್ರ ಆಗುತ್ತಿಲ್ಲ. ಪ್ರತಿಭಾನ್ವಿತ ಯುವಕರ ಸಾವು, ಹತಾಷೆಗೆ ಕೋಚಿಂಗ್ ಕೇಂದ್ರಗಳ ಮಾಫಿಯಾ ಕಾರಣ ಎಂಬ ಗಂಭೀರ ಆರೋಪ ಎಲ್ಲೆಡೆಯಿಂದ ಬಂದ ನಂತರ ಕೇಂದ್ರ ಸರ್ಕಾರ ಹಾಗೂ ಕೆಲ ರಾಜ್ಯ ಸರ್ಕಾರಗಳು ಟ್ಯೂಷನ್-ಕೋಚಿಂಗ್ ಕೇಂದ್ರಗಳ ನಿರ್ವಹಣಾ ನಿಯಮ ರೂಪಿಸಿದವು.. ಇದು ಕೇವಲ ಕಣ್ಣೊರೆಸುವ ತಂತ್ರವಾಯಿತು.. ಎಲ್ಲಿಯೂ ಪಾಲನೆಯಾಗಲಿಲ್ಲ.. ಇದೇ ಕಾರಣಕ್ಕೇ ಅಲ್ಲವೇ, ಪ್ರಥಮವಾಗಿ ತಮಿಳುನಾಡು ನೀಟ್‌ಗೆ ವಿರೋಧಿಸಿದ್ದು? ಕರ್ನಾಟಕ ಕೂಡ ಮೊನ್ನೆ ಮೊನ್ನೆ ನೀಟ್‌ನಿಂದ ಹೊರಬರುವ ಮಾತನಾಡಿದ್ದು? ಇನ್ನೂ ಕೆಲವು ರಾಜ್ಯಗಳು ನೀಟ್ ಪಾಲನೆಗೆ ವಿರೋಧಿಸುತ್ತಿವೆ. ಕೇವಲ ಎರಡು ವರ್ಷಗಳ ಹಿಂದೆ ಈಗ ಕೇಂದ್ರದ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಕೂಡ ನೀಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ನೀಟ್ ನಿಷೇಧಿಸಿ. ಇದು ದುಡ್ಡಿನ ಸಾಮ್ರಾಜ್ಯ. ಅಲ್ಲದೇ ಬಡ ಮಕ್ಕಳಿಗೆ ನ್ಯಾಯ ಇಲ್ಲದಂತಾಗಿದೆ' ಎಂದು ಆಗ್ರಹಿಸಿದ್ದರು. ಆಗ ಅವರು ಪ್ರತಿಪಕ್ಷದಲ್ಲಿದ್ದರು. ಬಿಜೆಪಿ ಧೋರಣೆಯನ್ನು ಕಟುವಾಗಿ ಟೀಕಿಸಿದ್ದರು. ಈಗ ಅವರು ಕೇಂದ್ರ ಸರ್ಕಾರದ ಭಾಗ. ಈಗಲೂ ಕುಮಾರಸ್ವಾಮಿ ಅದೇ ಧೋರಣೆ ಹೊಂದಿರಲು ಸಾಧ್ಯವೇ? ರಾಜ್ಯ ಸರ್ಕಾರದ ನೀಟ್ ವಿರೋಧಿ ನಿಲುವು ಬೆಂಬಲಿಸಲು ಸಾಧ್ಯವೇ?
ನಿಜ, ಪಾಲಕರು, ಪೋಷಕರೂ ಈ ವ್ಯವಸ್ಥೆಗೆ ಹೊಣೆ. ಮಕ್ಕಳಿಗೆ ಮನಸ್ಸಿಲ್ಲದಿದ್ದರೂ ತಮ್ಮ ಆಕಾಂಕ್ಷೆ, ಪ್ರತಿಷ್ಠೆಗಾಗಿ ಮಕ್ಕಳನ್ನು ದಬ್ಬುತ್ತಾರೆ…
ಕರ್ನಾಟಕವಲ್ಲದೇ ಹಲವು ರಾಜ್ಯಗಳು ನೀಟ್ ಬೇಡ ಎಂದು ಈಗ ಬಲವಾಗಿ ಆಗ್ರಹಿಸುತ್ತಿವೆ. ತಮ್ಮದೇ ಸ್ವಂತ ಸಿಇಟಿ-ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿಕೊಳ್ಳುತ್ತಿವೆ.
ಈ ಐ.ಎ.ಎಸ್ ಕೋಚಿಂಗ್, ನೀಟ್ ಮತ್ತು ಖಾಸಗಿ ವೈದ್ಯಕೀಯ-ತಾಂತ್ರಿಕ ಶಿಕ್ಷಣದ ಮಾಫಿಯಾವೇ ಕೋರ್ಸ್‌ಗಳ ಶುಲ್ಕವನ್ನು ದುಬಾರಿಗೊಳಿಸಿದೆ. ಎಷ್ಟಾದರೂ ಕೊಡಲು ಸಿದ್ಧರಿರುವರು, ಏನನ್ನಾದರೂ ಕಲಿಸುತ್ತೇವೆ ಎನ್ನುವ ಹಮ್ಮು ಹೊಂದಿದವರು ಈ ಶಿಕ್ಷಣ ಮತ್ತು ಉದ್ಯೋಗವನ್ನು ಕೊಂಡುಕೊಂಡಿದ್ದಾರೆ. ಹಾಗಾಗಿಯೇ ಬಡವರ ಮಕ್ಕಳ ಕನಸು ಕಮರಿ ಹೋಗುತ್ತಿದೆ.
ದೆಹಲಿ ದುರಂತ, ಈ ಮಾಫಿಯಾವನ್ನು ಹತ್ತಿಕ್ಕುವುದಕ್ಕೆ ನಾಂದಿ ಆದೀತೆಂದು ತಿಳಿದರೆ ಅದು ಅಸತ್ಯ-ಅವಾಸ್ತವ ಅಷ್ಟೇ !!