ದೇಶದ ಅತ್ಯಂತ ಕಿರಿಯ ಪೈಲಟ್ ವಿಜಯಪುರದ ಸಮೈರಾ
ವಿಜಯಪುರ: ಜಿಲ್ಲೆಯ ಯುವತಿ ಸಮೈರಾ ಹುಲ್ಲೂರ ತಮ್ಮ 18ನೇ ವಯಸ್ಸಿಗೆ ಕಮರ್ಶಿಯಲ್ ಪೈಲಟ್ ಲೈಸೆನ್ಸ್ (CPL) ಪಡೆಯುವ ಮೂಲಕ ದೇಶದ ಅತ್ಯಂತ ಕಿರಿಯ ಪೈಲಟ್ ಎನಿಸಿಕೊಂಡಿದ್ದಾರೆ.
ಸಮೀರಾ ಅವರು ಆರು ತಿಂಗಳ ಕಾಲ ವಾಯುಯಾನ ತರಬೇತಿಯನ್ನು ವಿನೋದ್ ಯಾದವ್ ಏವಿಯೇಷನ್ ಅಕಾಡೆಮಿಯಲ್ಲಿ ಪಡೆದರು. ಅಕಾಡೆಮಿ ಸಂಸ್ಥಾಪಕರಾದ ವಿನೋದ್ ಯಾದವ್ ಮತ್ತು ಕ್ಯಾಪ್ಟನ್ ತಪೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮೊದಲ ಪ್ರಯತ್ನದಲ್ಲೇ ಎಲ್ಲ ಸಿಪಿಎಲ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಸಮೈರಾ ಪ್ರಾಥಮಿಕ, ಪ್ರೌಢ, ಹಾಗೂ ಪದವಿಪೂರ್ವ ವಿದ್ಯಾಭ್ಯಾಸವನ್ನು ವಿಜಯಪುರದಲ್ಲಿ ಮುಗಿಸಿದ್ದಾರೆ. ನಂತರ ನೇರವಾಗಿ ದೆಹಲಿಯಲ್ಲಿ 6 ತಿಂಗಳ ಪೈಲಟ್ ಟ್ರೈನಿಂಗ್ ಮುಗಿಸಿ 18ನೇ ವಯಸ್ಸಿಗೆ ಪೈಲಟ್ ಆಗಿದ್ದಾರೆ. ಇನ್ನು 25ನೇ ವಯಸ್ಸಿಗೆ ಪೈಲಟ್ ಆದ ಕ್ಯಾಪ್ಟನ್ ತಪೇಶ್ ಕುಮಾರ್ ಅವರಿಂದ ಪ್ರೇರಣೆ ಪಡೆದು, ಇವತ್ತು ಈ ಸಾಧನೆ ಮಾಡಿರುವುದು ಮಾತ್ರವಲ್ಲದೇ ಅವರ ದಾಖಲೆಯನ್ನು ಮುರಿದು ಮುಂದೆ ಸಾಗಿದ್ದಾರೆ.
ಎಂ ಬಿ ಪಾಟೀಲ್ ಅಭಿನಂದನೆ: ಬಸವನಾಡು ಮತ್ತು ರಾಜ್ಯದ ಗೌರವವನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ ದೇಶದ ಅತಿ ಕಿರಿಯ ವಯಸ್ಸಿನ ಪೈಲಟ್ ಕು|| ಸಮೈರಾ ಹುಲ್ಲೂರರಿಗೆ ಸಚಿವ ಎಂ. ಬಿ. ಪಾಟೀಲ್ ಅಭಿನಂದನೆಗಳು ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕೇವಲ 18ನೇ ವಯಸ್ಸಿನಲ್ಲಿ ಇಂತಹ ಅಸಾಧಾರಣ ಸಾಧನೆ ಮಾಡುವ ಮೂಲಕ ಲಕ್ಷಾಂತರ ಯುವಕ-ಯುವತಿಯರಿಗೆ ಸ್ಫೂರ್ತಿಯಾಗಿರುವ ವಿಜಯಪುರದ ಈ ಯುವ ಪ್ರತಿಭೆಯ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.