ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಗಾಂಧಿ ಸಂತನ ಸನ್ನಿಧಿಯಲ್ಲಿ….

02:17 PM Oct 02, 2023 IST | Samyukta Karnataka

ಸಮಸ್ತವನ್ನೂ ಸ್ವತಂತ್ರ ರಾಷ್ಟ್ರ ನಿರ್ಮಾಣಕ್ಕೆ ಧಾರೆ ಎರೆದು ಬೊಗಸೆಗೆ ಅಧಿಕಾರ ಬಂದರೂ ಅದಕ್ಕೆ ಮಾರುಹೋಗದೆ ನಿರ್ವಿಕಾರ ಮನೋಭಾವದಿಂದ ಸ್ಥಿತಪ್ರಜ್ಞತೆಯನ್ನು ಸಾಧಿಸಿ ಭಾರತ ಭಾಗ್ಯ ವಿಧಾತನೆನಿಸಿದ ಪುಣ್ಯಜೀವಿ ಗಾಂಧಿ ಮಹಾತ್ಮ ಅವರ ಬದುಕಿನ ಸಾಧನೆ ಗೊತ್ತಿದ್ದೂ ವಿನಾಕಾರಣ ಟೀಕೆ ಟಿಪ್ಪಣಿಗಳಿಗೆ ಗುರಿ ಮಾಡುತ್ತಿರುವ ಕೆಲವರ ದೃಷ್ಟಿಕೋನ ನಿಜಕ್ಕೂ ಒಂದು ಬಿಡಿಸಲಾಗದ ಒಗಟು; ಗಾಂಧಿಯವರು ಪ್ರಶ್ನಾತೀತರಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಲೇ ಗಾಂಧೀಜಿಯವರ ಸರ್ವಸಂಗ ಪರಿತ್ಯಾಗದ ಗುಣವನ್ನು ಪರಿಗಣಿಸಿ ದೇಶ ಮೊದಲು ಎಂಬ ಮಂತ್ರವನ್ನು ಬಿತ್ತುವ ಮೂಲಕ ಭಾರತದ ಸ್ವಾತಂತ್ರ್ಯಕ್ಕೆ ಹಾಗೂ ಅದರ ಆರೋಗ್ಯಕರ ಸಂವರ್ಧನೆಗೆ ವೈಚಾರಿಕ ದಾರಿಯನ್ನು ತೋರಿಸಿಕೊಟ್ಟ ಮಹಾನುಭಾವ ನಿಜವಾದ ಅರ್ಥದಲ್ಲಿ ಕ್ರೌರ್ಯ ಹಾಗೂ ಶೌರ್ಯವನ್ನು ಮೀರಿ ಕರುಣೆ ಕಕ್ಕುಲತೆಯ ಮೂರ್ತಿ ಎಂಬುದನ್ನು ಪರಿಗಣಿಸದೇ ಇರುವುದು ಇತಿಹಾಸಕ್ಕೆ ಎಸಗುತ್ತಿರುವ ದ್ರೋಹ.
ವರ್ತಮಾನದ ನಮ್ಮ ಬದುಕು ಇಷ್ಟು ಹಸನಾಗಲು ಗಾಂಧಿಯವರು ಬಿತ್ತಿ ಹೋಗಿರುವ ವೈಚಾರಿಕ ಬೀಜಗಳು ಕಾರಣ ಎಂಬುದನ್ನು ಟೀಕಾಕಾರರು ಅರ್ಥ ಮಾಡಿಕೊಂಡರೆ ವೈಮನಸ್ಯ ಹಾಗೂ ಸಂಘರ್ಷದ ಹಾದಿಗೆ ಹೊಸ ಬೆಳಕು ಮೂಡುವುದು ಖಂಡಿತ. ಹಾಗೆ ನೋಡಿದರೆ, ಗಾಂಧೀಜಿ ಎಲ್ಲ ನಮೂನೆಯ ವಿಚಾರಗಳನ್ನು ಪರಿಶೀಲಿಸುತ್ತಿದ್ದ ಅಪರೂಪದ ಜೀವ. ವ್ಯಾಪಕ ಪರಿಶೀಲನೆ ನಂತರ ಅಧ್ಯಯನದ ಜೊತೆಗೆ ವಿಚಾರ ವಿಮರ್ಶೆಯ ಮೂಲಕ ನೀತಿ ನಿಲುವುಗಳನ್ನು ರೂಪಿಸುವ ಮಾರ್ಗದಲ್ಲಿ ಎದ್ದು ಕಾಣುವುದು ಜನತಂತ್ರದ ರಾಜಮಾರ್ಗ. ಜನತಂತ್ರ ಎಂಬುದೇ ಹಾಗೆ. ಭಿನ್ನಮತಗಳನ್ನು ಆಲಿಸಿ ಸಾಧ್ಯವಾದರೆ ಪರಿಗಣಿಸಿ ಸರ್ವಸಮ್ಮತ ಅಭಿಪ್ರಾಯದ ಮೇರೆಗೆ ನಿರ್ಧಾರಕ್ಕೆ ಬರುವುದು ಜನತಂತ್ರದ ಸೌಂದರ್ಯ. ಇದರ ಅರ್ಥ ತನ್ನ ವಾದವಷ್ಟೆ ಗೆಲ್ಲಬೇಕು ಎಂಬ ಕರ್ಮಠರಿಗೆ ಸೌಂದರ್ಯದಲ್ಲಿ ಕುರೂಪವಷ್ಟೆ ಕಂಡರೆ ಅದಕ್ಕೆ ಜನತಂತ್ರವನ್ನು ದೂರುವಂತಿಲ್ಲ. ದೂರುವುದಾದರೆ ವೈಚಾರಿಕ ದೃಷ್ಟಿದೋಷ ಹಾಗೂ ಸವಕಳಿಯಾಗುತ್ತಿರುವ ವಿವೇಚನಾ ಸಾಮರ್ಥ್ಯವನ್ನು. ಇವೆರಡನ್ನೂ ಹೊರತುಪಡಿಸಿ ಅನಿಷ್ಠಕ್ಕೆಲ್ಲ ಶನಿಶ್ವರ ಎಂಬಂತೆ ಗಾಂಧಿಯವರ ಮೇಲೆ ಹರಿಹಾಯುವುದು ವಿವೇಕವಂತರ ನಡೆಯಾಗಲಾರದು.
ಗಾಂಧೀಜಿಯವರು ಕೂಡಾ ಒಬ್ಬ ಮನುಷ್ಯರು. ವಿಚಾರಕೋಶದಿಂದ ಭಾವಕೋಶದ ಮೂಲಕ ಆಚಾರಕೋಶವನ್ನು ರೂಪಿಸಿಕೊಂಡಿದ್ದ ಅಪರೂಪದ ವ್ಯಕ್ತಿಗಳು. ಅವರ ನಡೆನುಡಿಯಲ್ಲಿ ಕಿಂಚಿತ್ತು ವ್ಯತ್ಯಾಸ ಇರಲಿಲ್ಲ. ಆಳುವವರಿಗಿಂತಲೂ ಆಳಿಸಿಕೊಳ್ಳುವವರು ಆಡಳಿತದಲ್ಲಿ ಮುಖ್ಯಪಾತ್ರ ವಹಿಸಬೇಕು ಎಂಬ ಅವರ ಮಾತಿನ ಹಿಂದಿದ್ದದ್ದು ಆಳುವವರಿಗೆ ಅಧಿಕಾರ ಒದಗುವುದು ಆಳಿಸಿಕೊಳ್ಳುವ ಸಾಮಾನ್ಯರಿಂದ ಎಂಬ ಪ್ರಜ್ಞೆಯಿಂದ. ಇಂತಹ ಪರಿಜ್ಞಾನವನ್ನು ಕಾಣಲು ಫ್ರಾನ್ಸ್ ಮಹಾಕ್ರಾಂತಿಯಿಂದಲಾಗಲೀ ಅಥವಾ ಬೇರೆ ದೇಶಗಳ ಬೆಳವಣಿಗೆಯಿಂದಾಗಲೀ ಪಡೆಯಲಿಲ್ಲ. ಎಲ್ಲವೂ ಸ್ವಯಾರ್ಜಿತ. ಅವರು ರೂಪಿಸಿದ ಅರ್ಥಶಾಸ್ತ್ರದ ಸೂತ್ರಗಳನ್ನು ಯಥಾವತ್ತಾಗಿ ರೂಡಿಸಿಕೊಂಡಿದ್ದರೆ ಭಾರತದ ನಿರುದ್ಯೋಗ ಬಹುತೇಕ ನಿವಾರಣೆಗೊಂಡು ಕೃಷಿ ಕ್ಷೇತ್ರ ಬಲವರ್ಧನೆಯಾಗಿ ರಾಷ್ಟçದ ಸ್ವರೂಪವೇ ಬದಲಾಗುತ್ತಿತ್ತು. ಈಗ ದೇಶ ಲವಲವಿಕೆಯಿಂದ ಪ್ರಜ್ವಲಿಸುತ್ತಿದೆ. ಆದರೆ, ವಿವೇಕ ಮತ್ತು ವಿವೇಚನೆ ನೇಪಥ್ಯಕ್ಕೆ ಸರಿದಂತೆ ಭಾಸವಾಗುತ್ತಿದೆ. ಸಾರಥಿ ಇಲ್ಲದ ಸಾರೋಟು ದಟ್ಟ ಕಾಡಿನ ನಡುವೆ ಸಕಲ ಜೀವರಾಶಿಗಳ ಬೆಂಗಾವಲಿನಲ್ಲಿ ಕ್ರೂರ ಮೃಗಗಳನ್ನು ನಿವಾರಿಸಿಕೊಂಡು ಮುಂದಡಿ ಇಡಬೇಕಾದ ಸನ್ನಿವೇಶದಲ್ಲಿ ತಾತ್ವಿಕತೆ ಹಾಗೂ ಸಾತ್ವಿಕತೆ ಎಂಬುದು ಮಾಯವಾದಂತೆ ಕಂಡು ಘರ್ಷಣೆ - ಸಂಘರ್ಷ - ವೈಮನಸ್ಯಗಳು ಹೊಗೆಯಾಡಲಾರಂಭಿಸಿರುವುದು ಒಳ್ಳೆಯ ಬೆಳವಣಿಗೆಯ ಲಕ್ಷಣವಾಗಲಾರದು. ವಾದಗಳು ಸ್ವಾಗತಾರ್ಹ. ಏಕೆಂದರೆ, ವಾದಗಳು ಸಂವಾದಗಳ ಮೂಲ. ಆದರೆ, ಈಗ ವಾದಗಳಿಗೆ ಕೇವಲ ವಿವಾದಗಳೇ ವಸ್ತು . ಇದರ ಪರಿಣಾಮವೆಂದರೆ ವಾದಗಳನ್ನು ದಿಕ್ಕು ತಪ್ಪಿಸಲು ಪ್ರತಿವಾದಿ ಭಯಂಕರರು ಕತ್ತಿ ಝಳಪಿಸಿ ಘರ್ಜಿಸುತ್ತಿರುವ ಸಂದರ್ಭದಲ್ಲಿ ದಿಕ್ಕೆಟ್ಟ ಪರಿಸ್ಥಿತಿ ಮತ್ತೆ ಸಹಜ ಹಾದಿಗೆ ಹಿಂತಿರುಗಲು ಗಾಂಧಿ ಮಹಾತ್ಮ ತೋರಿದ ಸೂತ್ರಗಳಿಗೆ ಶರಣಾಗಬೇಕಾಗುತ್ತದೆ. ಅನ್ಯಥಾ ಶರಣಂ ನಾಸ್ತಿ.
