ಗಾಂಧೀಜಿ ತತ್ವಾದರ್ಶ ತಿಳಿವಳಿಕೆ ಅಗತ್ಯ
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ಅಗ್ರಸ್ಥಾನ. ಸತ್ಯ, ಅಹಿಂಸೆ, ಶಾಂತಿಯ ಹಾದಿಯಲ್ಲಿಯೇ ಬ್ರಿಟಿಷರ ವಿರುದ್ಧ ಚಳವಳಿ ನಡೆಸುವ ನೇತೃತ್ವ ವಹಿಸಿಕೊಂಡು ಅದರಲ್ಲಿ ಯಶಸ್ವಿಯೂ ಆದರು. ಬರೋಬ್ಬರಿ ೨ ಶತಮಾನಗಳ ಕಾಲ ಭಾರತದಲ್ಲಿ ಆಡಳಿತ ನಡೆಸಿದ ಬ್ರಿಟಿಷರು ಕಳೆದ ೭೭ ವರ್ಷಗಳ ಹಿಂದೆ ಭಾರತೀಯರಿಗೆ ಆಡಳಿತದ ಚುಕ್ಕಾಣಿ ನೀಡಿದರು. ಇದಕ್ಕಾಗಿ ದೇಶ ಸಾಕಷ್ಟು ಬೆಲೆ ತೆರಬೇಕಾಯಿತು, ನಮ್ಮಲ್ಲಿನ ಅಗಾಧ ಸಂಪತ್ತು ಲೂಟಿಯಾಯಿತು, ಸಾವಿರಾರು ಜನ ಪ್ರಾಣತ್ಯಾಗ ಮಾಡಿದರು, ಗಾಂಧೀಜಿ ದಾರಿಯಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ ಎಂಬ ಉಗ್ರಗಾಮಿ ಹೋರಾಟಗಾರರು ಬ್ರಿಟಿಷರ ಸದ್ದಡಗಿಸಲು ದೇಶ-ವಿದೇಶಗಳಲ್ಲಿ ಮಾರುವೇಶದಿಂದ ಕಾರ್ಯಾಚರಣೆಯನ್ನೂ ಮಾಡಿದರು. ಮಹಾತ್ಮ ಗಾಂಧೀಜಿ ಅವರನ್ನು ನಾವು ರಾಷ್ಟ್ರಪಿತ’ ಎಂದು ಕರೆಯುತ್ತೇವೆ. ಅವರ ಸತ್ಯ, ಶಾಂತಿ ಮತ್ತು ಅಹಿಂಸೆಯ ತತ್ವಾದರ್ಶಗಳು ದೇಶಕ್ಕಷ್ಟೇ ಅಲ್ಲ, ವಿಶ್ವಕ್ಕೆ ಅನ್ವಯವಾಗುತ್ತವೆ. ಅಸ್ಪೃಶ್ಯತೆ, ಜನಾಂಗೀಯ ಬೇಧ, ವರ್ಣಬೇಧದ ವಿರುದ್ಧ ಹೋರಾಡಿದ ಪರಿಣಾಮವಾಗಿ ಜಗತ್ತಿನ ಅನೇಕ ದೇಶಗಳು ಅವರ ಜನ್ಮದಿನವಾದ ಅಕ್ಟೋಬರ್ ೨ರಂದು ಸ್ಮರಿಸುತ್ತವೆ. ಗಾಂಧಿ ಪ್ರತಿಮೆಗಳು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕಾಣಸಿಗುತ್ತವೆ. ಗಾಂಧೀಜಿ ಅವರ ಹಾದಿಯಲ್ಲಿ ಅನೇಕ ದೇಶಗಳ ನಾಯಕರು ಅನುಸರಿಸಿದರು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿ ಅವರು ದೇಶದುದ್ದಕ್ಕೂ ಸಂಚರಿಸಿದ್ದರು, ಅವರು ಎಲ್ಲೆಲ್ಲಿ ಭೇಟಿ ನೀಡಿದ್ದಾರೆಯೋ ಅಂತಹ ಕಡೆಗಳಲ್ಲಿ ಏನಾದರೊಂದು