ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಆರ್‌ಸಿಬಿಗೆ ಲಖನೌ ಸವಾಲು

12:02 AM Apr 02, 2024 IST | Samyukta Karnataka

ಬೆಂಗಳೂರು: ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮಂಗಳವಾರ ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ನಡೆಯಲಿರುವ ಐಪಿಎಲ್‌ನ ೧೫ ನೇ ಲೀಗ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಎದುರಿಸಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ನಾಲ್ಕನೇ ಲೀಗ್ ಪಂದ್ಯ ಆಡಲು ಸಜ್ಜಾಗಿದ್ದು, ಈ ವರೆಗೆ ಆಡಿರುವ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಸೋಲು ಹಾಗೂ ಒಂದು ಪಂದ್ಯದಲ್ಲಿ ಜಯ ದಾಖಲಿಸಿದ್ದು, ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಸಧ್ಯ ಒಂಬತ್ತನೇ ಸ್ಥಾನದಲ್ಲಿದೆ.
ಇದೇ ವೇಳೆಗೆ ಲಖನೌ ಸೂಪರ್ ಜಯಂಟ್ಸ್ ತಂಡ ತನ್ನ ಮೂರನೇ ಲೀಗ್ ಪಂದ್ಯ ಆಡಲು ಸಜ್ಜಾಗಿದೆ. ಈ ವರೆಗೆ ಆಡಿರುವ ಎರಡು ಲೀಗ್ ಪಂದ್ಯಗಳ ಪೈಕಿ ಒಂದು ಜಯ ಹಾಗೂ ಒಂದು ಸೋಲಿನೊಂದಿಗೆ ಎರಡು ಅಂಕಗಳೊಂದಿಗೆ ಸಧ್ಯ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಪ್ರಸಕ್ತ ಸಾಲಿನ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೈಯಲ್ಲಿ ಸೋಲಿನ ಕಹಿ ಅನುಭವಿಸಿದ ಆರ್‌ಸಿಬಿ, ಮುಂದೆ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಆಡಿದ ತನ್ನ ಎರಡನೇ ಲೀಗ್ ಪಂದ್ಯದಲ್ಲಿ ಗೆಲುವಿನ ನಗೆ ಬೀರಿ ಜಯದ ಖಾತೆ ತೆರೆಯಿತು.
ಆದರೆ ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ ಆಡಿದ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಪರಾಜಯ ಹೊಂದಿ, ತವರಿನ ಅಭಿಮಾನಿಗಳಿಗೆ ನಿರಾಸೆಗೊಳಿಸಿತು.
ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಆಡಿದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡ ವಿರಾಟ್ ಸಿಡಿಸಿದ ಅಜೇಯ ೮೩ ರನ್‌ಗಳ ನೆರವಿನಿಂದ ನಿಗದಿತ ೨೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೧೮೨ ರನ್ ಸೇರಿಸಿತು.
ಇದು ಎದುರಾಳಿ ತಂಡಕ್ಕೆ ನೀಡಿದ ಸವಾಲಿನ ಗುರಿಯೇ ಆಗಿತ್ತು. ಆದರೆ ಆರ್‌ಸಿಬಿ ಬೌಲರ್‌ಗಳ ವೈಫಲ್ಯದಿಂದಾಗಿ ಜಯ ಸಾಧಿಸಬಹುದಾಗಿದ್ದ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಬೇಕಾಯಿತು.
ಬೌಲಿಂಗ್ ವೈಫಲ್ಯದ್ದೇ ಚಿಂತೆ
ಮೊದಲ ಮೂರು ಲೀಗ್ ಪಂದ್ಯದಲ್ಲಿ ಆರ್‌ಸಿಬಿ ತಂಡದ ಬ್ಯಾಟ್ಸಮನ್ನರು ತಮ್ಮ ಪಾಲಿನ ಕೆಲಸವನ್ನು ನಿಭಾಯಿಸಿದ್ದಾರೆ. ವಿಶೇಷವಾಗಿ ವಿರಾಟ್ ಕೊಹ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ನೆರವಾಗುತ್ತಿದ್ದಾರೆ.
ತಂಡದ ಇತರ ಪ್ರಮುಖ ಬ್ಯಾಟ್ಸಮನ್ನರಾದ ನಾಯಕ ಫಾಫ್ ಡು ಪ್ಲೆಸಿಸ್, ಕ್ಯಾಮೆರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ರಜತ್ ಪಾಟಿದಾರ್ ತಮ್ಮ ನೈಜ್ಯ ಪ್ರತಿಭೆ ಪ್ರದರ್ಶಿಸಿದಲ್ಲಿ ಆರ್‌ಸಿಬಿ, ಎದುರಾಳಿ ತಂಡಕ್ಕೆ ಸವಾಲಿನ ಗುರಿ ನೀಡುವುದಾಗಲಿ ಇಲ್ಲವೇ ಗೆಲುವಿನ ಗುರಿ ಮುಟ್ಟುವುದು ಕಷ್ಟವಾಗದು.
ಈ ಸಮಸ್ಯೆ ಎದುರಾಗಿರುವುದು ಬೌಲಿಂಗ್ ವಿಭಾಗದಲ್ಲಿ. ತಂಡದ ಪ್ರಮುಖ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಮಯಾಂಕ್ ದಗರ್ ತಮ್ಮ ಕೈಚಳಕ ಪ್ರದರ್ಶಿಸಬೇಕಿದೆ.
ಕೆಕೆಆರ್ ತಂಡದ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಆಟಗಾರರಾಗಿ ಬೌಲಿಂಗ್ ಮಾಡಿದ ಕನ್ನಡಿಗ ವಿಜಯ್‌ಕುಮಾರ್ ವೈಶಾಕ್, ನಾಲ್ಕು ಓವರ್ ಬೌಲಿಂಗ್ ಮಾಡಿ ೨೩ ರನ್ ನೀಡಿ ಒಂದು ವಿಕೆಟ್ ಉರುಳಿಸಿದ್ದು, ಲಖನೌ ವಿರುದ್ಧದ ಪಂದ್ಯದಲ್ಲಿ ಕೂಡ ಆಡುವ ಸಾಧ್ಯತೆಗಳಿವೆ.
ನಾಯಕ ಕೆ.ಎಲ್.ರಾಹುಲ್ ಅಲ್ಲದೇ ಕ್ವಿಂಟನ್ ಡಿ ಕಾಕ್, ದೇವದತ್ ಪಡಿಕ್ಕಲ್, ಆಯುಷ್ ಬಡೋನಿ, ನಿಕೋಲಸ್ ಪೂರನ್, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್ ಅವರನ್ನೊಳಗೊಂಡ ಲಖನೌ ಸೂಪರ್ ಜಯಂಟ್ಸ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಬಲಿಷ್ಠವಾಗಿದೆ.
ಯುವ ವೇಗದ ಬೌಲರ್ ಮಯಾಂಕ್ ಯಾದವ್, ಪಂಜಾಬ್ ಕಿಂಗ್ಸ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದರಲ್ಲದೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮಯಾಂಕ್ ಸೇರ್ಪಡೆಯೊಂದಿಗೆ ಲಖನೌ ತಂಡದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ಬಂದಂತಾಗಿದೆ.

ಪಂದ್ಯದ ಆರಂಭ: ಸಂಜೆ ೭-೩೦

Next Article