ಈ ದೇಶವಷ್ಟೆ ಅಲ್ಲ ಜಗತ್ತು ಕಂಡ ಮಹಾದಾರ್ಶನಿಕ ಎಂದರೆ ಮಹಾತ್ಮಗಾಂಧಿ. ಕಳೆದ ಶತಮಾನದ ಎರಡನೆಯ ದಶಕದಲ್ಲಿ ಮೋಹನದಾಸ ಕರಮಚಂದ ಗಾಂಧಿಯವರು ಸ್ವಾತಂತ್ರ್ಯ ಚಳವಳಿ ಪ್ರವೇಶಿಸಿ ಹಂತ ಹಂತವಾಗಿ ಅದರ ಸಾರಥ್ಯ ವಹಿಸಿಕೊಂಡು ದೇಶವೊಂದರ ಪರಿಕಲ್ಪನೆ ಹೇಗಿರಬೇಕು? ಭಾರತ ಒಂದು ದೇಶವಾಗಿ ಹೇಗೆ ಬಾಳುವೆ ನಡೆಸಬೇಕು? ಬಹುಭಾಷೆ, ಬಹುಸಂಸ್ಕೃತಿ, ಬಹು ಜನಾಂಗ ಮತ್ತು ಬಹುಜಾತಿ ವ್ಯವಸ್ಥೆಯ ಈ ವೈಶಿಷ್ಟ್ಯದ ನಾಡನ್ನು ಒಂದಾಗಿ ಬಾಳಲು ಬೆಸೆಯುವ ಮಾರ್ಗ ಸತ್ಯ ಅಹಿಂಸಾ ಮಾರ್ಗವೇ ಆಗಿರಬೇಕು ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟು ಭಾರತೀಯರೆಂಬ ಭಾವನೆ ಬಡಿದೆಬ್ಬಿಸಿದ ಮಹಾತ್ಮಗಾಂಧಿಯವರು ಯಾವ ದೃಷ್ಟಿಯಿಂದ ನೋಡಿದರೂ ಅಹಿಂಸೆ ಹಾಗೂ ಶಾಂತಿ ಸೂತ್ರಗಳ ಮೂಲಕ ಇಡೀ ಜಗತ್ತನ್ನೇ ಗೆದ್ದ ಜಗದೇಕ ವೀರ.
ಇಂತಹ ಅಹಿಂಸಾ ವೀರನ ಮಾರ್ಗದಲ್ಲಿ ಹೆಜ್ಜೆ ಇಟ್ಟು ನಡೆಯುವುದು ಅಂದುಕೊಂಡಷ್ಟು ಸುಲಭವಲ್ಲ. ವೈಯಕ್ತಿಕ ಸುಖ ಸಂತೋಷವನ್ನು ನೀಗಿಕೊಂಡು ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿ ಸ್ವಾತಂತ್ರ್ಯ ತಂದುಕೊಡುವುದು ಪವಾಡಸದೃಶ ಸಾಹಸ. ಕ್ಷಾತ್ರ ಧರ್ಮವೆಂಬುದು ಕೇವಲ ಕ್ರೌರ್ಯದ ಮೂಲಕ ಅಥವಾ ಸಾಹಸದ ಮೂಲಕ ಪ್ರದರ್ಶನಗೊಳ್ಳುವುದಲ್ಲ. ನೊಂದ ಜನರ ಸಂಭಾಳಿಸಿ, ಸಂತೈಸಿ ಅವರ ಬದುಕಿಗೊಂದು ಆಸರೆ ಕಲ್ಪಿಸಿಕೊಡುವ ಮನಸ್ಸಿದ್ದರೆ ಮಾತ್ರ ಆಗ ಕ್ಷಾತ್ರಧರ್ಮಕ್ಕೆ ಬೆಲೆ. ಇಲ್ಲವಾದರೆ ಕ್ಷಾತ್ರ ಧರ್ಮವೆಂಬುದು ಉತ್ತರ ಕುಮಾರನ ಪೌರುಷಕ್ಕೆ ಸಮಾನವಾಗುವುದು ಖಂಡಿತ ಎಂಬುದನ್ನು ಮಹಾತ್ಮಗಾಂಧಿಯವರ ಬದುಕಿನ ರೀತಿಯಲ್ಲಿ, ಬಿಟ್ಟುಹೋಗಿರುವ ವಿಚಾರಗಳ ಮೂಲಕ ಲೋಕಕ್ಕೆ ಮನವರಿಕೆಯಾಗುವ ಸಂಗತಿ.