ಅವರನ್ನು ಸ್ಮರಿಸುವಂತಹ ಸ್ಮಾರಕಗಳು ನಿರ್ಮಾಣವಾಗಿವೆ. ಕುಡಿಯುವ ನೀರಿನ ಬಾವಿ, ಗಾಂಧೀ ಭವನ, ಶಾಲೆ-ಹಾಸ್ಟೆಲ್ ನಿರ್ಮಾಣ, ಗಾಂಧೀ ಕಟ್ಟೆಗಳು ಕಾಣಸಿಗುತ್ತವೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ದಿ.ಹಂಪಣ್ಣ ಸಾಹುಕಾರ ಚಿಂಚೋಳಿ ಎಂಬುವವರು ಮಹಾತ್ಮ ಗಾಂಧೀಜಿ ಅವರಿಗೆ ದೇವರ ಸ್ಥಾನ ನೀಡಿ ಅವರಿಗೊಂದು ದೇವಸ್ಥಾನ ನಿರ್ಮಿಸಿ ನಿತ್ಯವೂ ಪೂಜೆ ಮಾಡುವಂತೆ ಮಾಡಿದ್ದಾರೆ. ಗಾಂಧೀಜಿಯವರು ಮಧ್ಯ ಕರ್ನಾಟಕದ ದಾವಣಗೆರೆಗೆ ಬಂದಾಗ ಹರಿಜನ ಮಕ್ಕಳಿಗಾಗಿ ಶಿಕ್ಷಣ ಮತ್ತು ವಸತಿ ಸೌಲಭ್ಯ ಒದಗಿಸಲು ಭೂಮಿ ದಾನ ಪಡೆದು ಕಟ್ಟಡ ನಿರ್ಮಿಸಲಾಗಿದೆ. ಇಂದಿಗೂ ಅದು ಗಾಂಧಿ ಸ್ಮಾರಕ ಶಾಲೆಯಾಗಿ ನಗರದ ಹೃದಯ ಭಾಗದಲ್ಲಿದ್ದು ರಾಷ್ಟ್ರಪಿತನನ್ನು ಸ್ಮರಿಸುತ್ತದೆ. ವಿಶ್ವ ಸಂಸ್ಥೆಯು ಮಹಾತ್ಮ ಗಾಂಧೀಜಿ ಅವರನ್ನು ವಿಶೇಷವಾಗಿ ಗೌರವಿಸುತ್ತಿದೆ. ಅಕ್ಟೋಬರ್ ೨ನ್ನು ವಿಶ್ವಸಂಸ್ಥೆ
ಅಹಿಂಸೆಯ ಅಂತಾರಾಷ್ಟ್ರೀಯ ದಿನ’ವನ್ನಾಗಿ ಆಚರಿಸುತ್ತಿದೆ. ಗಾಂಧೀಜಿ ಅವರು ವರ್ಣಬೇಧ ನೀತಿ ವಿರುದ್ಧ ಹೋರಾಟ ನಡೆಸಿದ ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ದೇಶಗಳು ಜನವರಿ ೩೦ನ್ನು ಅಹಿಂಸೆ ಮತ್ತು ಶಾಂತಿಯ ಶಾಲಾ ದಿನವಾಗಿ ಆಚರಿಸುತ್ತವೆ. ಆದರೆ ನಮ್ಮ ದೇಶದಲ್ಲಿ ಗಾಂಧೀಜಿ ಹೆಸರಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳು ಇಂದಿನವರೆಗೂ ಅವರ ತತ್ವಾದರ್ಶಗಳನ್ನು ಗಾಳಿಗೆ ತೂರಿವೆ. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮನನ್ನು ಈ ದೇಶದಲ್ಲಿ ಅಧಿಕಾರಕ್ಕೆ ಬಂದ ಮೊದಲ ಸರ್ಕಾರದಿಂದಲೂ ಅವರ ತತ್ವಗಳು ಪಾಲನೆ ಆಗಲಿಲ್ಲ. ಪಾಶ್ಚಾತ್ಯ ಸಂಸ್ಕೃತಿಯನ್ನು ಎರಕ ಹೊಯ್ಯುವ ರೀತಿಯಲ್ಲಿ ದೇಶದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನು ರೂಪಿಸಲಾಯಿತು. ಹಳ್ಳಿಗಳ ಉದ್ದಾರವೇ ದೇಶದ ಉದ್ದಾರ, ನಮ್ಮ ದೇಶದ ಪ್ರತಿಯೊಂದು ಹಳ್ಳಿಯೂ ಸ್ವಾವಲಂಬಿ ಆಗಬೇಕು, ಒಬ್ಬರಿಗಾಗಿ ಎಲ್ಲರೂ, ಎಲ್ಲರೂ ಒಬ್ಬರಿಗಾಗಿ’, ಸ್ವರಾಜ್, ಸತ್ಯ, ಅಹಿಂಸೆ, ದೇಶಭಕ್ತಿ, ಗ್ರಾಮೀಣ ಕೈಗಾರಿಕೆಗಳು, ಟ್ರಸ್ಟಿಶಿಪ್ ಮತ್ತಿತರ ಅವರ ತತ್ವಗಳು ಕಾಗದದಲ್ಲೇ ಉಳಿದವು. ಗಾಂಧೀಜಿ ಹೇಳುತ್ತಿದ್ದ ಟ್ರಸ್ಟಿಶಿಪ್ ತತ್ವವನ್ನು ಪ್ರಸ್ತುತ ದೇಶದ ಎಲ್ಲ ರಾಜಕಾರಣಿಗಳು, ಉದ್ಯಮಿಗಳು ಅಳವಡಿಸಿಕೊಳ್ಳಬೇಕಾಗಿದೆ. ಒಬ್ಬೊಬ್ಬ ರಾಜಕಾರಣಿಯೂ ನೂರಾರು ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದು, ಇದು ಗಾಂಧೀಜಿ ತತ್ವಕ್ಕೆ ವಿರುದ್ಧವಾದುದು. ಗಾಂಧೀಜಿ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನಕ್ಕೆ ಎಷ್ಟು ಬೇಕೊ ಅಷ್ಟು ಸಂಪತ್ತು ಇಟ್ಟುಕೊಂಡು ಉಳಿದ ಸಂಪತ್ತನ್ನೆಲ್ಲ
ಸಾಮಾಜಿಕ ಟ್ರಸ್ಟ್’ ರಚಿಸಿ ಅದಕ್ಕೆ ಹಸ್ತಾಂತರಿಸಬೇಕು. ಈ ಟ್ರಸ್ಟ್ ಮೂಲಕ ಬಡವರು, ಅಸ್ಪೃಶ್ಯರ ಉದ್ಧಾರ ಮಾಡುವಂತಹ ಕೆಲಸ ಆಗಬೇಕು. ಉಳ್ಳವರು ಇಲ್ಲದವರಿಗೆ ತಮ್ಮ ಹೆಚ್ಚಿನ ಸಂಪತ್ತು ವಿತರಣೆ ಮಾಡುವ ಮೂಲಕ ಸರ್ವರಿಗೂ ಸಮಬಾಳು-ಸಮಪಾಲು’ ಎಂಬ ತತ್ವವನ್ನು ಪಾಲಿಸಬೇಕು ಎಂದು ಹೇಳಿದ್ದರು. ಆದರೆ ಇಂದಿನ ರಾಜಕಾರಣಿಗಳಿಗೆ ಮಹಾತ್ಮ ಗಾಂಧೀ ಅವರ
ಟ್ರಸ್ಟಿಶಿಪ್’ ಕುರಿತಾಗಿ ತಿಳಿದೇ ಇಲ್ಲ ಎನಿಸುತ್ತದೆ. ಯಾಕೆಂದರೆ ಇಂದು ಬಹುತೇಕ ರಾಜಕಾರಣಿಗಳು ತಮ್ಮ ಸ್ವಾರ್ಥ, ಸ್ವಜನಪಕ್ಷಪಾತದಿಂದಾಗಿ ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡು ಸಂಪತ್ತಿನ ಗುಡ್ಡೆ ಹಾಕಿಕೊಂಡಿದ್ದಾರೆ.
