For the best experience, open
https://m.samyuktakarnataka.in
on your mobile browser.

ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ….

11:52 AM Jul 22, 2024 IST | Samyukta Karnataka
ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ…

ಇನ್ನು 10 ಟಿಎಂಸಿ ನೀರು ಹರಿದರೆ ಈ ವರ್ಷದ ಪಾಲು ಸೇರಲಿದೆ…

ಬೆಂಗಳೂರು: ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ರೂಪಿಸುವ ಚಿಂತನೆ ಕೂಡ ನಡೆಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜಸಾಗರ (ಕೆಆರ್‌ಎಸ್‌) ಇನ್ನೇನು ಭರ್ತಿಯಾಗಲಿದ್ದು, ಇಂದು ಡ್ಯಾಂಗೆ ಭೇಟಿ ನೀಡಿ ಜಲಾಶಯದ ಸ್ಥಿತಿ ಗತಿ, ನೀರಿನ ಲಭ್ಯತೆ, ಒಳ ಮತ್ತು ಹೊರ ಹರಿವಿನ ಪ್ರಮಾಣ ಮೊದಲಾದವುಗಳನ್ನು ಪರಿಶೀಲಿಸಿದೆ. ವರುಣನ ಕೃಪೆ, ತಾಯಿ ಚಾಮುಂಡೇಶ್ವರಿ ಅನುಗ್ರಹದಿಂದ ಕಾವೇರಿ ನದಿಗೆ ನಾವೆಲ್ಲ ಬಾಗಿನ ಅರ್ಪಣೆ ಮಾಡುವ ಸೌಭಾಗ್ಯ ಸಿಕ್ಕಿದೆ. ಕಳೆದ ವರ್ಷ ನಾವು ಕಷ್ಟದಲ್ಲಿದ್ದೆವು. ಆದರೂ ಶಕ್ತಿ ಮೀರಿ ರೈತರನ್ನ ಕಾಪಾಡುವ ಕೆಲಸ ಮಾಡಿದ್ದೇವೆ. ಕಳೆದ ವರ್ಷ ಸಾಕಷ್ಟು ಬರಗಾಲ ಇತ್ತು. ಈಗ ಕಾವೇರಿ ತಾಯಿಯ ಕೃಪೆ ನಮಗೆ ಸಿಕ್ಕಿದೆ. 40 ಟಿಎಂಸಿ ನೀರು ತಮಿಳುನಾಡಿಗೆ ಬಿಡಬೇಕಿತ್ತು. ಸದ್ಯ 20 ಟಿಎಂಸಿ ಬಿಡಿ ಎಂದು ಆದೇಶ ಆಗಿತ್ತು. ಆದರೆ ನಾವು ನಿರ್ಧಾರ ಮಾಡಿ ನೀರು ಬಿಡಲಿಲ್ಲ. ಕೆಲವರು ನೀರು ಬಿಟ್ಟಿದ್ದಾರೆ ಅಂತಾ ಹೇಳ್ತಾರೆ. ನಾವು ಯಾವುದೇ ಕಾರಣಕ್ಕೂ ನೀರು ಬಿಟ್ಟಿಲ್ಲ. ಆದರೆ ಆದೇಶದ ನಂತರ ಡ್ಯಾಂ ತುಂಬಿ 30 ಟಿಎಂಸಿ ನೀರು ಹರಿದು ಹೋಗಿದೆ. ಇನ್ನು 10 ಟಿಎಂಸಿ ನೀರು ಹರಿದರೆ ಈ ವರ್ಷದ ಪಾಲು ಸೇರಲಿದೆ. ಸದ್ಯ ಡ್ಯಾಂನಿಂದ 50 ಸಾವಿರ ಕ್ಯುಸೆಕ್ ನೀರು ಹೋಗ್ತಿದೆ. ವರುಣನ ಕೃಪೆಯಿಂದ ಆದೇಶ ಪಾಲನೆ ಮಾಡಿದ್ದೇವೆ. 1,455 ಕೆರೆಗಳು ಕಾವೇರಿ ಕೊಳ್ಳದಲ್ಲಿವೆ. ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿಶೇಷವೆಂದರೆ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ರೂಪಿಸುವ ಚಿಂತನೆ ಕೂಡ ನಡೆಸುತ್ತಿದ್ದೇವೆ ಎಂದಿದ್ದಾರೆ.