ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕೋಪದಲ್ಲಿಯೇ ನಾಶವಾಗುತ್ತೀರಿ…!

04:00 AM Nov 08, 2024 IST | Samyukta Karnataka

"ನನಗೆ ಕೋಪ ತರಿಸಬೇಡ, ಕೋಪ ಬಂದರೆ ನಾನು ಮನುಷ್ಯನಲ್ಲ….." ಎಂಬ ಕೋಪಿಷ್ಟರ ಈ ಮಾತುಗಳನ್ನು ಅನೇಕ ಸಾರಿ ಕೇಳಿದ್ದೇವೆ ನಿಜ. ಕೋಪ ಬಂದಾಗ ಮನುಷ್ಯ ಮೃಗನಾಗುತ್ತಾನೆ. ಅವನು ಮೃಗನಾಗುವುದು ಅದೇ ಅವನಿಗೆ ಶಿಕ್ಷೆ. ಒಬ್ಬ ಸಂತರ ಈ ನುಡಿ ನೋಡಿ…." ನೀವು ನಿಮ್ಮ ಕೋಪದಲ್ಲಿಯೇ ನಾಶವಾಗುತ್ತೀರಿ…"
ಕೋಪ ಕುದಿಯುತ್ತಿರುವ ನೀರಿನ ಹಾಗೆ. ಅದರಲ್ಲಿ ನಿಮ್ಮ ಪ್ರತಿಬಿಂಬ ಕಾಣಲಾರಿರಿ. ಅದರಂತೆ ಕೋಪದಲ್ಲಿ ನೈಜತೆಯನ್ನು ಅರಿಯಲಾರಿರಿ. ಕೋಪ ಅದೊಂದು ಹುಚ್ಚು. ಈ ಹುಚ್ಚು ನಮ್ಮ ಸುತ್ತಲಿನ ವ್ಯವಸ್ಥೆಯನ್ನೇ ವಿಷ ವರ್ತುಲವನ್ನಾಗಿ ಮಾಡುತ್ತದೆ. ಕುರಾನಿನ ೧೫ ಅಧ್ಯಾಯಗಳ ವಿವಿಧ ವಚನಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಕೋಪವನ್ನು ಖಂಡಿಸಲಾಗಿದೆ.
(ಪುರುಕಾನ್, ಮುಲ್ಕ, ಬಕರ, ನಿಸಾ, ಮಾಯ್ದ, ಮುಮ್ತಹಿನ್ ಮುಂತಾದ ಅಧ್ಯಾಯಗಳು.) ಅಲ್ ಇಮ್ರಾನ್ ಅಧ್ಯಾಯದ ಈ ವಚನ ನೋಡಿ (೩:೧೧. ೯)… "ನೀವು ಆ ನಿಮ್ಮ ಕೋಪದಲ್ಲಿಯೇ ಮರಣ ಹೊಂದುವಿರಿ ಎಂದು ಹೇಳಿರಿ…" ಎಂದು.
ಕುರಾನಿನ ತುಂಬೆಲ್ಲ ಸಾಮಾಜಿಕ ಸಮಸ್ಯೆಗಳ ಪ್ರಸ್ತಾಪ ಹಾಗೂ ಅವುಗಳ ಪರಿಹಾರ ಕುರಿತು ಆದೇಶ ಉಪದೇಶಗಳು ಇವೆ. ಅವುಗಳಲ್ಲಿ ಒಂದು ಕೋಪ. ಇದು ಪ್ರತಿಯೊಂದು ಜನಾಂಗದ ನಾಗರಿಕರಲ್ಲಿ ಕಂಡುಬರುವ ವರ್ತನೆ. ಅಲ್ ಇಮ್ರಾನ್ ಅಧ್ಯಾಯದ ಇನ್ನೊಂದು ವಚನ ನೋಡಿ (೩:೧೩೪)… ಅವರು ಸ್ಥಿತಿವಂತರಿರುವಾಗಲೂ, ದುಸ್ಥಿತಿಯಲ್ಲಿರುವಾಗಲೂ ತಮ್ಮ ಸಂಪತ್ತನ್ನು ಸನ್ಮಾರ್ಗಕ್ಕಾಗಿ ಖರ್ಚು ಮಾಡುತ್ತಾರೆ. ಹಾಗೂ ಕೋಪವನ್ನು ನುಂಗಿಕೊಳ್ಳುತ್ತಾರೆ…"