ನುಡಿದಂತೆ ನಡೆದು ತಲೆಮಾರಿಗೆ ಹೊಸ ದಾರಿಯನ್ನು ತೋರಿಸಿಹೋಗಿರುವ ಗಾಂಧಿ ಮಹಾತ್ಮರು ಹಾಗೂ ಅಂತಹವರನ್ನು ನಿಂದಿಸುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ. ಗಾಂಧಿಯವರು ಮನಸ್ಸು ಮಾಡಿದ್ದರೆ ವಕೀಲ ವೃತ್ತಿಯಿಂದಲೇ ಸುಖದ ಸುಪ್ಪತ್ತಿಗೆಯಲ್ಲಿ ಬಾಳುವೆ ಸಾಗಿಸಬಹುದಾಗಿತ್ತು. ಸ್ವಂತ ಬದುಕನ್ನು ನೀಗಿಕೊಂಡು ದೇಶಕ್ಕಾಗಿ ತಮ್ಮ ಬದುಕನ್ನು ತೇಯ್ದ ಮಹಾತ್ಮನನ್ನು ಜಡ್ಡುಗಟ್ಟಿದ ಅಥವಾ ತುಕ್ಕು ಹಿಡಿದ ವೈಚಾರಿಕತೆಯ ಮೂಲಕ ನಿಂದಿಸಿ ಸಂತಸ ಪಡುವ ಸುಖ ಪುರುಷರಿಗೆ ಬುದ್ಧಿ ಹೇಳುವ ಸಲುವಾಗಿಯಾದರೂ ಬುದ್ಧಿವಂತರು ತಮ್ಮ ವೈಮನಸ್ಯಗಳನ್ನು ಹಾಗೂ ತಾಟಸ್ಥ÷್ಯವನ್ನು ಬಿಟ್ಟು ಕ್ರಿಯಾಶೀಲರಾಗುವುದು ಆ ಮಹಾಸಾಧಕರಿಗೆ ಸಲ್ಲಿಸುವ ಋಣ.
೨೧ನೆಯ ಶತಮಾನ ನಿಜವಾದ ಅರ್ಥದಲ್ಲಿ ಋಣ ಸಂದಾಯದ ಶತಮಾನ. ೨೦ನೆಯ ಶತಮಾನದ ವಿಪ್ಲವಗಳು, ಹೊಸ ಚಿಂತನೆಗಳು, ಸಾಂಗತ್ಯದ ಅಗತ್ಯಗಳನ್ನು ಮನವರಿಕೆ ಮಾಡಿಕೊಳ್ಳಲು ಪ್ರಶ್ನಿಸಿ ಪ್ರಮಾಣೀಕರಿಸಿಕೊಳ್ಳುವ ಮಾರ್ಗ ಕತ್ತಲೆ ದಾರಿಯಲ್ಲಿ ಹೊಸ ಬೆಳಕು ಮೂಡಲು ಕಾರಣವಾಯಿತು. ಹೀಗಾಗಿಯೇ ನಾವೀಗ ಚಲನಶೀಲ ಸಮಾಜದ ಭಾವಬಿಂದುಗಳಾಗಿದ್ದೇವೆ. ಇದರ ಋಣವನ್ನು ತೀರಿಸುವುದು ಕಷ್ಟ. ಇಂತಹ ಅಮೂಲ್ಯ ಆಸ್ತಿಯನ್ನು ನಮ್ಮದಾಗಿಸಿರುವ ಗಾಂಧಿ ಮಹಾತ್ಮನಿಗೆ ಋಣ ಸಲ್ಲಿಸುವ ಏಕೈಕ ಮಾರ್ಗವೆಂದರೆ ಅಹಿಂಸೆ ಹಾಗೂ ಸತ್ಯದ ಹಾದಿಯಲ್ಲಿ ನಡೆಯುವ ಜೊತೆಗೆ ಗಾಂಧೀಜಿಯವರ ವೈಚಾರಿಕತೆಯನ್ನು ವರ್ತಮಾನದಲ್ಲಿ ಪ್ರಸ್ತುತ ಮಾಡುವುದು ಹೇಗೆಂಬ ಕಡೆ ನಾವೆಲ್ಲರೂ ಆಲೋಚಿಸಬೇಕಾದದ್ದು ಅಗತ್ಯ.

Next Article