ಕೈಗೂಡದ ಗಾಂಧಿ ಭವನ ಕಲ್ಪನೆ
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಮಹಾತ್ಮ ಗಾಂಧೀಜಿ ಅವರನ್ನು ಸ್ಮರಿಸುವುದಕ್ಕಾಗಿ ಗಾಂಧಿ ಭವನ ನಿರ್ಮಾಣ ಮಾಡಲು ಈ ಹಿಂದಿನ ಬಿಜೆಪಿ ಸರ್ಕಾರ ಆರಂಭ ಮಾಡಿತ್ತು. ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸುಸಜ್ಜಿತ ಗಾಂಧಿ ಭವನಗಳ ನಿರ್ಮಾಣವೂ ಆಯಿತು. ಚಿಕ್ಕಮಗಳೂರು ಸೇರಿದಂತೆ ಗಾಂಧೀ ಭವನ ನಿರ್ಮಾಣವಾಗದ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಇಲ್ಲವೆ ಬಾಡಿಗೆ ಕಟ್ಟಡಗಳಲ್ಲಿ ಗಾಂಧೀಜಿ ತತ್ವಗಳನ್ನು ಸಾರುವಂತಹ ಕೆಲಸ ಆರಂಭಿಸಲಾಗಿದೆ. ಇಂದಿನ ಯುವಜನತೆ ಮಹಾತ್ಮ ಗಾಂಧೀಜಿ ಅವರ ಜೀವನ ಚರಿತ್ರೆ ತಿಳಿಯಬೇಕು, ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು, ಅವರ ಹೋರಾಟದ ಬಗೆಗಿನ ಅಧ್ಯಯನ, ಸಂಶೋಧನ ನಿರಂತರವಾಗಿ ನಡೆಯಬೇಕು ಎಂಬುದು ಸರ್ಕಾರದ ಕಲ್ಪನೆಯಾಗಿತ್ತು. ಆದರೆ ಗಾಂಧೀ ಭವನ ನಿರ್ಮಾಣವಾಗಿರುವ ಜಿಲ್ಲೆಗಳು ಸೇರಿದಂತೆ ಪ್ರತಿ ಜಿಲ್ಲೆಯಲ್ಲಿಯೂ ಅಂತಹ ಕೆಲಸ ನಡೆಯದೆ ಕೇವಲ ಅಕ್ಟೋಬರ್ ೨ರ ಗಾಂಧೀ ಜಯಂತಿ ಮತ್ತು ಜನೇವರಿ ೩೦ರಂದು ಹುತಾತ್ಮರ ದಿನಾಚರಣೆ ಮಾಡಲು ಮಾತ್ರ ಸೀಮಿತವಾಗಿವೆ. ಈ ಭವನಗಳಲ್ಲಿ ಚರಕ, ಸ್ವಾತಂತ್ರö್ಯ ಹೋರಾಟದ ಪುತ್ಥಳಿಗಳು, ಗಾಂಧೀಜಿ ಜೀವನ ಚರಿತ್ರೆ ಹೇಳುವ ಹಲವು ಭಾವಚಿತ್ರಗಳು, ಕೆಲವು ಗ್ರಂಥಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಇಲ್ಲಿ ನಿತ್ಯನಿರಂತರವಾಗಿ ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳ ಕುರಿತು ಚಿಂತನ-ಮಂಥನ ನಡೆಯಬೇಕು, ಅಧ್ಯಯನ ಕೇಂದ್ರ ಆಗಬೇಕು, ಇದಕ್ಕಾಗಿ ಸುಸಜ್ಜಿತ ಗ್ರಂಥಾಲಯ ಬೇಕು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಇಲ್ಲಿ ಬಂದು ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು, ಗಾಂಧೀಜಿ ಕುರಿತು ಯುವಜನತೆ ಸಮಗ್ರವಾಗಿ ತಿಳಿಯಬೇಕು. ಸಂಶೋಧನೆ ನಡೆಸಬೇಕು, ಕೇವಲ `ಗಾಂಧೀ ಜಯಂತಿ’ಗೆ ಸೀಮಿತವಾಗಿರುವ ಭವನಗಳನ್ನು ಸದಾ ಚಟುವಟಿಕೆಯ ಕೇಂದ್ರವಾಗಿರಿಸಲು ಆಯಾ ಜಿಲ್ಲಾಡಳಿತಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಇಂತಹ ಭವನಗಳು ಸಾರ್ಥಕ್ಯ ಪಡೆಯುತ್ತವೆ.