ಮನುಷ್ಯ ಸಹಜವಾಗಿ ಸೂಕ್ಷ್ಮ ಮನಸ್ಸಿನವನು. ತಾನಿರುವ ಸಮಾಜ ಸುತ್ತಮುತ್ತಲಿನವರ ನಡವಳಿಕೆ ವ್ಯವಹಾರದಲ್ಲಿ ಏನಾದರೂ ಕಾನೂನು ಬಾಹಿರವಾದಾಗ ಅವನು ಕೋಪಕ್ಕೆ ತುತ್ತಾಗುತ್ತಾನೆ. ಆಗ ಅವನ ಎದುರು ಎರಡು ಮಾರ್ಗಗಳು ಒಂದು ನಕಾರಾತ್ಮಕ ಪ್ರತಿಕ್ರಿಯೆ, ಇನ್ನೊಂದು ಸಕಾರಾತ್ಮಕ ಪ್ರತಿಕ್ರಿಯೆ. ಕೋಪ ನಕಾರಾತ್ಮಕ ಪ್ರತಿಕ್ರಿಯೆಗೆ ಬಂದಾಗ ಸನ್ಮಾರ್ಗಿಯು ಅದನ್ನು ಸಕಾರಾತ್ಮಕ ಪ್ರತಿಕ್ರಿಯೆಗೆ ಬದಲಾಯಿಸುತ್ತಾನೆ. ನಕಾರಾತ್ಮಕ ಪ್ರತಿಕ್ರಿಯೆ ದ್ವೇಷ, ಹಿಂಸೆ ಸಕಾರಾತ್ಮಕ ಪ್ರತಿಕ್ರಿಯೆ ಪ್ರೀತಿ-ವಿಶ್ವಾಸಗಳನ್ನು ತರುತ್ತದೆ. ಕುರಾನಿನ ಅಧ್ಯಾಯ ಅದನ್ನೇ ಹೇಳುತ್ತದೆ. "ಪ್ರೀತಿ ಪ್ರೇಮದ ಪ್ರತಿಕ್ರಿಯೆ ನೀಡು" ಎಂದು.
ಇಂಥ ಸನ್ಮಾರ್ಗಗಳನ್ನು ಕುರಿತು ಕುರಾನಿನ ಇಮ್ರಾನ್ ಅಧ್ಯಾಯದ ಒಂದು ವಚನದಲ್ಲಿ "ಕೋಪವನ್ನು ಕಡೆಗಣಿಸಿ ಅದನ್ನು ನುಂಗಿ ಪ್ರೀತಿ, ಪ್ರೇಮದ ಉಸಿರು ಬಿಡುವವರನ್ನು ಅಲ್ಲಾಹನು ಮೆಚ್ಚುತ್ತಾನೆ…" ಕೋಪ ನಿಮ್ಮ ತಾಳ್ಮೆಯ, ಸಹನೆಯ ಪರೀಕ್ಷೆ ಮಾಡುತ್ತದೆ.
ಪ್ರವಾದಿವರ್ಯರ ಅನೇಕ ವಚನಗಳಲ್ಲಿಯೂ ಕೋಪವನ್ನು ಕಟುವಾಗಿ ಖಂಡಿಸಲಾಗಿದೆ. ಕೋಪ ಬಂದಾಗ ತನ್ನನ್ನು ತಾನು ನಿಯಂತ್ರಿಸುವವನು ಅತಿ ದೊಡ್ಡ ಪರಾಕ್ರಮಿ. ಒಬ್ಬನು ತನ್ನ ಕೋಪವನ್ನು ನುಂಗಿಕೊಂಡರೆ ನಿರ್ಣಾಯಕದ ದಿನ ಅಲ್ಲಾಹನು ಅಂತಹವನನ್ನು ಎಲ್ಲರ ಎದುರಿಗೆ ಬಹುಮಾನ ನೀಡುವನು." ಹೀಸೆ ಪ್ರವಾದಿವರ್ಯರ ವಚನಗಳನ್ನು ಬುಖಾರಿ, ತಿರ್ಮಿದಿ, ಬೈದಿಕಿ ಗ್ರಂಥಗಳಲ್ಲಿ ಪ್ರಸ್ತಾಪಿಸಲಾಗಿದೆ.
ನಮ್ಮ ಕೋಪವನ್ನು ನಿಯಂತ್ರಿಸಲು ಇಸ್ಲಾಮಿ ವಿದ್ವಾಂಸ ಐದ ಇಬ್ನ ಅಬ್ದುಲ್ಲಾ ಅಲ್ ಕಾರನಿ ಕುರಾನಿನ ಬೆಳಕಿನಲ್ಲಿ ಹಲವಾರು ಸಲಹೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ…
ಕೋಪ ಬಂದಾಗ ನೀವು ನಿಂತಿದ್ದರೆ ಕುಳಿತುಕೊಳ್ಳಿ, ಕುಳಿತಿದ್ದರೆ ನೆಲದ ಮೇಲೆ ವರಗಿರಿ.
ಕೋಪದಲ್ಲಿಯೇ ನಾಶವಾಗುತ್ತೀರಿ…
ಕೋಪ ಬಂದಾಗ ಸುಮ್ಮನಿರಿ.
ಕೋಪ ಬಂದಾಗ ಅಂಗ ಸ್ನಾನ ವಸು ಮಾಡಿರಿ
ಒಬ್ಬ ಮನೋವೈಜ್ಞಾನಿಕರ ಈ ಮಾತುಗಳನ್ನು ಗಮನಿಸಬಹುದು "ನಿಮಗೆ ಕೋಪ ಬಂದಾಗ ಕೋಪ ತರಿಸಿದವನನ್ನು ನಿಂದಿಸಿ, ಒಂದು ಪತ್ರ ಬರೆದು ನಂತರ ಅದನ್ನು ಹರಿದು ಹಾಕಿ…"

Next Article