ಗಂಡನ ಮೇಲೆ ಮಂತ್ರ ಪ್ರಯೋಗ ಬೇಡ
ಮದುವೆಯಾದ ಕೆಲವರು ಹೆಣ್ಣುಮಕ್ಕಳು ತನ್ನ ಗಂಡ ತನ್ನ ಅಣತಿಯಂತೆಯೇ ನಡೆಯಬೇಕು ಎಂದು ಬಯಸುತ್ತಾರೆ. ಇದು ತಪ್ಪಲ್ಲ. ಆದರೆ ಅವರನ್ನು ಗುರಿಯಾಗಿಸಿ ಪ್ರಯೋಗಕ್ಕೆಳೆಸುವದು ತಪ್ಪು.
ಸೌಭಾಗ್ಯಕ್ಕೆ ಕಾರಣನಾದ, ಗಂಡನನ್ನು ವಶಮಾಡಿಕೊಳ್ಳಲು ಏನು ಉಪಾಯವನ್ನು ಮಾಡಬೇಕು. ಇವತ್ತು ನೀನು ನನಗೆ ಅದನ್ನು ತಿಳಿಸುವೆಂದು ಸತ್ಯಭಾಮೆ ದ್ರೌಪದಿಯನ್ನು ಪ್ರಶ್ನಿಸುತ್ತಾಳೆ ಅದಕ್ಕೆ ದ್ರೌಪದಿಯೂ `ದುಷ್ಟ್ಟ ಸ್ತ್ರೀಯರ ಸಮಾಚಾರ ನಮಗೆ ಬೇಡ. ಸಮಾಜದಲ್ಲಿ ಅನೇಕ ಸ್ತ್ರೀಯರು ನೀನು ಹೇಳಿದಂತೆಯೇ ಮಾಡುತ್ತಾರೆ. ಮಂತ್ರ ಪ್ರಯೋಗ ಮಾಡಿ ಗಂಡನನ್ನು ವಶಮಾಡಿಕೊಳ್ಳುತ್ತಾರೆ. ಅಥವಾ ವಾಮ ಮಾರ್ಗವನ್ನು ಅವಲಂಭಿಸಿ ವಶ ಮಾಡಿಕೊಳ್ಳುತ್ತಾರೆ. ಇವೆಲ್ಲವೂ ಶಾಶ್ವತವಲ್ಲ. ಕೇವಲ ಕೆಲವು ದಿವಸಗಳ ಆಟ. ಮುಗಿದ ಬಳಿಕ ಕೆಳಗೆ ಬೀಳುತ್ತಾರೆ, ಸೋಲುತ್ತಾರೆ. ದುಷ್ಟ್ಟರು ಅನುಸರಿಸುವ ಮಾರ್ಗವನ್ನು ನಾವು ಮಾತನಾಡುವುದೇ ಬೇಡ.
ಸತ್ಯಭಾಮೆ ನಿನಗೆ ಅಜ್ಞಾನವಿಲ್ಲ. ನಿನಗೆ ತಿಳಿಯದ ವಿಷಯ ಯಾವುದೂ ಇಲ್ಲ. ನೀನು ನಿರಂತರ ಸದ್ಬುದ್ಧಿಯನ್ನೇ ಹೊಂದಿರುವವಳು. ಕೃಷ್ಣ್ಣನಿಗೆ ಅತ್ಯಂತ ಪ್ರಿಯಳಾದ ಮಹಿಷಿಯಾಗಿರುವಿ. ಆದರೂ ನನ್ನ ಮೇಲಿನ ಪ್ರೀತಿಯಿಂದ ಪ್ರಶ್ನೆ ಮಾಡಿರುವಿ. ನಾನು ಕಂಡುಕೊಂಡಿರುವ ಕೆಲವು ಸತ್ಯಾಂಶವನ್ನು ನಿನ್ನ ಮುಂದೆ ಈಗ ನಿವೇದನೆ ಮಾಡುತ್ತೇನೆ.
ಗಂಡನನ್ನು ವಶಮಾಡಿಕೊಳ್ಳಬೇಕೆಂದು ಮಂತ್ರಪ್ರಯೋಗ ಮಾಡಿದರೆ, ಗಿಡ ಮೂಲಿಕೆಗಳ ಪ್ರಯೋಗ ಮಾಡಿದರೆ, ಬೂದಿ ತಿನ್ನಿಸಿದರೆ ಆಗ ಅವನ ಮನೆಯಲ್ಲಿ ಹೆಂಡತಿಗೆ ಗಂಡನು ಬಹಳ ಹೆದರುತ್ತಾನೆ. ಹೆಂಡತಿಯನ್ನು ಕಂಡರೆ ಗಂಡನಿಗೆ ಭಯವಾಗುತ್ತದೆ.
ಯಾವಾಗಲೂ ಹೆದರುವವನಿಗೆ ಶಾಂತಿ ದೊರಕಲು ಹೇಗೆ ಸಾಧ್ಯ. ಶಾಂತಿಯೇ ಇಲ್ಲದವನು ಸುಖವನ್ನು ಅನುಭವಿಸಲು ಹೇಗೆ ಸಾಧ್ಯ ಇಂತಹ ಸುಖವಿಲ್ಲದ ಗಂಡನನ್ನು ಕಟ್ಟಿಕೊಂಡು ಮಂತ್ರಪ್ರಯೋಗ ಮಾಡುವ ಹೆಂಡತಿಯು ಹೇಗೆ ನೆಮ್ಮದಿಯಿಂದ ಬದುಕಲು ಸಾಧ್ಯ. ತಾನು ಸುಖವಾಗಿರಬೇಕೆಂದರೆ ಮೊದಲು ಗಂಡನು ಸುಖವಾಗಿರಬೇಕು. ಅವನು ಸುಖವಾಗಿರಲು ಅವನಿಗೆ ಅನುಕೂಲ ಮಾಡಿಕೊಡಬೇಕು. ಕೇವಲ ಮಂತ್ರಕರ್ಮಗಳಿಂದ ಗಂಡನು ಎಂದೂ ಕೂಡ ವಶನಾಗಲು ಸಾಧ್ಯವಿಲ್ಲ.