ಮಧ್ಯ ಕರ್ನಾಟಕದ ದಾವಣಗೆರೆ ನಗರದಲ್ಲಿ ಮಾತ್ರ ಗಾಂಧೀ ಭವನ ಇದ್ದು, ಚಿತ್ರದುರ್ಗ, ಶಿವಮೊಗ್ಗದಲ್ಲಿ ಈವರೆಗೂ ನಿರ್ಮಾಣ ಆಗಿಲ್ಲ. ಚಿಕ್ಕಮಗಳೂರಿನಲ್ಲಿ ಜಿಲ್ಲಾಡಳಿತದ ಭವನದ ಒಂದು ಕೊಠಡಿಯಲ್ಲಿ ಗಾಂಧೀ ಅಧ್ಯಯನ ಕೇಂದ್ರ ಇದ್ದು, ಅಲ್ಲಿನ ಜನತೆಗೇ ತಿಳಿದಿಲ್ಲ. ದಾವಣಗೆರೆಯಲ್ಲೂ ಕೂಡ ನಗರದ ಹೊರ ವಲಯದಲ್ಲಿ ಗಾಂಧೀ ಭವನ ನಿರ್ಮಾಣ ಮಾಡಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಈ ಕುರಿತಾಗಿ ಮಾಹಿತಿಯೇ ಇರುವುದಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಡ ನಿರ್ಮಿಸಿರುವ ಸರ್ಕಾರ, ಜನರಿಗೆ ಇದರಿಂದ ಪ್ರಯೋಜನ ಆಗುವಂತೆ ನೋಡಿಕೊಳ್ಳುವಲ್ಲಿ ವಿಫಲವಾಗಿದೆ. ಇಲ್ಲಿ ಗಾಂಧೀಜಿ ಸ್ವಾತಂತ್ರö್ಯ ಹೋರಾಟದ ಪ್ರತಿಕೃತಿಗಳಿವೆ, ಗಾಂಧೀ ಮತ್ತು ಕಸ್ತೂರಿಬಾ ಪ್ರತಿಕೃತಿ, ಚರಕದಿಂದ ನೂಲು ತೆಗೆಯುತ್ತಿರುವ ಗಾಂಧಿ ಪ್ರತಿಮೆ, ಹೊರಾಂಗಣ ಆವರಣದಲ್ಲಿ ಉದ್ಯಾನವನ, ಗಾಂಧೀಜಿ ಜೊತೆಗೆ ಸ್ವಾತಂತ್ರö್ಯ ಹೋರಾಟಗಾರರ ಪ್ರತಿಕೃತಿಗಳಿವೆ. ಆದರೆ ಸುಸಜ್ಜಿತ ಗ್ರಂಥಾಲಯ ಇಲ್ಲ, ಅಲ್ಲದೆ ಗಾಂಧೀ ಭವನದ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇನ್ನು ಮುಂದಾದರೂ ಇಂತಹ ಭವನಗಳನ್ನು ಮಹಾತ್ಮ ಗಾಂಧೀಜಿಯವರ ಅಧ್ಯಯನ ಕೇಂದ್ರವನ್ನಾಗಿ ಪರಿವರ್ತಿಸಿ ಅದಕ್ಕೆ ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಕೇಂದ್ರ ಬಳಕೆ ಮಾಡಿಕೊಳ್ಳುವಲ್ಲಿ ತಿಳಿವಳಿಕೆ ನೀಡಬೇಕಿದೆ.