For the best experience, open
https://m.samyuktakarnataka.in
on your mobile browser.

ಗಾಯಗೊಳಿಸುತ್ತಿರುವ ಪ್ರಚೋದನೆಗಳು…

05:05 PM Sep 27, 2024 IST | Samyukta Karnataka
ಗಾಯಗೊಳಿಸುತ್ತಿರುವ ಪ್ರಚೋದನೆಗಳು…

ಪ್ರಚೋದನೆಗಳು ವೀರ ಘೋಷಣೆಗಳಲ್ಲ. ಯಾವ ಧಾರ್ಮಿಕ ಹೇಳಿಕೆಗಳೂ ಅಲ್ಲ. ಇವು ನಮ್ಮನ್ನು ಉದ್ರೇಕಿಸಿ ನಮ್ಮ ಪ್ರತಿಭೆಯನ್ನು ನಾಶಪಡಿಸುತ್ತವೆ. ಕೆಣಕುವುದು, ಉದ್ರೇಕಿಸುವುದು, ಕೆರಳಿಸುವುದು, ಪ್ರಚೋದಿಸುವುದು ಮುಂತಾದ ಕೃತ್ಯಗಳು ಸಮಾಜದ ಶಾಂತಿಯನ್ನು ಕದಡುತ್ತವೆ. ಇವುಗಳನ್ನು ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಖಂಡಿಸಲಾಗಿದೆ.
ಪ್ರಚೋದನೆಯಿಂದ ದ್ವೇಷಾಗ್ನಿಯಲ್ಲಿ ಉರಿಯಲು ಸಿದ್ಧವಾಗಿದ್ದ ಒಂದು ನಗರ ಶಾಂತಿಯ ಉದ್ಯಾನವನವಾದ ಒಂದು ಘಟನೆಯನ್ನು ಇಲ್ಲಿ ಸ್ಮರಿಸಬಹುದು.
ಖ್ಯಾತ ಇಸ್ಲಾಮಿ ವಿದ್ವಾಂಸರಾಗಿದ್ದ ಪದ್ಮಶ್ರೀ ಮೌಲಾನ ವಹಿದುದ್ದೀನ್ ಖಾನ್ ಅವರು ತಮ್ಮ ಗ್ರಂಥ ವಿಜಿಡಂನಲ್ಲಿ(ಪುಟ ೨೮೮. ಕೂಲಿಂಗ್ ದಿ ಫೈಯರ್) ಈ ಘಟನೆಯನ್ನು ವಿವರಿಸಿದ್ದಾರೆ. ಡಾ. ಬಿಶಂಬರ್‌ನಾಥ್ ಪಾಂಡೆ ಅವರು ೧೯೨೬ರಲ್ಲಿ ನಗರವೊಂದರಲ್ಲಿ ನಡೆದ ಈ ಘಟನೆಯನ್ನು ಸಮಾರಂಭ (೧೯೯೩ರಲ್ಲಿ ಜಾಮಿಯಾ ಮಿಲಿಯಾದಲ್ಲಿ ನಡೆದ ಧರ್ಮ ಹಾಗೂ ಮಾನವೀಯತೆ ಎಂಬ ವಿಚಾರ ಸಂಕಿರಣ) ಒಂದರಲ್ಲಿ ವಿವರಿಸುತ್ತಾರೆ.
ಸ್ವಾಮಿ ಸತ್ಯದೇವ ಬಾಲಾಘಾಟ ಅವರ ನೇತೃತ್ವದಲ್ಲಿ ನಗರದ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲು ಹಿಂದೂವಾದಿಗಳ ಒಂದು ಬೃಹತ್ ತಂಡ ಶುಕ್ರವಾರದಂದು ಘೋಷಣೆ ಕೂಗುತ್ತ ನಗರದ ಮುಖ್ಯ ಮಸೀದಿ ಎದುರಿಗೆ ನಿಂತಿತು. ಇದನ್ನು ಮೊದಲೇ ಅರಿತಿದ್ದ ಕರಾಮತ್ ಹುಸೇನ್ ಎಂಬ ಕಾರ್ಯಕರ್ತ ನೂರು ಮುಸ್ಲಿಂ ಯುವಕರೊಂದಿಗೆ ಮಸೀದಿಗೆ ಬಂದು ಅಲ್ಲಿ ಪ್ರಾರ್ಥನೆಗೆ ಬಂದವರನ್ನು ಶಾಂತಿಯಿಂದ ಇರಲು ಹೇಳಿ ಮುಸ್ಲಿಂ ಯುವಕರ ಕೈಯಲ್ಲಿ ಹೂ ಮಾಲೆಗಳನ್ನು ಕೊಟ್ಟು ಮಸೀದಿ ಹೊರಗೆ ನಿಂತಿದ್ದ ಹಿಂದೂವಾದಿ ಗುಂಪಿಗೆ `ನಿಮಗೆ ಸ್ವಾಗತ ಸುಸ್ವಾಗತ' ಎಂದು ಹೇಳುತ್ತ ಎಲ್ಲರಿಗೂ ಮಾಲಾರ್ಪಣೆ ಮಾಡಿಸುತ್ತಾನೆ. ಇದಕ್ಕೆ ಕಂಡು ಎಲ್ಲರೂ ಸ್ತಂಭಿಭೂತರಾದರು. ಪ್ರಚೋದಿಸಿ ಶಾಂತಿ ಕದಡಲು ಬಂದಿದ್ದವರೆಲ್ಲ ಮುಸ್ಲಿಂ ಯುವಕರನ್ನು ಆಲಂಗಿಸಿ ಶುಭಾಶಯ ಕೋರಿ ಶಾಂತಿಯುತವಾಗಿ ಚದುರಿದರು.
ಕರಾಮತ್ ಹುಸೇನ್ ಕುರಾನಿನ ಅಧ್ಯಾಯ ಅಲ್ ಅನ್ ಅಮ್ ದ (೧೦೮ನೆಯ ವಚನ) ಉಪದೇಶವನ್ನು ಪಾಲಿಸಿದ್ದನು. ಈ ಅಧ್ಯಾಯದಲ್ಲಿ ಜನರು ಅಲ್ಲಾಹನ ಹೊರತು (ಅನ್ಯರನ್ನು), (ಇತರ ದೇವ ದೇವತೆಗಳನ್ನು) ಪೂಜಿಸುತ್ತಾರೋ ಅವರನ್ನು ತೆಗಳಬೇಡಿರಿ. ಪ್ರವಾದಿ ಮಹಮ್ಮದ್(ಸ) ಅವರು ತಮ್ಮ ವಚನಗಳಲ್ಲಿ ಇತರರ ವಿಶ್ವಾಸಗಳ ಮೇಲೆ, ಧರ್ಮಾಚರಣೆಗಳ ಬಗ್ಗೆ ಅವರ ಧಾರ್ಮಿಕ ಪುರುಷರನ್ನು ನಿಂದಿಸಬೇಡಿರಿ ಎಂದು, ಇತರರು ನಿಮ್ಮನ್ನು ಪ್ರಚೋದಿಸಿದರೆ ಪ್ರತಿಯಾಗಿ ಕೆಣಕಬಾರದೆಂದು ಉಪದೇಶಿಸಿದ್ದಾರೆ.
ಸಂಘರ್ಷಕ್ಕೆ ಕಾರಣ ಪ್ರಚೋದನೆ. ಪ್ರಚೋದನೆಗೆ ಕೆಂಗಡಬಾರದೆಂಬ ಅಪ್ಪಣೆಯನ್ನು ಕೊಡಲಾಗಿದೆ. ನೂರು ವರ್ಷಗಳ ಹಿಂದೆ ನಡೆದ ಇಂತಹದೊಂದು ಘಟನೆ ಇಂದಿಗೂ ನಮಗೆ ನೆಮ್ಮದಿ ಶಾಂತಿ ನೀಡಬಲ್ಲದು. ಇಂತಹ ಘಟನೆಗಳ ರೂವಾರಿಗಳನ್ನು ತಯಾರು ಮಾಡಲು ಅವರ ಬೌದ್ಧಿಕ ವಿಚಾರಗಳನ್ನು ಪ್ರಚೋದನೆಗಳಿಂದ ದೂರ ಮಾಡಲು ಸಾಧ್ಯ.
ನಮ್ಮನ್ನು ಕೆಣಕಬೇಡಿರಿ ಎಂದು ಹೇಳುವ ಮೊದಲು ನೀವು ಅವರನ್ನು ಕೆಣಕಬೇಡಿರಿ. ಬೇರೆಯವರನ್ನು ಕುರಿತು ದೂರುವುದಾಗಲಿ ಪ್ರಚೋದಿಸುವುದಾಗಲಿ ಮಾಡುವುದು ದೇವರಲ್ಲಿ ನಂಬಿಕೆಗೆ ಇಟ್ಟವರ ಕೆಲಸವಲ್ಲ. ಅಲ್ಲಾಹನು ಅಂಥವರನ್ನು ನೋಡಿಕೊಳ್ಳುತ್ತಾನೆಂಬ ದೃಢನಂಬಿಕೆ ಬೇಕು ಅಷ್ಟೇ.